news18-kannada Updated:July 27, 2020, 3:41 PM IST
ಡಿಕೆ ಶಿವಕುಮಾರ್
ಬೆಂಗಳೂರು (ಜು. 27): ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ 'ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ' ಎಂಬ ಹೆಸರಿನಲ್ಲಿ ಇಂದು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಕೆಪಿಸಿಸಿ ಕಚೇರಿಯಿಂದ ರಾಜಭವನದತ್ತ ಹೊರಟಿರುವ ಕೈ ನಾಯಕರನ್ನು ಇಂಡಿಯನ್ ಎಕ್ಸ್ಪ್ರೆಸ್ ವೃತ್ತದ ಬಳಿ ಪೊಲೀಸರು ತಡೆದಿದ್ದರಿಂದ ಅಲ್ಲಿಯೇ ಕುಳಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ಬಿಎಂಟಿಸಿ ಬಸ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ರತಿಭಟನೆ ಅಂತ್ಯಗೊಂಡಿದೆ.
ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಕರ್ನಾಟಕದ ಬಳಿಕ ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿರುವುದನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಯಿತು. ಇಂದು ರಾಜಭವನದ ಎದುರು ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.
ಇದನ್ನೂ ಓದಿ: ಬಂಡಾಯ ಶಮನಕ್ಕೆ ಮುಂದಾದ ರಾಜ್ಯ ಸರ್ಕಾರ; ಸಚಿವ ಸ್ಥಾನ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಸ್ಥಾನ
ಪ್ರತಿಭಟನೆ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಭಾರತ ದೇಶ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ. ಬಿಜೆಪಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಚುನಾಯಿತ ಸರ್ಕಾರಗಳನ್ನು ವಾಮಮಾರ್ಗಗಳ ಮೂಲಕ ಕೆಳಗೆ ಇಳಿಸುತ್ತಿದೆ. ಆಪರೇಷನ್ ಕಮಲ ಎಂಬ ಕೆಟ್ಟ ಪದ್ದತಿಯನ್ನು ಮುಂದುವರಿಸುತ್ತಿದೆ. ದೇಶದ ಬೇರೆಬೇರೆ ರಾಜ್ಯಗಳ ಕುದುರೆ ವ್ಯಾಪಾರ ಮುಂದುವರೆದಿದೆ. ಹೀಗಾಗಿ, ಕಾಂಗ್ರೆಸ್ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.
ನಾವು ಯಾರೂ ಕಾನೂನು ವಿರುದ್ದವಾಗಿ ಹೋರಾಟ ಮಾಡುತ್ತಿಲ್ಲ. ನಾವು ಸಂವಿಧಾನ, ಕಾನೂನಿಗೆ ಗೌರವ ಕೊಟ್ಟಿದ್ದೇವೆ. ಈ ರಾಜ್ಯದ ಮಾಜಿ ಮಂತ್ರಿ ಹಾಗೂ ಸಂಸತ್ ಸದಸ್ಯರು, ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಉಳಿಸಿ, ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ನಾಶ ಮಾಡಬೇಡಿ. ನಮ್ಮ ಪ್ರಯತ್ನವನ್ನು ಕುಗ್ಗಿಸಲು ನೀವು ಪ್ರಯತ್ನ ಮಾಡುತ್ತಿದ್ದೀರಿ. ನಮ್ಮ ಪಕ್ಷದ ಹೋರಾಟ ನಿರಂತರವಾಗಿರಲಿದೆ. ನಾವೆಲ್ಲ ಶಾಂತರೀತಿಯಿಂದ ಹೋಗುತ್ತೇವೆ. ದಯವಿಟ್ಟು ರಾಜ್ಯಪಾಲರ ಭೇಟಿಗೆ ಅವಕಾಶ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರ ತಿಂದಿರುವುದನ್ನು ಕಕ್ಕಿಸುವುದು ನಮ್ಮ ಕರ್ತವ್ಯ; ಡಿ.ಕೆ. ಶಿವಕುಮಾರ್ ವಾಗ್ದಾಳಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿಪಿಇ ಕಿಟ್ಗಳನ್ನು ಧರಿಸಿ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಸರ್ಕಾರ ನಡೆಸುತ್ತಿರುವ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಸಿ ನಡೆಸಲಾಗುತ್ತಿರುವ ಈ ಪ್ರತಿಭಟನೆಗೆ NSUI ಘಟಕದ ಸದಸ್ಯರು ಕೂಡ ಬೆಂಬಲ ಸೂಚಿಸಿದ್ದರು.
ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಮಾಡುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕರಿಗೆ ಕರೆ ನೀಡಿದ್ದರು. ಆಯಾ ರಾಜ್ಯಗಳ ರಾಜ್ಯಪಾಲರ ಕಚೇರಿ ಮುಂಭಾಗ ಪ್ರತಿಭಟನೆ ಮಾಡವಂತೆ ಸೂಚನೆ ಕೊಟ್ಟಿದ್ದರು. ಹೀಗಾಗಿ, ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
Published by:
Sushma Chakre
First published:
July 27, 2020, 3:28 PM IST