Dr Rajkumar: ಕಲಾತಪಸ್ವಿಗೆ ತವರು ಜಿಲ್ಲೆಯ ಗೌರವ, ವರನಟ ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ ನಾಳೆ ಲೋಕಾರ್ಪಣೆ

ಡಾ.ರಾಜ್‌ಗೆ ಹುಟ್ಟೂರು ಗಾಜನೂರು ಎಂದರೆ ಬಲು ಪ್ರೀತಿ. ಅದರಲ್ಲು ತಾವು ಹುಟ್ಟಿದ ಮನೆ ಎಂದರೆ ಪಂಚ ಪ್ರಾಣ. ಚಾಮರಾಜನಗರವನ್ನು ನಮ್ಮ ಕಾಡು ಎಂದು ಬಹಳ ಅಭಿಮಾನದಿಂದ ಹೇಳುತ್ತಿದ್ದರು ಹಾಗಾಗಿಯೇ ಅವರು ಗಾಜನೂರನ್ನು ಸ್ವರ್ಗ ಎಂದು ಮತ್ತು ಚಾಮರಾಜನಗರವನ್ನು ಸ್ವರ್ಗದ ಹೆಬ್ಬಾಗಿಲು ಎನ್ನುತ್ತಿದ್ದರು‌

ನಟ ಸಾರ್ವಭೌಮ ಡಾ.ರಾಜ್‌ಕುಮಾರ್

ನಟ ಸಾರ್ವಭೌಮ ಡಾ.ರಾಜ್‌ಕುಮಾರ್

  • Share this:
ಚಾಮರಾಜನಗರ ( ಆ.14):  ಮೇರು ನಟ ಡಾ. ರಾಜ್‌ಕುಮಾರ್ (Dr. Rajkumar) ಅವರು ಕನ್ನಡ (Kannada) ನಾಡುನುಡಿಗೆ ಸಲ್ಲಿಸಿದ ಸೇವೆ ಅನನ್ಯ ಹಾಗು ಅವಿಸ್ಮರಣೀಯ.  ಹಾಗಾಗಿಯೇ ಈ ನಟ ಸಾರ್ವಭೌಮನ ಹೆಸರನ್ನು ರಾಜ್ಯದ ವಿವಿದ ಕಡೆ ಕಲಾಮಂದಿರಗಳಿಗೆ, ಸಭಾಂಗಣಗಳಿಗೆ, ರಸ್ತೆಗಳಿಗೆ ನಾಮಕರಣ ಮಾಡಲಾಗಿದೆ. ನೂರಾರು ಕಡೆ ಡಾ. ರಾಜ್‌ಕುಮಾರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದ್ದು ಕಲಾಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿರಿಸಿದ್ದ ಅವರಿಗೆ ಅರ್ಥಪೂರ್ಣವಾಗಿ ಗೌರವ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಅವರ ಊರು ಚಾಮರಾಜನಗರದ (Chamarajanagar) ಜಿಲ್ಲಾ ಕೇಂದ್ರದಲ್ಲಿ ಮಾತ್ರ ಅವರ ಹೆಸರನ್ನು ಸದಾ ನೆನೆಯುವಂತೆ ಯಾವುದೇ ರಸ್ತೆಗಾಗಲಿ, ಕಟ್ಟಡಕ್ಕಾಗಲಿ ನಾಮಕರಣ ಮಾಡದಿರುವುದು ನೋವಿನ ಸಂಗತಿಯಾಗಿತ್ತು. ಆದರೆ ಇದೀಗ ಆ ನೋವು ದೂರವಾಗುವ ಕಾಲ ಬಂದಿದೆ.

ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ:

ಹೌದು, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಭವನದ ಪಕ್ಕದಲ್ಲೇ ರೂ.7.55 ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ದಗೊಂಡಿದೆ. ಈ ಕಟ್ಟಡಕ್ಕೆ ‘ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ‘ ಎಂದು ನಾಮಕರಣ ಮಾಡಲಾಗಿದೆ. ಈ ಮೂಲಕ ಜಿಲ್ಲಾಡಳಿತ ರಾಜ್​ಕುಮಾರ್​ ಅವರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದೆ.

ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ


ಚಾಮರಾಜನಗರ ಸ್ವರ್ಗದ ಹೆಬ್ಬಾಗಿಲು:

ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಡಾ.ರಾಜ್‌ಕುಮಾರ್ ತಂದೆ ಪುಟ್ಟಸ್ವಾಮಯ್ಯ ಅವರ ಹುಟ್ಟೂರು. ಆದರೆ ಅವರು ನೆಲೆಸಿದ್ದು ಚಾಮರಾಜನಗರಕ್ಕೆ ಅನತಿ ದೂರದಲ್ಲಿರುವ ತಾಳವಾಡಿ ಫಿರ್ಕಾದ ದೊಡ್ಡಗಾಜನೂರಿನಲ್ಲಿ. ಡಾ.ರಾಜ್ ಜನಿಸಿದ್ದು ಇದೇ ಗಾಜನೂರಿನಲ್ಲಿ. ಡಾ.ರಾಜ್‌ಗೆ ಹುಟ್ಟೂರು ಗಾಜನೂರು ಎಂದರೆ ಬಲು ಪ್ರೀತಿ. ಅದರಲ್ಲು ತಾವು ಹುಟ್ಟಿದ ಮನೆ ಎಂದರೆ ಪಂಚಪ್ರಾಣ ಹಾಗಾಗಿಯೇ ಅವರು ಗಾಜನೂರನ್ನು ಸ್ವರ್ಗ ಎಂದು ಮತ್ತು ಚಾಮರಾಜನಗರವನ್ನು ಸ್ವರ್ಗದ ಹೆಬ್ಬಾಗಿಲು ಎನ್ನುತ್ತಿದ್ದರು‌.

ಇದನ್ನೂ ಓದಿ: Explained: ಡಾ. ರಾಜ್‌ಕುಮಾರ್ ಸಾಧನೆಯೇನು ಕಡಿಮೆಯೇ? ‘ಕರ್ನಾಟಕ ರತ್ನ’ಕ್ಕೆ ಸಿಗಲಿಲ್ಲವೇಕೆ ‘ಭಾರತ ರತ್ನ’?

ತವರು ಜಿಲ್ಲೆಯ ‌ಪರವಾಗಿ ಅರ್ಥಪೂರ್ಣ ಗೌರವ

ನಾಲ್ಕು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 2003ರಲ್ಲಿ ಗುದ್ದಲಿ ಪೂಜೆ ನೆರವೇರಿದ  ರಂಗಮಂದಿರದ ಕಾಮಗಾರಿ ಅನುದಾನದ ಕೊರತೆಯಿಂದ ಕುಂಟುತ್ತಾ ಸಾಗಿತ್ತು.  ಹೆಚ್ಚು ಕಡಿಮೆ‌ ಎರಡು ದಶಕವೇ ಕಳೆದರು ಪೂರ್ಣಗೊಳ್ಳದೆ  ರಂಗ ಚಟುವಟಿಕೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಳಿಗೆ ಸುಸಜ್ಜಿತ ವೇದಿಕೆಯೇ ಇಲ್ಲದೆ ಪರದಾಡುವಂತಾಗಿತ್ತು. ಆದರೆ ಇತ್ತೀಚೆಗೆ ವಸತಿ ಸಚಿವ ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ರಂಗಮಂದಿರದ ಕಾಮಗಾರಿಗೆ ವೇಗ ನೀಡಿದರು. ಕಲಾವಿದರ ಒತ್ತಾಯ ಹಾಗು ಒತ್ತಾಸೆಯ ಫಲವಾಗಿ ಇದೀಗ ರಂಗಮಂದಿರ ಸಿದ್ಧವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗು ಜಿಲ್ಲೆಯ ರಜತಮಹೋತ್ಸವದ ಈ ಸಂಧರ್ಭದಲ್ಲಿ ರಂಗಮಂದಿರ ಲೋಕಾರ್ಪಣೆಗೆ ಸಿದ್ದಗೊಂಡಿದೆ. ನಾಳೆ ಸ್ವಾತಂತ್ರ್ಯ ದಿನಾಚರಣೆಯ ನಂತರ "ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ"ವನ್ನು ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಅಂತೂ ಇಂತೂ ತಡವಾಗಿಯಾದರೂ ರಂಗಮಂದಿರ ಕಾಮಗಾರಿ ಪೂರ್ಣಗೊಳಿಸಿ ಅದಕ್ಕೆ ಡಾ.ರಾಜ್‌ಕುಮಾರ್ ಅವರ ಹೆಸರು ನಾಮಕರಣ ಮಾಡುವ ಮೂಲಕ ಚಾಮರಾಜನಗರ ಜಿಲ್ಲಾಡಳಿತ ಮೇರನಟನಿಗೆ ತವರು ಜಿಲ್ಲೆಯ ‌ಪರವಾಗಿ ಅರ್ಥಪೂರ್ಣ ಗೌರವ ಸಲ್ಲಿಸುತ್ತಿದೆ.

ಇದನ್ನೂ ಓದಿ: Dr Rajkumar: ಡಾ. ರಾಜ್‌ಕುಮಾರ್ ಸಂಭಾವನೆ ಬಗ್ಗೆ ನಿಮಗೆಷ್ಟು ಗೊತ್ತು? 'ಬಂಗಾರದ ಮನುಷ್ಯ'ನಿಗೆ ಸಿಕ್ಕ ಹಣವೆಷ್ಟು?

ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನ ಡಾ.ರಾಜ್:

ಡಾ. ರಾಜ್‌ಕುಮಾರ್ ಅವರ ಸಿನಿಮಾ, ಸಾಂಸ್ಕೃತಿಕ ರಂಗ ಹಾಗೂ ಇನ್ನಿತರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದಿಂದ 1983ರಲ್ಲಿ ಪದ್ಮಭೂಷಣ, 1995ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ, ಜೀವನ ಚೈತ್ರ ಸಿನಿಮಾದ ಹಾಡಿಗಾಗಿ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ, ಅಮೆರಿಕ ನೀಡುವ ಪ್ರತಿಷ್ಠಿತ ಕೆಂಟಕಿ ಕರ್ನಲ್ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಗೌರವ, ಡಾಕ್ಟರೇಟ್ ಗೌರವ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಿಕ್ಕಿವೆ.

ವರದಿ: ಎಸ್.ಎಂ.ನಂದೀಶ್, ಚಾಮರಾಜನಗರ
Published by:shrikrishna bhat
First published: