ಶಿರಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಾಜೇಶ್ ಗೌಡ ಬಿಜೆಪಿ ಸೇರ್ಪಡೆ; ನಳೀನ್ ಕುಮಾರ್ ಕಟೀಲ್ ಸ್ವಾಗತ

ತಾನು ಟಿಕೆಟ್ ಆಕಾಂಕ್ಷಿಯಾದರೂ ಅದನ್ನ ಅಪೇಕ್ಷಿಸಿ ಬಿಜೆಪಿ ಸೇರಿದ್ದಲ್ಲ. ಟಿಕೆಟ್ ಸಿಕ್ಕರೆ ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ತಂದುಕೊಡುತ್ತೇನೆ. ಕ್ಷೇತ್ರದಲ್ಲಿ ಹತ್ತು ವರ್ಷದಲ್ಲಿ ಆಗದ್ದನ್ನ ಎರಡೇ ವರ್ಷದಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ರಾಜೇಶ್ ಗೌಡ ಹೇಳಿದ್ದಾರೆ.

ರಾಜೇಶ್ ಗೌಡ ಬಿಜೆಪಿ ಸೇರಿದ್ದು (ಬಾವುಟ ಸ್ವೀಕರಿಸಿದವರು)

ರಾಜೇಶ್ ಗೌಡ ಬಿಜೆಪಿ ಸೇರಿದ್ದು (ಬಾವುಟ ಸ್ವೀಕರಿಸಿದವರು)

  • Share this:
ಬೆಂಗಳೂರು/ತುಮಕೂರು(ಅ. 03): ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಾ. ರಾಜೇಶ್ ಗೌಡ ಅವರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾದರು. ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೇಶ್ ಗೌಡ ಸೇರಿದಂತೆ ಶಿರಾ ಕ್ಷೇತ್ರದ ಕೆಲ ಪ್ರಮುಖ ಮುಖಂಡರು ಕೂಡ ಬಿಜೆಪಿ ಸೇರಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ, ಮಾಜಿ ಶಾಸಕ ಸುರೇಶ್ ಗೌಡ, ವಿಧಾನಪರಿಷತ್ ಸದಸ್ಯ ರವಿ ಕುಮಾರ್ ಮೊದಲಾದವರು ಭಾಗಿಯಾದರು. ರಾಜೇಶ್ ಗೌಡ ಮತ್ತಿತರರಿಗೆ ಬಿಜೆಪಿಯ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ರಾಜೇಶ್ ಗೌಡ, ತಾನು ಟಿಕೆಟ್ ಆಕಾಂಕ್ಷಿ ಹೌದಾದರೂ ಟಿಕೆಟ್ ಅಪೇಕ್ಷಿಸಿ ಪಕ್ಷಕ್ಕೆ ಬಂದಿಲ್ಲ. ತಾವೂ ಸೇರಿದಂತೆ ಮೂವರು ಆಕಾಂಕ್ಷಿಗಳಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

“ಕಟ್ಟಕಡೆಯ ಪ್ರಜೆಗೂ ಒಳ್ಳೆಯ ಜೀವನ ಸಿಗಬೇಕು, ಹಾಗೂ ರಾಜಕೀಯ ಜೀವನ ಸಿಗಬೇಕು ಎಂದರೆ ಅದು ಬಿಜೆಪಿಯಲ್ಲಿ ಮಾತ್ರ. ನಾನು ವೃತ್ತಿಯಲ್ಲಿ ವೈದ್ಯನಾಗಿ ಜನರಿಗೆ ಉತ್ತಮ ಸೇವೆ ಸಲ್ಲಿಸಿದ್ದೇನೆ. ಶಿರಾ ತಾಲೂಕಿನ ಜನರ ಜೊತೆ ನಿಕಟ ಸಂಪರ್ಕ ಹೊಂದಿದ್ದೇನೆ. ಜನಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಜನರು ಒತ್ತಡ ಹಾಕಿದರು. ಅದಕ್ಕಾಗಿ ನಾನು ಶಿರಾ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿದ್ದೇನೆ. ಕ್ಷೇತ್ರದ ಜನರಿಗೆ ಸಾಕಷ್ಟು ಕಾರ್ಯಗಳನ್ನ ಮಾಡಿದ್ದೇನೆ. ಜನರ ಒತ್ತಡದಿಂದ ನಾನು ರಾಜಕೀಯ ಪಕ್ಷಕ್ಕೆ ಬಂದಿದ್ದೇನೆ. ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಪಕ್ಷ ಬದ್ಧವಾಗಿದೆ. ಹೀಗಾಗಿ, ದೂರದೃಷ್ಟಿ ಇಟ್ಟುಕೊಂಡು ಬಿಜೆಪಿ ಸೇರಿದ್ದೇನೆ. ಶಿರಾ ಕ್ಷೇತ್ರದ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಈ ಉಪಚುನಾವಣೆಯಲ್ಲಿ ಪಕ್ಷದ ಬಾವುಟ ಹಾರಿಸುತ್ತೇನೆ” ಎಂದು ರಾಜೇಶ್ ಗೌಡ ಪಣತೊಟ್ಟರು.

ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಕಪೋಲಕಲ್ಪಿತ ವರದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು: ಕುಮಾರಸ್ವಾಮಿ

ಇವತ್ತು ಕಾರ್ಯಕರ್ತನಾಗಿ ಪಕ್ಷ ಸೇರ್ಪಡೆಯಾಗಿದ್ಧೇನೆ. ನನಗೆ ಟಿಕೆಟ್ ನೀಡಬೇಕೋ ಬೇಡವೋ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ನಾನು ಕೂಡ ಟಿಕೆಟ್ ಆಕಾಂಕ್ಷಿಯೇ. ನ್ನ ಹೆಸರು ಸೇರಿದಂತೆ ಮೂರು ಜನರ ಹೆಸರನ್ನ ಹೈಕಮಾಂಡ್​ಗೆ ಕಳುಹಿಸಿದ್ದಾರೆ. ನಾವು ಮೂವರಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದವರು ಹೇಳಿದರು.

ರಾಜೇಶ್ ಗೌಡ ತಮ್ಮ ಪಕ್ಷದಲ್ಲೂ ಟಿಕೆಟ್ ಕೇಳಿದ್ದರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆಯನ್ನು ಅವರು ಬಲವಾಗಿ ಅಲ್ಲಗಳೆದರು. “ನಾನು ಇದೂವರೆಗೆ ಯಾವ ಪಕ್ಷಕ್ಕೂ ಸೇರ್ಪಡೆಯಾಗಿರಲಿಲ್ಲ. ಯಾವುದೇ ಪಕ್ಷಗಳ ಬಳಿ ನಾನು ಟಿಕೆಟ್ ಕೇಳಿರಲಿಲ್ಲ. ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷದಿಂದ ಟಿಕೆಟ್ ಕೇಳಿಲ್ಲ. ಕುಮಾರಸ್ವಾಮಿ ಬಳಿ ನಾನು ಹೋಗೇ ಇಲ್ಲ. ಅವರು ಯಾಕೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ” ಎಂದು ರಾಜೇಶ್ ಗೌಡ ಅನುಮಾನ ವ್ಯಕ್ತಪಡಿಸಿದರು.

ಶಿರಾ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಯಾರೇ ನಿಂತರೂ ನನಗೆ ಭಯ ಇಲ್ಲ. ನನಗೆ ಟಿಕೆಟ್ ಕೊಟ್ಟರೆ ಪಕ್ಷವನ್ನ ಗೆಲ್ಲಿಸುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಗುರಿ. ಹತ್ತು ವರ್ಷಗಳಿಂದ ಆಗದೇ ಇರುವುದನ್ನು ಎರಡೇ ವರ್ಷದಲ್ಲಿ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ರಾಜೇಶ್ ಗೌಡ ಪ್ರತಿಜ್ಞೆ ಮಾಡಿದರು.

ಇದನ್ನೂ ಓದಿ: ಕಾಂಗ್ರೆಸ್ ಸ್ಥಿತಿ ನೀರಿನಿಂದ ತೆಗೆದ ಮೀನಿನಂತಾಗಿದೆ; ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಲೇವಡಿ

ರಾಜೇಶ್ ಗೌಡ ಅವರನ್ನ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಈ ಬಾರಿ ಶಿರಾದಲ್ಲಿ ಬಿಜೆಪಿಗೆ ಗೆಲುವು ಶತಃಸಿದ್ಧ. ಶಿರಾದ ಬಹಳಷ್ಟು ಮುಖಂಡರು ಆಗಮಿಸಿ ಪಕ್ಷದ ಬಲ ಹೆಚ್ಚಿಸಿದ್ದಾರೆ. ಅವರೆಲ್ಲರ ಶ್ರಮದಿಂದ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವತ್ತು ದೇಶದಲ್ಲಿ ಕಾಂಗ್ರೆಸ್ ಮುಳುಗುವ ಹಡಗಾದರೆ, ಬಿಜೆಪಿ ಓಡುವ ಹಡಗು ಆಗಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ. ಆದರೆ, ಕುಟುಂಬ ಸದಸ್ಯರ ಮೇಲೆ ಪ್ರೀತಿ ಇದೆ. ಈಗ ಪಕ್ಷಕ್ಕೆ ಸೇರ್ಪಡೆಯಾದ ಎಲ್ಲರೂ ನಮ್ಮ ಕುಟುಂಬದ ಸದಸ್ಯರೇ ಆಗಿದ್ದಾರೆ. ಅವರ ಮೇಲೆ ಎಂದಿಗೂ ನಮ್ಮ ಪ್ರೀತಿ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಬಣ್ಣಿಸಿದರು.

ಇನ್ನು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತುಮಕೂರು ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಅವರು ರಾಜೇಶ್ ಗೌಡ ಸೇರ್ಪಡೆಯಿಂದ ಬಿಜೆಪಿಗೆ ದೊಡ್ಡ ಬಲ ಬಂದಿದೆ ಎಂಬುದನ್ನು ಪುನರುಚ್ಚರಿಸಿದರು. ರಾಜೇಶ್ ಗೌಡ ಶಿರಾ ಟಿಕೆಟ್ ಬಯಸಿ ಪಕ್ಷ ಸೇರಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬಂದಿದ್ಧಾರೆ. ಅವರಿಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಉತ್ತರ ಪ್ರದೇಶ ರಾಮ ರಾಜ್ಯವಲ್ಲ, ರಾವಣ ರಾಜ್ಯ; ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಕಿಡಿ

ರಾಜೇಶ್ ಗೌಡ ಅವರು ರಾಜಕಾರಣಕ್ಕೆ ಹೊಸಬರಾದರೂ ಅವರ ಕುಟುಂಬಕ್ಕೆ ರಾಜಕಾರಣದ ನಂಟಿದೆ. ಅವರ ತಂದೆ ಮೂಡಲಗಿರಿಯಪ್ಪ ಕಾಂಗ್ರೆಸ್ ನಾಯಕರಾಗಿದ್ದವರು. ತುಮಕೂರಿನಲ್ಲಿ ಪ್ರಬಲವಾಗಿರುವ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರಿಗೆ ಟಿಕೆಟ್ ನೀಡಿದರೆ ಸಮುದಾಯದ ಮತಗಳ ಜೊತೆಗೆ ಕಾಂಗ್ರೆಸ್​ನ ಕೆಲ ಮತಗಳನ್ನೂ ಸೆಳೆದುಕೊಳ್ಳಬಹುದು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಮೂಲಗಳ ಪ್ರಕಾರ, ರಾಜೇಶ್ ಗೌಡ ಅವರು ಹೈಕಮಾಂಡ್ ಮಟ್ಟದಲ್ಲೇ ಟಿಕೆಟ್ ಖಾತ್ರಿ ಪಡೆದು ಬಿಜೆಪಿ ಸೇರಿದ್ದಾರೆನ್ನಲಾಗಿದೆ.

ಆದರೆ. ರಾಜೇಶ್ ಗೌಡ ಅವರು ಬಿಜೆಪಿ ಸೇರುವುದನ್ನು ಸ್ಥಳೀಯ ಬಿಜೆಪಿ ನಾಯಕ ಬಿ.ಕೆ. ಮಂಜುನಾಥ್ ವಿರೋಧಿಸಿದ್ದರು. ಈಗ ರಾಜೇಶ್ ಗೌಡ, ಬಿ.ಕೆ. ಮಂಜುನಾಥ್ ಮತ್ತು ಎಸ್.ಆರ್. ಗೌಡ ಈ ಮೂವರ ಹೆಸರುಗಳನ್ನ ಹೈಕಮಾಂಡ್​ಗೆ ಕಳುಹಿಸಿಕೊಡಲಾಗಿದೆ. ರಾಜೇಶ್ ಗೌಡ ಅವರಿಗೇ ಟಿಕೆಟ್ ಸಿಗವ ಸಾಧ್ಯತೆ ದಟ್ಟವಾಗಿದೆ.

ನವೆಂಬರ್ 3ರಂದು ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಆಗುತ್ತಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ವರದಿ: ಕೃಷ್ಣ ಜಿ.ವಿ. / ವಿಠಲ್
Published by:Vijayasarthy SN
First published: