ಬಾಗಲಕೋಟೆ: ಮೈತ್ರಿ ಸರ್ಕಾರದಲ್ಲಿ ನಾನು ಎಫ್ಡಿಎ ಕ್ಲರ್ಕ್ ಆಗಿದ್ದೆ. ಸಮ್ಮಿಶ್ರ ಸರಕಾರದಲ್ಲಿ ನನಗೆ ಸ್ವಾತಂತ್ರ್ಯ ಇರಲಿಲ್ಲ. ನಾನು ಸಿಎಂ ಆದಾಗ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವಂತೆ ಇರಲಿಲ್ಲ. ಒಂದು ಕಡೆ ಸಿದ್ದರಾಮಯ್ಯ ಒತ್ತಡ ಇತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದ ಕೊನೆ ಬಜೆಟ್ ಯೋಜನೆ ಮುಂದುವರಿಸಿ ಎಂದು ಒತ್ತಡ ಹಾಕಲಾಗುತ್ತಿತ್ತು. ನೀರಾವರಿ ಬಗ್ಗೆ ಹಳೆ ಯೋಜನೆ ಮುಂದುವರೆಸಿ ಎಂದು ಒತ್ತಡ ಇತ್ತು. ಇನ್ನೊಂದು ಕಡೆ ಬಿಜೆಪಿಯವರು ರೈತರ ಸಾಲ ಮನ್ನಾ ಅಂತ ಹೇಳಿ ಅಧಿಕಾರಕ್ಕೆ ಬಂದಿರಿ. ಸಾಲ ಮನ್ನಾ ಮಾಡದೆ ಅವರಿಗೆ ಟೋಪಿ ಹಾಕುತ್ತಿದ್ದೀರ ಎಂದರು. ಮೈತ್ರಿ ಸರಕಾರದಲ್ಲಿ ನಾನು ಕ್ಲರ್ಕ್ ತರ ಇದ್ದೆ ಎಂದು ಮತ್ತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅಸಮಾಧಾನ ಹೊರಹಾಕಿದರು.
ಬಾಗಲಕೋಟೆಯ ನವನಗರದ ಕಾಳಿದಾಸ ಮೈದಾನದಲ್ಲಿ ಜೆಡಿಎಸ್ ಪಕ್ಷ ಸಂಘಟನಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ ಅವರು, ನಮ್ಮದು ಡಬಲ್ ಎಂಜಿನ್ ಸರಕಾರ ಎಂದು ಬಿಜೆಪಿಯವರು ಹೇಳುತ್ತಾರೆ. ಮೊನ್ನೆ ಬೆಳಗಾವಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳ್ತಾರೆ. ಮೋದಿ ಒಂದು ಎಂಜಿನ್ ಯಡಿಯೂರಪ್ಪ ಒಂದು ಎಂಜಿನ್ ಅಂತೆ. ಆದರೆ ಡಬಲ್ ಎಂಜಿನ್ ಇಟ್ಟುಕೊಂಡು ಯಾಕೆ ಕೆಲಸ ಆಗುತ್ತಿಲ್ಲ. ಎಂಜಿನ್ನ ಬೋಗಿಗಳು ಎಲ್ಲೆಲ್ಲೋ ಹೋಗಿಬಿಟ್ಟಿವೆ. ಬರಿ ಎಂಜಿನ್ ಮಾತ್ರ ಇವೆ ಬೋಗಿಗಳಿಲ್ಲ. ಎಲ್ಲ ಬೋಗಿಗಳ ಚೈನ್ ಲಿಂಕ್ ಕಟ್ ಆಗಿ ಎಲ್ಲೋ ಹೋಗಿವೆ. ಬರಿ ಎಂಜಿನ್ ಇಟ್ಟುಕೊಂಡು ಏನು ಮಾಡೋಕೆ ಆಗೋದಿಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಯತ್ನಾಳ ಹೇಳಿರುವ ಸಿಡಿಯಲ್ಲಿ ನಾನು ಪಾಲುದಾರನಲ್ಲ. ಬಿಜೆಪಿಯಲ್ಲಿ ಇದ್ದವರಿಗೆ ಯತ್ನಾಳ ಹೇಳಿರುವ ಸಿಡಿ ಕೆಲವರಿಗೆ ಉಪಯೋಗ ಆಗಿರಬಹುದು. ಆ ಸಿಡಿ ಕಥೆ ನನಗೆ ಗೊತ್ತಿಲ್ಲ. ನಾನು ಅದರ ಪಾಲುದಾರನೂ ಅಲ್ಲ. ಈ ದೇಶದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಕ್ರಮದ ಬಗ್ಗೆ ಚರ್ಚೆ ಮಾಡೋದೆ ವ್ಯರ್ಥ. ಶ್ರಮಪಟ್ಟು ಯಾವುದೋ ರೀತಿಯಿಂದ ಕಷ್ಟಪಟ್ಟು ಸರಕಾರ ಮಾಡಿದ್ದೀರಿ. ಇಂತಹದ್ದೆಲ್ಲವನ್ನು ಬಿಟ್ಟು ಜನರ ಸಮಸ್ಯೆಗಳ ಕಡೆ ಗಮನ ಕೊಡಿ ಎಂದು ಎಚ್.ಡಿ.ಕೆ ಹೇಳಿದರು.
ರೈತರ ದಂಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಕೇಂದ್ರ ಸರಕಾರ ಹಠಮಾರಿ ಧೋರಣೆ ತೋರದೆ ರೈತರನ್ನು ಕರೆದು ವಿಶ್ವಾಸ ಗಳಿಸಿಕೊಳ್ಳಿ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ. ಒಟ್ಟಾಗಿ ತೀರ್ಮಾನ ಬರಲಿ. ಗಣರಾಜ್ಯೋತ್ಸವ ದಿನ ನಡೆದ ಘಟನೆ ಒಬ್ಬೊಬ್ಬರು ಒಂದೊಂದು ರೀತಿ ಹೇಳ್ತಾರೆ. ಇತಿಹಾಸದಲ್ಲೇ ಅಂದು ನಡೆದ ಘಟನೆ ಕಪ್ಪು ಚುಕ್ಕೆ. ಅಂತಹ ವಾತಾವರಣ ನಿರ್ಮಾಣವಾಗಬಾರದಿತ್ತು. ಹಿಂಸಾಚಾರಕ್ಕೆ ಕಾರಣವೇನು? ಕಂಡು ಹಿಡಿಯಬೇಕು? ಅವರದ್ದೆ ಗುಪ್ತಚರ ಇಲಾಖೆ ಇದೆ. ಮನ್ ಕಿ ಬಾತ್ ಮೂಲಕ ಪ್ರಧಾನಿ ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ. ಆದರೆ ಇಂತಹ ದೆಹಲಿ ಗಲಾಟೆ ಬಗ್ಗೆ ಹೇಳೋದಿಲ್ಲ. ಈ ಬಗ್ಗೆ ಎಂದೂ ಚರ್ಚೆಯಾಗುತ್ತಿಲ್ಲ. ರೈತರ ಬದುಕಿನ ಜೊತೆ ಯಾರು ಚೆಲ್ಲಾಟ ಆಡಬಾರದು ಎಂದರು.
ನಾನು ಈ ಹಿಂದೆ ಒಂಬತ್ತು ಕ್ಲಸ್ಟರ್ ನಲ್ಲಿ ಕಾಂಪಿಟ್ ವಿತ್ ಚೀನಾ ಎಂದು ಯೋಜನೆ ಮಾಡಿದ್ದೆ. ಈಗ ಅದನ್ನೇ ಮೋದಿ ಅವರು ಆತ್ಮ ನಿರ್ಭಾರ್ ಎಂದು ಹೇಳುತ್ತಿದ್ದಾರೆ. ಕೊಪ್ಪಳ ಆಟಿಕೆ ವಸ್ತು ತಯಾರಿಕಾ ಘಟಕ ಕಾರ್ಯಕ್ರಮಕ್ಕೆ ನನ್ನನ್ನು ಕರೆಯಲಿಲ್ಲ. ಅದಕ್ಕೆ ಆದೇಶ ಇನ್ಸೆಂಟಿವ್ ಕೊಟ್ಟವನೇ ನಾನು. ನನ್ನ ಕಾರ್ಯಕ್ರಮವನ್ನು ಮೋದಿ ಆತ್ಮ ನಿರ್ಭಾರ್ ಭಾರತ ಅಂತ ಕಾಪಿ ಮಾಡಿದ್ದಾರೆ ಎಂದು ಎಚ್.ಡಿ.ಕೆ ಆರೋಪಿಸಿದರು.
ಇದನ್ನು ಓದಿ: ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಾಲೆಗಳ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ 15 ದಿನಗಳ ಗಡುವು
ಅಸಮಾಧಾನಿತ ಶಾಸಕರು ಜೆಡಿಎಸ್ ಸಂಪರ್ಕ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್ಡಿಕೆ, ನನಗಾದ 12 ವರ್ಷದ ಅನುಭವದಿಂದ ಬೆಂದ ಮನೆಯಲ್ಲಿ ಗಳ ಹಿರಿಯುವಂತಹ ಕೆಲಸಕ್ಕೆ ನಾನು ಕೈ ಹಾಕಲ್ಲ. ಅವರಾಗಿಯೇ ಹೆಚ್ಚು ಕಡಿಮೆ ಮಾಡಿಕೊಂಡರೆ ನಾವೇನು ಮಾಡೋಕಾಗಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಎರಡೂ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ. ಅದರಲ್ಲೂ ಬಿಜೆಪಿಯಲ್ಲೇ ಜಾಸ್ತಿ ಜನ ಸ್ನೇಹಿತರಿದ್ದಾರೆ. ಆದರೆ ಪಕ್ಷಕ್ಕೆ ಬರಬೇಕೆನ್ನುವ ಸ್ನೇಹಿತರಲ್ಲ. ಆತ್ಮೀಯತೆ ಇರುವಂತಹ ಸ್ನೇಹಿತರು. ಆದರೆ ಆ ಆತ್ಮೀಯತೆಯನ್ನು ದುರುಪಯೋಗಪಡಿಸಿಕೊಳ್ಳಲು ನಾನು ಹೋಗೋದಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ