ಗೌರಿ ಲಂಕೇಶ್​​ ಅವರ ಇಷ್ಟವಾದ ಹಾಗೂ ಇಷ್ಟವಾಗದ ಗುಣಗಳು: ಸಿಎಸ್ ದ್ವಾರಕಾನಾಥ್ ಲೇಖನ

ನನಗೆ ಆಕೆಯ ಪತ್ರಿಕೆಯ ಬಗ್ಗೆ ಏನನ್ನೂ ಹೇಳುವ ನೈತಿಕತೆಯಿರಲಿಲ್ಲ. ಯಾಕೆಂದರೆ ನಾನು ಆಕೆ ಕೇಳಿಕೊಂಡಂತೆ ಬರೆಯಲು ಸಾಧ್ಯವಾಗಲಿಲ್ಲ. ಗೌರಿಯ ಪ್ರಗತಿಪರ ನಿಲುವು, ಸಾಹಸಗಳು, ದುಸ್ಸಾಹಸಗಳು, ಗೊಂದಲಗಳು ಎಲ್ಲವನ್ನು ಗಮನಿಸುತ್ತಲೇ ಇದ್ದೆ.

Ganesh Nachikethu
Updated:September 5, 2018, 7:28 AM IST
ಗೌರಿ ಲಂಕೇಶ್​​ ಅವರ ಇಷ್ಟವಾದ ಹಾಗೂ ಇಷ್ಟವಾಗದ ಗುಣಗಳು: ಸಿಎಸ್ ದ್ವಾರಕಾನಾಥ್ ಲೇಖನ
ನನಗೆ ಆಕೆಯ ಪತ್ರಿಕೆಯ ಬಗ್ಗೆ ಏನನ್ನೂ ಹೇಳುವ ನೈತಿಕತೆಯಿರಲಿಲ್ಲ. ಯಾಕೆಂದರೆ ನಾನು ಆಕೆ ಕೇಳಿಕೊಂಡಂತೆ ಬರೆಯಲು ಸಾಧ್ಯವಾಗಲಿಲ್ಲ. ಗೌರಿಯ ಪ್ರಗತಿಪರ ನಿಲುವು, ಸಾಹಸಗಳು, ದುಸ್ಸಾಹಸಗಳು, ಗೊಂದಲಗಳು ಎಲ್ಲವನ್ನು ಗಮನಿಸುತ್ತಲೇ ಇದ್ದೆ.
Ganesh Nachikethu
Updated: September 5, 2018, 7:28 AM IST
- ಸಿ.ಎಸ್. ದ್ವಾರಕಾನಾಥ್, ಪ್ರಗತಿಪರ ಚಿಂತಕರು

ಗೌರಿಯ ಸಾವು, ಆಕೆಯ ಬಗೆಗಿನ ಲೇಖನಗಳು, ಇವೆಲ್ಲಾ ಇಷ್ಟು ಬೇಗ ಸಂಭವಿಸುತ್ತದೆ ಎಂದು ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ! ನನ್ನ ಮನಸ್ಸು ಇನ್ನೂ ಗೌರಿ ಸಾವನ್ನು ಒಪ್ಪಿಯೇ ಇಲ್ಲ. ಇಂತಹ ಸಂದಿಗ್ಧದಲ್ಲಿ ಗೌರಿ ಸಾವಿನ ನಂತರ ಈ ಲೇಖನ ಬರೆಯಬೇಕಾದ ಪರಿಸ್ಥಿತಿ ಒದಗಿದೆ!

`ಲಂಕೇಶ್ ಪತ್ರಿಕೆ’ಯಲ್ಲಿ ಬರೆಯುವಾಗ ನಾನು ಕಾನೂನು ವಿದ್ಯಾರ್ಥಿ. ಬಿಎಸ್ಸಿ ಪದವಿ ಮುಗಿಸಿ ಬೆಂಗಳೂರಲ್ಲಿ ಕಾನೂನು ಪದವಿಗೆ ಸೇರಿದ್ದೆ. ಗೌರಿ ಆಗತಾನೇ ಕಾಲೇಜಿನ ಮೆಟ್ಟಿಲೇರಿದ್ದಳು. ಲಂಕೇಶರ ಮನೆ ಮತ್ತು ಪತ್ರಿಕೆಯ ಆಫೀಸು ಒಂದೇ ಕಡೆ ಇದ್ದಂತಹ ಸಂದರ್ಭ. ನಾನು ಪತ್ರಿಕೆ ಕಛೇರಿಗೆ ಹೋದಾಗಲೆಲ್ಲಾ ಗೌರಿಯನ್ನು ಭೇಟಿಯಾಗುವ ಅನಿವಾರ್ಯತೆ ಇರುತಿತ್ತು.

ನಾವು ಹಳ್ಳಿಗಾಡಿಂದ ಬೆಂಗಳೂರಿಗೆ ಬಂದಿದ್ದ ಗ್ರಾಮಾಂತರ ಕನ್ನಡಿಗರು. ಗೌರಿ ಬೆಂಗಳೂರಲ್ಲೇ ಇಂಗ್ಲಿಷ್‍ನಲ್ಲಿ ಕಲಿಯುತಿದ್ದ `ಮಾಡ್’ ಹುಡುಗಿ. ಸಹಜವಾಗಿ ನಮಗೆ ಬೆಳ್ಳಗಿರುವವರನ್ನು ನೋಡಿದರೆ, ಇಂಗ್ಲಿಷ್ ಕಲಿತವರನ್ನು ನೋಡಿದರೆ ನಮಗೇ ಅರಿವಿಲ್ಲದಂತಹ ಕೀಳರಿಮೆ! ಈ ಕಾರಣಕ್ಕೆ ನಾವು ಈಕೆಯಿಂದ ಅಂತರ ಕಾಪಾಡಲು ಯತ್ನಿಸುತಿದ್ದೆವು.

ನಂತರ ಆಕೆ ಇಂಗ್ಲಿಷ್ `ಪತ್ರಿಕೆ’ಗಳಿಗಾಗಿ ಬರೆಯುವಾಗ ನಾವು `ಪತ್ರಿಕೆ’ಯಲ್ಲಿ ಬರೆದ ವರದಿಗಳನ್ನೇ ಅನೇಕ ಸಲ ಆಧಾರ ಮಾಡಿಕೊಳ್ಳುತ್ತಿದ್ದಳು. ಮಾಹಿತಿಯ ಕೊರತೆಯಾದಾಗ ನಮ್ಮೊಂದಿಗೆ ಅನಿವಾರ್ಯವಾಗಿ ಮಾತಾಡುತಿದ್ದಳು, ಇಷ್ಟಾದರೂ `ಲಂಕೇಶ್ ಪತ್ರಿಕೆ’ಯ ಬಗ್ಗೆ ಒಂದು ರೀತಿಯ ತಾತ್ಸಾರ, `ಎಲ್ಲೋ ಜರ್ನಲಿಸಂ’ ಎಂದು ಛೇಡಿಸುತ್ತಿದ್ದಳು. ಎಲ್ಲಾ ಉಡಾಫೆ ಇಂಗ್ಲಿಷ್ ಜರ್ನಲಿಸ್ಟ್​ಗಳಂತೆಯೇ ಈಕೆಯೂ ಇರುತ್ತಿದ್ದಳು. ಮೇಷ್ಟ್ರಿಗೂ ಈಕೆಯ ಈ ಆಟಿಟ್ಯೂಡ್ ಇಷ್ಟವಾಗುತ್ತಿರಲಿಲ್ಲ. ಆದರೂ ತೋರಿಸಿಕೊಳ್ಳುತ್ತಿರಲಿಲ್ಲ.

ಒಮ್ಮೆ ಒಬ್ಬ ಕನ್ನಡದ ಟ್ಯಾಬ್ಲಾಯ್ಡ್ ನಿಕೃಷ್ಟನೊಬ್ಬ ಮೇಷ್ಟ್ರ ಬಗ್ಗೆ ಇಲ್ಲದ್ದನ್ನೆಲ್ಲಾ ಬರೆದ ಸಂದರ್ಭದಲ್ಲೇ ಅವನನ್ನು ಹೊಗಳಿ ಈಕೆ ಇಂಗ್ಲಿಷ್ ಪತ್ರಿಕೆಗೆ ಬರೆದದ್ದು ನಮಗೆಲ್ಲರಿಗೂ ಬೇಸರ ತರಿಸಿತ್ತು. ಮೇಷ್ಟ್ರು ಈ ಸಂದರ್ಭದಲ್ಲಿ ತೀರಾ ನೊಂದಿದ್ದರು.

ಗೌರಿ ಎಲ್.ಗೆ ಲಂಕೇಶ್ ಸೇರ್ಪಡೆಯಾಗಿದ್ದು:
Loading...

ಈಕೆಯ ಹೆಸರು ಗೌರಿ ಎಲ್​​. ಅಂತಿತ್ತು. ಅದನ್ನು ಗೌರಿ ಲಂಕೇಶ್​​ ಎಂದು ಬದಲಾವಣೆ ಮಾಡಿಸಬೇಕೆಂದು ವಕೀಲನೂ ಆಗಿದ್ದ ನನ್ನಲ್ಲಿಗೆ ಬಂದಾಗ ನಾನೇ ಈ ಬದಲಾವಣೆ ಮಾಡಿಕೊಟ್ಟಿದ್ದೆ. ಅಲ್ಲಿಂದ ಆಚೆಗೆ ಆಕೆ ಗೌರಿ ಲಂಕೇಶ್​ ಆಗಿ ಹೆಸರು ಮಾಡತೊಡಗಿದ್ದು.

ಮೇಷ್ಟ್ರು ಸಾವಿನ ನಂತರ ಈಕೆ `ಪತ್ರಿಕೆ’ಯನ್ನು ವಹಿಸಿಕೊಂಡು ಸಂಪಾದಕ ಸ್ಥಾನಕ್ಕೆ ಬಂದಾಗ ನಮ್ಮಂಥವರೆಲ್ಲಾ ದೂರ ಹೋದೆವು. ಆ ಸಂದರ್ಭದಲ್ಲಿ ನನಗೆ ಇನ್ನಷ್ಟು ದಿನ ಬರೆಯುವಂತೆ ಗೌರಿ ಹೇಳಿದ್ದಳು. ನಾನು ಒಪ್ಪದೇ ಹೊರಬಂದೆ. `ಪತ್ರಿಕೆ’ಯನ್ನು ಗಮನಿಸುತ್ತಿದ್ದಂತೆ ಅಲ್ಲಿ ಲಂಕೇಶರ ಆತ್ಮವೇ ಇಲ್ಲವಾಯಿತು! ಪತ್ರಿಕೆ ಬೇರೆ ರೀತಿಯಲ್ಲಿ ಬರತೊಡಗಿತು! ನಂತರ ಗೌರಿಯ ಹೆಜ್ಜೆಗಳು ಎಲ್ಲರಿಗೂ ಗೊತ್ತೇ ಇದೆ.

ನನಗೆ ಆಕೆಯ ಪತ್ರಿಕೆಯ ಬಗ್ಗೆ ಏನನ್ನೂ ಹೇಳುವ ನೈತಿಕತೆಯಿರಲಿಲ್ಲ. ಯಾಕೆಂದರೆ ನಾನು ಆಕೆ ಕೇಳಿಕೊಂಡಂತೆ ಬರೆಯಲು ಸಾಧ್ಯವಾಗಲಿಲ್ಲ. ಗೌರಿಯ ಪ್ರಗತಿಪರ ನಿಲುವು, ಸಾಹಸಗಳು, ದುಸ್ಸಾಹಸಗಳು, ಗೊಂದಲಗಳು ಎಲ್ಲವನ್ನು ಗಮನಿಸುತ್ತಲೇ ಇದ್ದೆ. ಆಕೆಯಲ್ಲಿರಬಹುದಾದ ದೌರ್ಬಲ್ಯಗಳ ಹೊರತಾಗಿಯೂ ಆಕೆಯ ಕಾಳಜಿ ನನಗೆ ಇಷ್ಟವಾಯಿತು.

ಆಗಾಗ ಮಾತಾಡತೊಡಗಿದೆವು. ಅನೇಕ ವಿಷಯಗಳಲ್ಲಿ ಸೈದ್ಧಾಂತಿಕ ಭೇದ ಇದ್ದರೂ ಅದನ್ನು ಬದಿಗಿಟ್ಟು, ಸಂಘ ಪರಿವಾರದ ಅಜೆಂಡಾಗಳ ವಿರುದ್ಧ ಒಂದಾಗತೊಡಗಿದೆವು. ಆಕೆ ಇನ್ನೂ ಏನನ್ನೋ ಹೇಳಬೇಕೆಂದು ಹೊರಟಾಗ ಆಕೆಯ ಧ್ವನಿಯನ್ನು ಗುಂಡುಗಳು ಅಡಗಿಸಿದ್ದವು.

ಅದಾಗತಾನೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಸಾವಿತ್ರಿಬಾಪುಲೆ ಬಗ್ಗೆ ಭಾಷಣಮಾಡಿ ಮನೆಗೆ ಬಂದು ಒಂದಷ್ಟು ರಿಲ್ಯಾಕ್ಸ್ ಆಗುವಷ್ಟರಲ್ಲಿ ಹತ್ತಾರು ಕರೆಗಳು ಬರುತ್ತಲೇ ಇದ್ದವು. ಕಡೆಗೆ ಅನಿವಾರ್ಯತೆಯಿಂದ ಫೋನ್ ತೆಗೆದೆ. ಸಿಡಿಲು ಬಡಿದಂತೆ ಗೌರಿಯ ಕೊಲೆಯ ಸುದ್ದಿ ಕಿವಿಗೆ ಅಪ್ಪಳಿಸಿತು! ಎದೆ ಒಡೆದಂತಾಗಿ ಗೌರಿಯ ಮನೆಯ ಕಡೆ ಧಾವಿಸಿದೆ... ಮುಂದೆ ಆದದ್ದೆಲ್ಲಾ ನಿಮಗೆ ತಿಳಿದಿದೆ.

ಈಗ ಗೌರಿಯ ಮಿತ್ರರು, ಅನುಯಾಯಿಗಳು, ಪ್ರೀತಿಪಾತ್ರರೇ ಮುಂತಾದ ಅನೇಕ ಮಂದಿ ಸನ್ಮಿತ್ರರು ಇಲ್ಲಿ ಗೌರಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರ ಅನಿಸಿಕೆಯೂ ವಿಭಿನ್ನವಾಗಿದೆ, ಗೌರಿ ಬಗೆಗಿನ ಗೌರವ, ಪ್ರೀತಿ, ಕಾಳಜಿಗಳು ವ್ಯಕ್ತವಾಗಿವೆ. ಹಾಗೆಯೆ, ಸೈದ್ಧಾಂತಿಕ ಭಿನ್ನಾಭಿಪ್ರಾಯದ ನಡುವೆಯೂ ಜೀವಪರ ಸಂಬಂಧಗಳ ಸಂಪರ್ಕವಿಟ್ಟುಕೊಂಡು ಚರ್ಚಿಸಲು ಮುಂದಾಗಿದ್ಧಾರೆ.

ನಮ್ಮೆಲ್ಲರಲ್ಲೂ ಸದಾ ಜೀವಂತವಾಗಿರುವ ಗೌರಿಗೆ ನಿಜ ಅರ್ಥದ ನಮನ,

ಗೌರವ ಮತ್ತು ಅಶ್ರುತರ್ಪಣ ಇದು..
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ