ಯಡಿಯೂರಪ್ಪಗೆ ಶೇ. 80 ಅಂಕ ಕೊಟ್ಟ ಡಿವಿ ಸದಾನಂದ ಗೌಡ

ನೂರಾರು ಸವಾಲುಗಳ ಮಧ್ಯೆಯೂ ಯಡಿಯೂರಪ್ಪ ಅವರು ಮಾಡಿದ ಕೆಲಸವನ್ನು ಗಮನಿಸಬೇಕು. ರಾಜಕೀಯ ನಿಂತ ನೀರಲ್ಲ, ಸಮುದ್ರ ಇದ್ದ ಹಾಗೆ. ಅಲೆಗಳು ಬರುತ್ತಲೇ ಇರುತ್ತವೆ. ಅವುಗಳನ್ನ ಎದುರಿಸಿ ಕೆಲಸ ಮಾಡಬೇಕು. ಯಡಿಯೂರಪ್ಪ ಕೂಡ ಇಂಥ ಎಲ್ಲ ಸವಾಲು ಎದುರಿಸಿ ಕೆಲಸ ಮಾಡಿದ್ದಾರೆ ಎಂದು ಡಿವಿಎಸ್ ಹೊಗಳಿದರು.

news18-kannada
Updated:November 2, 2019, 4:39 PM IST
ಯಡಿಯೂರಪ್ಪಗೆ ಶೇ. 80 ಅಂಕ ಕೊಟ್ಟ ಡಿವಿ ಸದಾನಂದ ಗೌಡ
ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ
  • Share this:
ಬೆಂಗಳೂರು(ನ. 02): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ಧಾರೆ. ರಾಜಕೀಯ ಅಲ್ಪ ಗೊಂದಲದ ಮಧ್ಯೆಯೂ ಅವರು ಮೂರು ತಿಂಗಳುಗಳಿಂದ ಹಗಲೂ ರಾತ್ರಿ ಓಡಾಡುತ್ತಿದ್ದಾರೆ. ಅವರಿಗೆ ಶಹಬ್ಬಾಸ್​ಗಿರಿ ಕೊಡಬೇಕು. ನೂರರಲ್ಲಿ 80 ಅಂಕ ಅವರಿಗೆ ಕೊಡಬೇಕು ಎಂದು ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು. ಇಲ್ಲಿಯ ಖಾಸಗಿ ಹೋಟೆಲ್​ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವರು, ರಾಜ್ಯ ಮುಖ್ಯಮಂತ್ರಿಯ ಸಾಧನೆಯನ್ನು ಶ್ಲಾಘಿಸಿದರು.

ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಪ್ರವಾಹ ಮತ್ತು ಮಳೆ ಕಂಡಿದ್ದೇವೆ. ಯಡಿಯೂರಪ್ಪಗೆ ಇದು ಸವಾಲಾಗಿಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರು ಬಹಳ ಸ್ಥಿತಪ್ರಜ್ಞರಾಗಿ ಕೆಲಸ ಮಾಡುತ್ತಿದ್ಧಾರೆ. ಸಂಪುಟದಲ್ಲಿರುವ ಸಚಿವರಲ್ಲಿ ಕೆಲಸವು ಓಡಾಡಿಲ್ಲದೇ ಇರಬಹುದು. ಹಲವರು ಓಡಾಡಿದ್ದಾರೆ. ಕ್ಯಾಪ್ಟನ್ ಆಗಿ ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳೂ ಆದ ಅವರು ಹೇಳಿದರು.

ಇದನ್ನೂ ಓದಿ: ಸಿಎಂ ಹೊಸ ಆಡಿಯೋ: ವಿಪಕ್ಷಗಳಿಂದ ಟೀಕೆ; ಸುಪ್ರೀಂಗೆ ಪ್ರತ್ಯೇಕವಾಗಿ ಅಫಿಡವಿಟ್ ಸಲ್ಲಿಸಲು ಕುಮಾರಸ್ವಾಮಿ ನಿರ್ಧಾರ

ಇಂತಹ ಪ್ರವಾಹದಲ್ಲಿ ಅಯ್ಯೋ ಎನ್ನುವುದು ಸಹಜ. ನೂರಾರು ಸವಾಲುಗಳ ಮಧ್ಯೆಯೂ ಯಡಿಯೂರಪ್ಪ ಅವರು ಮಾಡಿದ ಕೆಲಸವನ್ನು ಗಮನಿಸಬೇಕು. ರಾಜಕೀಯ ನಿಂತ ನೀರಲ್ಲ, ಸಮುದ್ರ ಇದ್ದ ಹಾಗೆ. ಅಲೆಗಳು ಬರುತ್ತಲೇ ಇರುತ್ತವೆ. ಅವುಗಳನ್ನ ಎದುರಿಸಿ ಕೆಲಸ ಮಾಡಬೇಕು. ಯಡಿಯೂರಪ್ಪ ಕೂಡ ಇಂಥ ಎಲ್ಲ ಸವಾಲು ಎದುರಿಸಿ ಕೆಲಸ ಮಾಡಿದ್ದಾರೆ ಎಂದು ಡಿವಿಎಸ್ ಹೊಗಳಿದರು.

ಪ್ರವಾಹ ಸಂಕಷ್ಟದ ಮಧ್ಯೆಯೂ ಸಚಿವ ಜಗದೀಶ್ ಶೆಟ್ಟರ್ ವಿದೇಶ ಪ್ರವಾಸ ಮಾಡುತ್ತಿರುವುದಕ್ಕೆ ವ್ಯಕ್ತವಾಗುತ್ತಿರುವ ಟೀಕೆಗಳನ್ನು ಸದಾನಂದ ಗೌಡರು ಅಲ್ಲಗಳೆದರು. “ಅವರು ಅಧಿಕಾರದಲ್ಲಿದ್ದಾಗಲೇ ಬಂಡವಾಳ ಹೂಡಿಕೆ ತರಲು ವಿದೇಶಕ್ಕೆ ಹೋಗಲೇಬೇಕು. ಅಧಿಕಾರದಲ್ಲಿದ್ದಾಗಲೂ ಬಂಡವಾಳ ತರಲಿಲ್ಲ ಎಂದು ಮುಂದೊಂದು ದಿನ ಜನರು ಮಾತಾಡಿಕೊಳ್ಳುತ್ತಾರೆ. ನೆರೆ ಸಂಬಂಧ ಸಾಕಷ್ಟು ಸಮಸ್ಯೆಗಳಿರುವುದು ನಿಜ. ಅವುಗಳನ್ನು ಯಡಿಯೂರಪ್ಪ ಅವರೇ ಮುಂದೆ ನಿಂತು ಪರಿಹರಿಸುತ್ತಿದ್ದಾರೆ” ಎಂದು ಜಗದೀಶ್ ಶೆಟ್ಟರ್ ವಿದೇಶ ಪ್ರವಾಸವನ್ನು ಡಿವಿಎಸ್ ಸಮರ್ಥಿಸಿಕೊಂಡರು.

ಇದನ್ನೂ ಓದಿ: ಸಿದ್ದರಾಮಯ್ಯ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಸಿದ್ದರಾಮಯ್ಯ; ಶೋಭಾ ಕರಂದ್ಲಾಜೆ ಟೀಕೆ

ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಿಂದ ಜಾರಿಯಾಗಿರುವ ಯುವಜನ ಸಬಲೀಕರಣ ಯೋಜನೆ ಬಗ್ಗೆ ಕೇಂದ್ರ ಸಚಿವರು ಒಂದಷ್ಟು ಮಾಹಿತಿ ಹಂಚಿಕೊಂಡರು. ಅತ್ಯಂತ ಹೆಚ್ಚು ಯುವಶಕ್ತಿ ಹೊಂದಿರುವ ದೇಶ ನಮ್ಮದು. ಕೇಂದ್ರದ ಈ ಯೋಜನೆಯಲ್ಲಿ ವಿದ್ಯಾವಂತ ಯುವಕ ಯುವತಿಯರು ವಿವಿಧ ಕೌಶಲ್ಯ ತರಬೇತಿ ಪಡೆಯಲು ಅವಕಾಶವಿದೆ. ವೃತ್ತಿಪರತೆ ವಿಸ್ತಾರ ಮಾಡಲು ಈ ವೃತ್ತಿ ತರಬೇತಿ ಯೋಜನೆ ಜಾರಿ ಮಾಡಲಾಗಿದೆ ಎಂದವರು ತಿಳಿಸಿದರು.ಉದ್ಯೋಗ ಸೃಷ್ಟಿ ಆಗುತ್ತಿಲ್ಲ ಎಂದು ಪದೇ ಪದೇ ಚರ್ಚೆ ನಡೆಯುತ್ತಲೇ ಇರುತ್ತದೆ. ಕೌಶಲ್ಯ ತರಬೇತಿ ಕೊಟ್ಟರೆ ಉದ್ಯೋಗ ಮಾಡಲು ವಿದ್ಯಾವಂತ ಯುವಜನಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದಿಂದ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಶಾಲಾ ಕಾಲೇಜಿನಿಂದ ಹೊರಗಿರುವ ವಿದ್ಯಾರ್ಥಿಗಳಿಗೆ ಇದು ಉಪಯೋಗವಾಗಲಿದೆ. ತರಬೇತಿ ಪಡೆಯುವವರಿಗೆ ಅಪಘಾತ ವಿಮೆ ಕೂಡ ನೀಡಲಾಗುತ್ತದೆ. ಒಂದು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಇದ್ದರೆ ಸಾಕು ಎಂದು ಡಿ.ವಿ. ಸದಾನಂದಗೌಡರು ವಿವರಿಸಿದರು.

(ವರದಿ: ರಮೇಶ್ ಹಿರೇಜಂಬೂರು)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ