ಹುಬ್ಬಳ್ಳಿ (ಮಾ. 23): ವಾಣಿಜ್ಯ ನಗರಿ ಹುಬ್ಬಳ್ಳಿ ದಿನೇ ದಿನೇ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಮಾಜಿ ಶಾಸಕರ ಮಗನಿಗೆ ಫೋಟೋ ಎಡಿಟ್ ಮಾಡಿ ದುಡ್ಡಿಗಾಗಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣದ ಬೆನ್ನ ಹಿಂದೆಯೇ, ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಿದೆ. ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಈ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಓರ್ವ ಯುವಕ, ಓರ್ವ ಯುವತಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಗರದಲ್ಲಿ ಡ್ರಗ್ಸ್ ಜಾಲ ಭೇದಿಸಿರೋ ಸಿಸಿಬಿ ಪೊಲೀಸರು, ಪೆಡ್ಲರ್ ಸೇರಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಡ್ರಗ್ಸ್ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಪೆಡ್ಲರ್ ಸೇರಿದಂತೆ ಇಬ್ಬರನ್ನು ವಶಕ್ಕೆ ತಗೆದುಕೊಂಡು ಅಪಾರ ಪ್ರಮಾಣದಲ್ಲಿ ಡ್ರಗ್ಸ್ ನ್ನು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ಗೋಕುಲ್ ರಸ್ತೆಯ ವಿಮಾನ ನಿಲ್ದಾಣ ಬಳಿ ಇಬ್ಬರನ್ನು ಬಂಧಿಸಲಾಗಿದೆ. ಅಜಯರಾಮ್ ವೆಂಕಟೇಶ್ ರಾವ್ ಮತ್ತು ಶಿಮ್ರಾನ್ ಜಿತ್ ಕೌರ್ ಬಂಧಿತ ಆರೋಪಿಗಳು. ಅಜಯ್ ರಾವ್ ಮುಂಬಯಿಯ ಅಂದೇರಿ ನಿವಾಸಿಯಾಗಿದ್ದು ಪೆಡ್ಲರ್ ಆಗಿದ್ದು, ಇವನಿಂದ ಹುಬ್ಬಳ್ಳಿಯ ಶಿಮ್ರಾನ್ ಜಿತ್ ಕೌರ್ ಎಂಬಾಕೆ ಡ್ರಗ್ಸ್ ಖರೀದಿ ಮಾಡುತ್ತಿದ್ದಳು ಎನ್ನಲಾಗಿದೆ.
ಶಿಮ್ರಾನ್ ಜಿತ್ ಕೌರ್ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ಉದ್ಯಮಿಯ ಪುತ್ರಿಯಾಗಿದ್ದು ಪೆಡ್ಲರ್ ನಿಂದ ಡ್ರಗ್ಸ್ ತಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಇದ್ದಕ್ಕಿದ್ದಂತೆ ಉರುಳಿ ಬಿದ್ದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ನಗರದ ಮುಖ್ಯ ರಸ್ತೆಯಲ್ಲಿರೋ ಮಹಾನಗರ ಪಾಲಿಕೆ ಆವರಣದಲ್ಲಿದ್ದ ಶಿವಾಜಿ ಮೂರ್ತಿ ಬಿದ್ದಿದೆ. ವಿವಿಧ ಲೋಹಗಳಿಂದ ಮಾಡಲಾಗಿದ್ದ ಅಶ್ವಾರೂಢ ಶಿವಾಜಿ ಮೂರ್ತಿ ಭಗ್ನಗೊಂಡಿದೆ.
ಖಡ್ಗ ಹಿಡಿದು ಕುದುರೆ ಮೇಲೆ ಕುಳಿತ ಭಂಗಿಯಲ್ಲಿದ್ದ ಶಿವಾಜಿ ಮೂರ್ತಿಯನ್ನು ಕೆಲ ವರ್ಷಗಳ ಹಿಂದೆ ಪ್ರತಿಷ್ಟಾಪನೆ ಮಾಡಲಾಗಿತ್ತು. ಆದರೆ ಇಂದು ಮೂರ್ತಿ ಬಿದ್ದಿದ್ದು, ಶಿರ, ಖಡ್ಗ, ಕೈ, ಕುದುರೆ ಎಲ್ಲವೂ ತುಂಡು ತುಂಡಾಗಿ ಬಿದ್ದಿದೆ. ಮೂರ್ತಿ ಭಗ್ನಗೊಂಡಿರೋದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಿವಾಜಿಯ ಲೋಹದ ಮೂರ್ತಿ ಇದ್ದಕ್ಕಿದ್ದಂತೆ ಬಿದ್ದಿರೋದು ಅಚ್ಚರಿಗೆ ಕಾರಣವಾಗಿದೆ. ಮೂರ್ತಿ ನಿರ್ಮಾಣದ ವೇಳೆ ಕಳಪೆ ಕೆಲಸವಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಳಪೆ ಕೆಲಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಅದೇ ಸ್ಥಳದಲ್ಲಿ ಹೊಸ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ