news18-kannada Updated:August 27, 2020, 7:40 PM IST
ಆಸ್ಪತ್ರೆಯಿಂದಲೇ ಪಕ್ಷದ ಶಾಸಕರೊಂದಿಗೆ ವಿಡಿಯೋ ಸಂವಾದ ನಡೆಸಿದ ಡಿ.ಕೆ.ಶಿವಕುಮಾರ್.
ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಕಾಂಗ್ರೆಸ್ ಶಾಸಕರು ಮತ್ತು ಕಾರ್ಯಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು. ಇದೇ ತಿಂಗಳು 24ರಂದು ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಡಿಕೆಶಿ ಇಂದು ಅಸ್ಪತ್ರೆಯಿಂದ ಶಾಸಕರ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ. ಎರಡು ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದ್ದು, ಲವಲವಿಕೆಯಿಂದ ಡಿಕೆಶಿ ಪಕ್ಷದ ವಿದ್ಯಮಾನಗಳ ಕುರಿತು ಮಾಹಿತಿ ಪಡೆದರು.
ಕಳೆದ ಒಂದೆರಡು ದಿನಗಳಲ್ಲಿ ರಾಜ್ಯದಲ್ಲಿ ನಡೆದಿರುವ ಮಹತ್ವದ ಬೆಳವಣಿಗೆಗಳು, ಕಾಂಗ್ರೆಸ್ ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ಯಾವ ಹಂತದಲ್ಲಿದೆ, ಕಾಂಗ್ರೆಸ್ನ ಮಹಾತ್ವಕಾಂಕ್ಷಿ ಕಾರ್ಯಕ್ರಮವಾದ ಆರೋಗ್ಯ ಹಸ್ತದ ಪ್ರಗತಿ ಹೇಗಿದೆ? ತಮ್ಮ ಅನುಪಸ್ಥಿತಿಯಲ್ಲಿ ಪಕ್ಷದ ಕಚೇರಿ ಚಟುವಟಿಕೆಯನ್ನು ಹೇಗೆ ನಡೆಸಿಕೊಂಡು ಹೋಗಲಾಗುತ್ತಿದೆ, ತಾವು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಹೊರಬರುತ್ತಿದ್ದಂತೆ ಕೈಗೊಳ್ಳಬಹುದಾದ ಕಾರ್ಯಗಳು ಯಾವುದು, ನೆರೆ ಪರಿಶೀಲನೆ ಸಂಬಂಧ ತಾವು ರಚಿಸಿರುವ ವಿವಿಧ ತಂಡಗಳ ಅಂತಿಮ ರೂಪ ಕೊಡುವ ಕುರಿತು ಕೂಡ ಇದೇ ಸಂದರ್ಭ ಚರ್ಚಿಸಿದ್ದಾರೆ.
ಇದನ್ನು ಓದಿ: ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿ ಪಿಂಚಣಿ ಯೋಜನೆಗೆ ಹಸಿರು ನಿಶಾನೆ ತೋರಿದ ಸಚಿವ ಕೆ.ಸುಧಾಕರ್
ತಾವು ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ನೆರೆ ಸಮಸ್ಯೆ ಸದ್ಯ ಹೇಗಿದೆ? ರಾಜ್ಯ ಸರ್ಕಾರ ಈ ಭಾಗದಲ್ಲಿ ಯಾವುದಾದರೂ ಕ್ರಮ ಕೈಗೊಂಡಿದೆಯೇ? ಪ್ರವಾಸ ಮರುಹೊಂದಾಣಿಕೆ ಮಾಡುವುದಾದರೆ ಯಾವ ದಿನಾಂಕಕ್ಕೆ ತೆರಳುವುದು ಸೂಕ್ತ. ಪಕ್ಷ ಸಂಘಟನೆ ವಿಚಾರವಾಗಿ ತಾವು ನೀಡಿರುವ ಒಂದಿಷ್ಟು ಅಂಶಗಳ ಪಾಲನೆ ಆಗುತ್ತಿದೆಯೇ ಎಂಬ ವಿಚಾರಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ಮಾಹಿತಿ ಪಡೆದಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಮತ್ತಿತರ ನಾಯಕರು ಕೋವಿಡ್ ಪಾಸಿಟಿವ್ ಬಂದ ಸಂದರ್ಭದಲ್ಲಿ ಆಸ್ಪತ್ರೆಯಿಂದಲೇ ಆನ್ಲೈನ್ ಸಂವಾದದ ಮೂಲಕ ಕಾರ್ಯನಿರ್ವಹಿಸಿದ್ದರು. ಸಚಿವ ಡಾ ಸುಧಾಕರ್ ತಮ್ಮ ಕುಟುಂಬದವರಿಗೆ ಕೊರೋನಾ ಬಂದ ಸಂದರ್ಭದಲ್ಲೂ ಮನೆಯಲ್ಲೇ ಕ್ವಾರಂಟೈನ್ ಆಗಿ ಆನ್ ಲೈನ್ ಮೂಲಕವೇ ಹಲವು ಸಭೆ ನಡೆಸಿ ಕಾರ್ಯನಿರ್ವಹಿಸಿದ್ದರು. ಇದೀಗ ಇಂಥದ್ದೆ ಪ್ರಯತ್ನವನ್ನು ಡಿಕೆ ಶಿವಕುಮಾರ್ ಕೂಡ ಮಾಡಿದ್ದು, ಆಸ್ಪತ್ರೆಯಲ್ಲಿ ಇದ್ದುಕೊಂಡು ಪಕ್ಷದ ಚಟುವಟಿಕೆಯ ಮೇಲೆ ನಿಗಾ ವಹಿಸುತ್ತಿದ್ದಾರೆ.
Published by:
HR Ramesh
First published:
August 27, 2020, 7:40 PM IST