ಸೋಮವಾರ ರಾತ್ರಿ ಕಾಂಗ್ರೆಸ್ (Congress) ವಿಧಾನಪರಿಷತ್ ಚುನಾವಣೆ (Vidhanaparishat Election) ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Opposition Leader Siddaramaiaha) ಸೂಚಿಸಿದ ಹೆಸರುಗಳಿಗೆ ಕಾಂಗ್ರೆಸ್ ಹೈಕಮಾಂಡ್ (Congress high command) ಕೊಕ್ ನೀಡಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಚ್ಚರಿ ಅಭ್ಯರ್ಥಿಗಳ ಘೋಷಣೆ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಇದ್ದಾರೆ ಎಂದು ಹೇಳಲಾಗುತ್ತಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಡಿ.ಕೆ.ಶಿವಕುಮಾರ್ ಗೆದ್ದು ಬೀಗಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಹಾಗಾದ್ರೆ ಸಿದ್ದರಾಮಯ್ಯ ಅವರು ಶಿಫಾರಸ್ಸು ಮಾಡಿದ್ದ ಹೆಸರುಗಳನ್ನು ಹೈಕಮಾಂಡ್ ಕೈ ಬಿಟ್ಟಿದ್ದು ಹೇಗೆ? ಹೈಕಮಾಂಡ್ ಮುಂದೆ ಡಿಕೆಶಿ ಇರಿಸಿದ ಕಾರಣ ಏನು ಎಂಬುದರ ಇನ್ ಸೈಡ್ ಸ್ಟೋರಿ ಇಲ್ಲಿದೆ.
ಎರಡು ಸ್ಥಾನಗಳಿಗೆ ಕಾಂಗ್ರೆಸ್ ಹೈಕಮಾಂಡ್ ಯಾದವ ಸಮುದಾಯದ ನಾಗರಾಜ್ ಯಾದವ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಜಬ್ಬಾರ್ ಗೆ ಮಣೆ ಹಾಕಿದೆ. ಆದ್ರೆ ಸಿದ್ದರಾಮಯ್ಯ ಅವರು ಎಂ.ಆರ್.ಸೀತಾರಂ ಹೆಸರು ಶಿಫಾರಸ್ಸು ಮಾಡಿದ್ದರು. ಇತ್ತ ಅಲ್ಪಸಂಖ್ಯಾತರ ಪೈಕಿ ಆಪ್ತ ಐವಾನ್ ಡಿಸೋಜಾ ಅವರ ಹೆಸರು ಸೂಚಿಸಿದ್ದರು. ಆದ್ರೆ ಹೈಕಮಾಂಡ್ ಮಾತ್ರ ಡಿ.ಕೆ.ಶಿವಕುಮಾರ್ ಸೂಚಿಸಿದ ಹೆಸರುಗಳಿಗೆ ಮಣೆ ಹಾಕಿದಂತೆ ಕಾಣಿಸುತ್ತಿದೆ.
ಮಾಜಿ ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ತಪ್ಪಿಸಿದ್ದು ಸಿದ್ದರಾಮಯ್ಯ ಅವರೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆ ಇದೀಗ ಡಿಕೆಶಿ ತಮ್ಮದೇ ತಂತ್ರ ರೂಪಿಸಿ, ತಾವು ಸೂಚಿಸಿದವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಡಿಕೆಶಿಯಿಂದ ಇಬ್ಬರು ಹೆಸರು ಶಿಫಾರಸ್ಸು
ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಒಬಿಸಿ ಮತ್ತು ಅಲ್ಪಸಂಖ್ಯಾತರೊಬ್ಬರಿಗೆ ಟಿಕೆಟ್ ಕೊಡಲು ನಿರ್ಧರಿಸಿತ್ತು. ಒಬಿಸಿ ಯಿಂದ ಮಾಜಿ ಸಚಿವ ಎಂ ಆರ್ ಸೀತಾರಂ (ಬಲಿಜ ಸಮುದಾಯ) ಹೆಸರನ್ನು ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಇತ್ತ ಡಿಕೆ ಶಿವಕುಮಾರ್ ಒಬಿಸಿ ಕೋಟಾದಡಿ ಇಬ್ಬರ ಹೆಸರು ಶಿಫಾರಸು ಮಾಡಿದ್ದರು. ಮಾಜಿ ಮೇಯರ್ ಪದ್ಮಾವತಿ- ಬಲಿಜ ಸಮುದಾಯ ಅಥವಾ ನಾಗರಾಜ್ ಯಾದವ್ - ಯಾದವ ಸಮುದಾಯ ಅವರಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದರು.
ಎಂ.ಆರ್.ಸೀತಾರಂಗೆ ಟಿಕೆಟ್ ತಪ್ಪಿದ್ದೇಕೆ?
2018ರ ವಿಧಾನಸಭಾ ಚುನಾವಣೆ ವೇಳೆ ಮಲ್ಲೇಶ್ವರಂ ಕ್ಷೇತ್ರದಿಂದ ಎಂ.ಆರ್.ಸೀತಾರಾಂ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದ್ರೆ ಅಶ್ವಥ್ ನಾರಾಯಣ್ ಎದುರು ಸೋಲುವ ಭಯದಿಂದ ಸೀತಾರಂ ಟಿಕೆಟ್ ನಿರಾಕರಿಸಿದ್ದರು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಮುಜುಗರಕ್ಕೆ ಒಳಗಾಗಿತ್ತು. ಇತ್ತ ಸೀತಾರಂ ಮೇಲೆ ಕಾಂಗ್ರೆಸ್ ವರಿಷ್ಠ ಕೆ.ಸಿ.ವೇಣುಗೋಪಾಲ್ ಸಹ ಮುನಿಸಿಕೊಂಡಿದ್ದರು.
ಹೈಕಮಾಂಡ್ ಮನವೊಲಿಸಿದ್ದು ಹೇಗೆ ಡಿಕೆಶಿ?
ಇದೇ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿರಿಸಿದ ಡಿ.ಕೆ.ಶಿವಕುಮಾರ್, ಬಲಿಜ ಸಮುದಾಯದ ಪದ್ಮಾತಿಯವರಿಗಾದರೂ ಕೊಡಿ ಅಥವಾ ಯಾದವ ಸಮುದಾಯದ ನಾಗರಾಜ್ ಗಾದರೂ ಕೊಡಿ. ಯಾದವ ಸಮುದಾಯ ರಾಜ್ಯದಲ್ಲಿ 50 ಲಕ್ಷದಷ್ಟು ಜನಸಂಖ್ಯೆ ಇದೆ. ನಾಗರಾಜ್ ಯಾದವ್ ನಿಷ್ಟಾವಂತ ಮತ್ತು ಕಷ್ಟದ ಕಾಲದಲ್ಲೂ ಪಕ್ಷದ ಪರ ವಕಾಲತ್ತು ವಹಿಸುತ್ತಾರೆ. ಸೀತಾರಾಂ ಅವರಿಂದ ಯಾವುದೇ ಪಕ್ಷ ಸಂಘಟನೆ ಸಹಾಯ ಇಲ್ಲ ಎಂದು ಹೈಕಮಾಂಡ್ ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Mekedatu: ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿ 29 ನಾಯಕರು ನಾಳೆಯೇ ಹಾಜರಾಗಿ; ಕೋರ್ಟ್ ಸಮನ್ಸ್
ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ತಪ್ಪಿಸಿದ್ದಕ್ಕೆ ನಾಗರಾಜ್ ಯಾದವ್ ಗೆ ಟಿಕೆಟ್ ಕೊಡಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ