God Krishna Idol: ತೀರ್ಥ ಕುಡಿಯುವಾಗ ಬಾಲಕೃಷ್ಣನನ್ನೇ ನುಂಗಿದ! ಗಂಟಲಿನಲ್ಲಿ ಸಿಲುಕಿದ 'ಮುರಾರಿ'!

ವ್ಯಕ್ತಿಯನ್ನು ಪರಿಶೀಲಿಸಿದ ವೈದ್ಯರು ಎಕ್ಸ್‌ ರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸ್‌ ರೇ ವರದಿಯಲ್ಲಿ ಬಾಲಕೃಷ್ಣನ ವಿಗ್ರಹ ಗಂಟಲಿನಲ್ಲಿ ಇರುವುದು ಪತ್ತೆಯಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ರು.

ವ್ಯಕ್ತಿ ನುಂಗಿದ ಕೃಷ್ಣನ ಮೂರ್ತಿ

ವ್ಯಕ್ತಿ ನುಂಗಿದ ಕೃಷ್ಣನ ಮೂರ್ತಿ

  • Share this:
ಬೆಳಗಾವಿ (ಜೂ. 24): ತೀರ್ಥ ಸೇವನೆ (Tirtha Consumption) ವೇಳೆ ವ್ಯಕ್ತಿಯೋರ್ವ ಬಾಲಕೃಷ್ಣನ ಲೋಹದ ಮೂರ್ತಿ (Idol) ನುಂಗಿರೋ ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ದೇವರಿಗೆ ಪೂಜೆ ಮಾಡಿ ಅಂಗೈನಲ್ಲಿ ಬಾಲಕೃಷ್ಣನ ಮೂರ್ತಿ ಇಟ್ಟುಕೊಂಡಿದ್ದ 45 ವರ್ಷದ ವ್ಯಕ್ತಿ ಆಕಸ್ಮಿಕವಾಗಿ ತೀರ್ಥದ ಜೊತೆ ಮೂರ್ತಿಯನ್ನು ನುಂಗಿದ್ದಾರೆ. ಈತ ಪ್ರತಿ ದಿನ ದೇವರ ಪೂಜೆ ಮಾಡಿದ ಬಳಿಕ ತೀರ್ಥ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದರು. ಎಂದಿನಂತೆ ಪೂಜೆ ಮಾಡಿದ ಬಳಿಕ ತೀರ್ಥ ಸೇವಿಸುವಾಗ ತೀರ್ಥದ ಜೊತೆಯೇ ಮೂರ್ತಿ ನುಂಗಿರೋ ಘಟನೆ ನಡೆದಿದೆ. ಬಳಿಕ ಆತನಿಗೆ ಗಂಟಲು ನೋವು (Throat Pain) ಮತ್ತು ಗಂಟಲು ಊತ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ವೈದ್ಯರನ್ನು ಆತ ಸಂಪರ್ಕಿಸಿದ್ದಾರೆ.

ಎಕ್ಸ್​ರೇಯಲ್ಲಿ ಪತ್ತೆಯಾಯ್ತು ಬಾಲಕೃಷ್ಣನ ವಿಗ್ರಹ

ವ್ಯಕ್ತಿಯನ್ನು ಪರಿಶೀಲಿಸಿದ ವೈದ್ಯರು ಎಕ್ಸ್‌ ರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸ್‌ ರೇ ವರದಿಯಲ್ಲಿ ಬಾಲಕೃಷ್ಣನ ವಿಗ್ರಹ ಗಂಟಲಿನಲ್ಲಿ ಇರುವುದು ಪತ್ತೆಯಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಡೋಸ್ಕೋಪ್ ಮಾಡಿರುವ ವೈದ್ಯರು ಬಾಲಕೃಷ್ಣನ ಮೂರ್ತಿಯ ಕಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ನಂತರ ಇಎನ್‌ಟಿ ವಿಭಾಗದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.



ಶಸ್ತ್ರಚಿಕಿತ್ಸೆಯೇ ಸವಾಲಾಗಿತ್ತು

ಮೂರ್ತಿ ಗಂಟಲಲ್ಲಿ ಸಿಲುಕಿದ್ದ ಆಸ್ಪತ್ರೆ ವೈದ್ಯರು ಎಂಡೋಸ್ಕೋಪಿ ಮೂಲಕ ಪರಿಶೀಲಿಸಿದಾಗ ಮೂರ್ತಿಯ ಎಡಗಾಲು ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿದ್ದು ಪತ್ತೆಯಾಗಿದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡಿ ಹೊರತೆಗೆಯುವುದು ವೈದ್ಯರಿಗೆ ಸವಾಲಾಗಿತ್ತು.

ಇಎನ್‌ಟಿ ವಿಭಾಗದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಟಗುಡ್ಡಮಠ, ಅರವಳಿಕೆ ವೈದ್ಯ ಡಾ.ಚೈತನ್ಯ ಕಾಮತ್ ಮತ್ತು ತಜ್ಞ ಸುಶ್ರೂಷಕರ ತಂಡ ವ್ಯಕ್ತಿಯ ಗಂಟಲಿನಲ್ಲಿ ಸಿಲುಕಿದ್ದ ವಿಗ್ರಹವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಆಸ್ಪತ್ರೆಯ ಸಿಬ್ಬಂದಿ ಬಿಡುಗಡೆ ಮಾಡಿದ ಚಿತ್ರ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

ಇದನ್ನೂ ಓದಿ: Bengaluru: ಆನ್‌ಲೈನಲ್ಲೇ ಬ್ಯಾಂಕ್‌ ಮ್ಯಾನೇಜರ್‌ಗೆ ಗಾಳ ಹಾಕಿದ ಯುವತಿ, 5 ಕೋಟಿ ಕಳೆದುಕೊಂಡು ಈತನಾದ ಪೊಲೀಸ್ ಅತಿಥಿ!

ಗಣೇಶ ವಿಗ್ರಹ ನುಂಗಿದ್ದ ಬಾಲಕ

ಮೂರು ವರ್ಷದ ಬಾಲಕ ಗಣೇಶ ವಿಗ್ರಹವನ್ನು ನುಂಗಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ತಕ್ಷಣದ ವೈದ್ಯಕೀಯ ನೆರವು ಸಿಕ್ಕಿದ ನಂತರ ಸುಮಾರು 5 ಸೆಂಟಿಮೀಟರ್ ಉದ್ದದ ಗಣೇಶ ವಿಗ್ರಹವನ್ನು ನುಂಗಿದ ಮೂರು ವರ್ಷದ ಬಾಲಕ ಪವಾಡಸದೃಶವಾಗಿ ಪಾರಾಗಿದ್ದಾನೆ.

ಮಗು ಬಸವ ಅವರನ್ನು ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಶುಕ್ರವಾರ ರವಾನಿಸಲಾಗಿದೆ. ಆಡುವಾಗ ಬಾಲಕ ವಿಗ್ರಹವನ್ನು ನುಂಗಿದ್ದ. ಮೇಲ್ಭಾಗದ ಎದೆಯಲ್ಲಿ ನೋವು ಮತ್ತು ಉಗುಳು ನುಂಗುವಲ್ಲಿ ತೊಂದರೆ ಉಂಟಾಯಿತು. ಆರಂಭದಲ್ಲಿ, ಎದೆ ಮತ್ತು ಕುತ್ತಿಗೆ ಎಕ್ಸರೆ ಮಾಡಲಾಯಿತು. ನಂತರ ವಿಗ್ರಹ ಬಾಲಕ ನುಂಗಿರುವುದು ಬೆಳಕಿಗೆ ಬಂದಿತ್ತು.

ಎಂಡೋಸ್ಕೋಪಿಕ್ ವಿಧಾನ ಹೊರತೆಗೆದ್ರು

ನಂತರ ವೈದ್ಯರು ಎಂಡೋಸ್ಕೋಪಿಕ್ ವಿಧಾನವನ್ನು ಬಳಸಿಕೊಂಡು ವಿಗ್ರಹವನ್ನು ತೆಗೆದು ಹಾಕಲು ಯೋಜಿಸಿದರು. ಮಗುವನ್ನು ಒಂದು ಗಂಟೆಯೊಳಗೆ ಎಂಡೋಸ್ಕೋಪಿ ಸೂಟ್‌ಗೆ ಕರೆದೊಯ್ಯಲಾಯಿತು. ಅರಿವಳಿಕೆ ನೀಡಿ ಸುರಕ್ಷಿತವಾಗಿ ವಿಗ್ರಹ ತೆಗೆದು ಹಾಕಲಾಯಿತು.

ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

ಇದು ಎದೆಯಲ್ಲಿ ಸೋಂಕು ಸೇರಿದಂತೆ ಅನ್ನನಾಳದ ರಂದ್ರಕ್ಕೆ ಕಾರಣವಾಗಬಹುದು ಎಂದು ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಶ್ರೀಕಾಂತ್ ಕೆ.ಪಿ. ಹೇಳಿದ್ದರು. ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗಳ ಆಸ್ಪತ್ರೆ ನಿರ್ದೇಶಕ ಡಾ.ಮನೀಶ್ ರೈ, ಅವರು ರೋಗಿಯನ್ನು ಮಕ್ಕಳ ತುರ್ತುಸ್ಥಿತಿಗೆ ಕರೆತಂದಾಗ ತಕ್ಷಣ ಮತ್ತು ತ್ವರಿತ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ಹೇಳಿದ್ದರು.
Published by:Pavana HS
First published: