HOME » NEWS » State » DR SIDDALINGAIAH FUNERAL KANNADA POETRY DR SIDDALINGAIAH FUNERAL WITH ALL GOVERNMENT HONOURS AT KALAGRAM LG

Dr.Siddalingaiah Funeral: ದಲಿತ ಕವಿಗೆ ಅಂತಿಮ ನಮನ; ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ

ಬೌದ್ಧ ಧರ್ಮದ ವಿಧಿ-ವಿಧಾನಗಳಂತೆ ಅಂತಿಮ ಸಂಸ್ಕಾರ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಬೌದ್ಧ ಬಿಕ್ಕುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಡಿಸಿಎಂ ಅಶ್ವತ್ಥ ನಾರಾಯಣ್, ಶಾಸಕ ಮುನಿರತ್ನ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಭಾಗವಹಿಸಿದ್ದರು. 

news18-kannada
Updated:June 12, 2021, 1:43 PM IST
Dr.Siddalingaiah Funeral: ದಲಿತ ಕವಿಗೆ ಅಂತಿಮ ನಮನ; ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ
ಸಿದ್ದಲಿಂಗಯ್ಯ
  • Share this:
ಬೆಂಗಳೂರು(ಜೂ.12): ದಲಿತ ಕವಿ, ಬಂಡಾಯಗಾರ, ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯನವರಿಗೆ ಅಂತಿಮ ವಿದಾಯ ಹೇಳಲಾಗಿದೆ. ಬೆಂಗಳೂರಿನ ಜ್ಞಾನಭಾರತಿಯ ಕಲಾಗ್ರಾಮದಲ್ಲಿ  ಸಕಲ ಸರ್ಕಾರಿ ಗೌರವಗಳೊಂದಿಗೆ  ಹಿರಿಯ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆಯನ್ನು ಇಂದು ನೆರವೇರಿಸಲಾಯಿತು. ರಾಷ್ಟ್ರಕವಿ ಪ್ರೊ. ಜಿ.ಎಸ್​.ಶಿವರುದ್ರಪ್ಪನರ ಸಮಾಧಿ ಪಕ್ಕದಲ್ಲೇ ಡಾ.ಸಿದ್ದಲಿಂಗಯ್ಯನವರ ಅಂತ್ಯಸಂಸ್ಕಾರ ನಡೆಸಲಾಯಿತು. ಮೂರು ಸುತ್ತಿನ ಕುಶಾಲತೋಪು ಸಿಡಿಸಿ ಗೌರವ ನಮನ ಸಲ್ಲಿಸಲಾಯಿತು.   ಬೌದ್ಧ ಧರ್ಮದ ವಿಧಿ-ವಿಧಾನಗಳಂತೆ ಅಂತಿಮ ಸಂಸ್ಕಾರ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಬೌದ್ಧ ಬಿಕ್ಕುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಡಿಸಿಎಂ ಅಶ್ವತ್ಥ ನಾರಾಯಣ್, ಶಾಸಕ ಮುನಿರತ್ನ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಭಾಗವಹಿಸಿದ್ದರು. 

ನ್ಯುಮೋನಿಯಾ ಹಾಗೂ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯನವರನ್ನು ಕೆಲದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾಗಿದ್ದರು.  ಡಾ.ಬಿ.ಆರ್.ಅಂಬೇಡ್ಕರ್​ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಸಿದ್ದಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಇಟ್ಟು, ಬೆಳಗ್ಗೆ 11 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಸಿದ್ದಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್​ ಮೂಲಕ ಕಲಾಗ್ರಾಮಕ್ಕೆ ಕೊಂಡೊಯ್ದು ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ಇದನ್ನೂ ಓದಿ:Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಭಾರೀ ಮಳೆ; ಆರೆಂಜ್​ ಅಲರ್ಟ್​ ಘೋಷಣೆ

ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿತ್ತು. ಪೊಲೀಸರು ಹಾಗೂ ಮಾರ್ಷಲ್ಸ್ ಕೂಡ ಬಂದೋಬಸ್ತ್ ನಲ್ಲಿ ಭಾಗಿಯಾಗಿದ್ದರು.  ಕವಿ ಡಾ.ಸಿದ್ದಲಿಂಗಯ್ಯನವರಿಗೆ ಅಂತಿಮ ನಮನ ಸಲ್ಲಿಸಲು ಜನ ಸಾಗರವೇ ಹರಿದು ಬಂದಿತ್ತು. ಕನ್ನಡ ಚಿತ್ರರಂಗದ ನಟರೂ ಸಹ ಸಾಹಿತಿಗಳ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರು. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಂಸದ ಡಿಕೆ ಸುರೇಶ್ ಸಿದ್ದಲಿಂಗಯ್ಯ ಅವರ ಅಂತಿಮ ದರ್ಶನ ಪಡೆದರು. ನಟರಾದ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಅವರೂ ಕೂಡ ಅಂತಿಮ ದರ್ಶನ ಪಡೆದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಹಿತಿ ಸಿದ್ದಲಿಂಗಯ್ಯನವರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಇದು ಅಕಾಲಿಕವಾದ ನಿಧನ. ಸಿದ್ದಲಿಂಗಯ್ಯ ಎಲ್ಲಾ ದಲಿತರ ಪರ ಧ್ವನಿಯಾಗಿದ್ದರು. ನೋವುಂಡ ಜನರ ಧ್ವನಿಯಾಗಿ, ಅವರ ಕವನಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಅದಕ್ಕಾಗಿ ಅವರನ್ನ ದಲಿತ ಕವಿ ಎಂದು ಕರೆಯುತ್ತಿದ್ದರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಎಷ್ಟೊಂದು ಎತ್ತರಕ್ಕೆ ಬೆಳೆದಿದ್ದರು. ಅವ್ರು ಕೊನೆಯವರೆಗೂ ಕೂಡ ದಲಿತರ ಉದ್ದಾರ, ಏಳಿಗೆಗಾಗಿ ಪ್ರಯತ್ನಗಳನ್ನ ಮಾಡಿದರು ಎಂದರು.

ಇದನ್ನೂ ಓದಿ:Siddalingaiah: ಇಂದು ಹಿರಿಯ ಸಾಹಿತಿ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆ; ಅಂತಿಮ ದರ್ಶನ ಪಡೆದ ಗಣ್ಯರು

ಮುಂದುವರೆದ ಅವರು, 1974 ರಿಂದ ನನಗೆ ಪರಿಚಯ. ಯಾವಾಗ ಸಿಕ್ಕಿದ್ರೂ ಆತ್ಮೀಯತೆಯಿಂದ ಮಾತನಾಡಿಸ್ತಿದ್ರು. ಸಿಕ್ಕಾಗ ದಲಿತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತಿದ್ರು. 2 ಸಲ, ಮೇಲ್ಮನೆಯ ಸದಸ್ಯರಾಗಿದ್ರು. ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪಶಸ್ತಿಗಳು ಅವರಿಗೆ ಲಭಿಸಿದ್ದವು. ಅವರ ನಿಧನದಿಂದಾಗಿ ದಲಿತ ಸಾಹಿತ್ಯಕ್ಕೆ ದೊಡ್ಡ ನಷ್ಟವಾಗಿದೆ. ಅವರ ಜಾಗ ಭರ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಿಎಂ ಆದಾಗ, ಪ್ರತಿಸಲ ಬಜೆಟ್ ಮಂಡಿಸುವಾಗ, ದಲಿತ ಸಮುದಾಯಗಳ ಬಗ್ಗೆ ಚರ್ಚಿಸಲು ಕರಿತಾ ಇದ್ದೆ. ಒಳ್ಳೆಯ ಸಲಹೆಗಳನ್ನ ಕೊಡ್ತಾ ಇದ್ರು. ಅವ್ರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ನಷ್ಟ ಎಂದು ದುಃಖಿತರಾದರು.ಕವಿಯ ಅಗಲಿಕೆಗೆ ಇಡೀ ಕರುನಾಡಿನ ಜನರೇ ಕಂಬಿನಿ ಮಿಡಿದಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪ ಸೇರಿ ಹಲವು ಗಣ್ಯರು ಡಾ.ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಕರ್ನಾಟಕದ ಸಾಹಿತಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರು, ‘ಹೊಲೆಮಾದಿಗರ ಹಾಡು', 'ಮೆರವಣಿಗೆ', 'ಸಾವಿರಾರು ನದಿಗಳು', 'ಕಪ್ಪು ಕಾಡಿನ ಹಾಡು', 'ನನ್ನ ಜನಗಳು' ಸೇರಿದಂತೆ ಹಲವು ಕವನ ಸಂಕಲಗಳನ್ನು ಹೊರತಂದಿದ್ದಾರೆ. 'ಊರು-ಕೇರಿ' ಎಂಬ ಆತ್ಮಕಥನವನ್ನು ರಚಿಸಿದ್ದಾರೆ. ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ಅವರಿಗೆ ದೊರೆತಿವೆ.

'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದರು.

1954ರಲ್ಲಿ ಮಾಗಡಿ' ತಾಲ್ಲೂಕಿನ 'ಮಂಚನಬೆಲೆ' ಗ್ರಾಮದಲ್ಲಿ ಜನಿಸಿದ ಸಿದ್ದಲಿಂಗಯ್ಯ ಅವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಇವರಿಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
Youtube Video

ಪ್ರಾಧ್ಯಾಪಕ, ಕವಿ, ಹೋರಾಟಗಾರ, ಅಧ್ಯಕ್ಷರು(ಕನ್ನಡ ಪುಸ್ತಕ ಪ್ರಾಧಿಕಾರ) ಅಧ್ಯಕ್ಷರು (ಕನ್ನಡ ಅಭಿವೃದ್ಧಿ ಪ್ರಾಧಿಕಾರ) Executive Board Members-ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲೂ ಕೂಡ ಕಾರ್ಯನಿರ್ವಹಿಸಿದ್ದರು.
Published by: Latha CG
First published: June 12, 2021, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories