ಬೆಂಗಳೂರು (ಫೆ. 9): ಆರ್ಎಸ್ಎಸ್ನವರು ಪಥ ಸಂಚಲನವಾದರೂ ಮಾಡಲಿ, ಉರುಳುಸೇವೆಯಾದರೂ ಮಾಡಲಿ ನಾವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಬೇಕಿದ್ದರೆ ನಾನೇ ಅವರಿಗೆ ಊಟ ಹಾಕಿಸುತ್ತೇನೆ ಎಂದು ಕಲ್ಲಡ್ಕ ಪ್ರಭಾಕರ ಭಟ್ಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ರೇಷ್ಮೆ ನಗರಿ ರಾಮನಗರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಸಹಯೋಗದಲ್ಲಿ ನಡೆಸಲಾಗುತ್ತಿರುವ ಬೃಹತ್ ಆರ್ಎಸ್ಎಸ್ ಪಥ ಸಂಚಲನದ ಬಗ್ಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಅವರು ಪಥ ಸಂಚಲನವಾದರೂ ಮಾಡಲಿ, ಉರುಳು ಸೇವೆಯಾದರೂ ಮಾಡಲಿ ಅಥವಾ ಎಲ್ಲರಿಗೂ ಕಾವಿಯಾದರೂ ತೊಡಿಸಲಿ ನಮಗೇನೂ ಅಭ್ಯಂತರವಿಲ್ಲ ಎಂದಿದ್ದಾರೆ.
ಬಿಜೆಪಿಯವರು ಆರ್ಎಸ್ಎಸ್ ಅನ್ನು ಮುಂದೆ ಬಿಟ್ಟು, ಜನರ ಭಾವನೆ ಕೆರಳಿಸಲು ಹೊರಟಿದ್ದಾರೆ. ಡಿ.ಕೆ. ಸುರೇಶ್ ಮಾಡುತ್ತಿರುವ ಜನಪರ ಕೆಲಸವನ್ನು ಸಹಿಸಲಾಗದೆ ಈ ರೀತಿ ತಂತ್ರ ಹೆಣೆಯಲಾಗಿದೆ. ಇವರು ಏನು ಬೇಕಾದರೂ ಮಾಡಲಿ,ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಮ್ಮ ರಾಜಕೀಯ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿ ಬಳಿಕ ಎಚ್ಡಿಕೆ ವಿರುದ್ಧ ತೊಡೆ ತಟ್ಟಲು ಕಲ್ಲಡ್ಕ ಪ್ರಭಾಕರ್ ಸಜ್ಜು; ಇಂದು ರಾಮನಗರದಲ್ಲಿ ಆರ್ಎಸ್ಎಸ್ ಪಥಸಂಚಲನ
ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿವಾದವನ್ನು ದಾಳವಾಗಿ ಬಳಸಿಕೊಂಡು ಆರ್ಎಸ್ಎಸ್ ಮುಖಂಡ
ಕಲ್ಲಡ್ಕ ಪ್ರಭಾಕರ್ ಭಟ್ ಮಾಜಿ ಸಚಿವ ಡಿಕೆ ಶಿವಕುಮಾರ್ ಭದ್ರಕೋಟೆ ಕನಕಪುರಕ್ಕೆ ಲಗ್ಗೆ ಇಟ್ಟಿದ್ದರು. ಈಗ ರಾಮನಗರದಲ್ಲಿ ಪಥ ಸಂಚಲನ ನಡೆಸಲಾಗುತ್ತಿದೆ. ರಾಮನಗರದ ಮಾಗಡಿ, ಕನಕಪುರ, ಚನ್ನಪಟ್ಟಣ, ರಾಮನಗರ ತಾಲೂಕಿನ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಮೈಸೂರನ್ನೂ ಬಿಡದ ಕೊರೊನಾ; ಮಾಸ್ಕ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!
ಮಾವಿನ ಹಣ್ಣು ಕೆಂಪಗಿದ್ದರೆ ಜನ ನೋಡುತ್ತಾರೆ, ಮನುಷ್ಯ ಬೆಳ್ಳಗೆ, ಸ್ಟ್ರಾಂಗ್ ಇದ್ದರೆ ಜನ ನೋಡ್ತಾರೆ. ಪಾಪ ನನ್ನ ತಮ್ಮ ಜನರ ಪರ ಕೆಲಸ ಮಾಡುತ್ತಿದ್ದಾನೆ. ಆದರೆ ಅದನ್ನು ಸಹಿಸದೆ ಬಿಜೆಪಿಯವರು ಈ ರೀತಿ ತಂತ್ರ ಮಾಡುತ್ತಿದ್ದಾರೆ. ನಾವು ಮತ್ತು ಜೆಡಿಎಸ್ನವರು ರಾಜಕೀಯ ಚದುರಂಗ ಆಟವನ್ನು ಚೆನ್ನಾಗಿ ಆಡಿದ್ದರೆ ಬಿಜೆಪಿ 10 ಸೀಟು ಕೂಡ ಬರುತ್ತಿರಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ