ತುಮಕೂರು(ಸೆ.05): ಮಹಾಮಾರಿ ಕೊರೋನಾದಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಆದರೆ ಇಲ್ಲೊಂದು ರಸ್ತೆ ಕಾಮಗಾರಿ ಕಳಪೆ ಮಾಡಿ ಸುಮಾರು 4 ಕೋಟಿ ರೂ ನೀರಿನಲ್ಲಿ ಹೋಮ ಮಾಡಿದ್ದಾರೆ. ಆ ಮೂಲಕ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೇಬು ತುಂಬಿದೆ. ಅಂದ ಹಾಗೆ ಗುತ್ತಿಗೆದಾರರು ನಿರ್ಮಿಸಿದ ಆ ಅಂದದ ರಸ್ತೆ ಬಗ್ಗೆ ನಿಮಗೆ ಹೇಳ್ತೀವಿ ನೋಡಿ. ಕಣ್ಣು ಹಾಯಿಸಿದಷ್ಟು ದೂರ ಬಿರುಕು, ಅಲ್ಲಲ್ಲಿ ಮಂಡಿ ಆಳದ ಗುಂಡಿ, ಹೊಳೆಯಂತೆ ಹರಿಯುವ ನೀರು. ನಡೆದುಕೊಂಡು ಹೋಗಲು ಪ್ರಯಾಸಪಡಬೇಕಾದ ಪರಿಸ್ಥಿತಿ. ಇದೆಲ್ಲಾ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜೈನಿಗರಹಳ್ಳಿ -ಸೋಮಲಾಪುರ ರಸ್ತೆಯ ಕಾಮಗಾರಿ ಪುರಾಣ. ಜೈನಿಗರ ಹಳ್ಳಿಯಿಂದ ಮಲ್ಲೇನಹಳ್ಳಿ ಹಟ್ಟಿ ಮಾರ್ಗವಾಗಿ ಸೋಮಲಾಪುರ ಸಂಪರ್ಕ ರಸ್ತೆ ಇದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ 5 ಕಿಮಿ ದೂರ 4 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ನಾಲ್ಕೈದು ದಿನದಿಂದ ಸುರಿದ ಮಳೆಯಿಂದಾಗಿ ರಸ್ತೆ ಕಾಮಗಾರಿಯ ನಿಜ ಬಣ್ಣ ಬಯಲಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ಆರಂಭವಾಗಿ ಮಾರ್ಚಲ್ಲಿ ಅಂತ್ಯಗೊಂಡಿತ್ತು. ರಸ್ತೆಗೆ ಬೇಕಾದ ಸೂಕ್ತ ರೀತಿಯ ಮಣ್ಣು ಬಳಸಿಲ್ಲ. ಸಮಪ್ರಮಾಣದಲ್ಲಿ ಜಲ್ಲಿಕಲ್ಲು ಹಾಕಿಲ್ಲ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ರೋಲರ್ ಹೊಡೆದಿಲ್ಲ, ಡಾಂಬರನ್ನೂ ಕೂಡ ಸರಿಯಾಗಿ ಹಾಕಿಲ್ಲ. ಹಾಗಾಗಿ ರಸ್ತೆ ಕೇವಲ 6 ತಿಂಗಳಲ್ಲಿ ತನ್ನ ಅಸಲಿಯತ್ತು ತೋರಿಸಿದೆ.
Coronavirus India: 2021ರಲ್ಲೂ ಮುಂದುವರೆಯಲಿದೆ ಕೊರೋನಾ ಅಬ್ಬರ; ತಜ್ಞ ವೈದ್ಯರ ಆತಂಕಕಾರಿ ಮಾಹಿತಿ
5 ಕಿಮಿ ದೂರದವರೆಗೂ ರಸ್ತೆ ಗುಂಡಿ ಬಿದ್ದಿದೆ. ಬಿರುಕು ಹೊಡೆದಿದೆ. ಡಾಂಬರ್ ಕಿತ್ತು ಹೊಗಿದೆ. ಪಾದಯಾತ್ರಿಗಳೂ ನಡೆದು ಹೋಗಲು ಕಷ್ಟಸಾಧ್ಯವಾಗಿದೆ, ಅಷ್ಟರಮಟ್ಟಿಗೆ ಸಂಪೂರ್ಣ ಕಳಪೆಯಾಗಿದೆ. ಕಳಪೆ ಕಾಮಗಾರಿ ಬಗ್ಗೆ ಗುತ್ತಿಗೆದಾರ ಶಿವಾನಂದ ಅವರನ್ನು ಕೇಳಿದರೆ, ಎರಡು ವರ್ಷ ನಾವೇ ನಿರ್ವಹಣೆ ಮಾಡಬೇಕು. ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಗ್ರಾಮಸ್ಥರಿಗೆ ಧಮಕಿ ಹಾಕ್ತಾರಂತೆ.
ಜೈನಿಗರಹಳ್ಳಿ -ಸೋಮಲಾಪುರ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಚೇಳೂರು ಹೋಬಳಿ ಕೇಂದ್ರ, ನಿಟ್ಟೂರು ಹೋಬಳಿ ಕೇಂದ್ರ ತಾಲೂಕು ಕೇಂದ್ರ ಗುಬ್ಬಿಗೂ ಇದೆ ಮಾರ್ಗವಾಗಿದೆ. ಇಂಥಹ ರಸ್ತೆ ಕಾಮಗಾರಿ ಕಳಪೆಯಾಗಿ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಯಲ್ಲಿ ಸೇರಿಸಿ ಹಣವನ್ನು ವಸೂಲಿ ಮಾಡಬೇಕು ಮತ್ತು ಪುನಃ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ