ಬೆಂಗಳೂರು: ಇಂದು ಬೆಳಗ್ಗೆ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ (R Dhruva Narayan) ಹೃದಯಾಘಾತದಿಂದ ನಿಧನರಾಗಿದ್ದು, ರಾಜ್ಯದ ಜನತೆ ಶಾಕ್ ಆಗಿದ್ದಾರೆ. ಮನೆಯಲ್ಲಿ ರಕ್ತದ ವಾಂತಿಯಾಗಿ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಮೈಸೂರಿನ ಡಿಆರ್ಎಂ ಆಸ್ಪತ್ರೆಗೆ (DRM Hospital) ದಾಖಲಿಸಲಾಗಿತ್ತು. ಕೂಡಲೇ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಧ್ರುವ ನಾರಾಯಣ ನಿಧನರಾಗಿದ್ದಾರೆ. ಇತ್ತ ರಾಮನಗರದಲ್ಲಿಂದು ಆಯೋಜನೆ ಮಾಡಲಾಗಿದ್ದ ಪ್ರಜಾ ಪ್ರತಿಧ್ವನಿ ಯಾತ್ರೆಯನ್ನು (Prajaprati dhwani yatre) ಮುಂದೂಡಿಕೆ ಮಾಡಲಾಗಿದೆ. ಧ್ರುವ ನಾರಾಯಣ ಅವರಿಗೆ ಚಿಕಿತ್ಸೆ ನೀಡಿದ್ದ ಡಾ.ಮಂಜುನಾಥ್ ಮಾಧ್ಯಮವೊಂದರ ಜೊತೆ ಮಾತನಾಡಿ ನಡೆದ ಘಟನೆಯನ್ನು ವಿವರಿಸಿದರು.
ಧ್ರುವ ನಾರಾಯಣ ಅವರು ನಮ್ಮ ಪಕ್ಕದ್ಮನೆಯಲ್ಲಿಯೇ ವಾಸವಾಗಿದ್ದಾರೆ. ಇಂದು ಬೆಳಗ್ಗೆ ಸುಮಾರು ಏಳು ಗಂಟೆಗೆ ಜಾಗಿಂಗ್ ಮುಗಿಸಿಕೊಂಡು ಬರುತ್ತಿರುವಾಗ ಜೋರಾಗಿ ಕೂಗಿ ಬೇಗ ಬನ್ನಿ ಎಂದು ಹೇಳಿದರು. ಅಲ್ಲಿ ಹೋಗಿ ನೋಡಿದಾಗ ಮಂಚದ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರಿಗೆ ಆ ಸಮಯದಲ್ಲಿ ರಕ್ತದ ವಾಂತಿಯೂ ಆಗಿತ್ತು. ರಕ್ತದ ವಾಂತಿಯಾಗಿ ಯಾವಾಗ ಆಗಿತ್ತು ಅನ್ನೋದು ನಿಖರ ಮಾಹಿತಿ ಇಲ್ಲ. ನಮ್ಮ ಅಂದಾಜು ಪ್ರಕಾರ ಸುಮಾರು 30 ರಿಂದ 40 ನಿಮಿಷಗಳ ಹಿಂದೆ ರಕ್ತ ವಾಂತಿಯಾಗಿತ್ತು. ನಾವು ಅಲ್ಲಿಂದಲೇ ಸಿಪಿಆರ್ ಮಾಡುತ್ತಾ ನಗರದ ಡಿಆರ್ಎಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು.
ಮನೆಯಲ್ಲಿಯೇ ಧ್ರುವ ನಾರಾಯಣ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದ್ರೂ ಆಸ್ಪತ್ರೆಯಲ್ಲಿ 25 ಬಾರಿ ಸಿಪಿಆರ್ ಮಾಡಲಾಯ್ತು. ಆದ್ರೂ ಚಿಕಿತ್ಸೆಗೆ ಧ್ರುವ ನಾರಾಯಣ ಸ್ಪಂದಿಸದೇ ಇದ್ದಾಗ, ಸಾವು ಎಂದು ಡಿಕ್ಲೇರ್ ಮಾಡಲಾಯ್ತು ಎಂದು ಡಾ.ಮಂಜುನಾಥ್ ಹೇಳಿದ್ದಾರೆ.
ನಿನ್ನೆ ರಾತ್ರಿಯೇ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಜಯದೇವ ಆಸ್ಪತ್ರೆಯ ವೈದ್ಯರಿಗೆ ತಿಳಿಸಿದ್ದಾರೆ. ಅವರು ಬೆಳಗ್ಗೆ ಬರೋದಾಗಿ ಹೇಳಿದ್ದರಂತೆ. ಆದ್ರೆ ಬೆಳಗ್ಗೆ ಆಗುವ ವೇಳೆಗೆ ಹೀಗೆ ಆಗಿದೆ. ಧ್ರುವ ನಾರಾಯಣ ಅವರಿಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆಗಳು ಇರಲಿಲ್ಲ. ಮಧುಮೇಹಿ ಆಗಿದ್ರೂ ಆರೋಗ್ಯವಾಗಿಯೇ ಇದ್ದರು ಎಂದು ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯ ಸಂತಾಪ
ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ. ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ದತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಪಾ ಸೂಚಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಸಂತಾಪ
ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು, ಸರಳ ಸಜ್ಜನ ರಾಜಕಾರಣಿಯಾಗಿದ್ದ ಶ್ರೀ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ನನಗೆ ತೀವ್ರ ದಿಗ್ಭ್ರಮೆ, ಆಘಾತ ಉಂಟಾಗಿದೆ.
ಅತ್ಯಂತ ಸ್ನೇಹಶೀಲ ವ್ಯಕ್ತಿಯಾಗಿದ್ದ ಅವರು ವಿಭಿನ್ನ ರಾಜಕಾರಣಿ ಆಗಿದ್ದರು. ಸೋಲುಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಿದ್ದ ಅವರು ಮತ್ತೊಬ್ಬರಿಗೆ ಮಾದರಿ ಆಗಿದ್ದರಲ್ಲದೆ, ಶಾಸಕರಾಗಿ, ಲೋಕಸಭೆ ಸದಸ್ಯರಾಗಿ ರಾಜ್ಯಕ್ಕೆ ಎಣೆ ಇಲ್ಲದ ಸೇವೆ ಮಾಡಿದ್ದರು. ಅವರನ್ನು ಕಳೆದುಕೊಂಡಿದ್ದು ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ.
ಇದನ್ನೂ ಓದಿ: R Dhruvanarayan: ಕಾಂಗ್ರೆಸ್‌ನ ಮುಂಚೂಣಿ ನಾಯಕ ಆರ್ ಧ್ರುವ ನಾರಾಯಣ್ ಅವರ ಬಗ್ಗೆ ನಿಮಗೆಷ್ಟು ಗೊತ್ತು?
ಶ್ರೀ ಆರ್.ಧ್ರುವನಾರಾಯಣ ಅವರ ಅಗಲಿಕೆ ನಮ್ಮ ರಾಜ್ಯಕ್ಕೆ ಭರಿಸಲಾಗದ ನಷ್ಟ. ಅವರಿಗೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ