HOME » NEWS » State » DK SHIVAKUMAR SWEARING IN CEREMONY EMOTIONAL SPEECH ON OATH TAKING CEREMONY AS KPCC PRESIDENT SCT

DK Shivakumar: ಬಿಜೆಪಿಯವರು ಎಷ್ಟು ಕೇಸಾದರೂ ಹಾಕಲಿ, ನಾನು ಬಗ್ಗೋ ಮಗನೇ ಅಲ್ಲ; ಡಿ.ಕೆ. ಶಿವಕುಮಾರ್ ಸವಾಲು

DK Shivakumar Swearing In Ceremony: ನನ್ನನ್ನು ಕನಕಪುರ ಬಂಡೆ ಅಂತಾರೆ. ಈ ಬಂಡೆಯನ್ನು ಸುಮ್ಮನೆ ಎಂದು ತಿಳಿದುಕೊಳ್ಳಬೇಡಿ. ನಾನು ಮೂರ್ತಿಯಾಗುವುದು ಬೇಡ, ವಿಧಾನಸೌಧದ ಮೆಟ್ಟಿಲಿಗೆ ಕಲ್ಲಾಗಬೇಕು. ಆ ಮೆಟ್ಟಿಲನ್ನೇರಿ ನೀವು ವಿಧಾನಸೌಧ ಪ್ರವೇಶಿಸಬೇಕು ಎಂದು ಡಿ.ಕೆ. ಶಿವಕುಮಾರ್ ಭಾವುಕರಾಗಿದ್ದಾರೆ.

news18-kannada
Updated:July 2, 2020, 1:38 PM IST
DK Shivakumar: ಬಿಜೆಪಿಯವರು ಎಷ್ಟು ಕೇಸಾದರೂ ಹಾಕಲಿ, ನಾನು ಬಗ್ಗೋ ಮಗನೇ ಅಲ್ಲ; ಡಿ.ಕೆ. ಶಿವಕುಮಾರ್ ಸವಾಲು
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು (ಜು. 2): ಕೆಪಿಸಿಸಿ ಅಧ್ಯಕ್ಷರಾಗಿ 4 ತಿಂಗಳ ಹಿಂದೆ ನೇಮಕಗೊಂಡಿದ್ದ ಡಿ.ಕೆ. ಶಿವಕುಮಾರ್ ಇಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಭಾವುಕರಾಗಿ ಮಾತನಾಡಿದ ಅವರು, ಬಿಜೆಪಿಯವರು ನನ್ನನ್ನು ತಿಹಾರ್ ಜೈಲಿಗೆ ಕಳಿಸಿದ್ದರು. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜೈಲಿಗೆ ಕಳುಹಿಸಿದ್ದರು. ಅವರು ಎಷ್ಟೇ ಕೇಸ್ ಹಾಕಲಿ, ಜೈಲಿಗೆ ಕಳಿಸಲಿ ನಾನು ಅದಕ್ಕೆ ಬಗ್ಗುವುದಿಲ್ಲ. ಇಡಿ ಅದು ಇದು ಎಲ್ಲಾ ಆಯ್ತು, ಸಿಬಿಐಗೂ ಪರ್ಮಿಷನ್ ಕೊಟ್ಟಿದ್ದಾರೆ. ನಾನು ಯಾವುದಕ್ಕೂ ಬಗ್ಗೋ ಮಗನೇ ಅಲ್ಲ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ. 

ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಲ್ಲಿ ನಿಂತಿರಬಹುದು. ಆದರೆ, ನಾನು ಕೂಡ ಕಾಂಗ್ರೆಸ್ ಕಾರ್ಯಕರ್ತ. ನಾನು ಯಾರಿಗೂ ದ್ರೋಹ ಮಾಡಿಲ್ಲ. ಹಲವು ಹಂತಗಳಲ್ಲಿ ಕೆಲಸ ಮಾಡಿದ್ದೇನೆ. ಯಾವುದೇ ಸಂದರ್ಭದಲ್ಲಿಯೂ ನಾನು ಯಾರಿಗೂ ದ್ರೋಹ ಮಾಡಿಲ್ಲ. ನಾನು ಇದುವರೆಗೆ ಎದುರಿಸಿದ ಸಮಸ್ಯೆಗಳೆಲ್ಲವೂ ಸ್ವಂತಕ್ಕಲ್ಲ. ನನಗೆ ಅಧಿಕಾರ ಸಿಗದಿದ್ದಾಗಲೂ ಎಂದೂ ಚಕಾರವೆತ್ತದೆ ಕೆಲಸ ಮಾಡಿದ್ದೇನೆ. ಇಂದು ಗಾಂಧಿ ಕುಟುಂಬ ನನಗೆ ನೀಡಿರುವ ಈ ಅವಕಾಶವನ್ನು ನನ್ನ ಕೊನೆಯ ಉಸಿರಿನವರೆಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಬಿಜೆಪಿಯವರು ನನ್ನನ್ನು ತಿಹಾರ್ ಜೈಲಿಗೆ ಕಳಿಸಿದ್ದರು. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜೈಲಿಗೆ ಕಳುಹಿಸಿದ್ದರು. ಆಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜೈಲಿಗೆ ಬಂದು ಒಂದು ಗಂಟೆ ನನಗೆ ಧೈರ್ಯ ತುಂಬಿದ್ದರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಎಲ್ಲರೂ ಬಂದು ಧೈರ್ಯ ತುಂಬಿದ್ದರು. ಇನ್ನೇನು ಎಲ್ಲರೂ ಡಿ.ಕೆ. ಶಿವಕುಮಾರ್​ನ ರಾಜಕೀಯ ಮುಗಿದೇ ಹೋಯ್ತು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಇವರೆಲ್ಲರೂ ನೀಡಿದ ಧೈರ್ಯ ನನ್ನನ್ನು ಮತ್ತೆ ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ಡಿ.ಕೆ. ಶಿವಕುಮಾರ್ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

ನನ್ನನ್ನು ಕನಕಪುರ ಬಂಡೆ ಅಂತಾರೆ. ನಾನು ಬಂಡೆ ಅಲ್ಲ, ನಾನು ವಿಧಾನಸೌಧದ ಮುಂದಿನ ‌ಚಪ್ಪಡಿ ಆಗಲು ಬಯಸುವವನು. ನೀವೆಲ್ಲರೂ ಅದನ್ನ ತುಳಿಕೊಂಡು ವಿಧಾನಸೌಧಕ್ಕೆ ಹೋಗುವಂತಾಗಬೇಕು. ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನನಗೆ ಗುಂಪುಗಾರಿಕೆ ಬಗ್ಗೆ ನಂಬಿಕೆಯಿಲ್ಲ. ಯಾವ ಧರ್ಮ ಜಾತಿ ಎಂಬ ನಂಬಿಕೆಯಿಲ್ಲ. ನನಗೆ ಗೊತ್ತಿರುವುದು ಕೇವಲ ಕಾಂಗ್ರೆಸ್ ಮಾತ್ರ ನನ್ನ ಮೇಲೆ. ಇನ್ನೂ ಬೇರೆ ಬೇರೆ ಕಾಟ ಇರಬಹುದು. ಆದರೆ ಈ ಬಂಡೆಯನ್ನು ಸುಮ್ಮನೆ ಎಂದು ತಿಳಿದುಕೊಳ್ಳಬೇಡಿ. ನಾನು ಮೂರ್ತಿಯಾಗುವುದು ಬೇಡ, ವಿಧಾನಸೌಧದ ಮೆಟ್ಟಿಲಿಗೆ ಕಲ್ಲಾಗಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Dk shivakumar Swearing-in-Ceremony: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮ

ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಬೇಕು. 5 ಬೆರಳು ಸೇರಿದರೆ ಮಾತ್ರ ಹಸ್ತವಾಗುತ್ತದೆ. ಆಗ ಮಾತ್ರ ಹಸ್ತಕ್ಕೆ ಬೆಲೆ ಎಂಬುದನ್ನು ನಾವು ಮರೆಯಬಾರದು. ವಿದ್ಯಾರ್ಥಿ ಕಾಲದಿಂದಲೂ ನನಗೆ ಕಾಂಗ್ರೆಸ್ ನಂಟು ಇದೆ. ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟವನು. ಸಾಮಾನ್ಯ ಕಾರ್ಯಕರ್ತನಾಗಿಯೇ ಮುನ್ನಡೆಯುತ್ತೇನೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತೇನೆ. ಅವಕಾಶಗಳನ್ನ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಸೃಷ್ಟಿ ಮಾಡಿಕೊಂಡು ನಾವೇ ಗುರಿ ಸಾಧಿಸಬೇಕು. ಇದು ನನಗೆ ದೇವರಾಜ ಅರಸು, ಇಂದಿರಾ ಗಾಂಧಿ ಹೇಳಿಕೊಟ್ಟ ಪಾಠ. ಅದನ್ನ ನಾನು ತಪ್ಪದೆ ಪಾಲಿಸುತ್ತೇನೆ ಎಂದು ಡಿಕೆಶಿ ಹೇಳಿದರು.

ಇಲ್ಲಿರುವವರ ಕೈಕೆಳಗೆ ನಾನು ದುಡಿದಿದ್ದೇನೆ. ಅವಕಾಶಗಳು ಯಾವಾಗ ಸಿಕ್ಕಲ್ಲ, ಅವಕಾಶಗಳನ್ನು ನೀನೇ ಸೃಷ್ಟಿ ಮಾಡಿಕೊಂಡು ಹೋರಾಟ ಮಾಡ್ಬೇಕು ಎಂದು ಇಂದಿರಾಗಾಂಧಿ ಕರೆ ನೀಡಿದ್ದರು. ಈ ಪವಿತ್ರವಾದ ಸ್ಥಾ‌ನಕ್ಕೆ ನನ್ನ ಮೇಲೆ ಅಪಾರ ನಂಬಿಕೆ ಇಟ್ಟು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ ಎಲ್ಲಾ ನಾಯಕರ ಜೊತೆ ಚರ್ಚಿಸಿ ಸ್ಥಾನಮಾನ ನೀಡಿದ್ದಾರೆ. ಈ ಹುದ್ದೆಯ ಮೇಲೆ ಆಸೆ ಇಲ್ಲ. ಇದನ್ನು ಜವಾಬ್ದಾರಿ ಎಂದುಕೊಂಡು ನಿಭಾಯಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಇದನ್ನೂ ಓದಿ: ‘ಡಿಕೆಶಿ ಕಾಂಗ್ರೆಸ್​​ ಅಧ್ಯಕ್ಷರಾದರೇ ಬಿಜೆಪಿಗೆ ಹೆಚ್ಚು ಲಾಭ‘ - ಸಚಿವ ಡಾ. ಕೆ ಸುಧಾಕರ್​​

ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿ 4 ತಿಂಗಳಾಗಿದೆ. ಆದರೆ, ಅದೇ ವೇಳೆ ಲಾಕ್​ಡೌನ್ ಘೋಷಣೆಯಾದ ಕಾರಣದಿಂದ ಅವರ ಅಧಿಕಾರ ಸ್ವೀಕಾರ ಸಮಾರಂಭ ನಡೆಸಲು ಅನುಮತಿ ಸಿಕ್ಕಿರಲಿಲ್ಲ. ಆದರೆ, ಕೊನೆಗೂ ಡಿ.ಕೆ. ಶಿವಕುಮಾರ್ ಪದಗ್ರಹಣಕ್ಕೆ ಸಮಯ ಕೂಡಿಬಂದಿದ್ದು, ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.  ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡುವ ಸಮಾರಂಭವನ್ನು ರಾಜ್ಯದ 7,800 ಗ್ರಾಮ ಪಂಚಾಯ್ತಿಗಳಲ್ಲಿ ನೇರಪ್ರಸಾರ ಮಾಡಲಾಗಿದೆ.
First published: July 2, 2020, 1:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories