DK Shivakumar: ನನ್ನನ್ನು, ಸಿದ್ದರಾಮಯ್ಯರನ್ನು ಬಿಡ್ತಾರೋ ಇಲ್ವೋ‌ ಗೊತ್ತಿಲ್ಲ; ಆಪರೇಷನ್ ಬಗ್ಗೆ ಬಿಜೆಪಿ, ಜೆಡಿಎಸ್ ಕಾಲೆಳೆದ ಡಿಕೆಶಿ!

ಯಾರು ಬೇಕಾದರೂ ಕಾರ್ಯಕರ್ತರಾಗಿ ಬರಲಿ. ನಾಯಕರಾಗಿ ಬೆಳೆದುಕೊಳ್ಳಲಿ. ಪಕ್ಷ ಬಿಟ್ಟು ಹೋಗಿದ್ದವರೂ ಮತ್ತೆ ಅರ್ಜಿ ಹಾಕಿಕೊಳ್ಳಲಿ ಎಂದರು. ಮುಂದಿನ ಸಿಎಂ ನಾನೇ ಎಂದ ಸಿದ್ದರಾಮಯ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ನನಗೆ ಇದರ ಬಗ್ಗೆ ಗೊತ್ತಿಲ್ಲ. ತಿಳಿದುಕೊಂಡು ಬಳಿಕ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

  • Share this:
    ನವದೆಹಲಿ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ (Karnataka By Election) ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ಎಐಸಿಸಿಯಿಂದ ಸಿಂಧಗಿ (Sindagi) ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಿದೆ. ಇನ್ನೊಂದು ಕ್ಷೇತ್ರದ ಅಭ್ಯರ್ಥಿಯನ್ನು ಎಐಸಿಸಿಗೆ ಶಿಫಾರಸು ಮಾಡುತ್ತೇವೆ. ಕಳೆದ ಬಾರಿ ಅಭ್ಯರ್ಥಿ ಆಗಿದ್ದವರು ಮತ್ತೆ ಟಿಕೆಟ್ ಕೇಳುವುದು ಸಹಜ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ಅವರು ಹೇಳಿದರು.

    ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಗ್ಗೆ ಚರ್ಚೆ ಮಾಡಲೆಂದು ದೆಹಲಿಗೆ ಬಂದಿದ್ದೇನೆ. ದಸರಾ ಒಳಗೆ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಆಗುತ್ತೆ. ಈಗ ರಣದೀಪ್ ಸುರ್ಜೆವಾಲಾ ಅವರನ್ನು ಮಾತ್ರ ಭೇಟಿಯಾಗುತ್ತಿದ್ದೇನೆ. ಪಟ್ಟಿಗೆ ಯಾರಿಂದಲೂ ಅಪಸ್ವರ ಇಲ್ಲ. ಯಾರಿಂದಲೂ ತೊಡಕಾಗುತ್ತಿಲ್ಲ. ಎಲ್ಲಾ ಆಯಾಮಾಗಳಿಂದ ಚರ್ಚಿಸಿ ತೀರ್ಮಾನಿಸಲಷ್ಟೇ ತಡವಾಗುತ್ತಿದೆ ಎಂದು ಪದಾಧಿಕಾರಿಗಳ ಆಯ್ಕೆ ವಿಷಯವಾಗಿ ಹೇಳಿದರು.

    ನಳೀನ್ ಕುಮಾರ್ ಕಟೀಲ್ 20 ಜನ ಬಿಜೆಪಿಗೆ ಬರ್ತಾರೆ ಅಂತಾ ಹೇಳಿದರು. ಆದರೆ ಅವರು ಏಕೆ ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. 20, 40, 60 ಜನ ಕೊಂಡೊಯ್ಯಲಿ. ಬೇರೆಯವರ ಆಪರೇಷನ್ ಮುಗಿಯಲಿ. ಸದ್ಯಕ್ಕೆ ಆಪರೇಷನ್ ಹಸ್ತ ಇಲ್ಲ. ಕಾಂಗ್ರೆಸಿನಿಂದ ಸೆಳೆಯಲು ಯಾರು? ಎಷ್ಟು ಮಂದಿಗೆ ಗಾಳ ಹಾಕಿದ್ದಾರೋ ಗೊತ್ತಿಲ್ಲ. ಜೆಡಿಎಸ್ ನವರೂ ಪ್ರಯತ್ನ ಮಾಡುತ್ತಿದ್ದಾರಂತೆ. ನನ್ನನ್ನು, ಸಿದ್ದರಾಮಯ್ಯ ಅವರನ್ನು ಬಿಡ್ತಾರೋ ಇಲ್ವೋ‌ ಗೊತ್ತಿಲ್ಲ ಎಂದು  ಬಿಜೆಪಿ, ಜೆಡಿಎಸ್ ನಾಯಕರ ಬಗ್ಗೆ ಡಿಕೆಶಿ ವ್ಯಂಗ್ಯ ಮಾಡಿದರು. ಬಿಜೆಪಿ 150, ಜೆಡಿಎಸ್ 123 ಅದರೆ ನಮ್ಮದು ಮಿಷನ್ 224 ಎಂದು ಇದೇ ವೇಳೆ ಹೇಳಿದರು.

    ಯಾರು ಬೇಕಾದರೂ ಕಾರ್ಯಕರ್ತರಾಗಿ ಬರಲಿ. ನಾಯಕರಾಗಿ ಬೆಳೆದುಕೊಳ್ಳಲಿ. ಪಕ್ಷಬಿಟ್ಟು ಹೋಗಿದ್ದವರೂ ಮತ್ತೆ ಅರ್ಜಿ ಹಾಕಿಕೊಳ್ಳಲಿ ಎಂದರು. ಮುಂದಿನ ಸಿಎಂ ನಾನೇ ಎಂದ ಸಿದ್ದರಾಮಯ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು, ನನಗೆ ಇದರ ಬಗ್ಗೆ ಗೊತ್ತಿಲ್ಲ. ತಿಳಿದುಕೊಂಡು ಬಳಿಕ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.

    ಕಾಂಗ್ರೆಸ್ ಪಕ್ಷ ಒಂದು ಕುಟುಂಬ ಇದ್ದಂತೆ. ನಮ್ಮ ಕುಟುಂಬದಲ್ಲಿ ಯಾವ ಕಲಹವೂ ಇಲ್ಲ. ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿಗೆ ಪ್ರಯತ್ನ ಪಟ್ಟಿದ್ದೆ. ಆದರೆ, ಸಾಧ್ಯವಾಗಲಿಲ್ಲ ಎಂದರು.

    ಇದನ್ನು ಓದಿ: Sindagi By ELection: ಸಿಂದಗಿ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ; ಪಕ್ಷದ ನಾಯಕರ ವಿರುದ್ಧ ಸಂಸದ ಜಿಗಜಿಣಗಿ ಬೇಸರ!

    ರಾಜ್ಯದ ಎರಡು ವಿಧಾನಸಭೆಗಳಿಗೆ ಉಪಚುನಾವಣೆ ಘೋಷಣೆ:

    ಹಾನಗಲ್ (Hanagal) ಹಾಗೂ ಸಿಂದಗಿ ಕ್ಷೇತ್ರಗಳ (Sindagi) ಉಪ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅಕ್ಟೋಬರ್ 30ರಂದು ಈ ಎರಡು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನದಿಂದಾಗಿ ಹಾವೇರಿಯ ಹಾನಗಲ್ ಕ್ಷೇತ್ರ ತೆರವಾಗಿತ್ತು. ಇತ್ತ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (M C Managooli) ನಿಧನದಿಂದಾಗಿ ವಿಜಯಪುರದ ಸಿಂದಗಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು.

    ಇನ್ನು ವಿಜಯಪುರ ಜಿಲ್ಲೆಯ ಸಿಂದಗಿ ಬೈಎಲೆಕ್ಷನ್​ನಲ್ಲಿ ಕಾಂಗ್ರೆಸ್​, ಶಾಸಕ ಎಂ. ಸಿ. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರನ್ನು 'ಕೈ' ಅಭ್ಯರ್ಥಿಯಾಗಿ ಈ ಹಿಂದೆಯೇ ಘೋಷಣೆ ಮಾಡಿತ್ತು. ಸಿಂದಗಿ ಜೆಡಿಎಸ್ ಶಾಸಕರಾಗಿದ್ದ ಎಂಸಿ ಮನಗೂಳಿ ನಿಧನದ ಬಳಿಕ, ಅವರ ಪುತ್ರ ಅಶೋಕ್ ಮನಗೂಳಿ ಅವರಿಗೆ ಜೆಡಿಎಸ್ ಟಿಕೆಟ್ ಫಿಕ್ಸ್ ಎಂದು ಹೇಳಲಾಗಿತ್ತು. ಆದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದರಿಂದ ಬೇಸರಗೊಂಡ ಅಶೋಕ ಮನಗೂಳಿ ಮಾರ್ಚ್ 9ರಂದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದರು. ಅಶೋಕ ಮನಗೂಳಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು 'ದಳಪತಿ'ಗಳ ಕಣ್ಣು ಕೆಂಪು ಮಾಡಿದಂತಾಗಿದೆ. ಹೀಗಾಗಿ ಯಾವ ಕಾರ್ಯತಂತ್ರಕ್ಕೆ ಜೆಡಿಎಸ್ ಮೊರೆ ಹೋಗುತ್ತೆ ಅಂತ ಕಾದುನೋಡಬೇಕಿದೆ.
    Published by:HR Ramesh
    First published: