HOME » NEWS » State » DK SHIVAKUMAR SAYS PROF ASHOK SUICIDE CASE SHOULD BE A JUDICIAL INVESTIGATION SHM MAK

ಉಪಕುಲಪತಿ ಹುದ್ದೆ ಮಾರಾಟಕ್ಕಿದೆಯೇ?, ಪ್ರೊ. ಅಶೋಕ್ ಆತ್ಮಹತ್ಯೆ ನ್ಯಾಯಾಂಗ ತನಿಖೆಯಾಗಬೇಕು; ಡಿಕೆಶಿ

ತಮಗೆ ಹುದ್ದೆಯೂ ಸಿಗಲಿಲ್ಲ, ಕೊಟ್ಟ ಹಣವೂ ವಾಪಸ್ ಬರದ ಕಾರಣ ಪ್ರೊ. ಅಶೋಕ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದು ಬಹಳ ನೋವಿನ ಸಂಗತಿ. ಇದರಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡವಿದೆ ಹೀಗಾಗಿ ಈ ಕುರಿತು ತನಿಖೆಯಾಗಲಿ ಎಂದು ಡಿಕೆಶಿ ಒತ್ತಾಯಿಸಿದ್ದಾರೆ.

news18-kannada
Updated:November 9, 2020, 5:07 PM IST
ಉಪಕುಲಪತಿ ಹುದ್ದೆ ಮಾರಾಟಕ್ಕಿದೆಯೇ?, ಪ್ರೊ. ಅಶೋಕ್ ಆತ್ಮಹತ್ಯೆ ನ್ಯಾಯಾಂಗ ತನಿಖೆಯಾಗಬೇಕು; ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​.
  • Share this:
ಬೆಂಗಳೂರು (ನವೆಂಬರ್​ 09); ರಾಜ್ಯದಲ್ಲಿ ಉಪಕುಲಪತಿ ಹುದ್ದೆಯನ್ನು ಮಾರಾಟಕ್ಕೆ ಇಡಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ಭ್ರಷ್ಟಾಚಾರವೇ ಪ್ರೊ. ಅಶೋಕ್ ಕುಮಾರ್ ಅವರ ಆತ್ಮಹತ್ಯೆಗೆ ಕಾರಣ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ವಿಚಾರವಾಗಿ ಮಾತನಾಡಿದ  ಡಿ.ಕೆ. ಶಿವಕುಮಾರ್​, "ರಾಜ್ಯಕ್ಕೆ ಬೇಕಾದ ಸಾವಿರಾರು ಪತ್ರಕರ್ತರನ್ನು ತಯಾರು ಮಾಡಿದ ಪ್ರೊ. ಅಶೋಕ್ ಕುಮಾರ್ ಅವರ ಆತ್ಮಹತ್ಯೆ ವಿಚಾರ ಆಘಾತ ನೀಡಿದೆ. ಆತ್ಮಹತ್ಯೆಗೆ ಕಾರಣ ಏನು? ಎಂಬುದರ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಮಗೆ ತಿಳಿದಿರುವ ಪ್ರಕಾರ ನಾಲ್ಕು ಮಂದಿಯ ಹೆಸರು ಉಪಕುಲಪತಿ ಹುದ್ದೆಗೆ ಕೇಳಿಬಂದಿದ್ದು, ನೇಮಕ ವಿಚಾರದಲ್ಲಿ ಸಾಕಷ್ಟು ಪೈಪೋಟಿ, ವ್ಯಾಪಾರ ನಡೆದಿದೆ"  ಎಂದು ಆರೋಪಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಅಶೋಕ್ ಕುಮಾರ್​ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಇವರನ್ನು ಉಪ ಕುಲಪತಿಗಳಾಗಿ ನೇಮಕ ಮಾಡದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, "ಪಾಪ ಆ ಪ್ರೊಫೆಸರ್ ಬಡ್ಡಿಗೆ ಹಣ ತಂದು ಕೊಟ್ಟರೂ ಅವರನ್ನು ನೇಮಕ ಮಾಡಲಿಲ್ಲ.

ತಮಗೆ ಹುದ್ದೆಯೂ ಸಿಗಲಿಲ್ಲ, ಕೊಟ್ಟ ಹಣವೂ ವಾಪಸ್ ಬರದ ಕಾರಣ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದು ಬಹಳ ನೋವಿನ ಸಂಗತಿ. ಇದರಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡವಿದೆ. ಈ ಹಣವನ್ನು ಯಾವ ಅಧಿಕಾರಿ, ಮಂತ್ರಿ, ಮಧ್ಯವರ್ತಿ ತೆಗೆದುಕೊಂಡರೋ, ಈ ಎಲ್ಲದರ ಬಗ್ಗೆ ದೊಡ್ಡ ಮಟ್ಟದ ತನಿಖೆ ಅಗತ್ಯ ಕಾಣಿಸುತ್ತಿದೆ.

ಇದನ್ನೂ ಓದಿ : ಶಿವಮೊಗ್ಗ; ಕೊನೆಗೂ ಸಿಎಂ ತವರು ಕ್ಷೇತ್ರವಾದ ಶಿಕಾರಿಪುರ ಪುರಸಭೆಯ ಗದ್ದುಗೆ ಹಿಡಿದ ಬಿಜೆಪಿ

ಆತ್ಮಹತ್ಯೆ ಪತ್ರದಲ್ಲಿ ಸಾವಿಗೆ ತಾವೇ ಕಾರಣ ಎಂದು ಬರೆದಿದ್ದರೂ, ಸರ್ಕಾರದಲ್ಲಿ ಇರುವವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿರುವುದು ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಹಾಗೂ ವಿಧಾನಸೌಧದಲ್ಲಿ ಈ ಕುರಿತ ಚರ್ಚೆಗಳು ಕೇಳಿಬರುತ್ತಿದೆ.

ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ವಿದ್ಯಾರ್ಥಿವರೆಗೂ ಉಪಕುಲಪತಿ ಹುದ್ದೆ ವ್ಯಾಪಾರಕ್ಕೆ ಇದೆ ಎಂದು ಚರ್ಚೆಯಾಗುತ್ತಿದೆ. ಹೀಗಾಗಿ ಈ ಪ್ರಕರಣದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳೆಯುವ ಕೆಲಸವಾಗುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆ ನಡೆಸಬೇಕು" ಎಂದು ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
Published by: MAshok Kumar
First published: November 9, 2020, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading