ಡಿಕೆಶಿಯ 'ಆಪರೇಷನ್ ಸೀನಿಯರ್ಸ್' ಐಡಿಯಾ ಯಾರದ್ದು ಗೊತ್ತಾ?

ನವದೆಹಲಿ ಕೇವಲ ರಾಷ್ಟ್ರ ನಾಯಕರ ಕೇಂದ್ರ ಸ್ಥಾನವಷ್ಟೇ ಅಲ್ಲ. ರಾಜ್ಯ ನಾಯಕರ ಚಲನವಲನಗಳು ಕೂಡ ಆರಂಭಗೊಳ್ಳುವುದು ಇದೇ ದೆಹಲಿಯಿಂದ. ಸರ್ಕಾರ ಮಟ್ಟದ ಕೆಲಸಗಳಿಂದ ಹಿಡಿದು ಹೈಕಮಾಂಡ್ ಕೃಪೆಗಾಗಿ ಎಲ್ಲ ನಾಯಕರು ದೆಹಲಿಗೆ ಬರುತ್ತಾರೆ. ಹೀಗೆ ಬಂದ ನಾಯಕರ ಮಾತುಕತೆ, ಸನ್ನಿವೇಶ ಎಲ್ಲವೂ ಸುದ್ದಿಯಾಗುವುದಿಲ್ಲ. ಸುದ್ದಿಯಾಗದ ಕುತೂಹಲಕಾರಿ, ಅಚ್ಚರಿಯ ಕೆಲವು ಸಂಗತಿಗಳು ದಿಲ್ಲಿ ಪೋಸ್ಟ್​ನಲ್ಲಿ ಪ್ರಕಟವಾಗಲಿದೆ.

ದಿಲ್ಲಿ ಪೋಸ್ಟ್.

ದಿಲ್ಲಿ ಪೋಸ್ಟ್.

  • Share this:
ಕೆಪಿಸಿಸಿ ಅಧ್ಯಕ್ಷರಾಗಿದ್ದೇ ತಡ ಭಾರೀ ಖುಷಿಯಾಗಿರುವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ನಾಯಕರ ಮನೆಗೆ ಭೇಟಿ ನೀಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಹಿರಿಯರನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ' 'ಆಪರೇಷನ್ ಸೀನಿಯರ್ಸ್' ಐಡಿಯಾ ಅವರ ಸಹೋದರ ಮತ್ತು‌ ಸಂಸದ ಡಿ.ಕೆ. ಸುರೇಶ್ ಅವರದು.

ಡಿಕೆಶಿ ಏಷ್ಟೇ ಪ್ರಭಾವಿಯಾಗಿದ್ದರೂ ಡಿ.ಕೆ. ಸುರೇಶ್ ಗೆ ಅಣ್ಣ ಮಾತ್ರವಲ್ಲವೇ? ಕೆಪಿಸಿಸಿ ಕುರ್ಚಿಗೆ ಡಿಕೆಶಿ ಹೆಸರು ಪ್ರಕಟ ಆಗುತ್ತಿದ್ದಂತೆ ದೆಹಲಿಯಿಂದ ಕರೆ ಮಾಡಿದ ಡಿ.ಕೆ. ಸುರೇಶ್ 'ಕಂಗ್ರಾಜುಲೇಷನ್ಸ್ ಕಣಪ್ಪ' ಎಂದರು. ಮರುಮಾತಿನಿಂದಲೇ ಸಲಹೆ ಶುರು... 'ಮೊದಲು ಎಲ್ಲಾ ಹಿರಿಯ ನಾಯಕರ ಮನೆಗೂ ಹೋಗು, ಈಗಲೇ ಫೋನ್ ಮಾಡಿ ಭೇಟಿಗೆ ಸಮಯ ಕೇಳು. ಯಾರೊಬ್ಬರನ್ನೂ‌ ಮಿಸ್ ಮಾಡಬೇಡ. ಮೂರು ಜನ‌ ಕಾರ್ಯಾಧ್ಯಕ್ಷರನ್ನು ಕರೆದು ಮಾತನಾಡು.' ಅಂತಾ. ಇದಲ್ಲದೆ ಬೀರೇಗೌಡರ ಮಗಳ ಮದುವೆ ಅಟೆಂಡ್ ಮಾಡು ಅಂತಾನೂ ಹೇಳಿದರು‌.‌

ಡಿಕೆಶಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪ ಇದೆ. ಆರೋಪ ಮುಕ್ತಿಗಾಗಿ ಇಂಥ ಸಲಹೆ ನೀಡಿದ್ದಾರೆ ಸುರೇಶ್. ಜೊತೆಗೆ 'ಎಲ್ಲಾ ಹಿರಿಯರನ್ನು ಜೊತೆಯಲ್ಲಿ ಕೊಂಡೊಯ್ಯುವುದೇ ಸದ್ಯದ ದೊಡ್ಡ ಸವಾಲು' ಎಂಬುದು ಗೊತ್ತಿದೆ. ಅದನ್ನು ಪತ್ರಕರ್ತರ ಜೊತೆಗೆ ಹೇಳಿಕೊಂಡರು. ಅದರಿಂದಾಗಿಯೋ ಏನೋ ಡಿಕೆಶಿ ಹಿರಿಯ ನಾಯಕರ ಭೇಟಿಗೆ ಹೋದಾಗ ಡಿ.ಕೆ. ಸುರೇಶ್ ಕೂಡ ಜೊತಗೇ ಇದ್ದರು.

ಡಿಕೆಶಿ ಭೇಟಿಯಾಗಲಿರುವ ರಮೇಶ್ ಜಾರಕಿಹೊಳಿ

ಡಿಕೆಶಿ ಬೇರೆಯವರನ್ನು ಭೇಟಿ ಮಾಡುವುದರ ಜೊತೆಗೆ ಡಿಕೆಶಿಯನ್ನು ಬೇರೆಯವರು ಭೇಟಿ ಮಾಡುವ ಇನ್ನೊಂದು ಕುತೂಹಲಕಾರಿ ವಿಷಯ ಕೂಡ ಇದೆ. ಇದೇ ಡಿಕೆಶಿ ಮೇಲೆ ಸವಾಲೆಸೆದು ಕಾಂಗ್ರೆಸ್ ಬಿಟ್ಟು, ಬಿಜೆಪಿ‌ ಸೇರಿ, ಕಡೆಗೆ ಡಿಕೆಶಿ ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆಯೇ ಬೇಕೆಂದು ಪಟ್ಟಿಡಿದು ಪಡೆದುಕೊಂಡ ರಮೇಶ್ ಜಾರಕಿಹೊಳಿ‌ ಈಗ ಡಿಕೆಶಿಯನ್ನು ಭೇಟಿಯಾಗುತ್ತಾರಂತೆ.

ಇದನ್ನೂ ಓದಿ: ಡಿಕೆ ಶಿವಕುಮಾರ್​ಗೆ ಪಕ್ಷದಲ್ಲಿ ಎಲ್ಲರೂ ಸಹಕಾರ ಕೋಡಬೇಕು ; ಮಲ್ಲಿಕಾರ್ಜುನ ಖರ್ಗೆ

ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಆಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ವರಸೆ ಬದಲಿಸಿದರು ಎಂದುಕೊಳ್ಳಬೇಡಿ. ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಆಗಲು ಇನ್ನಿಲ್ಲದ ಅಡೆತಡೆಗಳು ಬಂದವು. ಅವರಿಗೆ ಜಲಸಂಪನ್ಮೂಲ ‌ಇಲಾಖೆ ನಿಭಾಯಿಸುವಷ್ಟು ಜ್ಞಾನದ ಸಂಪನ್ಮೂಲ ಇಲ್ಲ ಎಂಬ ಕುಹಕಗಳು ಕೇಳಿಬಂದವು‌. ಇದರಿಂದ ಕೆರಳಿರುವ ಅವರು ಯಶಸ್ವಿಯಾಗಿ ನಿಭಾಯಿಸಿಯೇ ತೀರಬೇಕೆಂದು ನಿಶ್ವಯಿಸಿದ್ದಾರಂತೆ. ಅದರ ಭಾಗವಾಗಿ ಹಿಂದೆ ರಾಜ್ಯದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಲ್ಲರನ್ನೂ ಭೇಟಿಯಾಗಿ ಸಲಹೆ ಕೇಳುತ್ತಾರಂತೆ. ಅದೇ ರೀತಿ ಡಿಕೆಶಿಯನ್ನೂ ಭೇಟಿಯಾಗುತ್ತಾರಂತೆ. ಅಂದಹಾಗೆ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ. ಸುರೇಶ್ ಬಹಳ ಒಳ್ಳೆಯ ಸ್ನೇಹಿತರಂತೆ.

ಪ್ರಶಾಂತ್ ಕಿಶೋರ್ ಬೇಕಾಗಿಲ್ಲವಂತೆ!

ಡಿಕೆಶಿ ಮತ್ತು ಡಿ.ಕೆ‌. ಸುರೇಶ್ ಗೆ ಪ್ರಶಾಂತ್ ಕಿಶೋರ್ ತೆಗೆದುಕೊಂಡು ರಣತಂತ್ರ ರೂಪಿಸುವ ಸಲಹೆಯೊಂದು ಬಂದಿದೆ‌. ಆದರೆ ಸಹೋದರರಿಬ್ಬರು ಈ ಸಲಹೆಯನ್ನು ನಿರಾಕರಿಸಿದ್ದಾರೆ. ನಮ್ಮ‌ ಬಳಿಯೇ ಬೇಜಾನ್ ಐಡಿಯಾಗಳಿವೆ. ಅವುಗಳನ್ನು ಕಾರ್ಯರೂಪಕ್ಕೆ ತಂದರೆ ಸಾಕು. ಪ್ರಶಾಂತ್ ಕಿಶೋರ್ ಬೇಕಾಗಿಲ್ಲ ಎಂದಿದ್ದಾರಂತೆ. ಸದ್ಯಕ್ಕೆ ಹೀಗೆ ಹೇಳಿದ್ದರೂ ಮುಂದೆ ಏನುಬೇಕಾದರೂ ಆಗಬಹುದು.
First published: