ಕೋಲಾರ: ನಮ್ಮಲ್ಲಿ ಬಹಳಷ್ಟು ಜನರಿಗೆ ಈ ಪ್ರಾಣಿಗಳ (Animals) ಬಗ್ಗೆ ತಿಳಿದುಕೊಳ್ಳಬೇಕೆಂದು ತುಂಬಾನೇ ಕುತೂಹಲ ಇರುತ್ತದೆ. ಸಾಮಾನ್ಯವಾಗಿ ನಾವು ಮೃಗಾಲಯಗಳಿಗೆ (Zoo) ಮತ್ತು ಸಫಾರಿಗಳಿಗೆ (Safari) ಹೋದಾಗ ಪ್ರಾಣಿಗಳನ್ನು ತುಂಬಾನೇ ಹತ್ತಿರದಿಂದ ನೋಡುತ್ತೇವೆ. ಆದರೆ ಅವು ತಿನ್ನುವ ಆಹಾರ (Food) ಹೇಗಿರುತ್ತದೆ? ಅಲ್ಲಿ ಅವುಗಳನ್ನು ಸಿಬ್ಬಂದಿಯವರು ಹೇಗೆಲ್ಲಾ ನೋಡಿಕೊಳ್ಳುತ್ತಾರೆ? ಇಂತಹ ಅನೇಕ ಅಂಶಗಳನ್ನು ವಿವರವಾಗಿ (Details) ತಿಳಿದುಕೊಳ್ಳಲು ಆಗುವುದಿಲ್ಲ. ಇದೆಲ್ಲಾ ತಿಳಿದುಕೊಳ್ಳಬೇಕೆಂದು ಎಷ್ಟೋ ಜನರಿಗೆ ತುಂಬಾನೇ ಕುತೂಹಲ ಇರುತ್ತದೆ.
ಹೀಗೆ ಕುತೂಹಲ ಇರುವವರಿಗೆ ಅಂತ ಈಗ ನಮ್ಮ ಕರ್ನಾಟಕದ ಕೋಲಾರದಲ್ಲಿ ಅರಣ್ಯ ಇಲಾಖೆಯು ವಿಶೇಷ ಆನೆ ಆರೈಕೆ ಕೇಂದ್ರವೊಂದನ್ನು ಸ್ಥಾಪಿಸಿದೆ.
ಇನ್ನೊಂದು ಒಳ್ಳೆಯ ಸುದ್ದಿ ಏನೆಂದರೆ ಈ ಕೇಂದ್ರದಲ್ಲಿ ಶೀಘ್ರದಲ್ಲೇ ಪ್ರವಾಸಿಗರಿಗೆ ಮತ್ತು ಸಂದರ್ಶಕರಿಗಾಗಿ ಪ್ರವೇಶವನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿದುಬಂದಿದೆ.
ಇಲ್ಲಿ ಆನೆಗಳನ್ನು ಆರೈಕೆ ಮಾಡುವುದಲ್ಲದೆ, ಸ್ಥೂಲಕಾಯ, ಮಧುಮೇಹ ಮತ್ತು ಗಾಯಗಳಿಂದ ಬಳಲುತ್ತಿರುವಂತಹ ಆನೆಗಳಿಗೆ ಚಿಕಿತ್ಸೆ ಸಹ ನೀಡಲಾಗುತ್ತದೆ.
ಇದು ಕರ್ನಾಟಕದ ಮೊದಲ ಆನೆ ಆರೈಕೆ ಕೇಂದ್ರ
ಇದು ಕರ್ನಾಟಕದ ಮೊಟ್ಟಮೊದಲ ಆನೆ ಆರೈಕೆ ಕೇಂದ್ರವಾಗಿದ್ದು, ಕೋಲಾರ ಸಮೀಪದ ಕಾಜಿಕಲ್ಲಹಳ್ಳಿಯಲ್ಲಿದೆ. ಇದು ಬೆಂಗಳೂರಿನಿಂದ ಸುಮಾರು 55 ಕಿಲೋ ಮೀಟರ್ ದೂರದಲ್ಲಿದೆ. ಕೋಲಾರದಲ್ಲಿರುವ ಕರ್ನಾಟಕ ಅರಣ್ಯ ಇಲಾಖೆಯ ವಿಶೇಷ ಆನೆ ಆರೈಕೆ ಕೇಂದ್ರವು ಶೀಘ್ರದಲ್ಲಿಯೇ ಸಂದರ್ಶಕರಿಗೆ ಪ್ರವೇಶವನ್ನು ನೀಡಲಿದೆ.
ಲಕ್ಷ್ಮಿಸಾಗರ ಮೀಸಲು ಅರಣ್ಯದಲ್ಲಿ ಸುಮಾರು 25 ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಈ ಆನೆ ಆರೈಕೆ ಕೇಂದ್ರವನ್ನು ಎಂಟು ಆನೆಗಳಿಗೆ ಆಶ್ರಯ ನೀಡುವ ಸಾಮರ್ಥ್ಯದೊಂದಿಗೆ ಆಗಸ್ಟ್ ತಿಂಗಳಿನಲ್ಲಿ ಸ್ಥಾಪಿಸಲಾಯಿತು.
ಆದರೆ ಈಗ ಇಲಾಖೆಯು ಹೆಚ್ಚಿನ ಆನೆಗಳಿಗೆ ಸ್ಥಳಾವಕಾಶ ಕಲ್ಪಿಸಲು ಕೇಂದ್ರವನ್ನು ಇನ್ನಷ್ಟು ವಿಸ್ತರಿಸಲು ಮತ್ತು ಪ್ರವಾಸಿಗರಿಗೆ ಭೇಟಿ ನೀಡಲು ಮತ್ತು ಪ್ರಾಣಿಗಳಿಗೆ ಆಹಾರ ನೀಡಲು ಒಂದು ಭಾಗವನ್ನು ತೆರೆಯಲು ಕೆಲಸ ಮಾಡುತ್ತಿದೆ.
ಸದ್ಯಕ್ಕೆ ಕೇಂದ್ರದಲ್ಲಿರುವ ಆನೆಗಳು ಎಲ್ಲಿಂದ ಬಂದಿವೆ ಗೊತ್ತೇ?
ಈ ಕೇಂದ್ರದಲ್ಲಿ ಸದ್ಯಕ್ಕೆ ನಾಲ್ಕು ಆನೆಗಳಿದ್ದು, ಅವುಗಳು ಕರ್ನಾಟಕದ ನಂಜನಗೂಡು, ತಮಿಳುನಾಡು, ಕೇರಳ ಮತ್ತು ಗೋವಾದಿಂದ ಬಂದವು ಎಂದು ಹೇಳಲಾಗುತ್ತಿದೆ.
ಅವುಗಳಲ್ಲಿ ಮೂರು ಆನೆಗಳು ಮಧುಮೇಹ, ಗಾಯಗಳು ಮತ್ತು ಊದಿಕೊಂಡ ಕಾಲುಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, ನಾಲ್ಕನೇ ಆನೆಯು ಸ್ಥೂಲಕಾಯಕ್ಕೆ ಚಿಕಿತ್ಸೆ ಪಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Karnataka Elephants: ಇಡೀ ದೇಶದಲ್ಲೇ ಕರ್ನಾಟಕದ ಆನೆಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್
"ಶಿಬಿರ ಮತ್ತು ದೇವಾಲಯದ ಆನೆಗಳಲ್ಲಿ ಮಧುಮೇಹ ಮತ್ತು ಬೊಜ್ಜು ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತವೆ. ಏಕೆಂದರೆ ಅಲ್ಲಿ ಆನೆಗಳು ತೆಗೆದುಕೊಳ್ಳುವ ಆಹಾರ ಮತ್ತು ಸೀಮಿತ ದೈಹಿಕ ವ್ಯಾಯಾಮದಿಂದಾಗಿ ಬೇಗನೆ ಈ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತವೆ ಅಂತ ಹೇಳಬಹುದು.
ಅದಕ್ಕಾಗಿಯೇ ಅಂತಹ ಆನೆಗಳು ಗಾಯಗೊಂಡಾಗ ಗುಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ.
ಕೋಲಾರದ ಆನೆ ಆರೈಕೆ ಕೇಂದ್ರದಲ್ಲಿ, ಪ್ರಾಣಿಗಳಿಗೆ ವಿಶೇಷ ವೈದ್ಯಕೀಯ ಆರೈಕೆಯನ್ನು ನೀಡುವುದಲ್ಲದೆ, ಪ್ರತಿಯೊಂದು ಆನೆಗೂ ನಿರ್ದಿಷ್ಟ ಆಹಾರಕ್ರಮ ಮತ್ತು ವ್ಯಾಯಾಮವನ್ನು ಅವುಗಳ ದೇಹಕ್ಕೆ ಅನುಗುಣವಾಗಿ ಮಾಡಿಸಲಾಗುತ್ತದೆ” ಎಂದು ಪಶುವೈದ್ಯರು ಹೇಳಿದ್ದಾರೆ.
ಈ ಆನೆ ಆರೈಕೆ ಕೇಂದ್ರದಲ್ಲಿ ಏನೆಲ್ಲಾ ವ್ಯವಸ್ಥೆ ಇದೆ ನೋಡಿ..
ಈ ಆನೆ ಆರೈಕೆ ಕೇಂದ್ರದಲ್ಲಿ ಪ್ರತಿ ಆನೆಗೆ ಪ್ರತ್ಯೇಕ ಮುಚ್ಚಿದ ಆವರಣ, ಶವರ್ ಮತ್ತು ಮನರಂಜನಾ ಸ್ಥಳಗಳು, ವೈದ್ಯಕೀಯ ಕೊಠಡಿಗಳು ಮತ್ತು ವಾಕಿಂಗ್ ಏರಿಯಾಗಳಿವೆ.
"ಇನ್ನೂ ಎಂಟು ಆನೆಗಳನ್ನು ಇರಿಸಲು ಹೆಚ್ಚುವರಿ ಸ್ಥಳಗಳನ್ನು ರಚಿಸುವುದರ ಜೊತೆಗೆ, ನಾವು ಸುಸ್ಥಿರ ಮತ್ತು ತ್ಯಾಜ್ಯ ಮರುಬಳಕೆ ಘಟಕಗಳನ್ನು ಸಹ ಇಲ್ಲಿ ಸ್ಥಾಪಿಸುತ್ತಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತರ ರಕ್ಷಣಾ ಕೇಂದ್ರಗಳಿಗಿಂತ ಇದು ಭಿನ್ನವಾಗಿದೆ ಅಂತ ಹೇಳಲಾಗುತ್ತಿದ್ದು, ಇದು ಆನೆಗಳನ್ನು ಬಿಸಿಲು ಮತ್ತು ಮಳೆಯಿಂದ ರಕ್ಷಿಸಲು ಬೇರೆ ಬೇರೆ ಸ್ಥಳಗಳನ್ನು ಹೊಂದಿದೆ.
"ಕಾವಾಡಿಗಳು, ಮಾವುತರು, ಅರಣ್ಯ ಸಿಬ್ಬಂದಿ ಮತ್ತು ಪಶುವೈದ್ಯರಿಗೆ ವಿಶೇಷ ಘಟಕಗಳನ್ನು ಮಾಡಲಾಗಿದೆ. ಪಶುವೈದ್ಯರು ಮತ್ತು ಎನ್ಜಿಒಗಳೊಂದಿಗೆ ಕೆಲಸ ಮಾಡುವ ತಜ್ಞರನ್ನು ಆನೆಗಳ ಚಿಕಿತ್ಸೆಗೆ ನಿಯೋಜಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ