ರೈತರಿಗೆ ಖಾರವಾದ ಕೆಂಪು ಮೆಣಸಿನಕಾಯಿ; ರೋಗವೂ ನಿಯಂತ್ರಣಕ್ಕೆ ಬರುತ್ತಿಲ್ಲ, ಬೆಲೆಯೂ ಸಿಗುತ್ತಿಲ್ಲ..!

ಎಕರೆಗೆ ಒಂದುವರೆ ಲಕ್ಷ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದ ರೈತರಿಗೆ ಫಸಲು ಬರುವ ಸಂದರ್ಭದಲ್ಲಿ ರೋಗ ಎದುರಾಗಿದೆ. ಒಳ್ಳೆ ಫಸಲು ಬರೋ ಟೈಮಲ್ಲಿ ರೋಗ ಬಿದ್ದು ಕೆಂಪು ಕಾಯಿಯೆಲ್ಲ ಹಾಳಾಗ್ತಿದೆ ಎಂದು ರೈತರು ಅವಲತ್ತುಕೊಳ್ಳುತ್ತಾರೆ

G Hareeshkumar | news18-kannada
Updated:December 14, 2019, 3:21 PM IST
ರೈತರಿಗೆ ಖಾರವಾದ ಕೆಂಪು ಮೆಣಸಿನಕಾಯಿ; ರೋಗವೂ ನಿಯಂತ್ರಣಕ್ಕೆ ಬರುತ್ತಿಲ್ಲ, ಬೆಲೆಯೂ ಸಿಗುತ್ತಿಲ್ಲ..!
ಮೆಣಸಿನಕಾಯಿಗೆ ಕಪ್ಪು ರೋಗ ಹೊಡೆದಿರುವುದನ್ನು ತೋರಿಸುತ್ತಿರುವ ರೈತರು
  • Share this:
ಬಳ್ಳಾರಿ(ಡಿ.14): ಸದ್ಯ ಈರುಳ್ಳಿ ಬೆಲೆಗೇನೋ ಬಂಪರ್ ಬೆಲೆಯಿದೆ. ಆದರೆ ಅದೇ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆಯೇ ಸಿಗುತ್ತಿಲ್ಲ. ಈರುಳ್ಳಿ ಬೆಳೆದ ರೈತ ಲಕ್ಷ ಲಕ್ಷ ದುಡ್ಡು ಎಣಿಸುತ್ತಿದ್ದರೆ, ಮೆಣಸಿನಕಾಯಿ ಬೆಳೆದ ರೈತನಿಗೆ ಕಹಿ ಮೇಲೆ ಕಹಿ ಅನುಭವ. ಒಂದು ಕಡೆ ಬೆಳೆದ ನಿಂತ ಮೆಣಸಿನಕಾಯಿಗೆ ಕೊಳೆ ರೋಗವಿದ್ದರೆ, ಮತ್ತೊಂದು ಕಡೆ ಸಮರ್ಪಕ ಬೆಲೆಯೂ ಸಿಗದೆ ಗಣಿನಾಡಿನ ರೈತರ ಪಾಲಿಗೆ ಇನ್ನಷ್ಟು ಖಾರದ ಅನುಭವವಾಗುತ್ತಿದೆ.

ಈರುಳ್ಳಿಗೆ ಎಲ್ಲೆಲ್ಲೂ ಫುಲ್ ಡಿಮ್ಯಾಂಡ್. ಆದರೆ, ಅದೇ ಮೆಣಸಿನಕಾಯಿಗೆ ಸಿಗುತ್ತಿಲ್ಲ ಸರಿಯಾದ ಬೆಳೆ. ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬಂತೆ ಎರಡು ತಿಂಗಳ ಹಿಂದೆ ಬಿದ್ದ ಅತಿಯಾದ ಮಳೆಯ ಪರಿಣಾಮವನ್ನು ಇದೀಗ ಮೆಣಸಿನಕಾಯಿ ಬೆಳೆದ ರೈತರು ಎದುರಿಸುತ್ತಿದ್ದಾರೆ. ಇನ್ನೇನು ಫಸಲು ಬರುವ ಸಂದರ್ಭದಲ್ಲಿ ಕೆಂಪು ಮೆಣಸಿನಕಾಯಿಗೆ ಹಣ್ಣು ಕೊಳೆ ರೋಗ ಇಲ್ಲವೇ ಕಪ್ಪು ಚುಕ್ಕೆ ರೋಗ ಇನ್ನಿಲ್ಲದಂತೆ ಕಾಡುತ್ತಿದೆ.

dary chill
ಕೆಂಪು ಮೆಣಸಿನಕಾಯಿಗೆ ಕಪ್ಪು ರೋಗ


ಬಳ್ಳಾರಿ ಜಿಲ್ಲಾದ್ಯಂತ ಮುಂಗಾರು ಹಂಗಾಮಿನಲ್ಲಿ 35 ಸಾವಿರ ಹೆಕ್ಟರ್ ಪ್ರದೆಶದಲ್ಲಿ ಬಿತ್ತನೆಯಾಗಿದೆ. ಆದರೆ ಕಳೆದೆರಡು ತಿಂಗಳ ಹಿಂದೆ ಬಂದ ಅತಿಯಾದ ಮಳೆ ಪರಿಣಾಮ ಆಗಿದ್ದು ಮಾತ್ರ ಇದೀಗ. ಮಾರುದ್ದ ಬೆಳೆದ ಮೆಣಸಿನಕಾಯಿಗೆ ಇದೀಗ ರೋಗ ಬಿಟ್ಟುಬಿಡದಂತೆ ಕಾಡುತ್ತಿದೆ.

ಎಕರೆಗೆ ಒಂದುವರೆ ಲಕ್ಷ ಖರ್ಚು ಮಾಡಿ ಮೆಣಸಿನಕಾಯಿ ಬೆಳೆದ ರೈತರಿಗೆ ಫಸಲು ಬರುವ ಸಂದರ್ಭದಲ್ಲಿ ರೋಗ ಎದುರಾಗಿದೆ. ಒಳ್ಳೆ ಫಸಲು ಬರೋ ಟೈಮಲ್ಲಿ ರೋಗ ಬಿದ್ದು ಕೆಂಪು ಕಾಯಿಯೆಲ್ಲ ಹಾಳಾಗ್ತಿದೆ ಎಂದು ರೈತರು ಅವಲತ್ತುಕೊಳ್ಳುತ್ತಾರೆ

ಒಂದು ಕಡೆ ಕೆಂಪು ಮೆಣಸಿನಕಾಯಿಗೆ ಹಣ್ಣು ಕೊಳೆ ರೋಗ ಸಮಸ್ಯೆಯಿದ್ದರೆ, ಮತ್ತೊಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿಲ್ಲದೆ ರೈತರು ಚಿಂತೆಗೀಡಾಗಿದ್ದಾರೆ. ಕಳೆದ ಬಾರಿ ಪ್ರತಿ ಕ್ವಿಂಟಾಲ್ ಗೆ ಸುಮಾರು 15 ಸಾವಿರ ಹಾಗೂ ಅದಕ್ಕಿಂತ ಹೆಚ್ಚು ಬೆಲೆಯಿತ್ತು. ಈ ವರ್ಷ ಇದರ ಬೆಲೆ 7 ರಿಂದ 8 ಸಾವಿರದವರೆಗೆ ಕುಸಿದಿದೆ. ಗುಂಟೂರ್ ಮೆಣಸಿನಕಾಯಿ 8-10 ಸಾವಿರವಿದ್ರೆ, ಬ್ಯಾಡಗಿ 12-13 ಸಾವಿರವಿದೆ. ಅದರಲ್ಲೂ ಹಣ್ಣು ಕೊಳೆ ರೋಗ ಕಾಣಿಸಿಕೊಂಡ ಕೆಂಪು ಮೆಣಸಿನಕಾಯಿ ಕೇಳುವವರೇ ಇಲ್ಲದಂತಾಗಿದೆ.

bellary
ಕೆಂಪು ಮೆಣಸಿನಕಾಯಿಗೆ ಕಪ್ಪು ರೋಗ ಹಿಡಿದಿರುವುದು
ರೋಗಪೀಡಿತ ಜಮೀನುಗಳಲ್ಲಿ 20 ಕ್ವಿಂಟಾಲ್ ಇಳುವರಿಯ ಬದಲು 12 ಕ್ವಿಂಟಾಲ್ ನಷ್ಟು ಬರುತ್ತಿದೆ. ಗುಣಮಟ್ಟವೂ ಕಡಿಮೆಯಾಗಿ ಮೆಣಸನಿಕಾಯಿ ಖಾರದ ಗುಣಮಟ್ಟವೂ ಸಹ ಕಳೆದುಕೊಳ್ಳುತ್ತಿದೆ. ಇದರಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗದ್ದರಿಂದ ಮೆಣಸಿನಕಾಯಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಕೂಡಲೇ ಸರ್ಕಾರ ನೆರವಿಗೆ ಬರಬೇಕೆಂದು ರೈತ ಮುಖಂಡ ದರೂರು ಪುರುಷೋತ್ತಮ ಗೌಡ ಒತ್ತಾಯಿಸುತ್ತಾರೆ.

ಪ್ರತಿ ಎಕರೆಗೆ ಸಾಲ ಸೋಲ ಮಾಡಿ ಮೆಣಸಿನಕಾಯಿ ಬೆಳೆದ ಗಣಿನಾಡಿನ ರೈತರಿಗೆ ದರ ಕುಸಿತ ಹಾಗೂ ಕೊಳೆ ರೋಗ ಎರಡೂ ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ. ಅದೇ ಮೆಣಸಿನಕಾಯಿ ಪಕ್ಕದ ಹೊಲದಲ್ಲಿ ಈರುಳ್ಳಿ ಬೆಳೆದ ರೈತ ಲಕ್ಷ ಲಕ್ಷ ಗರಿ ಗರಿ ನೋಟು ಎಣಿಸುತ್ತಿದ್ದಾನೆ. ನಾನು ಮೆಣಸಿನಕಾಯಿ ಬದಲು ಈರುಳ್ಳಿ ಬೆಳೆದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ಈರುಳ್ಳಿ ಬೆಳೆದು ಕೋಟಿ ಒಡೆಯನಾದ ರೈತ; ಸತತ 10 ವರ್ಷವೂ ಉಳ್ಳಾಗಡ್ಡಿಯಲ್ಲಿ ಲಾಭ ಕಂಡ ಮಾದರಿ ಕೃಷಿಕ
First published:December 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ