ದೆಹಲಿ ಹೈಕೋರ್ಟ್​ನಲ್ಲಿ ಡಿಕೆಶಿ ಪತ್ನಿ, ತಾಯಿ ಅರ್ಜಿ ವಿಚಾರಣೆ; ಇಂದೇ ಆದೇಶ ಪ್ರಕಟ ಸಾಧ್ಯತೆ

ವಾದ ಮಂಡನೆಗೆ  ನ.​ 15ರವರೆಗೆ ಸಮಯವನ್ನು ನೀಡಿ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಅಮಿತ್ ಮಹಾಜನ್ ಕೇಳಿದ್ದರು. ಈಗಾಗಲೇ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಪರ ವಕೀಲರ ವಾದ ಮುಕ್ತಾಯವಾಗಿದೆ.

news18-kannada
Updated:November 15, 2019, 7:59 AM IST
ದೆಹಲಿ ಹೈಕೋರ್ಟ್​ನಲ್ಲಿ ಡಿಕೆಶಿ ಪತ್ನಿ, ತಾಯಿ ಅರ್ಜಿ ವಿಚಾರಣೆ; ಇಂದೇ ಆದೇಶ ಪ್ರಕಟ ಸಾಧ್ಯತೆ
ಡಿಕೆಶಿ ತಾಯಿ ಗೌರಮ್ಮ ಮತ್ತು ಹೆಂಡತಿ ಉಷಾ
  • Share this:
ನವದೆಹಲಿ (ನ. 15): ದಾಖಲೆರಹಿತ ಹಣ ಹೊಂದಿದ್ದ ಆರೋಪದಲ್ಲಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ತಾಯಿ, ಪತ್ನಿ, ಮಗಳನ್ನು ಕೂಡ ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಡಿ.ಕೆ. ಶಿವಕುಮಾರ್ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದಾರೆ. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಸಮನ್ಸ್​ ರದ್ದು ಮಾಡಿ, ಬೆಂಗಳೂರಿನಲ್ಲಿ ವಿಚಾರಣೆ ನಡೆಸಿ ಎಂದು ಡಿಕೆಶಿ​​ ತಾಯಿ ಹಾಗೂ ಪತ್ನಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಇಂದು ದೆಹಲಿ ಹೈಕೋರ್ಟ್​ನಲ್ಲಿ ನಡೆಯಲಿದ್ದು, ಇಂದೇ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ.

ವಾದ ಮಂಡನೆಗೆ  ನವೆಂಬರ್​ 15 ವರೆಗೆ ಸಮಯವನ್ನು ನೀಡಿ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಅಮಿತ್ ಮಹಾಜನ್ ಕೇಳಿದ್ದರು. ಈಗಾಗಲೇ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಪರ ವಕೀಲರ ವಾದ ಮುಕ್ತಾಯವಾಗಿದೆ. ಇಂದು ಇಡಿ ಪರ ವಕೀಲರು ವಾದ ಮಂಡಿಸಲಿದ್ದು, ಇಂದೇ ಹೈಕೋರ್ಟ್​ ಆದೇಶವೂ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

dkshivakumar family
ಡಿಕೆಶಿ ಹೆಂಡತಿ ಉಷಾ ಹಾಗೂ

ತಾಯಿ ಗೌರಮ್ಮ


ಇತ್ತೀಚೆಗೆ ಡಿಕೆಶಿ ತಾಯಿ ಮತ್ತು ಪತ್ನಿ ತಮಗೆ ಇಡಿ ಅಧಿಕಾರಿಗಳು ನೀಡಿರುವ ಸಮನ್ಸ್ ರದ್ದು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಡಿಕೆಶಿ ತಾಯಿ ಪರವಾಗಿ ವಾದ ಮಂಡಿಸಿದ ವಕೀಲ ದಯಾನ್ ಕೃಷ್ಣನ್, ಗೌರಮ್ಮನವರಿಗೆ 85 ವರ್ಷ. ಸಿಆರ್‌ಪಿಸಿ ಅನ್ವಯ 65 ವರ್ಷ ಮೇಲ್ಪಟ್ಟವರಿಗೆ ಪೊಲೀಸ್​​ ಠಾಣೆಗೆ ವಿಚಾರಣೆಗೆ ಬರಬೇಕೆಂದು ಸಮನ್ಸ್ ನೀಡುವಂತಿಲ್ಲ ಎಂದಿದ್ದರು. ಜತೆಗೆ ಅನಾರೋಗ್ಯದ ಕಾರಣ ಡಿಕೆಶಿ ತಾಯಿ ಮತ್ತು ಪತ್ನಿ ಇಬ್ಬರ ವಿಚಾರಣೆಯೂ ಬೆಂಗಳೂರಿನಲ್ಲೇ ನಡೆಸಬೇಕೆಂದು ಮನವಿ ಮಾಡಿದ್ದರು.

ಸಿದ್ದರಾಮಯ್ಯ ನನ್ನ ಶತ್ರುವಲ್ಲ, ಸರ್ಕಾರ ಬೀಳಿಸಿದ 15 ಅನರ್ಹರ ಸೋಲಿಗೆ ರಣತಂತ್ರ ಸಿದ್ಧ; ಎಚ್​.ಡಿ. ಕುಮಾರಸ್ವಾಮಿ

ಕಳೆದ ಅ. 21ರಂದು ಡಿಕೆಶಿ ತಾಯಿ ಮತ್ತು ಪತ್ನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ನೇತೃತ್ವದ ಪೀಠ, ಇಬ್ಬರಿಗೂ ಹೊಸ ಸಮನ್ಸ್​ ನೀಡುವಂತೆ ಸೂಚಿಸಿತು. ಈ ವೇಳೆ ಇಡಿ ಪರವಾಗಿ ಹಾಜರಿದ್ದ ವಕೀಲರು ಕಾಂಗ್ರೆಸ್​​ ಟ್ರಬಲ್​​ ಶೂಟರ್​​ ಡಿ.ಕೆ. ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೆ ಹೊಸ ಸಮನ್ಸ್ ನೀಡಲಾಗುತ್ತದೆ ಎಂದು ತಿಳಿಸಿದ್ದರು.ಈ ಹಿಂದೆ ಅ.16ರಂದು ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್, ಡಿಕೆಶಿ ತಾಯಿ ಹಾಗೂ ಪತ್ನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಉಷಾ ಅವರು ವಿಚಾರಣೆಗೆ ಹಾಜರಾಗಬೇಕಿಲ್ಲ. ಅಲ್ಲದೇ ಗೌರಮ್ಮಗೆ ನೀಡಿದ್ದ ಸಮನ್ಸ್ ಕೂಡ ಹಿಂಪಡೆಯಲಾಗಿದೆ. ಹೊಸದಾಗಿ ಸಮನ್ಸ್ ನೀಡುತ್ತೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದರು.

ಏನಿದು ಪ್ರಕರಣ?: 
ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಇಡಿ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ 2017ರ ಆಗಸ್ಟ್​ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

(ವರದಿ: ಧರಣೀಶ್ ಬೂಕನಕೆರೆ)

First published:November 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ