ಸಿಬಿಐ ದಾಳಿಗೆ ಹೆದರೋ ಮಗ ನಾನಲ್ಲ, ಉಪ ಚುನಾವಣೆಯಲ್ಲಿ ಉತ್ತರಿಸಿ – ಡಿಕೆ ಶಿವಕುಮಾರ್

ಉಪಚುನಾವಣೆ ಹತ್ತಿರ ಬಂದಿರುವುದರಿಂದ ನನ್ನನ್ನ ಹಿಮ್ಮೆಟ್ಟಿಸಲು ಈ ಸಿಬಿಐ ದಾಳಿ ನಡೆದಿದೆ. ನಾನು ಯಾವ ಸಿಬಿಐ ದಾಳಿಗೂ ಹೆದರುವ ಮಗ ಅಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ಧಾರೆ.

ಡಿಕೆ ಸಹೋದರರು

ಡಿಕೆ ಸಹೋದರರು

 • Share this:
  ಬೆಂಗಳೂರು(ಅ. 05): ಇಂದು ನಡೆದ ಸಿಬಿಐ ದಾಳಿಗೆ ತಾನು ಹೆದರುವ ಮಗ ಇಲ್ಲ. ನಾನು ನಂಬಿರುವ ದೇವರು ಹಾಗೂ ಜನರ ಆಶೀರ್ವಾದ ಇರುವವರೆಗೂ ಯಾರೂ ನನ್ನನ್ನ ಏನನ್ನ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೇನಾಮಿ ಆಸ್ತಿ ಸಂಪಾದನೆ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಲಾಗಿದೆ ಎಂದು ಸಿಬಿಐ ಇಂದು ಡಿಕೆ ಶಿವಕುಮಾರ್ ಅವರ ಮನೆ ಸೇರಿದಂತೆ ಏಕಕಾಲದಲ್ಲಿ 14 ಕಡೆ ದಾಳಿ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉಪಚುನಾವಣೆ ಹತ್ತಿರಬರುತ್ತಿರುವುದರಿಂದ ತನ್ನ ಮೇಲೆ ಗುರಿ ಮಾಡಿ ಈ ದಾಳಿ ಮಾಡಿದ್ದಾರೆ. ತಾನು ಎಲ್ಲಿಯೂ ಓಡಿಹೋಗುತ್ತಿರಲಿಲ್ಲ. ಇಷ್ಟು ತರಾತುರಿಯಲ್ಲಿ ದಾಳಿ ಮಾಡುವ ಅಗತ್ಯ ಇರಲಿಲ್ಲ ಎಂದಿದ್ದಾರೆ.

  ಸೆ. 30ಕ್ಕೆ ಎಫ್​ಐಆರ್ ಹಾಕಿದ್ದು ಯಾಕೆ? ನಾನು ಹಲವು ಕಾರ್ಯಕ್ರಮಗಳನ್ನ ಘೋಷಣೆ ಮಾಡಿದ ಬಳಿಕ ಪ್ರಕರಣ ಹಾಕಿದ್ದಾರೆ. ಇದು ದುರುದ್ದೇಶಪೂರ್ವಕವಾಗಿ ಮಾಡಿರುವ ಸಂಚು ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಅವರು ಇವತ್ತಿನ ಬೆಳವಣಿಗೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಆದಾಯಕ್ಕಿಂತ ಆಸ್ತಿ ಸಂಪಾದನೆ ವಿಚಾರವಾಗಿ ಮಾತನಾಡಿದ ಅವರು, ತಾನೊಬ್ಬ ಉದ್ಯಮಿ. ಯಾವಾಗಲೋ ತೆಗೆದುಕೊಂಡ ಆಸ್ತಿಯ ಮೌಲ್ಯ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಎಸಿಬಿ ಮಾಡಬೇಕಾದ ಕೆಲಸವನ್ನ ಸಿಬಿಐ ಮಾಡುತ್ತಿದೆ. ಯಾವ ತನಿಖಾ ಸಂಸ್ಥೆಯಾದರೂ ಬೇಕಾದರೆ ತನಿಖೆ ಮಾಡಲಿ. ನನ್ನನ್ನ ಮತ್ತೆ ಜೈಲಿಗೆ ಹಾಕಲಿ ಎಂದು ಅವರು ಸವಾಲು ಹಾಕಿದರು.

  ಇದನ್ನೂ ಓದಿ: ತಪ್ಪು ಮಾಡಿದ್ರೆ ದಾಳಿ ಮಾಡಿ - ಆದರೆ ಉಪ ಚುನಾವಣೆ ವೇಳೆ ರಾಜಕೀಯ ಪ್ರೇರಿತ ದಾಳಿ ಸರಿಯಲ್ಲ ; ಸಿದ್ಧರಾಮಯ್ಯ ಕಿಡಿ

  2017ರಲ್ಲಿ ಇದೇ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಆಯಿತು. ಗುಜರಾತ್ ಚುನಾವಣೆಗೆ ಹೋಗಿದ್ದಕ್ಕೆ ಆ ದಾಳಿ ಆಯಿತು. ಆವತ್ತೇ ನನ್ನ ಬಂಧನ ಆಗುತ್ತೆ ಎಂದು ಕೆಲವರು ನಿರೀಕ್ಷೆ ಮಾಡಿದ್ದರು. 2019ರಲ್ಲಿ ನನ್ನ ಮೇಲೆ ಇಡಿ ಕೇಸ್ ಹಾಕಿತು. ಬೇನಾಮಿ ಆಸ್ತಿ ಸಂಪಾದನೆ ಪ್ರಕರಣ ಹಾಕಿತು. ನನ್ನನ್ನ ಬಂಧಿಸಿ 48 ದಿನ ಜೈಲಿನಲ್ಲಿಟ್ಟರು ಎಂದು ಡಿಕೆ ಶಿವಕುಮಾರ್ ಹೇಳಿದರು.

  “ನಾನು ಜೈಲಿಂದ ಬಿಡುಗಡೆ ಆಗಿ ಬಂದಾಗ ಜನರು ತೋರಿದ ಪ್ರೀತಿಗೆ ಕೃತಜ್ಞನಾಗಿದ್ದೇನೆ. ಜೈಲಿಂದ ಬಂದರೆ ಇಷ್ಟು ದೊಡ್ಡ ಮೆರವಣಿಗೆ ಬೇಕಾ ಎಂದು ಕೆಲವರು ಅಂದರು. ನಾನು ನೊಂದು, ಬೆಂದು ಬಂದಿದ್ದೇನೆ. ಅದು ಅವರಿಗೂ ಗೊತ್ತು. ನಂತರ ಸೋನಿಯಾ ಗಾಂಧಿ ಅವರು ನನ್ನನ್ನ ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅದಾದ ಮೇಲೆ ನನ್ನ ಕರ್ತವ್ಯ ಮಾಡುತ್ತಿದ್ದೇನೆ” ಎಂದರು.

  ಇದನ್ನೂ ಓದಿ: ಉಪ ಚುನಾವಣೆಯಲ್ಲಿ ಸೋಲುವ ಭೀತಿ - ಡಿಕೆಶಿ ಮೇಲೆ ಬಿಜೆಪಿ ಪ್ರಾಯೋಜಿತ ದಾಳಿ ; ಅಜಯಸಿಂಗ್

  “ಕೊರೋನಾ ಬಂದು ಜನರು ನರಳುತ್ತಿದ್ದಾರೆ. ಆರು ತಿಂಗಳಿಂದ ಪ್ರತಿಯೊಬ್ಬರ ಜೀವನದಲ್ಲಿ ಆಗುತ್ತಿರುವ ಬದಲಾವಣೆ ಕರುಳು ಹಿಂಡುವಂಥದ್ದು. ಕೊರೋನಾ ವಿರುದ್ಧ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ಕೊಟ್ಟೆವು. ಸಹಕಾರ ಕೊಟ್ಟೆವು. ಕೊರೋನಾ ಸಂದರ್ಭದಲ್ಲಿ ರೈತರು, ಶ್ರಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳು, ಕಾರ್ಯಕರ್ತರಿಗೆ ಹಣ ಇಲ್ಲ. ಉದ್ಯೋಗ ಕೊಟ್ಟವರಿಗೂ ಇಲ್ಲ, ಉದ್ಯೋಗಿಗಳಿಗೂ ಇಲ್ಲ. ಸರ್ಕಾರ ಯಾರ ಪರವೂ ನಿಲ್ಲಲಿಲ್ಲ. ರಾಜ್ಯ ಸರ್ಕಾರ 1700 ಕೋಟಿ ಘೋಷಿಸಿದರೂ ಕೂಡ ಅದು ಜನರನ್ನ ತಲುಪಲಿಲ್ಲ. ಬಿಜೆಪಿಯ ಸ್ವಂತ ಬೆಳವಣಿಗೆಗೆ ಆ ಹಣ ಹೋಯಿತು. ನಾನು ಶ್ರಮಿಕರಿಗೆ, ಸವಿತಾ ಸಮಾಜ, ಕಾರ್ಮಿಕರಿಗೆ ನನ್ನ ಕೈಲಾದ ಸಹಾಯ ಮಾಡಿದೆ. ರೈತರಿಗೆ ಮಾರುಕಟ್ಟೆ ಇಲ್ಲ. ನಾನು ರೈತರ ಜಮೀನಿಗೆ ಹೋಗಿ ಅವರಿಂದ ಒಂದಷ್ಟು ಹಣ ಕೊಟ್ಟು ಬೆಳೆ ಖರೀದಿಸಿ ಜನರಿಗೆ ಹಂಚಿದೆವು. ಇದು ರೈತರ ಪರವಾಗಿ ನಮ್ಮ ಕರ್ತವ್ಯವಾಗಿತ್ತು.

  “ನೀವು ಹಣ ಲೂಟಿ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿಯ ಗಮನಕ್ಕೆ ತಂದೆವು. ಬೇಕಾದಷ್ಟು ವಿಚಾರಗಳನ್ನ ನಾವು ವಿಧಾನಸಭೆಯಲ್ಲಿ, ವಿಧಾನಪರಿಷತ್​ನಲ್ಲಿ ಹೊರತಂದೆವು. ನಮಗೆ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ. ಜೈಲಿಂದ ಬಂದವರು ಎಂದು ಅಣಗಿಸಿದರು. ಅವರು ಜೈಲಿಗೆ ಹೋಗಿ ಬಂದದ್ದನ್ನ ಮರೆತುಬಿಟ್ಟಿದ್ದಾರೆ.

  ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರನ್ನು ವಿಚಲಿತಗೊಳಿಸಲು ಸಿಬಿಐ ದಾಳಿ ನಡೆದಿದೆ; ಎಸ್​.ಆರ್​.ಪಾಟೀಲ್ ಆರೋಪ

  “ಉತ್ತರ ಪ್ರದೇಶದಲ್ಲಿ ದಲಿತ ಯುವತಿಯನ್ನ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಆ ಯುವತಿಗೆ ಆದ ದೌರ್ಜನ್ಯವನ್ನು ಕೇಳಬಾರದ? ನೀವು ರಾಷ್ಟ್ರ ನಾಯಕರನ್ನ ಈ ವಿಚಾರದಲ್ಲಿ ಪ್ರಶ್ನೆ ಮಾಡಿ ಎಂದು ರಾಜ್ಯದ ಮುಖ್ಯಮಂತ್ರಿಗೆ ಕೇಳುತ್ತೇನೆ. 30ನೇ ತಾರೀಖು ಯಾಕೆ ಎಫ್​ಐಆರ್ ಹಾಕಿದ್ದು. ನಾನು ಅನೇಕ ಕಾರ್ಯಕ್ರಮಗಳನ್ನ ಘೋಷಣೆ ಮಾಡಿದ ಬಳಿಕ ಯಾಕೆ ಎಫ್​ಐಆರ್ ಹಾಕಿದ್ದು? ನಾನು ದಲಿತ ಯುವತಿ ಪರವಾಗಿ ಪ್ರತಿಭಟನೆ ಮಾಡುವ ಹೊತ್ತಲ್ಲಿ ರೇಡ್ ನಡೆದಿದೆ. ಈ ಎಫ್​ಐಆರ್​ಗಳಿಂದ ಡಿಕೆ ಶಿವಕಮಾರ್ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. 30 ವರ್ಷದ ರಾಜಕಾರಣದಲ್ಲಿ ಕನಕಪುರ, ಸಾತನೂರು ಜನ ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ದಾರೆ. ನನ್ನ ಮೇಲೆ ಒಂದೇ ಒಂದು ಸಣ್ಣ ಕ್ರಿಮಿನಲ್ ಕೇಸ್ ಆದರೂ ದಾಖಲಾಗಿದ್ದರೆ ತೋರಿಸಲಿ. ಈ ಐಟಿ, ಇಡಿ, ಸಿಬಿಐ ಬಿಟ್ಟರೆ ಬೇರೆ ಸಂಸ್ಥೆಯಿಂದ ಪ್ರಕರಣ ದಾಖಲಾಗಿದೆಯಾ? ನಾನು ಹಿಂದೆ ಸಚಿವರಾಗಿದ್ದಾಗ ಅಕ್ರಮ ಎಸಗಿದ್ದೇನೆಂದು ದಾಖಲೆಗಳನ್ನ ಜಾಲಾಡಿದ್ರು. ಏನು ಸಿಕ್ಕಿತು?

  “ಮುಖ್ಯಮಂತ್ರಿ ಬಳಿ ಎಲ್ಲಾ ದಾಖಲೆಗಳಿರಬೇಕು. ಈಗಾಗಲೇ ಬೇನಾಮಿ ಆಸ್ತಿ ಎಫ್​ಐಆರ್ ಹಾಕಿದ್ದಾರೆ. ಈಗ ಮತ್ತೆ ಬೇನಾಮಿ ಆಸ್ತಿ ದೂರು ಹಾಕಿದ್ದಾರೆ. ಮತ್ತೆ ಸ್ನೇಹಿತರ ಮನೆ ಮೇಲೆ ರೇಡ್ ಮಾಡಿದ್ದಾರೆ. ಬಿಜೆಪಿಯಲ್ಲಿ ಬೇರೆ ಯಾರೂ ಅಕ್ರಮ ಮಾಡಿಲ್ಲವಾ? ನಿಮ್ಮ ಕಣ್ಣಿಗೆ ಡಿಕೆ ಶಿವಕುಮಾರ್ ಮಾತ್ರ ಬೀಳುತ್ತಾರಾ? ನನ್ನ ಶಕ್ತಿ ದೇವರು ಅಜ್ಜಯ್ಯ, ಜನರ ಆಶೀರ್ವಾದ ಇರುವವರೆಗೂ ನನ್ನನ್ನ ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.
  Published by:Vijayasarthy SN
  First published: