news18-kannada Updated:March 9, 2020, 5:01 PM IST
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
ಬೆಂಗಳೂರು(ಮಾ.09): ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿ ಕೇಂದ್ರ ಗುಪ್ತದಳದ ಅಧಿಕಾರಿಗಳಿಂದಲೇ ಹೊರಬಿದ್ದಿದೆ. ಈಗಾಗಲೇ ಕೇಂದ್ರ ಗುಪ್ತದಳದ ಅಧಿಕಾರಿಗಳು ರಾಜ್ಯ ಪೊಲೀಸರಿಗೆ ಈ ಎಚ್ಚರಿಕಾ ಮಾಹಿತಿ ರವಾನಿಸಲಾಗಿದೆ. ಈ ಮಧ್ಯೆ ಮೋಹನ್ ಭಾಗವತ್ ಹತ್ಯೆಗೆ ಸಂಚು ಖಂಡನೀಯ ಎಂದು ಹಲವು ರಾಜಕೀಯ ಗಣ್ಯರು ಖಂಡಿಸಿದ್ದಾರೆ. ಇದೀಗ ರಾಷ್ಟ್ರೀಯವಾದಿಗಳ ಕೊಲೆ ಯತ್ನದ ಬಗ್ಗೆ ಕೇಂದ್ರ ಸಚಿವ ಡಿ.ವಿ ಸಂದಾನಂದ ಗೌಡ ಕೂಡ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರ ಈ ವಿಚಾರವನ್ನು ಸಮರ್ಪಕವಾಗಿ ಎದುರಿಸಲಿದೆ ಎಂದಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಡಿ.ವಿ ಸದಾನಂದ ಗೌಡ, ಮೋಹನ್ ಭಾಗವತ್ ಹತ್ಯೆಗೆ ಸಂಚು ರೂಪಿಸಿರುವುದು ಖಂಡನೀಯ. ಕೇಂದ್ರ ಸರ್ಕಾರ ಇಂತಹ ಕಿಡಿಗೇಡಿಗಳಿಗೆ ಆದಷ್ಟು ಬೇಗ ಕಡವಾಣ ಹಾಕಲಿದೆ. ಇದು ಸತ್ಯವೂ ಆಗಿರಬಹುದು, ಸುಳ್ಳು ಆಗಿರಬಹುದು. ಆದರೆ, ಇಂತಹ ಹತ್ಯೆಗಳಿಗೆ ಅವಕಾಶ ಮಾಡಿಕೊಡದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.
ಇತ್ತೀಚೆಗೆ ಭಾನುವಾರ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ
ಆರ್ಎಸ್ಎಸ್ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೇಲೆ ಉಗ್ರರು ಕಣ್ಣಿಟ್ಟಿದ್ದರು ಎಂಬ ಮಾಹಿತಿ ಕೇಂದ್ರ ಗುಪ್ತದಳ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿತ್ತು.
ಇದನ್ನೂ ಓದಿ: ‘ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹತ್ಯೆಗೆ ಸಂಚು ಖಂಡನೀಯ‘; ಸಚಿವ ಬಿ.ಸಿ ಪಾಟೀಲ್
ಇನ್ನು, ಮೋಹನ್ ಭಾಗವತ್ ಹತ್ಯೆ ಮಾಡಲು ನಾಗಪುರದ ಆರ್ಎಸ್ಎಸ್ ಕಚೇರಿ ಮೇಲೆ ದಾಳಿ ನಡೆಸಬೇಕೆಂದು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯೂ ಗ್ಲೋಬಲ್ ಟೆರರಿಸ್ಟ್ ಗ್ರೂಪ್ನಲ್ಲಿ ಹರಿದಾಡುತ್ತಿದೆ. ಹೀಗೆಂದು ಖುದ್ದು ಕೇಂದ್ರ ಗುಪ್ತದಳದ ಅಧಿಕಾರಿಗಳು ರಾಜ್ಯದ ಪೊಲೀಸರಿಗೆ ಎಚ್ಚರಿಕಾ ಸಂದೇಶ ರವಾನಿಸಿದ್ದಾರೆ.
ಹಾಗಾಗಿಯೇ ಬಸವನಗುಡಿಯಲ್ಲಿ ಭಾನುವಾರ ನಡೆದ ಆರ್ಎಸ್ಎಸ್ ಕಾರ್ಯಕರ್ತರ ಬೃಹತ್ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಮೋಹನ್ ಭಾಗವತ್ ಆದ ಕಾರಣ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಕಾರ್ಯಕ್ರಮಕ್ಕೆ ಬಿಗಿ ಭದ್ರತೆಗಾಗಿ ನುರಿತ ಅಧಿಕಾರಿಗಳನ್ನು ನೇಮಕ ಮಾಡಿ ಆಂತರಿಕ ಭದ್ರತಾ ವಿಭಾಗದ(ಐಎಸ್ಡಿ) ಎಸ್ಪಿ ಜಿನೇಂದ್ರ ಕಣಗಾವಿ ಆದೇಶ ಹೊರಡಿಸಿದ್ದರು. ಜತೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದ ಸ್ಥಳಗಳಲ್ಲಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ರವಾನಿಸುವಂತೆ ಸೂಚಿಸಿದ್ದರು.
First published:
March 9, 2020, 4:59 PM IST