ಚಿತ್ರದುರ್ಗ(ಡಿ.30): ತಾತ, ಮುತ್ತಾತನ ಆಸ್ತಿ (Property), ತಂದೆ ಹೆಸರಿಗಿರೋ ಆಸ್ತಿ ಮನೆಗಳನ್ನು ಅದರ ನಿಜವಾದ ಹಕ್ಕು ಇರುವವರು ಅದನ್ನು ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲವೇ ಅಲ್ಲ. ಇದಕ್ಕಾಗಿ ಇ- ಸ್ವತ್ತು ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿ (Govt Office), ಅಧಿಕಾರಿಗಳ ಬಳಿಗೆ ಅಲೆದು ಅಲೆದು ಚಪ್ಪಲಿ ಸವೆಸುತ್ತಿದ್ದ ಜನರಿಗೆ ಈಗ ಒಂದು ಹೊಸ ಸೌಲಭ್ಯ ಶುರುವಾಗಿದೆ. ಇ ಸ್ವತ್ತು ಪತ್ರಗಳನ್ನ (Documents) ಮನೆ ಬಾಗಿಲಿಗೆ ತೆರಳಿ ನೀಡುವ ಕಾರ್ಯಕ್ಕೆ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಒ ದಿವಾಕರ್ ಚಾಲನೆ ನೀಡಿದ್ದಾರೆ. ಇದರಿಂದ ಸಾರ್ವಜನಿಕರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ತಾಲೂಕಿಮ ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಿನಾಡು ಗ್ರಾಮದಲ್ಲಿ ನೂತನ ಕಾರ್ಯಕ್ರಮವಾದ ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರದುರ್ಗ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಅವರು ಮನೆ ಮಾಲೀಕರ ಮನೆ ಬಾಗಿಲಿಗೆ, ಅವರ ಆಸ್ತಿಗೆ ಸಂಬಂಧಿಸಿದ ಇ –ಸ್ವತ್ತು ಪ್ರಮಾಣ ಪತ್ರವನ್ನು ವಿತರಿಸಿದರು.
ಇದೊಂದು ರಾಜ್ಯದಲ್ಲಿಯೇ ಮೊದಲ ಬಾರಿಗೆ, ಮನೆ ಬಾಗಿಲಿಗೆ ಇ –ಸ್ವತ್ತು ವಿತರಣೆ ಮಾಡುವ ವಿನೂತನ ಕಾರ್ಯಕ್ರಮವಾಗಿದ್ದು, ಗುತ್ತಿನಾಡು ಗ್ರಾಮದಲ್ಲಿ ಅಧಿಕೃತವಾಗಿ ಪ್ರಾರಂಭ ಮಾಡಲಾಗಿದೆ. ಇಡೀ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.
ಈ ವಿನೂತನ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗದ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದವರಿಗೆ ವಿಳಂಬವಿಲ್ಲದೆ ಸಕಾರದ ಸೇವೆ ಇನ್ನು ಮುಂದೆ ಸುಲಭವಾಗಿ ಲಭ್ಯವಾಗಲಿದೆ. ಶೀಘ್ರದಲ್ಲಿಯೇ ಈ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದು ಜಿ.ಪಂ. ಸಿಇಒ ಎಂ.ಎಸ್. ದಿವಾಕರ್ ಅವರು ಹೇಳಿದರು.
ಮಧ್ಯವರ್ತಿಗಳ ಸಮಸ್ಯೆ
ಇನ್ನೂ ಇತ್ತೀಚೆಗೆ ಗ್ರಾಮ ಪಂಚಾಯ್ತಿಯಲ್ಲಿ ಇ-ಸ್ವತ್ತು ವಿತರಣೆ ಮಾಡುವಾಗ ಅನಾವಶ್ಯಕ ವಿಳಂಬ ಮತ್ತು ಮದ್ಯವರ್ತಿಗಳ ಹಾವಳಿಯಿಂದ ತೊಂದರೆಯಾಗುತ್ತಿರುವುದು ಕಂಡುಬಂದಿರುತ್ತದೆ. ನಮ್ಮ ಜಿಲ್ಲೆಯಲ್ಲೂ ಸಹ ಕೆಲವು ಗ್ರಾಮ ಪಂಚಾಯಿತಿಗಳ ಸಾರ್ವಜನಿಕರಿಂದ ದೂರು ಅರ್ಜಿಗಳು ಬಂದಿದ್ದರಿಂದ ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕರ ಮಧ್ಯೆ ಒಂದು ಉತ್ತಮ ಸಂಬಂಧ ಏರ್ಪಡಲು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಬಾಕಿ ಇರುವ ಕಂದಾಯ ವಸೂಲಿಯಾಗಲು ಮತ್ತು ಸಾರ್ವಜನಿಕರಿಗೆ ವಿಳಂಬವಿಲ್ಲದೇ ಸರ್ಕಾರದ ಸೇವೆಯನ್ನು ನೀಡುವ ಉದ್ದೇಶಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮ ಪಂಚಾಯ್ತಿಯ ಎಲ್ಲಾ ಸಿಬ್ಬಂದಿಗಳು ಆ ಭಾಗದಲ್ಲಿ ಬರತಕ್ಕಂತಹ ಎಲ್ಲಾ ನಿವಾಸಿಗಳ ದಾಖಲೆಗಳನ್ನು 10 ರಿಂದ 15 ದಿನ ಮೊದಲೇ ಪಡೆದು, ನಿಯಮಾನುಸಾರ ಪರಿಶೀಲಿಸಿ, ಆಸ್ತಿ ಮಾಲೀಕರು ಎಲ್ಲಾ ತೆರಿಗೆಯನ್ನು ಪಾವತಿಸಿದ ನಂತರ, ಅವರ ಮನೆ ಮನೆಗೆ ಖುದ್ದು ಭೇಟಿ ನೀಡಿ, ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಲು ಯೋಜನೆ ಸಿದ್ಧಪಡಿಸಲಾಗಿತ್ತು.
ಇದನ್ನೂ ಓದಿ: Murugha Mutt: ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ ರಾಜ್ಯ ಸರ್ಕಾರ
ಅದರಂತೆ, ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುತ್ತಿನಾಡು ಹಾಗೂ ಎಂ.ಆರ್.ಕಾಲೋನಿಯ ನಿವಾಸಿಗಳಿಗೆ ಸುಮಾರು 80ಕ್ಕೂ ಹೆಚ್ಚು ಇ-ಸ್ವತ್ತು ಪ್ರಮಾಣ ಪತ್ರಗಳನ್ನು ನಿವಾಸಿಗಳ ಮನೆ ಬಾಗಿಲಿಗೆ ಹೋಗಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಗಳ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿ, ಇ-ಸ್ವತ್ತು ಪಡೆಯಲು ಮೊದಲು ತುಂಬಾ ಕಷ್ಟವಾಗುತ್ತಿತ್ತು. ಆದರೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ