ಎಲ್ಲಾ 224 ಶಾಸಕರದ್ದೂ ತನಿಖೆಯಾಗಲಿ, ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಗೊತ್ತಾಗಲಿ: ಡಾ. ಸುಧಾಕರ್
ರಾಜ್ಯದ ಸಚಿವರಷ್ಟೇ ಅಲ್ಲ ವಿರೋಧ ಪಕ್ಷಗಳ ಶಾಸಕರು ಹಾಗೂ ಎಲ್ಲಾ 224 ಶಾಸಕರದ್ದು ತನಿಖೆ ಆಗಲಿ. ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಎಂದು ಗೊತ್ತಾಗಲಿ. ಸತ್ಯಹರಿಶ್ಚಂದ್ರರಾದ ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರು ಇದಕ್ಕೆ ಒಪ್ಪಲಿ ಎಂದು ಆರೋಗ್ಯ ಸಚಿವ ಸುಧಾಕರ್ ಸವಾಲು ಹಾಕಿದ್ಧಾರೆ.
ಬೆಂಗಳೂರು(ಮಾ. 24): ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಹಾಗೂ ಆರು ಸಚಿವರು ಮಾಧ್ಯಮಗಳ ವರದಿಯಿಂದ ಕೋರ್ಟ್ನಲ್ಲಿ ರಕ್ಷಣೆ ಪಡೆದಿರುವ ವಿಚಾರವನ್ನು ಇಟ್ಟುಕೊಂಡು ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ. ಆರು ಸಚಿವರ ರಾಜೀನಾಮೆ ಪಡೆಯುವವರೆಗೂ ಧರಣಿ ನಡೆಸುವ ಪಟ್ಟು ಹಾಕಿದೆ. ನಿನ್ನೆ ಸದನದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಬ್ಲೂಬಾಯ್ಸ್ ಎಂಬಿತ್ಯಾದಿ ಬಿರುದುಗಳಿಂದ ಕಾಂಗ್ರೆಸ್ಸಿಗರು ಜರಿದರು. ಸಿದ್ದರಾಮಯ್ಯ, ರಮೇಶ್ ಕುಮಾರ್ ಮೊದಲಾದವರು ಕೂಡ ಇದಕ್ಕೆ ದನಿಗೂಡಿಸಿದ್ದರು. ಕೋರ್ಟ್ ಮೊರೆ ಹೋಗಿದ್ದ ಆರು ಸಚಿವರಲ್ಲಿ ಒಬ್ಬರಾದ ಡಾ. ಕೆ ಸುಧಾಕರ್ ಅವರು ತಿರುಗೇಟು ನೀಡಿದ್ದು, ಕಾಂಗ್ರೆಸ್ಸಿಗರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.
ಇಂದು ಅಧಿವೇಶನಕ್ಕೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಯಾವ್ಯಾವ ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು ಎಲ್ಲವೂ ತನಿಖೆ ಆಗಲಿ ಎಂದು ಸಲಹೆ ನೀಡಿದ್ದಾರೆ. ಯಾರಿಗೆಲ್ಲಾ ಅನೈತಿಕ ಸಂಬಂಧ ಇದೆ ಎಂಬುದು ತಿಳಿಯಲಿ. ಎಲ್ಲಾ ಮಂತ್ರಿಗಳದ್ದು, ವಿರೋಧ ಪಕ್ಷಗಳವರದ್ದು ತನಿಖೆ ಅಗಲಿ. ಎಲ್ಲಾ 225 ಶಾಸಕರದ್ದೂ ತನಿಖೆ ಆಗಿ ಹೋಗಲಿ. ಯಾರು ಎಂಥವರು ಎಂಬ ಸತ್ಯ ಜನರಿಗೆ ಗೊತ್ತಾಗಲಿ ಎಂದು ಸುಧಾಕರ್ ಹೇಳಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಣ್ಣ ಅವರೆಲ್ಲಾ ಸತ್ಯ ಹರಿಶ್ಚಂದ್ರರು. ರಮೇಶ್ ಕುಮಾರ್ ಕೂಡ ಸತ್ಯ ಹರಿಶ್ಚಂದ್ರರಿದ್ದಾರೆ. ಇವರೆಲ್ಲರೂ ಏಕಪತ್ನಿ ವ್ರತವನ್ನ ಬಹಳ ಮಾಡುತ್ತಿದ್ದಾರೆ. ಎಲ್ಲಾ 224 ಶಾಸಕರದ್ದು ತನಿಖೆ ಆಗಲಿ ಎಂಬ ನನ್ನ ಪ್ರಸ್ತಾಪವನ್ನು ಇವರು ಒಪ್ಪಿಕೊಳ್ಳಲಿ ಎಂದೂ ಸುಧಾಕರ್ ಚಾಲೆಂಜ್ ಮಾಡಿದ್ಧಾರೆ.
ನಿನ್ನೆ ಸದನದಲ್ಲಿ ಇದೇ ಸಿಡಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಧರಣಿ ನಡೆಸಿ ಬಹುತೇಕ ಕಲಾಪ ಅವಧಿಯನ್ನು ನುಂಗಿಹಾಕಿದ್ದರು. ಇವತ್ತೂ ಕೂಡ ಕಾಂಗ್ರೆಸ್ ಶಾಸಕರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದ್ಧಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪದೇ ಪದೇ ಮನವಿ ಮಾಡಿಕೊಂಡರೂ ಕೈ ಸದಸ್ಯರು ಹಠ ಬಿಟ್ಟಿಲ್ಲ. ನಿಮ್ಮ ಆಕ್ರೋಶ ಇದ್ದರೆ ಹೊರಗೆ ವ್ಯಕ್ತಪಡಿಸಿ, ಈಗ ಕಲಾಪ ನಡೆಯಲು ಅನುವು ಮಾಡಿಕೊಡಿ ಎಂದು ಸ್ಪೀಕರ್ ಮಾಡಿಕೊಂಡಿದ್ದೂ ವ್ಯರ್ಥವಾಯಿತು. ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪ ಸದಸ್ಯರು ಕಾಂಗ್ರೆಸ್ಸಿಗರ ಧರಣಿಯನ್ನು ಬಲವಾಗಿ ಖಂಡಿಸಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣವನ್ನ ಎಸ್ಐಟಿ ಬದಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು. ಆರು ಸಚಿವರು ರಾಜೀನಾಮೆ ನೀಡಬೇಕು. ಯುವತಿಗೆ ರಕ್ಷಣೆ ಕೊಟ್ಟು ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ದಾಖಲಿಸಬೇಕು ಎಂಬಿತ್ಯಾದಿ ಒತ್ತಾಯಗಳನ್ನ ಮುಂದಿಟ್ಟುಕೊಂಡು ವಿಧಾನಸೌಧದಲ್ಲಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸುತ್ತಿದ್ಧಾರೆ.
ವರದಿ: ಸಂಜಯ್ ಎಂ ಹುಣಸನಹಳ್ಳಿ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ