ನವದೆಹಲಿ: ಇಬ್ಬರ ಮಧ್ಯೆ ಅಧಿಕಾರದ ಹಂಚಿಕೆ ಎಂಬುವುದು ಕೇವಲ ಮಾಧ್ಯಮಗಳ ಸೃಷ್ಟಿ. ಕಷ್ಟಪಟ್ಟವರಿಗೆ ಫಲ ಸಿಗುತ್ತೆ ಅನ್ನೋ ನಂಬಿಕೆಯನ್ನು ಡಿಕೆ ಶಿವಕುಮಾರ್ (KPCC President DK Shivakumar) ಇಟ್ಟುಕೊಂಡಿದ್ದಾರೆ. ಕೆಲವರು ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಈ ರೀತಿ ಹೇಳುವವರನ್ನು ತಡೆಯಲು ಸಾಧ್ಯವಿಲ್ಲ ಎಂದು ನವದೆಹಲಿಯಲ್ಲಿ ಮಾಜಿ ಸಿಎಂ ಆಪ್ತರ ಹೇಳಿಕೆಗೆ ಸಂಸದ ಡಿಕೆ ಸುರೇಶ್ (MP DK Suresh) ಅಸಮಾಧಾನ ಹೊರ ಹಾಕಿದರು. ಪಕ್ಷ ತೆಗೆದುಕೊಳ್ಳುವ ನಿರ್ಧಾರ ತಿಳಿದುಕೊಳ್ಳಲು ತಾಳ್ಮೆ ಬೇಕು. ಕಷ್ಟಪಟ್ಟು ಕೆಲಸ ಮಾಡಿದ್ದು, ಕೂಲಿ ಕೊಡಿ ಎಂದು ಕೇಳುತ್ತಿದ್ದೇವೆ ಎಂದು ಹೇಳುವ ಮೂಲಕ ಸೋದರನಿಗೆ ಸಿಎಂ ಪಟ್ಟ ನೀಡಿ ಎಂದು ಕೇಳಿದರು.
ಪಕ್ಷ ಸಿದ್ದರಾಮಯ್ಯ ಅವರ ಹಿರಿತನ ಗೌರವಿಸಿದೆ
ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ನೀಡಲಾಗಿತ್ತು. ಈಗ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಸಿದ್ದರಾಮಯ್ಯನವರಿಗೆ ಎರಡು ಬಾರಿ ಸಿಎಲ್ಪಿ ನಾಯಕ ಮತ್ತು ಒಂದು ಬಾರಿ ಸಿಎಂ ಆಗುವ ಅವಕಾಶವನ್ನು ಪಕ್ಷ ನೀಡಿದೆ. ಅವರ ಹಿರಿತನವನ್ನು ಪಕ್ಷ ಗೌರವಿಸಿದೆ. ರಾಜ್ಯದಲ್ಲಿ ಪಕ್ಷ ಅತಂತ್ರ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ನೀಡಿದ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ತೆಗೆದುಕೊಂಡಿದ್ದರು.
ಡಿಕೆಶಿ ಜೀವನ ತೆರೆದಿಟ್ಟ ಪುಸ್ತಕ
ಡಿಕೆ ಶಿವಕುಮಾರ್ ಜೀವನ ತೆರೆದಿಟ್ಟ ಪುಸ್ತಕ. ಎಲ್ಲಾ ಮಾಧ್ಯಮದವರಿಗೆ ಡಿಕೆ ಶಿವಕುಮಾರ್ ಜೀವನದ ಪ್ರತಿಯೊಂದು ಪುಟವನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಅವರ ಮೇಲಿರುವ ಎಲ್ಲಾ ಕೇಸ್ಗಳು ರಾಜಕೀಯ ಪ್ರೇರಿತ ಮತ್ತು ಜೈಲಿಗೆ ಹೋಗಿದ್ದು ಸಹ ರಾಜಕೀಯ ಷಡ್ಯಂತ್ರ. ಯಾವುದೇ ಸ್ಪಷ್ಟ ಆರೋಪಗಳು ಡಿಕೆ ಶಿವಕುಮಾರ್ ಅವರ ಮೇಲಿಲ್ಲ. ಈ ರೀತಿಯ ಆರೋಪಗಳಿದ್ರೆ ಚುನಾವಣೆಗೂ ಮೊದಲೇ ಎಲ್ಲಾ ಗೊತ್ತಾಗುತ್ತಿತ್ತು.
ಇದನ್ನೂ ಓದಿ: Shivamogga: ಉಲ್ಟಾ ಹೊಡೆದ ಅನ್ಯಕೋಮಿನಿಂದ ಹಲ್ಲೆ ಆರೋಪ ಮಾಡಿದ್ದ ಆಟೋ ಚಾಲಕ
ನಮ್ಮ ಭರವಸೆ ಹುಸಿ ಆಗಲ್ಲ
ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನ ಒಪ್ಪಿಕೊಳ್ತಾರಾ ಪ್ರಶ್ನೆಗೆ ಉತ್ತರಿಸಿದ ಡಿಕೆ ಸುರೇಶ್, ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅವರ ಮನಸ್ಥಿತಿ ನನಗೆ ಗೊತ್ತಿಲ್ಲ. ಹೈಕಮಾಂಡ್ ನಮ್ಮ ಭರವಸೆಯನ್ನು ಹುಸಿ ಮಾಡಲ್ಲ ಎಂಬ ನಂಬಿಕೆ ಇದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ