Ragini Arrested: ಡ್ರಗ್ಸ್ ಜಾಲದ ಜೊತೆಗಿನ ನಂಟು, ನಟಿ ರಾಗಿಣಿಯನ್ನು ಮೂರು ದಿನ ಪೊಲೀಸರ ವಶಕ್ಕೆ ನೀಡಿದ ಕೋರ್ಟ್
ಅಸಲಿಗೆ ವಿಚಾರಣೆ ವೇಳೆ ಪೊಲೀಸರು ಏಳು ದಿನಗಳ ಕಾಲ ಸುಪರ್ದಿಗೆ ನೀಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿದ್ದರು. ಆದರೆ, ನ್ಯಾಯಾಧೀಶರು ಕೇವಲ ಮೂರು ದಿನ ಮಾತ್ರ ವಶಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ನಟಿ ರಾಗಿಣಿ ಮುಂದಿನ ಮೂರು ದಿನ ಪೊಲೀಸರ ವಶದಲ್ಲಿ ವಿಚಾರಣೆ ಒಳಗಾಲಿದ್ದಾರೆ.
ಬೆಂಗಳೂರು (ಸೆಪ್ಟೆಂಬರ್ 04); ಅಕ್ರಮ ಡ್ರಗ್ಸ್ ದಂಧೆ ಜಾಲದೊಂದಿಗೆ ನಂಟು ಹೊಂದಿದ್ದ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಯನ್ನು ಇಂದು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಸಿದ್ದರು. ಆದರೆ, ಸಂಜೆ ವಿಚಾರಣೆ ಬಳಿಕ ಅವರನ್ನು ಅಧಿಕೃತವಾಗಿ ಬಂಧನಕ್ಕೊಳಪಡಿಸಿರುವ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯುವಲ್ಲಿ ಸಫಲರಾಗಿದ್ದಾರೆ. ಅಸಲಿಗೆ ವಿಚಾರಣೆ ವೇಳೆ ಪೊಲೀಸರು ಏಳು ದಿನಗಳ ಕಾಲ ಸುಪರ್ದಿಗೆ ನೀಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿದ್ದರು. ಆದರೆ, ನ್ಯಾಯಾಧೀಶರು ಕೇವಲ ಮೂರು ದಿನ ಮಾತ್ರ ವಶಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ನಟಿ ರಾಗಿಣಿ ಮುಂದಿನ ಮೂರು ದಿನ ಪೊಲೀಸರ ವಶದಲ್ಲಿ ವಿಚಾರಣೆ ಒಳಗಾಲಿದ್ದಾರೆ.
ನ್ಯಾಯಾಧೀಶರು ನಟಿ ರಾಗಿಣಿಯನ್ನು ಪೊಲೀಸರ ವಶಕ್ಕೆ ನೀಡುತ್ತಿದ್ದಂತೆ ಸಿಸಿಬಿ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಅಸ್ಪತ್ರೆಗೆ ಕರೆದುತಂದು ತಪಾಸಣೆ ನಡೆಸಿ ಇದೀಗ ಸ್ಟೇಟ್ ಹೋಂಗೆ ಶಿಫ್ಟ್ ಮಾಡಿದ್ದಾರೆ. ರಕ್ಷಣೆ ಕಾರಣದಿಂದಾಗಿ ರಾಗಿಣಿಯನ್ನು ಇಂದು ರಾತ್ರಿ ಸಿಸಿಬಿ ಕಚೇರಿಯಲ್ಲಿ ಉಳಿಸಲು ಯೋಚಿಸಲಾಗಿತ್ತು. ಆದರೆ, ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಸ್ಟೇಟ್ ಹೋಂಗೆ ಶಿಫ್ಟ್ ಮಾಡಲಾಗಿದೆ.
ನಗರದ ಡ್ರಗ್ಸ್ ಪೆಡ್ಲರ್ಗಳಾದ ರಾಹುಲ್ ಮತ್ತು ರವಿಶಂಕರ್ ಜೊತೆಗೆ ಹೊಂದಿದ್ದ ನಂಟೇ ಇದೀಗ ನಟಿ ರಾಗಿಣಿಗೆ ಮುಳುವಾಗಿದೆ. ಅಲ್ಲದೆ, ರಾಗಿಣಿ ಇವರ ಜೊತೆ ಡ್ರಗ್ಸ್ ಜಾಲದಲ್ಲೂ ಭಾಗಿಯಾಗಿದ್ದರು. ಇವರ ಜೊತೆಗೆ ಹಣಕಾಸಿವ ವ್ಯವಹಾರವನ್ನೂ ನಡೆಸಿದ್ದಾರೆ ಎಂಬುದಕ್ಕೆ ಸಿಸಿಬಿ ಪೊಲೀಸರಿಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಇದೇ ಆಧಾರದಲ್ಲಿ ರಾಗಿಣಿಯನ್ನು ಬಂಧಿಸಲಾಗಿದೆ.
ಅಸಲಿಗೆ ರಾಗಿಣಿಯನ್ನು ನಿನ್ನೆಯೇ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ಅನಾರೋಗ್ಯದ ನೆಪವೊಡ್ಡಿ ಅವರು ನಿನ್ನೆ ವಿಚಾರಣೆಗೆ ಹಾಜರಾಗದೆ ತಮ್ಮ ವಕೀಲರನ್ನು ಕಳಿಸಿಕೊಟ್ಟಿದ್ದರು. ಆದರೆ, ಇಂದು ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವುದಾಗಿ ಸಿಸಿಬಿ ಪೊಲೀಸರ ಎಚ್ಚರಿಕೆ ನೀಡಿದ್ದ ಕಾರಣ ರಾಗಿಣಿ ಬೆಳಗ್ಗೆಯೇ ವಿಚಾರಣೆಗೆ ಹಾಜರಾಗಿದ್ದರು.
ಇಂದು ಬೆಳಗ್ಗೆಯಿಂದ ನಟಿ ರಾಗಿಣಿಯ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಅವರಿಂದ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇದೀಗ ಮೂರು ದಿನ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೋರ್ಟ್ ಸಹ ಅನುಮತಿ ನೀಡಿದ್ದು, ನಗರದಲ್ಲಿ ಬೇರು ಬಿಟ್ಟಿರುವ ಡ್ರಗ್ಸ್ ದಂಧೆಯ ರುವಾರಿ ಯಾರು? ಎಂಬುದು ಮುಂದಿನ ವಿಚಾರಣೆ ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಬಯಲಾಗಲಿದೆ ಎನ್ನಲಾಗುತ್ತಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ