Earthquake: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕಂಪನ; ಅವೈಜ್ಞಾನಿಕ ಗುಡ್ಡ ಕೊರೆತಕ್ಕೆ ಬೀಳುತ್ತಾ ಬ್ರೇಕ್​?

ಭೂಕಂಪ ಸಂಭವಿಸಿದ ಸುಳ್ಯದ ಪ್ರದೇಶಗಳಿಗೆ ಭೇಟಿ ನೀಡಿರುವ ಸುಳ್ಯ ಶಾಸಕ ಹಾಗೂ ಸಚಿವರೂ ಆಗಿರುವ ಎಸ್. ಅಂಗಾರ ಈ ರೀತಿಯ ಭೂಕಂಪನಕ್ಕೆ ಕಾರಣಗಳು ಏನು ಎನ್ನುವ ಕುರಿತು ಸೂಕ್ತ ಅಧ್ಯಯನ ನಡೆಯಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಕನ್ನಡ (Dkshina Kannada) ಹಾಗೂ ಕೊಡಗು ಭಾಗದಲ್ಲಿ ಕಳೆದ 2 ವಾರಗಳಿಂದ ಭೂಕಂಪನದ ಸುದ್ಧಿಯೇ ಕೇಳಿ ಬರುತ್ತಿದೆ. ಅದರಲ್ಲೂ ಹಿಂದೆಂದೂ ಭೂಕಂಪನದ ಅನುಭವವನ್ನೇ ಹೊಂದಿರದ ಕೊಡಗು (Kodagu) ಗಡಿ ಭಾಗವಾದ ಸಂಪಾಜೆ, ಸುಳ್ಯ ಭಾಗದಲ್ಲಿ ಈ ರೀತಿ ಭೂಮಿ ಕಂಪಿಸಲು ಕಾರಣವೇನು ಎನ್ನುವ ಬಗ್ಗೆ ಇದೀಗ ಜನರಲ್ಲಿ ಆತಂಕ ಮೂಡಿದೆ. ಈ ಹಿನ್ನಲೆಯಲ್ಲಿ ಸುಳ್ಯ ಶಾಸಕ ಹಾಗೂ ಸಚಿವರೂ ಆದ ಎಸ್. ಅಂಗಾರ (S Angara) ಈಗಾಗಲೇ ಈ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೂ (State Government) ಪತ್ರ ಬರೆದಿದ್ದಾರೆ. ದೂರದಲ್ಲಿ ಎಲ್ಲೋ ಭೂಕಂಪದಿಂದ ಸಾವು-ನೋವು ಎನ್ನುವ ಸುದ್ಧಿಯನ್ನು ಕೇಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜನ ಇದೀಗ ಭೂಕಂಪದ ಸ್ವ ಅನುಭವವನ್ನು ಪಡೆಯುತ್ತಿದ್ದಾರೆ.

4 ಬಾರಿ ಭೂಕಂಪನದ ಅನುಭವ

ಹೌದು ದಕ್ಷಿಣ ಕನ್ನಡ ಮತ್ತು ಕೊಡಗು ಗಡಿ ಭಾಗವಾದ ಸುಳ್ಯ, ಸಂಪಾಜೆ, ಕಲ್ಲುಗುಂಡಿ, ಚೆಂಬು ಮೊದಲಾದ ಪ್ರದೇಶಗಳಲ್ಲಿ ಕಳೆದ ಎರಡು ವಾರದಿಂದ ಭೂಕಂಪದ್ದೇ ಸುದ್ದಿ. ಎರಡು ವಾರದಲ್ಲಿ ನಾಲ್ಕು ಬಾರಿ ಈ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದ್ದು, 2.5,3.0 ಅನುಪಾತದಲ್ಲಿ ಭೂಕಂಪವಾದ ಬಗ್ಗೆ ದಾಖಲೀಕರಿಸಲಾಗಿದೆ. ನಾಲ್ಕು ವರ್ಷದ ಹಿಂದೆ ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ನಡೆದ ದುರಂತದ ಬಳಿಕ ಈ ಭಾಗದ ಜನರಲ್ಲಿ ಪ್ರಕೃತಿ ವಿಕೋಪದ ಭಯ ನಿರಂತರವಾಗಿ ಕಾಡುತ್ತಿದೆ.

ಭೂಕಂಪನದ ಕಾರಣದ ಬಗ್ಗೆ ಸೂಕ್ತ ಅಧ್ಯಯನಕ್ಕೆ ಆಗ್ರಹ

ಜೋಡುಪಾಲ ದುರಂತ ಸಂಭವಿಸುವ ಮೊದಲು ಆ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ ಗ್ರಾಮಸ್ಥರ ಗಮನಕ್ಕೆ ಬಂದಿರುವುದನ್ನು ನೆನಪಿಸಿಕೊಳ್ಳುವ ಸಂಪಾಜೆ, ಕಲ್ಲುಗುಂಡಿ ಮತ್ತು ಸುಳ್ಯ ತಾಲೂಕಿನ ಕೆಲವು ಭಾಗದ ಜನ ಭೂಕಂಪನ ಸಂಭವಿಸುತ್ತಿರುವುದು ಇಂಥಹುದೇ ಒಂದು ದುರಂತದ ಮುನ್ಸೂಚನೆಯೋ ಎನ್ನುವ ಭಯದಲ್ಲಿದ್ದಾರೆ. ಈ ನಡುವೆ ಭೂಕಂಪ ಸಂಭವಿಸಿದ ಸುಳ್ಯದ ಪ್ರದೇಶಗಳಿಗೆ ಭೇಟಿ ನೀಡಿರುವ ಸುಳ್ಯ ಶಾಸಕ ಹಾಗೂ ಸಚಿವರೂ ಆಗಿರುವ ಎಸ್. ಅಂಗಾರ ಈ ರೀತಿಯ ಭೂಕಂಪನಕ್ಕೆ ಕಾರಣಗಳು ಏನು ಎನ್ನುವ ಕುರಿತು ಸೂಕ್ತ ಅಧ್ಯಯನ ನಡೆಯಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

ಇದನ್ನೂ ಓದಿ: Arrest: 500 ಕೋಟಿ ವಂಚಿಸಿದ್ದ ಮಹಾ ವಂಚಕ ಅರೆಸ್ಟ್! ಬೆಳಗಾವಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ ಖದೀಮ?

ಕೇಂದ್ರಕ್ಕೆ ಪತ್ರ ಸಿಎಂ ಪತ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಕೇಂದ್ರ ಪ್ರಾಕೃತಿಕ ವಿಕೋಪ ತಂಡ ಈ ಭಾಗಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಸುಳ್ಯ, ಕೊಡಗು ಭಾಗದಲ್ಲಿ ಈ ರೀತಿಯ ಭೂಕಂಪವಾಗಲು ಪ್ರಕೃತಿಯಲ್ಲಾದ ಬದಲಾವಣೆಯೂ ಕಾರಣ ಎನ್ನುವುದು ತಜ್ಞರ ವಾದವೂ ಆಗಿದೆ. ಅತ್ಯಂತ ಸಮತೋಲನದಿಂದಿರುವ ದಕ್ಷಿಣಕನ್ನಡ, ಕೊಡಗು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಗುಡ್ಡಗಳನ್ನು ಕೊರೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಮಣ್ಣು ಸಾಗಾಟ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಮಿತಿಗಿಂತಲೂ ಹೆಚ್ಚಾಗಿ ಗುಡ್ಡವನ್ನು ಕಡಿಯಲಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಬೇಕಿದೆ. ಈ ವಿಚಾರವನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವ ಸಚಿವ ಎಸ್. ಅಂಗಾರ ಈ ನಿಟ್ಟಿನಲ್ಲಿ ಸರಕಾರ ಕೂಡಾ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದಿದ್ದಾರೆ.

ಕೊಳವೆ ಬಾವಿಗಳೂ ಕಾರಣ

ಅಲ್ಲದೆ ಈ ರೀತಿಯ ಭೂಮಿಯ ಕಂಪನಕ್ಕೆ ಹೆಚ್ಚಾಗುತ್ತಿರುವ ಕೊಳವೆ ಬಾವಿಗಳೂ ಕಾರಣವಾಗುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯಗಳಾಗಿವೆ. ಸುಳ್ಯ ಭಾಗದ ಕೇವಲ ಒಂದು ಗ್ರಾಮದಲ್ಲಿ 50 ಕ್ಕೂ ಮಿಕ್ಕಿದ ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಇದು ಕೂಡಾ ಭೂಮಿಯ ಅಸಮತೋಲನಕ್ಕೆ ಕಾರಣವಾಗಿದೆಯೇ ಎನ್ನುವುದು ಶಾಸಕ,ಸಚಿವ ಎಸ್. ಅಂಗಾರ ಅವರ ಅಭಿಪ್ರಾಯವೂ ಆಗಿದೆ.

ಇದನ್ನೂ ಓದಿ: Kidnap Case: ಯುವತಿ ಅಪಹರಣ ಪ್ರಕರಣದಲ್ಲಿ ಹು-ಧಾ ಪಾಲಿಕೆ ಕಾರ್ಪೊರೇಟರ್ ಕೊನೆಗೂ ಅರೆಸ್ಟ್

ಸುಳ್ಯ ಹಾಗೂ ಕೊಡಗು ಗಡಿಭಾಗದ ಪ್ರದೇಶದಲ್ಲಿ ಈ ರೀತಿಯ ಕಂಪನದಿಂದಾಗಿ ಸಹಜವಾಗಿಯೇ ಈ ಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಈ ನಿಟ್ಟಿನಲ್ಲಿ ಮುಂದೆ ಸಂಭವಿಸುವ ಅನಾಹುತವನ್ನು ಎಚ್ಚರಿಕೆಯಿಂದ ನಿಭಾಯಿಸುವ ಕಾರ್ಯವನ್ನು ಸರಕಾರ ಮಾಡಲಿದೆ ಎನ್ನುವ ಭರವಸೆಯನ್ನೂ ಸಚಿವ ಎಸ್.ಅಂಗಾರ ಜನತೆಗೆ ನೀಡಿದ್ದಾರೆ.
Published by:Pavana HS
First published: