ಬೀದರ್: ಆಗಸ್ಟ್ ಪೂರ್ಣಗೊಳ್ಳುತ್ತಾ​ ಬಂದರೂ ತುಂಬದ ಕಾರಂಜಾ ಜಲಾಶಯ; ಈಗಲೇ ಆರಂಭವಾಗಿದೆ ನೀರಿಗೆ ತತ್ವಾರ

ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ  ಜಾಸ್ತಿಯಾಗಿದ್ದು, ಮಳೆಗಾಲದಲ್ಲಿಯೂ ಜನರು ಕುಡಿಯುವ ನೀರಿಗಾಗಿ ಹೋರಾಟ ಮಾಡುವುದು ತಪ್ಪುತ್ತಿಲ್ಲ. ಜೊತೆಗೆ ಜಿಲ್ಲೆಯಲ್ಲಿರುವ ಶೇಕಡಾ 90 ರಷ್ಟು ಕೆರೆಗಳು ಹಳ್ಳ, ಕೊಳ್ಳಗಳು ನೀರಿಲ್ಲದೆ ಭಣಗುಟ್ಟುತ್ತಿವೆ.

news18-kannada
Updated:August 13, 2020, 1:35 PM IST
ಬೀದರ್: ಆಗಸ್ಟ್ ಪೂರ್ಣಗೊಳ್ಳುತ್ತಾ​ ಬಂದರೂ ತುಂಬದ ಕಾರಂಜಾ ಜಲಾಶಯ; ಈಗಲೇ ಆರಂಭವಾಗಿದೆ ನೀರಿಗೆ ತತ್ವಾರ
ಬೀದರ್ ಡ್ಯಾಮ್
  • Share this:
ಬೀದರ್ (ಆ.13): ಗಡಿ ಜಿಲ್ಲೆ ಬೀದರ್ ಮಳೆರಾಯನ ಅವಕೃಪೆಗೊಳಗಾಗಿದ್ದು, ಮಳೆಗಾದಲ್ಲಿಯೂ ಕೂಡಾ ಜಿಲ್ಲೆಯಲ್ಲಿರುವ ಹಳ್ಳ, ಕೊಳ್ಳ, ನದಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಭಾರೀ ಮಳೆಯಿಂದಾಗಿ ರಾಜ್ಯದ ಹಲವು ನದಿ, ಜಲಾಶಯಗಳು  ತುಂಬಿ ಹರಿದು ಕೆಲವು ಜಿಲ್ಲೆಗಳಲ್ಲಿ ಸಮಸ್ಯೆಯಾಗಿದ್ದರೆ, ಬೀದರ್ ಜಿಲ್ಲೆಯಲ್ಲಿ ಮಳೆ ಇಲ್ಲದ ಕಾರಣ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಸಂಪೂರ್ಣ ತಳಕಂಡಿದೆ.

ಅರ್ಧ ಮಳೆಗಾಲ ಮುಗಿದರೂ ಬೆಳೆಗಳಿಗೆ ಆಗುವಷ್ಟೂ ನೀರು ತುಂಬಿಲ್ಲ. ಹೀಗಾಗಿ ಕಾರಂಜಾ ಜಲಾಶಯದಲ್ಲಿ ನೀರು ಸಂಗ್ರಹವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ಕುಡಿಯುವ ನೀರಿಗೂ ತತ್ವಾರಪಡುವ ಆತಂಕ ಶುರುವಾಗಿದೆ. 7.691 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯದಲ್ಲಿ ಸದ್ಯಕ್ಕೆ ಕೇವಲ 1.024 ಟಿಎಂಸಿ ಮಾತ್ರ ಸಂಗ್ರಹವಿದೆ. ಇದರಲ್ಲಿ 0.375 ಟಿಎಂಸಿ ಡೆಡ್ ಸ್ಟೋರೇಜ್ ಇರಲೇಬೇಕು. ಡೆಡ್ ಸ್ಟೋರೇಜ್ ತೆಗೆದರೆ ಉಳಿದದ್ದು ಕೈವ್ ಸ್ಟೋರೇಜ್ ಕೇವಲ 0.649 ಟಿಎಂಸಿ ಮಾತ್ರ. ಈ ಜಲಾಶಯದಿಂದ ಬೀದರ್ ನಗರ, ಹುಮ್ನಾಬಾದ್, ಚಿಟಗುಪ್ಪಾ, ಭಾಲ್ಕಿ ಪಟ್ಟಣ ಸೇರಿದಂತೆ ಜಿಲ್ಲೆಯ ಹಳ್ಳಿಗಳಿಗೆ ಕುಡಿಯಲು ನೀರು ಪೂರೈಕೆ ಆಗುತ್ತದೆ. ಡ್ಯಾಂನಲ್ಲಿ ನೀರು ಖಾಲಿಯಾಗಿರುವುದರಿಂದ ಅಧಿಕಾರಿಗಳು ಸಹ ಅಸಹಾಯಕರಾಗಿದ್ದಾರೆ.

ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ  ಜಾಸ್ತಿಯಾಗಿದ್ದು, ಮಳೆಗಾಲದಲ್ಲಿಯೂ ಜನರು ಕುಡಿಯುವ ನೀರಿಗಾಗಿ ಹೋರಾಟ ಮಾಡುವುದು ತಪ್ಪುತ್ತಿಲ್ಲ. ಜೊತೆಗೆ ಜಿಲ್ಲೆಯಲ್ಲಿರುವ ಶೇಕಡಾ 90 ರಷ್ಟು ಕೆರೆಗಳು ಹಳ್ಳ, ಕೊಳ್ಳಗಳು ನೀರಿಲ್ಲದೆ ಭಣಗುಟ್ಟುತ್ತಿವೆ. ಹೀಗಾಗಿ ಜಾನುವಾರುಗಳಿಗೆ ಕುಡಿಯುವ ನೀರು ಇರದಂತಹ ಸ್ಥಿತಿಯಿದೆ.

ಈ ವರ್ಷ ಜನವರಿ ತಿಂಗಳಿಂದ ಆಗಸ್ಟ್‌ 8ರ ವರೆಗೆ ಸರಾಸರಿ 317 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, 436 ಮಿ.ಮೀ. ಮಳೆಯಾಗಿದ್ದು, ಶೇ.27 ರಷ್ಟು ಮಳೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ಮಳೆ ಕೊರತೆಯಿಂದ ಅಂತರ್ಜಲ ಪಾತಾಳ ಕಂಡಿತ್ತು. ಇದೀಗ ಮಳೆಗಾಲ ಆರಂಭಗೊಂಡು ಮೂರು ತಿಂಗಳು ಕಳೆದರೂ ಕೂಡ ಅಂತರ್ಜಲ ಸುಧಾರಿಸುವ ಲಕ್ಷಣಗಳು ಇಂದಿಗೂ ಗೋಚರಿಸುತ್ತಿಲ್ಲ. ಇದು ರೈತರ ಆತಂಕವನ್ನು ಹೆಚ್ಚಿಸಿದೆ.

ಮಾಂಜ್ರಾ ನದಿಯಲ್ಲೂ ನೀರು ಇನ್ನೂ ಬಾರದಿರುವುದರಿಂದ ಜಿಲ್ಲೆಯ ರೈತಾಪಿವರ್ಗ, ಜನಸಾಮಾನ್ಯರು ಆತಂಕದಲ್ಲಿದ್ದಾರೆ.ಇದರ ಜೊತೆಗೆ ಕೆರೆ, ಹಳ್ಳ, ಕೊಳ್ಳದಲ್ಲಿಯೂ ನೀರು ಸಂಗ್ರಹವಾಗಿಲ್ಲ. ಹೀಗಾಗಿ ಬಾವಿ ಬೋರ್ ವೆಲ್ ನಲ್ಲಿಯೂ ನೀರು ಬಾರದಿರುವುದರಿಂದ ಬೇಸಿಗೆಯಲ್ಲಿ ಯಾವ ಪ್ರಮಾಣದ ನೀರಿನ ಸಮಸ್ಯೆಯಿತ್ತೋ ಬೀದರ್ ಜಿಲ್ಲೆಯಲ್ಲಿ ಮಳೆಗಾಲದಲ್ಲೂ ಅದೇ ಸಮಸ್ಯೆ ಎದುರಾಗಿರುವುದು ಮಾತ್ರ ವಿಪರ್ಯಾಸ.
Published by: Rajesh Duggumane
First published: August 13, 2020, 1:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading