ಜನರ ಭೇಟಿಯಿಲ್ಲದ ಕಬ್ಬನ್ ಪಾರ್ಕ್ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಕಬ್ಬನ್ ಪಾರ್ಕ್ ಸದ್ಯದ ಚಿತ್ರಣ...

ಜನರಿಲ್ಲದ ಕಬ್ಬನ್ ಪಾರ್ಕಿನ ಹಸಿರು ಹುಲುಸಾಗೇ ಬೆಳೆದಿದೆ. ಮೊದಲೆಲ್ಲಾ ಯಾವಾಗಲೂ ಪಿಕ್ ನಿಕ್ ಅಂತಲೋ ಸುಮ್ಮನೆ ಟೈಂಪಾಸ್ ಗೆ ಅಂತಲೋ ಕಬ್ಬನ್ ಪಾರ್ಕಿನ ನಾನಾ ಕಡೆ ಜನ ಇದ್ದೇ ಇರುತ್ತಿದ್ದರು. ಆದರೆ, ಈಗ ಉದ್ಯಾನವನದಲ್ಲಿ ಎಲ್ಲೂ ಜನರೇ ಇಲ್ಲದೆ ಇರುವುದರಿಂದ ಎಲ್ಲಾ ಕಡೆ ಹುಲ್ಲು ಹಚ್ಚಹಸಿರಾಗಿ ತುಂಬಿಕೊಂಡಿದೆ.

news18-kannada
Updated:May 23, 2020, 6:48 PM IST
ಜನರ ಭೇಟಿಯಿಲ್ಲದ ಕಬ್ಬನ್ ಪಾರ್ಕ್ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಕಬ್ಬನ್ ಪಾರ್ಕ್ ಸದ್ಯದ ಚಿತ್ರಣ...
ಕಬ್ಬನ್‌ ಪಾರ್ಕ್‌.
  • Share this:
ಬೆಂಗಳೂರು (ಮೇ 23); ಬೆಂಗಳೂರಿನ ಜನ ಹಸಿರನ್ನು ಕಣ್ತುಂಬಿಕೊಳ್ಬೇಕು ಅಂದ್ರೆ ಹೆಚ್ಚಾಗಿ ಭೇಟಿ ನೀಡುವ ನೆಚ್ಚಿನ ತಾಣ ಅಂದ್ರೆ ಲಾಲ್‌ಬಾಗ್‌ ಅಥವಾ ಕಬ್ಬನ್ ಪಾರ್ಕ್‌. ಬೆಂಗಳೂರಿನ ಅನೇಕ ಪ್ರದೇಶಗಳಿಗೆ ಹೋಗೋಕೆ ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳು ಶಾರ್ಟ್ ಕಟ್ ಆಗಿರೋದ್ರಿಂದ ಲಾಲ್ಬಾಗಿಗಿಂತಲೂ ಇದು ಜನರಿಗೆ ಹೆಚ್ಚು ಚಿರಪರಿಚಿತ. ಆದ್ರೆ ಲಾಕ್ ಡೌನ್ ಆದ್ಮೇಲೆ ಅನೇಕರ ಪಾಲಿಗೆ ಕಬ್ಬನ್ ಪಾರ್ಕ್ ಸ್ವಲ್ಪ ಜಾಸ್ತಿನೇ ದೂರವಾಗ್ಬಿಟ್ಟಿದೆ.

ಕೆಲವು ದಿನಗಳಿಂದ ಬೆಳಗ್ಗೆ ಮತ್ತು ಸಂಜೆ ಪಾರ್ಕಿನಲ್ಲಿ ವಾಕ್ ಮಾಡೋಕೆ ಅವಕಾಶ ಇರೋದ್ರಿಂದ ಒಂದಷ್ಟು ಜನ ಕಬ್ಬನ್ ಉದ್ಯಾನಕ್ಕೆ ಬರುತ್ತಿದ್ದಾರೆ. ಆದರೆ, ಬಹುತೇಕರ ಪಾಲಿಗೆ ಈ ಭಾಗ್ಯ ಇನ್ನೂ ಒದಗಿಬಂದಿಲ್ಲ. ಆದರೂ, ಎರಡು ತಿಂಗಳ ಬ್ರೇಕ್ ನಂತರ ಕಬ್ಬನ್ ಪಾರ್ಕ್ ಹೇಗಿದೆ ಗೊತ್ತಾ?

ಜನರಿಲ್ಲದ ಕಬ್ಬನ್ ಪಾರ್ಕಿನ ಹಸಿರು ಹುಲುಸಾಗೇ ಬೆಳೆದಿದೆ. ಮೊದಲೆಲ್ಲಾ ಯಾವಾಗಲೂ ಪಿಕ್ ನಿಕ್ ಅಂತಲೋ ಸುಮ್ಮನೆ ಟೈಂಪಾಸ್ ಗೆ ಅಂತಲೋ ಕಬ್ಬನ್ ಪಾರ್ಕಿನ ನಾನಾ ಕಡೆ ಜನ ಇದ್ದೇ ಇರುತ್ತಿದ್ದರು. ಆದರೆ, ಈಗ ಉದ್ಯಾನವನದಲ್ಲಿ ಎಲ್ಲೂ ಜನರೇ ಇಲ್ಲದೆ ಇರುವುದರಿಂದ ಎಲ್ಲಾ ಕಡೆ ಹುಲ್ಲು ಹಚ್ಚಹಸಿರಾಗಿ ತುಂಬಿಕೊಂಡಿದೆ. ಯಾವ ಮರದ ಕೊಂಬೆಗಳನ್ನೂ ಸುಮ್ ಸುಮ್ನೆ ಬಾಗಿಸುವವರು, ಎಲೆಗಳನ್ನು ಕೀಳುವವರು ಇಲ್ಲದೇ ಅವೂ ಸ್ವಚ್ಛಂದವಾಗಿ ಬೆಳೆದುಕೊಂಡಿವೆ.

ಫೋಟೋ ಶೂಟ್ ಅಂತಲೋ, ಮನೆಯ ಹೂದಾನಿಯಲ್ಲಿ ಇಡೋಕೋ, ಜೊತೆಗೆ ಬಂದ ಹುಡುಗಿ ಆಸೆಪಟ್ಟಳು ಅಂತ ಜಿಗುದು ಕೀಳೋ ಪ್ರಯತ್ನ ಮಾಡುವ ಜನರಿಲ್ಲದೇ ಮರಗಳ ತುಂಬಾ ಕೆಳಗಿನವರೆಗೂ ಬಣ್ಣಬಣ್ಣದ ಸುಂದರ ಹೂಗಳು ಅರಳಿವೆ.

ಕಬ್ಬನ್ ಪಾರ್ಕಿನೊಳಗೆ ಇರುವ ಮಾವು, ಹಲಸು ಮುಂತಾದ ಮರಗಳ ಹಣ್ಣುಗಳು ಈ ಬಾರಿ ಸಂಪೂರ್ಣವಾಗಿ ಪಕ್ಷಿ, ಬಾವಲಿ, ಅಳಿಲುಗಳಿಗೇ ಮೀಸಲಾಗಿದೆ. ಕಾಗೆಗಳು ಕೂಡಾ ಮಾವಿನ ಹಣ್ಣನ್ನು ಸವಿಯುತ್ತಿವೆ. ಭಾನುವಾರ ಆದ್ರೆ ವಾಹನಗಳು ಇರದೆ ಇದ್ರೂ ಎಂದಿಗಿಂತ ಹೆಚ್ಚೇ ಜನ ಇರುತ್ತಿದ್ದರು. ಮಕ್ಕಳ ಕೂಗಾಟ, ಸೈಕಲ್ ಸವಾರಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೈಕ್ ಸೆಟ್ಟು ಇವ್ಯಾವವೂ ಈಗಿಲ್ಲ.‌

ಈಗ ಕಬ್ಬನ್ ಪಾರ್ಕಿನೊಳಗೆ ಪಕ್ಷಿಗಳದ್ದೇ ಸಂಗೀತ ಕಚೇರಿ. ದೂರದ ರಸ್ತೆಯಲ್ಲಿ ಓಡಾಡೋ ವಾಹನಗಳ ಸದ್ದು ಒತ್ತಾಗಿ ಬೆಳೆದಿರುವ ಮರಗಳ ನಡುವಿನಿಂದ ತೂರಿ ಬರೋದೇ ಇಲ್ಲ.‌ ಎಲ್ಲವೂ ಇಲ್ಲಿ ಸೈಲೆಂಟಾಗಿರೋದ್ರಿಂದ ಅಪರೂಪಕ್ಕೆ ಕಾಣೋ ಮನುಷ್ಯರೂ ಮೆಲುದನಿಯಲ್ಲೇ ಮಾತನಾಡುತ್ತಾರೆ.

ಒಟ್ಟಲ್ಲಿ ಬೆಂಗಳೂರಿಗರು ಕಬ್ಬನ್ ಪಾರ್ಕನ್ನು ಮಿಸ್ ಮಾಡಿಕೊಂಡಿದ್ದಾರೆಯೇ ವಿನಃ, ಕಬ್ಬನ್ ಪಾರ್ಕ್ ಮತ್ತದರ ಅಸಂಖ್ಯ ಜೀವರಾಶಿ ಜನರನ್ನು ಅಷ್ಟೇನೂ ಮಿಸ್ ಮಾಡಿಕೊಂಡಂತಿಲ್ಲ. ತನ್ನ ಪಾಡಿಗೆ ತಾನು ಆರಾಮಾಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಕೊರೋನಾ ಮತ್ತು ಲಾಕ್‌ಡೌನ್‌ ಕಾರಣಕ್ಕಾದರೂ ಕಬ್ಬನ್‌ ಪಾರ್ಕ್‌ ತನ್ನ ಹಳೆಯ ದಿನಗಳಂತೆ ಮತ್ತೆ ಹಸಿರಿನಿಂದ ಕಂಗೊಳಿಸುತ್ತಿರುವುದು ಪರಿಸರ ಪ್ರಿಯರಿಗೆ ಸಂತಸ ನೀಡಿದೆ.ಇದನ್ನೂ ಓದಿ : ಸರ್ಕಾರದ ಮಾರ್ಗಸೂಚಿಯಂತೆ ಈದ್ ಹಬ್ಬ ಆಚರಿಸಿ; ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಮನವಿ
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading