DK Shivakumar: ಒಕ್ಕಲಿಗ ಎಂಬ ಹೆಮ್ಮೆ ಇದೆ ಆದರೆ, ನನ್ನ ಜಾತಿ ಕಾಂಗ್ರೆಸ್​; ಡಿಕೆ ಶಿವಕುಮಾರ್​

ನಾನು ಒಕ್ಕಲಿಗ ಜಾತಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೇಂದ ಮಾತ್ರಕ್ಕೆ ನಾನು ಜಾತಿ ರಾಜಕಾರಣ ಮಾಡುವುದಿಲ್ಲ

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
    ಬೆಂಗಳೂರು (ಅ.17): ನಾನು ಕಾಂಗ್ರೆಸ್ಸಿಗನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ ಹೊರತು ಜಾತಿ ನಾಯಕನಾಗಿ ಅಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್​ ತಿಳಿಸಿದ್ದಾರೆ. ಆರ್​ ಆರ್​ ನಗರ ಕ್ಷೇತ್ರದಲ್ಲಿ ಒಕ್ಕಲಿಗ ತಂತ್ರ ಹೂಡಲಾಗಿದೆ. ಇದಕ್ಕಾಗಿಯೇ ದಿ. ಐಎಎಸ್​ ಅಧಿಕಾರಿ ಡಿಕೆ ರವಿ ಅವರ ಹೆಂಡತಿ ಕುಸುಮಾ ಅವರನ್ನು ಕಣಕ್ಕೆ ಇಳಿಸಲಾಗಿದೆ. ಡಿಕೆ ಶಿವಕುಮಾರ್​ ಜಾತಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಜೆಡಿಎಸ್​ ನಾಯಕರು ಆರೋಪಿಸಿದ್ದರು. ಈ ಟೀಕೆಗಳಿಗೆಲ್ಲಾ ಉತ್ತರಿಸಿರುವ ಅವರು,  ನನ್ನ ಪೋಷಕರು ಒಕ್ಕಲಿಗರು ಆದ ಕಾರಣ ನಾನು ಒಕ್ಕಲಿಗನಾದೆ. ನಾನು ಒಕ್ಕಲಿಗ ಜಾತಿಯವನು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೇಂದ ಮಾತ್ರಕ್ಕೆ ನಾನು ಜಾತಿ ರಾಜಕಾರಣ ಮಾಡುವುದಿಲ್ಲ ಎಂದು  ತಿರುಗೇಟು ನೀಡಿದ್ದಾರೆ.

    ಕಾಂಗ್ರೆಸ್​ ಸದಸ್ಯ, ಕೆಪಿಸಿಸಿ ಅಧ್ಯಕ್ಷನಾಗಿರುವ ನನ್ನ ಜಾತಿ ಕಾಂಗ್ರೆಸ್​  ಮಾತ್ರ. ಹಾಗಿದ್ದಾಗ ಬೇರೆ ಜಾತಿ ಬಗ್ಗೆ ನಾನ್ಯಾಕೆ ಮಾತನಾಡಲಿ. ಜನರನ್ನು ಪಕ್ಷದತ್ತ ಸೆಳೆಯಲು ಯಾವುದೇ ರಾಜಕೀಯ ನಡೆಯುವುದಿಲ್ಲ. ಈ ರೀತಿಯ ಜಾತಿ ವಿಷಯಗಳ ಮುನ್ನಲೆಗೆ ಬರುವುದು ಚುನಾವಣೆ ವೇಳೆ ಮಾತ್ರ. ಚುನಾವಣೆ ಸಮಯದಲ್ಲಿ ನಮ್ಮ ವಿರೋಧ ಪಕ್ಷಗಳಾದ ಬಿಜೆಪಿ  ಮತ್ತು ಜೆಡಿಎಸ್​ ನಮ್ಮ ನಾಯಕರನ್ನು ಭೇಟಿಯಾಗುತ್ತಾರೆ. ಇದು ಸಾಮಾನ್ಯವಾಗಿ ನಡೆಯುವಂತಹದ್ದು. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

    ರಾಜಾರಾಜೇಶ್ವರಿ ನಗರದ ಜೆಡಿಎಸ್​ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತರು ಶುಕ್ರವಾರ ಕಾಂಗ್ರೆಸ್​ ಸೇರ್ಪಡನೆಯಾದರು. ಈ ಕುರಿತು ಟೀಕಿಸಿದ್ದ ಜೆಡಿಎಸ್​ ನಾಯಕ ಕುಮಾರಸ್ವಾಮಿ, ಆರ್​ಆರ್​ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಕಾರ್ಯಕರ್ತರ ಕೊರತೆ ಇದೆ. ಹೀಗಾಗಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಸೆಳೆದಿದ್ದಾರೆ. ಡಿಕೆ ಶಿವಕುಮಾರ್​ ಕ್ಷೇತ್ರದಲ್ಲಿ ಜಾತಿ ಹೆಸರು ಹೇಳಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಟೀಕಿಸಿದ್ದರು.

    ಆರ್​ಆರ್​ನಗರ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಿರ್ಣಯಕವಾಗಿರುವುದರಿಂದ ಎರಡು ಪಕ್ಷದ ನಾಯಕರು ಸಮುದಾಯದ ಜನರನ್ನು ಸೆಳೆಯುವಲ್ಲಿ ಹರಸಾಹಸ ನಡೆಸುತ್ತಿದ್ದಾರೆ. ಅಲ್ಲದೇ ಈ ಕ್ಷೇತ್ರದಲ್ಲಿನ ಗೆಲುವು ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್​ಗೆ ಅನಿವಾರ್ಯವಾಗಿದ್ದು, ಈ ಹಿನ್ನಲೆ ಈ ಕಣ ಪ್ರತಿಷ್ಠೆಯಾಗಿ ರೂಪುಗೊಂಡಿದೆ.

    ಡಿಕೆ ಶಿವಕುಮಾರ್​ ಹಾಗೂ ಕುಮಾರಸ್ವಾಮಿ ಇಬ್ಬರು ಒಕ್ಕಲಿಗ ನಾಯಕರೆಂದು ಗುರುತಿಸಿಕೊಂಡಿದ್ದಾರೆ.  ಒಕ್ಕಲಿಗರ ಸಮುದಾಯವೂ ರಾಜ್ಯದ ಪ್ರಮುಖ ನಿರ್ಣಯ ಮತಗಳಾಗಿದೆ. ಹಳೇ ಮೈಸೂರು ಭಾಗದಲ್ಲಿ ಅತಿಹೆಚ್ಚಿನ ಮತಗಳನ್ನು ಈ ಸಮುದಾಯ ಹೊಂದಿದೆ.

    ಇದನ್ನು ಓದಿ: ಆರ್​ಆರ್​ನಗರ ಉಪಚುನಾವಣೆ: ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ 200ಕ್ಕೂ ಹೆಚ್ಚು ಕಾರ್ಯಕರ್ತರು

    ಸಂಸದರಾಗಿರುವ ಡಿಕೆ ಸುರೇಶ್​ ಪ್ರತಿನಿಧಿಸುತ್ತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದೊಳಗೆ ಆರ್​ಆರ್​ನಗರವೂ ಇದೆ. . ಈ ಹಿನ್ನಲೆ ಈ ಚುನಾವಣೆ ಡಿಕೆ ಸಹೋದರರಿಗೆ ಸವಾಲ್​ ಆಗಿದೆ.

    ಇನ್ನು ನಿನ್ನೆ ಜೆಡಿಎಸ್​ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡ ಡಿಕೆ ಶಿವಕುಮಾರ್, ಅಲ್ಲದೇ, ಪಕ್ಷ ಸೇರ್ಪಡೆಗೊಂಡ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಬಾವುಟ ಹಿಡಿದುಕೊಂಡು ಬಂದು ಇಲ್ಲಿಟ್ಟು ಕಾಂಗ್ರೆಸ್ ಬಾವುಟ ಹಾಕಿಕೊಳ್ಳುತ್ತೇವೆ ಎಂದರು. ನಾನು ಬೇಡಪ್ಪ ಬೇಡ, ಈಗಾಗಲೇ ಅವರು ಟೆನ್ಶನ್ ನಿಂದ ಏನೇನೋ ಮಾತಾಡುತ್ತಿದ್ದಾರೆ ಎಂದೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರನ್ನು ಕುಟುಕಿದರು.
    Published by:Seema R
    First published: