ಮುಖ್ಯಮಂತ್ರಿಯಾಗಿ ಬಿಎಸ್​ವೈ ಪದಗ್ರಹಣ: ಮ್ಯಾಜಿಕ್​ ನಂಬರ್​ಗೆ ಕುದುರೆ ವ್ಯಾಪಾರ ಸಾಧ್ಯವೇ?


Updated:May 16, 2018, 5:11 PM IST
ಮುಖ್ಯಮಂತ್ರಿಯಾಗಿ ಬಿಎಸ್​ವೈ ಪದಗ್ರಹಣ: ಮ್ಯಾಜಿಕ್​ ನಂಬರ್​ಗೆ ಕುದುರೆ ವ್ಯಾಪಾರ ಸಾಧ್ಯವೇ?

Updated: May 16, 2018, 5:11 PM IST
- ಶರತ್​ ಶರ್ಮ ಕಲಗಾರು, ನ್ಯೂಸ್​ 18 ಕನ್ನಡ

ಸುಮಾರು ಒಂದು ದಿನದ ಹಗ್ಗಜಗ್ಗಾಟದ ನಂತರ ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್​. ಯಡಿಯೂರಪ್ಪ ಅವರನ್ನು ರಾಜ್ಯಪಾಲ ವಝುಭಾಯ್​ ರುಢುಭಾಯ್​ ವಾಲಾ ಬಹುಮತ ಸಾಭೀತು ಪಡಿಸಲು ಸ್ವಾಗತಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ರಾಜ್ಯಪಾಲರು ನೀಡುವ ಗಡುವಿನೊಳಗೆ ಬಹುಮತ ಸಾಭೀತುಪಡಿಸಲು ಸಾಧ್ಯವೇ ಎಂಬುದು ಸದ್ಯದ ಪ್ರಶ್ನೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಟ್ಟೂ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳ ಚುನಾವಣೆ ನಡೆದಿದ್ದು, ಬಹುಮತಕ್ಕೆ ಬಿಜೆಪಿಗೆ ಇನ್ನೂ ಏಳು ಸೀಟ್​ಗಳ ಅವಶ್ಯಕತೆಯಿದೆ. ಒಂದೋ ಬಿಜೆಪಿ ಕುದುರೆ ವ್ಯಾಪಾರದ ಮೂಲಕ ಜೆಡಿಎಸ್​ ಮತ್ತು ಕಾಂಗ್ರೆಸ್​ ಪಕ್ಷಗಳಿಂದ ಶಾಸಕರನ್ನು ಕೊಂಡುಕೊಳ್ಳಬೇಕು. ಇಲ್ಲವಾದರೆ ಬಹುಮತ ಸಾಭೀತುಪಡಿಸುವ ವೇಳೆ ಕಾಂಗ್ರೆಸ್​ ಮತ್ತು ಜೆಡಿಎಸ್​ ಒಟ್ಟೂ 15 ಶಾಸಕರನ್ನು ಗೈರು ಹಾಜರು ಮಾಡಬೇಕು. ಶಾಸಕರು ಗೈರಾದರೆ, ಬಹುಮತದ ಸಂಖ್ಯೆ ಕಡಿಮೆಯಾಗಲಿದ್ದು, ಬಿಜೆಪಿ ಬಹುಮತ ಸಾಭೀತುಪಡಿಸಬಹುದು.

ಆದರೆ ಶಾಸಕರನ್ನು ಗೈರಾಗುವಂತೆ ನೋಡಿಕೊಳ್ಳುವುದು ಕಷ್ಟದ ಕೆಲಸವಾಗಿದ್ದು, ಬಿಜೆಪಿ ಕುದುರೆ ವ್ಯಾಪಾರಕ್ಕೇ ಗಂಟು ಬೀಳಬೇಕಿದೆ. 2008ರ ಚುನಾವಣೆಯಲ್ಲೂ ಇದೇ ರೀತಿಯ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ಬಿಜೆಪಿಯಲ್ಲಿದ್ದ ಗಾಲಿ ಜನಾರ್ಧನ ರೆಡ್ಡಿ ಶಾಸಕರನ್ನು ಪಕ್ಷಕ್ಕೆ ಎಳೆದು ತರುವಲ್ಲಿ ಸಫಲರಾಗಿದ್ದರು. ಕರ್ನಾಟಕ ರಾಜಕಾರಣದಲ್ಲಿ ಹಿಂದೆಂದೂ ಕಾಣದ ರೆಸಾರ್ಟ್​ ರಾಜಕಾರಣ ಮತ್ತು ದುಡ್ಡಿನ ಹೊಳೆಯನ್ನು ರೆಡ್ಡಿ ಹರಿಸಿದ್ದರು. ಜೆಡಿಎಸ್ - ಬಿಜೆಪಿಯ ಮೈತ್ರಿ ಮುರಿದು ಬಿದ್ದ ನಂತರ ನಡೆದ ಈ ಚುನಾವಣೆಯ ಫಲಿತಾಂಶವನ್ನು 2018ರ ಚುನಾವಣೆ ಫಲಿತಾಂಶ ಹೋಲುತ್ತಿದೆ.

ಕುದುರೆ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದ್ದ ಜನಾರ್ಧನ ರೆಡ್ಡಿ ಈಗ ಬಿಜೆಪಿಯ ಅಧಿಕೃತ ಭಾಗವಲ್ಲ. ಆದರೆ ಪಕ್ಷದ ಜತೆಗೆ ರೆಡ್ಡಿ ಈಗಲೂ ನಂಟು ಹೊಂದಿದ್ದು, ಹಿಂದಿನ ಬಾಗಿಲಿನಿಂದ ಪಕ್ಷದ ಜತೆ ಸಂಪರ್ಕ ಹೊಂದಿದ್ದಾರೆ. ಜನಾರ್ಧನ ರೆಡ್ಡಿ ಈಗ ಮತ್ತೆ ಅನಧಿಕೃತವಾಗಿ ಕುದುರೆ ವ್ಯಾಪಾರದ ಉಸ್ತುವಾರಿ ಹೊರುವ ಸಾಧ್ಯತೆಯಿದೆ. ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ಹೆಗಲಿಗೆ ಈ ಕೆಲಸವನ್ನು ನೀಡುವ ಸಾಧ್ಯತೆಯಿದೆ. ಆದರೆ ಅಧಿಕೃತವಾಗಿ ಯಡಿಯೂರಪ್ಪ ಅವರಿಗೇ ಈ ಹೊಣೆಯನ್ನು ನೀಡಲಾಗಿದೆ.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಹುಮತ ಸಾಭೀತುಪಡಿಸುವಲ್ಲಿ ಯಶಸ್ವಿಯಾಗದಿದ್ದರೆ, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್​ ಮತ್ತು ಕಾಂಗ್ರೆಸ್​ಗೆ ಬಹುಮತ ಸಾಭೀತುಪಡಿಸಲು ರಾಜ್ಯಪಾಲರು ಅವಕಾಶ ನೀಡಬಹುದು. ಕಾಂಗ್ರೆಸ್​ ಮತ್ತು ಜೆಡಿಎಸ್​ ಮತ್ತು ಇಬ್ಬರು ಪಕ್ಷೇತರರನ್ನು ಸೇರಿ ಒಟ್ಟೂ 118 ಶಾಸಕರಿದ್ದಾರೆ. ಆದ್ದರಿಂದ ಬಹುಮತ ಸಾಭೀತು ಪಡಿಸುವುದು ಕಷ್ಟವೇನಲ್ಲ.

ಸದ್ಯ ಜೆಡಿಎಸ್​ ಮತ್ತು ಕಾಂಗ್ರೆಸ್​ ಶಾಸಕರು ಬೆಂಬಲ ಪತ್ರ ಹಿಡಿದು ರಾಜ್ಯಪಾಲರ ಮುಂದೆ ಪೆರೇಡ್​ಗೆ ಮುಂದಾಗಿದ್ದಾರೆ. ಆದರೆ ಒಮ್ಮೆ ರಾಜ್ಯಪಾಲರು ಒಂದು ಪಕ್ಷಕ್ಕೆ ಬಹುಮತ ಸಾಭೀತುಪಡಿಸಲು ಆಹ್ವಾನ ಮಾಡಿದ ನಂತರ, ಆ ಪಕ್ಷ ಬಹುಮತ ಸಾಭೀತುಪಡಿಸಲು ವಿಫಲವಾಗುವ ವರೆಗೆ ಮತ್ತೊಂದು ಪಕ್ಷಕ್ಕೆ ಆಹ್ವಾನ ನೀಡುವುದಿಲ್ಲ. ಜೆಡಿಎಸ್​ ಈಗ ಮಾಡುತ್ತಿರುವುದು ಹೊರಗಿನ ಪ್ರಪಂಚಕ್ಕೆ ಸಂಚಲನದಂತೆ ಕಂಡರೂ, ನೀರಿನಲ್ಲಿ ಮಾಡಿದ ಹೋಮದಂತೆ.
Loading...

ಇದು ಜೆಡಿಎಸ್​ ಮತ್ತು ಕಾಂಗ್ರೆಸ್​ ಶಾಸಕರಿಗೂ ತಿಳಿದ ವಿಚಾರ. ಆದರೂ ತಮ್ಮ ಆಕ್ರೋಶ ಮತ್ತು ತಮಗಿರುವ ಬೆಂಬಲವನ್ನು ತೋರಿಸುವ ನಿಟ್ಟಿನಲ್ಲಿ ಜೆಡಿಎಸ್​ ರಾಜಭವನಕ್ಕೆ ತೆರಳುತ್ತಿದೆ. ಇಷ್ಟು ದಿನಗಳ ಕಾಲ ಸಿದ್ದರಾಮಯ್ಯ VS ನರೇಂದ್ರ ಮೋದಿ ಎಂಬಂತಿದ್ದ ಚುನಾವಣಾ ಕಣದ ವಾತಾವರಣ ಈಗ ಬದಲಾಗಿದೆ. ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಲಿ, ಜೆಡಿಎಸ್​ಗೆ ಭೇಷರತ್​ ಬೆಂಬಲ ಎಂದು ಸಿದ್ದರಾಮಯ್ಯ ಕೂಡ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಘೋಷಿಸಿದರು.

ಈಗ ಬಹುಮತ ಸಾಭೀತು ಪಡಿಸಲು ರಾಜಕೀಯ ಗರಿಗೆದರಿದೆ. ಕಡೆಯ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡುವ ಯಡಿಯೂರಪ್ಪ ಆಸೆ ಇನ್ನೂ ಜೀವಂತವಾಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದನ್ನು ಕಾದು ನೋಡಬೇಕು. ಈ ಹಿಂದೆ 1996ರ ಲೋಕ ಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್​ ಏತರ ಪಕ್ಷ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಯಿತು. ಬಿಜೆಪಿ ವರಿಷ್ಠ ವಾಜಪೇಯಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು, ಆದರೆ ಬಹುಮತ ಸಾಭೀತುಪಡಿಸುವಲ್ಲಿ ವಿಫಲರಾದರು.

ಅದೇ ಬೇಸರದಲ್ಲಿ ವಾಜಪೇಯಿ ಮಾಡಿದ್ದ ಭಾಷಣ ಮನ ಕಲಕುವಂತಿತ್ತು. ಬಹುಮತ ಸಾಭೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ವಾಜಪೇಯಿ ರಾಜೀನಾಮೆ ನೀಡಿದರ. ಅತಂತ್ರ ಸ್ಥಿತಿಯಲ್ಲಿದ್ದ ದೇಶ ರಾಜಕಾರಣದಲ್ಲಿ ಕನ್ನಡಿಗ ಎಚ್​.ಡಿ. ದೇವೆಗೌಡ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ದೇವೆಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಗುಜರಾತ್​ ಸರ್ಕಾರ ಇಬ್ಬಾಗವಾಯಿತು. ಅಧಿಕಾರದಲ್ಲಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಈಗ ಕರ್ನಾಟಕ ರಾಜ್ಯಪಾಲರಾಗಿರುವ ವಝುಭಾಯ್​ ವಾಲಾ ಅಂದಿನ ಗುಜರಾತ್​ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಗುಜರಾತ್​ನಲ್ಲಿ ಬಿಜೆಪಿ ಅಧಿಕಾರ ಕಳೆದು ಕೊಳ್ಳುವಲ್ಲಿ ದೇವೆಗೌಡರ ಪಾತ್ರವೂ ಇದೆ ಎನ್ನಲಾಗಿತ್ತು. ನಂತರ ಶಂಕರ್​ ಸಿಂಗ್​ ವಘೇಲಾ ಸರ್ಕಾರ ರಚಿಸಿದ್ದರ. ಈಗ ಪರಿಸ್ಥಿತಿ ಬದಲಾಗಿದೆ. ರಾಜ್ಯಪಾಲರ ಕೈಯಲ್ಲಿ ಕರ್ನಾಟಕದ ಭವಿಷ್ಯವಿದೆ. 1996ರ ಗುಜರಾತ್​ನಂತದ್ದೇ ಸ್ಥಿತಿಯಲ್ಲಿ ಕರ್ನಾಟಕವಿದೆ.

ಬಿಜೆಪಿ ಬಹುಮತ ಸಾಭೀತು ಪಡಿಸಲಿದೆಯಾ, ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಸರ್ಕಾರ ರಚಿಸಲಿದೆಯಾ ಇವೆಲ್ಲವೂ ಕೆಲವೇ ಗಂಟೆಗಳಲ್ಲಿ ನಿರ್ಧರಿತವಾಗಲಿದೆ. ಸದ್ಯ ರಾಜಭವನಸದ ಮುಂದೆ ಪೆರೇಡ್​ಗೆ ಮುಂದಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್​ ಶಾಸಕರು ಬೆಂಗಳೂರಿನ ಹೊರವಲಯದ ಈಗಲ್​ಟನ್​ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ