Sanjjanaa Galrani: ಸಂಜನಾಗೆ ಸೆ‌.18ರ ವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿದ ಕೋರ್ಟ್‌; ನಟಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌

ಒಂದನೇ ಎಸಿಎಂಎಂ ನ್ಯಾಯಾಲಯ ನಟಿ ಸಂಜನಾ ಅವರಿಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದು, ಇಂದು ರಾತ್ರಿ ವೇಳೆಗೆ ನಟಿ ಸಂಜನಾ ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‌ವುಡ್‌ನ ಮತ್ತೋರ್ವ ನಟಿ ರಾಗಿಣಿ ದ್ವಿವೇದಿ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದಾರೆ ಎಂಬುದು ಉಲ್ಲೇಖಾರ್ಹ.

ಸಂಜನಾ ಗಲ್ರಾನಿ.

ಸಂಜನಾ ಗಲ್ರಾನಿ.

 • Share this:
  ಬೆಂಗಳೂರು (ಸೆಪ್ಟೆಂಬರ್‌ 16); ನಗರದಲ್ಲಿ ಡ್ರಗ್ಸ್‌ ಡೀಲರ್‌ಗಳ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧಿತರಾಗಿ ಸತತ ಪೊಲೀಸ್ ವಿಚಾರಣೆಗೆ ಒಳಪಟ್ಟಿರುವ ನಟಿ ಸಂಜನಾ ಅವರ ನ್ಯಾಯಾಂಗ ಬಂಧನವನ್ನು ಕೋರ್ಟ್‌ ಇಂದು ಸೆಪ್ಟೆಂಬರ್‌ 18ರ ವರೆಗೆ ವಿಸ್ತರಿಸಿದೆ. ರಾಜ್ಯ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಡ್ರಗ್ಸ್‌ ಮಾಫಿಯಾ ವಿರುದ್ಧ ಮುರಿದುಬಿದ್ದಿರುವ ಸಿಸಿಬಿ ಪೊಲೀಸರು ಕಳೆದ ಎರಡು ವಾರದ ಹಿಂದೆ ನಗರದ ಪ್ರಮುಖ ಡ್ರಗ್‌ ಡೀಲರ್‌ಗಳಾದ ರಾಹುಲ್ ಮತ್ತು ಕಾರ್ತಿಕ್‌ ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಸಹ ಇವರ ಸಂಪರ್ಕದಲ್ಲಿದ್ದ ಕಾರಣ ಇವರನ್ನೂ ಬಂಧಿಸಿ ಸಿಸಿಬಿ ಪೊಲೀಸರು ಸತತ ವಿಚಾರಣೆಗೆ ಒಳಪಡಿಸಿ ಅನೇಕ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಈ ನಡುವೆ ಇಂದಿಗೆ ನಟಿ ಸಂಜನಾ ಅವರ ಪೊಲೀಸ್‌ ಕಸ್ಟಡಿ ಮುಕ್ತಾಯವಾಗಿತ್ತು. ಹೀಗಾಗಿ ಪೊಲೀಸರು ನಟಿಯನ್ನು ಇಂದು ಸಂಜೆ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದಾರೆ. ಈ ವೇಳೆ ನಟಿಗೆ ಜಾಮೀನು ನೀಡಲು ನಿರಾಕರಿಸಿರುವ ನ್ಯಾಯಾಲಯ ಸಂಜನಾ ಅವರಿಗೆ ಸೆಪ್ಟೆಂಬರ್‌ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

  ಒಂದನೇ ಎಸಿಎಂಎಂ ನ್ಯಾಯಾಲಯ ನಟಿ ಸಂಜನಾ ಅವರಿಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದು, ಇಂದು ರಾತ್ರಿ ವೇಳೆಗೆ ನಟಿ ಸಂಜನಾ ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‌ವುಡ್‌ನ ಮತ್ತೋರ್ವ ನಟಿ ರಾಗಿಣಿ ದ್ವಿವೇದಿ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದಾರೆ ಎಂಬುದು ಉಲ್ಲೇಖಾರ್ಹ.

  ಈ ನಡುವೆ ನಟಿ ಸಂಜನಾ ಅವರ ಜಾಮೀನು ಅರ್ಜಿಯನ್ನು 18-9-2020 ರ ಒಳಗಾಗಿ 1ನೇ ಎಸಿಎಂಎಂ ನ್ಯಾಯಾಲಯದಿಂದ ಸೆಷನ್ಸ್ ಕೋರ್ಟ್ ಗೆ ವರ್ಗಾವಣೆ ನೀಡಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿದೆ. ಹೀಗಾಗಿ ಶುಕ್ರವಾರವಾದರೂ ನಟಿಗೆ ಜಾಮೀನು ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

  ಈ ನಡುವೆ ಡ್ರಗ್ಸ್‌ ಕೇಸ್‌ಗೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ಖ್ಯಾತ ತಾರಾ ಜೋಡಿ ಐಂದ್ರಿತಾ ರೇ ಮತ್ತು ದಿಗಂತ್ ಅವರನ್ನು ಸಹ ಇಂದು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಪ್ರಮುಖ ಮಾಹಿತಿಗಳನ್ನು ಕಲೆಹಾಕಿದ್ದಾರೆ ಎನ್ನಲಾಗುತ್ತಿದೆ.

  ಹೇಗಿತ್ತು ತಾರಾ ಜೋಡಿಯ ವಿಚಾರಣೆ?;

  ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್ ಇಂದು ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಐಂದ್ರಿತಾ ರೇ ಅವರನ್ನು ಇನ್ಸ್‌ಪೆಕ್ಟರ್‌ ಅಂಜುಮಾಲಾ ವಿಚಾರಣೆ ನಡೆಸಿದ್ದರೆ, ದಿಗಂತ್ ಅವರನ್ನು ಇನ್ಸ್‌ಪೆಕ್ಟರ್‌ ಪುನೀತ್‌ ವಿಚಾರಣೆ ನಡೆಸಿದ್ದಾರೆ.

  ಐಂದ್ರಿತಾ ರೇ ಅವರಿಗೆ ವಿಚಾರಣೆ ವೇಳೆ, "ಶೇಖ್ ಫಾಸಿಲ್ ಗೂ ನಿನಗೂ ಎಷ್ಟು ವರ್ಷಗಳ ಪರಿಚಯ? ಶ್ರೀಲಂಕಾ ಕೊಲೊಂಬೊದ ಕ್ಯಾಸಿನೋ ನಿನಗೆ ಯಾರು ಇನ್ ವೇಟ್ ಮಾಡಿದ್ದು..? ಕ್ಯಾಸಿನೋ ಪರವಾಗಿ ವಿಡಿಯೋ ಮಾಡಿದ್ದರ ಉದ್ದೇಶವೇನು..? ಕ್ಯಾಸಿನೋದ ಪರವಾಗಿ ವಿಡಿಯೋ ಮಾಡಲಿಕ್ಕೆ ನಿಮಗೇನಾದ್ರೂ ಸಂಭಾವನೆ ಕೊಟ್ಟಿದ್ರಾ..?" ಎಂದು ಪ್ರಶ್ನೆಗಳನ್ನು ಮಾಡಲಾಗಿದೆ.

  ಈ ಪ್ರಶ್ನೆಗಳಿಗೆ ಉತ್ತರಿಸಿರುವ ಐಂದ್ರಿತಾ ರೇ, "ಫಾಸಿಲ್ ನನ್ನ ಕ್ಯಾಸಿನೋ ಗೆ ಇನ್ ವೇಟ್ ಮಾಡಿದ್ದ. ನನಗೂ ಕ್ಯಾಸಿನೋಗೆ ಹೋಗೋ ಇಷ್ಟ ಇತ್ತು ಹಾಗಾಗಿ ನಾನು ಬರ್ತೇನೆ ಎಂದಿದ್ದೆ. ಇದೇ ವೇಳೆ ಒಂದು ವಿಡಿಯೋ ಮಾಡಿ ಕಳಿಸಿ‌ ಎಂದಿದ್ದ ಹೀಗಾಗಿ ಮಾಡಿದೆ. ಆದರೆ, ಅದಕ್ಕಾಗಿ ನಾನು ಯಾವುದೇ ಸಂಭಾವನೆ ಪಡೆದಿಲ್ಲ" ಎಂದು ತಿಳಿಸಿದ್ದಾರೆ.

  ಇನ್ನೂ ನಟ ದಿಗಂತ್ ಅವರಿಗೆ, "ನೀವು ಯಾವ ಯಾವ ಪಾರ್ಟಿಗಳಿಗೆ ಹೋಗಿದ್ರಿ..? ಎಷ್ಟು ದಿನಗಳಿಗೊಮ್ಮೆ ಪಾರ್ಟಿಗಳಿಗೆ ಹೋಗ್ತಾ ಇದ್ರಿ.. ನಿಮ್ಮನ್ನು ಯಾರು ಪಾರ್ಟಿಗೆ ಇನ್ವೈಟ್ ಮಾಡ್ತಾ ಇದ್ರು.? ಅಥವಾ ನೀವೆ ಸ್ವಂತ ಹಣದಲ್ಲಿ ಪಾರ್ಟಿಗಳಿಗೆ ಹೋಗ್ತಾ ಇದ್ರಾ..? ಕೊಲಂಬೊದ ಕ್ಯಾಸಿನೋದ ಪಾರ್ಟಿಯನ್ನು ಯಾರೆಲ್ಲಾ ಸೇರಿದ್ರಿ..? ಶೇಖ್ ಪೈಸೂಲ್ ನಿಮಗೆ ಪರಿಚಯ ಇದೆಯಾ..? ಅವರನ್ನ ಏನಾದ್ರೂ ಮೀಟ್ ಮಾಡಿದ್ದೀರಾ..? ಶಿವಪ್ರಕಾಶ್ ಜೊತೆ ಸಾಕಷ್ಟು ಪಾರ್ಟಿ ಗಳಲ್ಲಿ ಪೋಟೋ ತೆಗೆಸಿಕೊಂಡಿದ್ದೀರಾ‌.? ಶಿವಪ್ರಕಾಶ್ ಎಲ್ಲಿದ್ದಾರೆ ಗೊತ್ತಾ..? ಅವರು ಹೇಗೆ ನಿಮಗೆ ಪರಿಚಯ..?" ಎಂದು ಹಲವಾರು ಪ್ರಶ್ನೆಗಳನ್ನು ಮಾಡಲಾಗಿದೆ.

  ಇದನ್ನೂ ಓದಿ : Sandalwood Drug Scandal: ಐಂದ್ರಿತಾ ರೇ-ದಿಗಂತ್ ವಿಚಾರಣೆ ಮುಕ್ತಾಯ, ಏನಾಗಲಿದೆ ತಾರಾ ಜೋಡಿಯ ಭವಿಷ್ಯ?

  ಇದಕ್ಕೆ ಸ್ಪಷ್ಟ ಉತ್ತರ ನೀಡಿರುವ ನಟ ದಿಗಂತ್, "ನಾವು ಪಾರ್ಟಿಗಳಿಗೆ ಹೋಗ್ತಾ ಇದ್ದದ್ದು ನಿಜ. ಕೆಲವರು ನಮ್ಮನ್ನ ಪಾರ್ಟಿಗೆ ಆಹ್ವಾನ ಮಾಡ್ತಾ ಇದ್ರು ನಮಗೆ ಇಷ್ಟ ಇದ್ರೆ ನಾವು ಹೋಗ್ತಾ ಇದ್ವಿ. ಆದರೆ, ಈ ಪಾರ್ಟಿಗಳಲ್ಲಿ ಡ್ರಗ್ಸ್‌ ಸೇವನೆ ಮಾಡುತ್ತಿದ್ದ ಬಗ್ಗೆ ನಮಗೆ ಗೊತ್ತಿಲ್ಲ. ನಾವೂ ಸಹ ಯಾವುದೇ ಡ್ರಗ್ಸ್‌ ಸೇವನೆ ಮಾಡುತ್ತಿರಲಿಲ್ಲ" ಎಂದು ಉತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ.

  ವಿಚಾರಣೆ ವೇಳೆ ಐಂದ್ರಿತಾ ರೇ ಮತ್ತು ದಿಗಂತ್ ಸರಾಗವಾಗಿ ಯಾವುದೇ ಅಳುಕಿಲ್ಲದೆ ಉತ್ತರ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಇಬ್ಬರ ಮೊಬೈಲ್‌ಗಳನ್ನೂ ಸಹ ಪೊಲೀಸರು ಪರಿಶೀಲನೆಗೆ ಒಳಪಡಿಸಿದ್ದಾರೆ. ಹೀಗಾಗಿ ವಿಚಾರಣೆ ಮುಗಿಸಿದ ತಕ್ಷಣ ಇಬ್ಬರನ್ನೂ ಬಿಟ್ಟು ಕಳಿಸಲಾಗಿದೆ. ಮತ್ತೆ ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಕರೆದರೂ ಸಹ ಬರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೂ ಇವರ ಭವಿಷ್ಯ ಮುಂದೆ ಏನಾಗಲಿದೆ ಎಂಬುದು ಅಧಿಕಾರಿಗಳ ತೀರ್ಮಾನದ ಮೇಲೆ ನಿಂತಿದೆ ಎನ್ನಲಾಗುತ್ತಿದೆ.
  Published by:MAshok Kumar
  First published: