ಚುನಾವಣೆ ನಂತರ ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರ ಸತ್ಯ ಬಿಚ್ಚಿಡುತ್ತೇನೆ: ಡಾ. ಸುಧಾಕರ್

ಈ ಚುನಾವಣೆಯಲ್ಲಿ ವಿಚಾರಗಳು ಬಹಳ ಸ್ಪಷ್ಟವಾಗಿವೆ. ಅಭಿವೃದ್ಧಿಗೆ ಮತ ಕೊಡಬೇಕಾ ಅಥವಾ ಭ್ರಷ್ಟಾಚಾರಿಗಳಿಗೆ ಮತ ಕೊಡಬೇಕಾ ಎಂಬ ಆಯ್ಕೆ ಜನರ ಮುಂದಿದೆ. ಈ ಸಂದರ್ಭದಲ್ಲಿ ವಿಷಯಾಂತರಗೊಳಿಸಲು ಇಷ್ಟವಿಲ್ಲ. ಹಾಗಾಗಿ, ಚುನಾವಣೆಯ ನಂತರ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತೇನೆ ಎಂದು ಸುಧಾಕರ್ ತಿಳಿಸಿದ್ದಾರೆ.

news18
Updated:December 3, 2019, 2:07 PM IST
ಚುನಾವಣೆ ನಂತರ ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರ ಸತ್ಯ ಬಿಚ್ಚಿಡುತ್ತೇನೆ: ಡಾ. ಸುಧಾಕರ್
ಡಾ. ಸುಧಾಕರ್
  • News18
  • Last Updated: December 3, 2019, 2:07 PM IST
  • Share this:
ಚಿಕ್ಕಬಳ್ಳಾಪುರ(ಡಿ. 03): ಅನರ್ಹ ಶಾಸಕರ ಬಗ್ಗೆ ವೈಯಕ್ತಿಕವಾಗಿ ಟೀಕೆಗಳನ್ನು ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಡಾ. ಕೆ. ಸುಧಾಕರ್ ತಿರುಗೇಟು ನೀಡಿದರು. ಅವರಿಬ್ಬರ ಬಗ್ಗೆ ಚುನಾವಣೆಯ ಬಳಿಕ ಕೆಲ ಸತ್ಯಗಳನ್ನ ಜನರ ಮುಂದಿಡುತ್ತೇನೆ ಎಂದು ಡಾ| ಸುಧಾಕರ್ ಹೇಳಿದರು. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಬೈಕ್ ರ್ಯಾಲಿಗೆ ಚಾಲನೆ ಕೊಟ್ಟು ಸುಧಾಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ನಾಯಕರಾದವರು ಹಿರಿತನಕ್ಕೆ, ಅನುಭವಕ್ಕೆ ತಕ್ಕಂತೆ ಮಾತನಾಡಬೇಕು. ಆಧಾರ ರಹಿತವಾಗಿ ವೈಯಕ್ತಿಕ ನಿಂದನೆ, ಅಪಪ್ರಚಾರ ಮಾಡುವುದು ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ. ಚುನಾವಣೆ ಇರುವುದರಿಂದ ಕೆಲ ಸತ್ಯಗಳನ್ನ ಹೇಳುವುದು ಕಷ್ಟವಾಗುತ್ತದೆ. ಫಲಿತಾಂಶ ಬಂದ ನಂತರ ಸಿದ್ದರಾಮಯ್ಯ ಅವರ ಕೆಲವು ಸತ್ಯಗಳನ್ನ ಜನರ ಮುಂದಿಡುತ್ತೇನೆ ಎಂದು ಅನರ್ಹ ಶಾಸಕ ಸುಧಾಕರ್ ತಿಳಿಸಿದರು.

ಇದನ್ನೂ ಓದಿ: 15 ಕ್ಷೇತ್ರಗಳಲ್ಲಿ ಅನರ್ಹರ ಸೋಲು ಖಚಿತ, ಕಾಂಗ್ರೆಸ್ ಗೆಲುವು ನಿಶ್ಚಿತ; ಡಿಕೆ ಶಿವಕುಮಾರ್​

ಸುಧಾಕರ್ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು ಸಿದ್ದರಾಮಯ್ಯ ಮಾಡಿದ ಆರೋಪವನ್ನು ಅವರು ತಳ್ಳಿಹಾಕಿದರು. “ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಟ್ಟಿದ್ದು ಸಿದ್ದರಾಮಯ್ಯ ಅಲ್ಲ. ನನ್ನ ರಾಜಕೀಯ ಗುರು ಎಸ್.ಎಂ. ಕೃಷ್ಣ ಅವರು ನನಗೆ ಟಿಕೆಟ್ ಕೊಡಿಸಿದ್ದರು. ಈ ವಿಚಾರದಲ್ಲಿ ಜಿ. ಪರಮೇಶ್ವರ್ ಅವರಿಗೂ ಕ್ರೆಡಿಟ್ ಹೋಗುತ್ತೆ” ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಹೇಳಿದರು.

ಅನರ್ಹ ಶಾಸಕರು ಕೋತಿಗಳು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ  ಹೇಳಿಕೆಯನ್ನು ಈ ಸಂದರ್ಭದಲ್ಲಿ ಸುಧಾಕರ್ ಆಕ್ಷೇಪಿಸಿದರು. “ರಮೇಶ್ ಕುಮಾರ್ ಅವರ ಬಗ್ಗೆಯೂ ಚುನಾವಣೆ ನಂತರ ಕೆಲವು ವಿಚಾರಗಳನ್ನು ಬಹಿರಂಗಪಡಿಸುತ್ತೇನೆ. ಅವರು ಹಿಂದೆ ಯಾವುದೋ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಅವರು ನಟನೆಯನ್ನೇ ಮುಂದುವರಿಸಿಕಂಡು ಹೋಗಲಿ. ಕಾಂಗ್ರೆಸ್ ನಾಯಕರು ಹಾಸ್ಯ ನಟರಂತೆ ಮಾತನಾಡುತ್ತಿದ್ಧಾರೆ. ಚುನಾವಣೆಯ ನಂತರ ಅವರಿಗೆ ಏನೂ ಕೆಲಸ ಇರಲ್ಲ. ನಟನೆಯನ್ನೇ ಮಾಡಿಕೊಂಡಿರಲಿ” ಎಂದು ಡಾ| ಕೆ. ಸುಧಾಕರ್ ವ್ಯಂಗ್ಯ ಮಾಡಿದರು.

ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್​ ಮುಳುಗುತ್ತಿರುವ ಹಡಗು, ಇಬ್ಬರೂ ಅಪ್ಪಿಕೊಂಡೇ ಸಾಯ್ತಾರೆ; ಸಚಿವ ಈಶ್ವರಪ್ಪ ಲೇವಡಿ

ಈ ಚುನಾವಣೆಯಲ್ಲಿ ವಿಚಾರಗಳು ಬಹಳ ಸ್ಪಷ್ಟವಾಗಿವೆ. ಅಭಿವೃದ್ಧಿಗೆ ಮತ ಕೊಡಬೇಕಾ ಅಥವಾ ಭ್ರಷ್ಟಾಚಾರಿಗಳಿಗೆ ಮತ ಕೊಡಬೇಕಾ; ವಂಶ ಪಾರಂಪರ್ಯ ಆಡಳಿತಕ್ಕೆ ಮತ ಕೊಡಬೇಕಾ ಅಥವಾ ಈ ಕ್ಷೇತ್ರದ ಅಭಿವೃದ್ಧಿಗೆ ಮತ ಕೊಡಬೇಕಾ; ಈ ಕ್ಷೇತ್ರಕ್ಕೆ ಅನ್ಯಾಯ ಮಾಡಿದ ಹಿಂದಿನ ಮೈತ್ರಿ ಸರ್ಕಾರದ ಪರವಾಗಿ ಮತ ಕೊಡಬೇಕಾ ಅಥವಾ ಕ್ಷೇತ್ರಕ್ಕೆ ಅನೇಕ ಅನುದಾನ, ಮೆಡಿಕಲ್ ಕಾಲೇಜು, ನಿವೇಶನಗಳನ್ನು ಕೊಟ್ಟ ಬಿಎಸ್​ವೈ ಸರ್ಕಾರಕ್ಕೆ ಮತ ಕೊಡಬೇಕಾ ಎಂಬುದು ಜನರಿಗೆ ಈಗಿರುವ ಆಯ್ಕೆಗಳಾಗಿವೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಕೆಲ ವಿಚಾರಗಳ ಬಗ್ಗೆ ಮಾತನಾಡಿ ವಿಷಯಾಂತರಗೊಳಿಸಲು ಇಷ್ಟವಿಲ್ಲ. ಹಾಗಾಗಿ, ಚುನಾವಣೆಯ ನಂತರ ಅವರ ಬಗ್ಗೆ ಮಾತನಾಡುತ್ತೇನೆ ಎಂದು ಸುಧಾಕರ್ ತಿಳಿಸಿದರು.ಚಿಕ್ಕಬಳ್ಳಾಪುರ ನಗರದಾದ್ಯಂತ ಸಂಚರಿಸಲಿರುವ ಬಿಜೆಪಿಯ ಬೈಕ್ ರ್ಯಾಲಿಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಸುಧಾಕರ್​ಗೆ ಜೊತೆಯಾಗಿ ನಿಂತಿದ್ದಾರೆ. ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಡಿಸಿಎಂ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇವತ್ತು ಚುನಾವಣಾ ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಸುಧಾಕರ್ ತಿಳಿಸಿದರು.

(ವರದಿ: ನವೀನ್ ಗೌಡ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 3, 2019, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading