ಬೆಂಗಳೂರು(ಜೂನ್ 10): ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಹೆಚ್.ಡಿ. ದೇವೇಗೌಡ ಅವರನ್ನ ಸಚಿವ ಡಾ. ಕೆ ಸುಧಾಕರ್ ಹೊಗಳಿಸಿದ್ದಾರೆ. ಹಾಗೆಯೇ ಕಾಲೆಳೆದು ತಮಾಷೆ ಕೂಡ ಮಾಡಿದ್ದಾರೆ. ಈ ರಾಜಕೀಯ ದಿಗ್ಗಜರು ಸುದೀರ್ಘ ರಾಜಕೀಯ ಬದುಕಿನ ಕೊನೆಯ ಭಾಗದಲ್ಲಿ ಹಿಂಬಾಗಿಲ ಪ್ರವೇಶಕ್ಕೆ ಮೊರೆಹೋಗಿದ್ದಕ್ಕೆ ಮರುಗಿದ್ದಾರೆ.
“ಸುದೀರ್ಘವಾದ ರಾಜಕೀಯ ಬದುಕಿನ ಬಹುಶಃ ಕೊನೆಯ ಹೋರಾಟದಲ್ಲಿ ಹಿಂಬಾಗಿಲೆನ್ನುವ ರಾಜ್ಯಸಭೆಗೆ ಹೋಗುವಂತಾಗಿದ್ದು ವಿಧಿಯ ಆಟ…” ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಮ್ಮ ಟ್ವೀಟ್ನಲ್ಲಿ ಕಾಲೆಳೆದಿದ್ದಾರೆ.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಹೆಚ್.ಡಿ. ದೇವೇಗೌಡ ಇಬ್ಬರೂ ಸೋಲನುಭವಿಸಿದ್ದರು. ಕಲಬುರ್ಗಿ ಕ್ಷೇತ್ರದಲ್ಲಿ ಖರ್ಗೆ ಸೋತರೆ, ತುಮಕೂರಿನಲ್ಲಿ ಗೌಡರು ಸೋಲಪ್ಪಿದ್ದರು. ಆದರೆ, ತಮ್ಮ ಪಕ್ಷಗಳ ವಿವಿಧ ಮುಖಂಡರ ಒತ್ತಾಯದ ಮೇರೆಗೆ ಇಬ್ಬರೂ ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆ ಟಿಕೆಟ್ ಆಸೆ ಯಾರಿಗಿರಲ್ಲ? ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧ: ಭೈರತಿ ಬಸವರಾಜ್
ಈ ವಿಚಾರವಾಗಿ ಸುಧಾಕರ್ ತಮಾಷೆ ಮಾಡಿದರೂ ಆ ಇಬ್ಬರು ಹಿರಿಯ ರಾಜಕಾರಣಿಗಳಿಗೆ ಹೊಗಳಿಕೆಯನ್ನೂ ನೀಡಿದ್ದಾರೆ.
“...ಈ ಮುತ್ಸದ್ದಿಗಳ ಸೇವೆ ಹಾಗೂ ಹೋರಾಟ ಅನುಕರಣೀಯ. ದೇವರು ಇಬ್ಬರಿಗೂ ಒಳ್ಳೆಯ ಆರೋಗ್ಯವನ್ನು ಕರುಣಿಸಲಿ…” ಎಂದು ಸಚಿವರು ಹಾರೈಸಿದ್ದಾರೆ. ಇದರ ಜೊತೆಗೆ, ಇಬ್ಬರ ರಾಜ್ಯಸಭಾ ಪ್ರವೇಶದ ದಾರಿಯನ್ನು ಬಿಜೆಪಿ ಸುಗಮ ಮಾಡಿಕೊಟ್ಟಿರುವ ವಿಚಾರವನ್ನೂ ನೆನಪಿಸಿ ಮತ್ತೆ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಕಾನೂನು ಪ್ರಕಾರ ಹೇಗೆ ಕಾರ್ಯಕ್ರಮ ಮಾಡಬೇಕೋ ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಸಮಾರಂಭ ಮಾಡುತ್ತೇವೆ; ಸಿದ್ದರಾಮಯ್ಯ
ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಜೆಡಿಎಸ್ಗೆ ಒಂದು ಸ್ಥಾನ ಗೆಲ್ಲುವಷ್ಟು ಸಂಖ್ಯಾ ಬಲ ಇಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ಗೌಡರು ಗೆಲ್ಲುವ ಸಾಧ್ಯತೆ ಇತ್ತು. ಬಿಜೆಪಿ ಮೂರನೇ ಅಭ್ಯರ್ಥಿ ಹಾಕಿದ್ದರೆ ಗೌಡರ ಗೆಲುವು ಅನಿಶ್ಚಿತವೆಂಬಂತಾಗುತ್ತಿತ್ತು. ಆದರೆ, ಬಿಜೆಪಿ ಎರಡೇ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ. ಇದರಿಂದ ದೇವೇಗೌಡರು ಅವಿರೋಧವಾಗಿ ರಾಜ್ಯಸಭೆ ಪ್ರವೇಶಿಸುವುದು ಖಚಿತವಾಗಿದೆ. ಮೂರನೇ ಅಭ್ಯರ್ಥಿ ನಿಲ್ಲಿಸದೇ ಬಿಜೆಪಿ ಉದಾರತೆ ತೋರಿದೆ ಎಂಬುದು ಡಾ. ಸುಧಾಕರ್ ಅವರ ಅನಿಸಿಕೆ.
ಜೂನ್ 19ಕ್ಕೆ ರಾಜ್ಯಸಭಾ ಚುನಾವಣೆ ನಿಗದಿಯಾಗಿದೆ. ನಾಲ್ಕು ಸ್ಥಾನಗಳಿಗೆ ನಾಲ್ಕೇ ಅಭ್ಯರ್ಥಿಗಳಿರುವುದರಿಂದ ಎಲ್ಲಾ ಅಭ್ಯರ್ಥಿಗಳೂ ಮತದಾನ ಇಲ್ಲದೆಯೇ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ