ಹುಬ್ಬಳ್ಳಿ (ಡಿ.18): ಕುಕ್ಕರ್ ಬ್ಲಾಸ್ಟ್ ಪ್ರಕರಣದ (Cooker Blast) ಆರೋಪಿಗೆ ಉಗ್ರ ಪಟ್ಟ ಕಟ್ಟುವ ಹೇಳಿಕೆಗೆ ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar), ಈ ಸಂಬಂಧ ನನಗೆ ಅಮಾಯಕ ಪ್ರಶಸ್ತಿ ಕೊಡೋದಾದ್ರೆ ಕೊಡಲಿ ಎಂದು ಸವಾಲು ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ (BJP Leaders) ವಿರುದ್ಧ ಹರಿಹಾಯ್ದಿದ್ದಾರೆ.
ಉಗ್ರ ಪಟ್ಟ ಹೇಗೆ ಕಟ್ಟುತ್ತಾರೆ?-ಡಿಕೆಶಿ
ಮಂಗಳೂರು ಪೊಲೀಸ್ ಆಯುಕ್ತರ ಹೇಳಿಕೆ ಆಧರಿಸಿ ನಾನು ಪ್ರತಿಕ್ರಿಯಿಸಿದ್ದೇನೆ. ಪೊಲೀಸ್ ಆಯುಕ್ತರೇ ಆರೋಪಿಯನ್ನ ವಿಚಾರಣೆ ಮಾಡಿಲ್ಲ ಅಂತಾರೆ. ಹಾಗಿರುವಾಗ ಅವನಿಗೆ ಉಗ್ರ ಪಟ್ಟ ಹೇಗೆ ಕಟ್ಟುತ್ತಾರೆ. ಕುಕ್ಕರ್ ಬ್ಲಾಸ್ಟ್ ವಿಚಾರದಲ್ಲಿ ನನ್ನ ಬಗ್ಗೆ ಯಾರು ಬೇಕಾದ್ರೂ, ಏನಾದ್ರು ಪ್ರಚಾರ ಮಾಡ್ಲಿ. ನಮ್ಮದು ಕಾಂಗ್ರೆಸ್ ಪಕ್ಷ, ಭಯೋತ್ಪಾದನೆಯನ್ನು ವಿರೋಧಿಸುತ್ತಾ ಬಂದಿರುವ ಪಕ್ಷ. ಅಧಿಕಾರದಲ್ಲಿ ಇದ್ದಾಗೆಲ್ಲಾ ದೇಶದಲ್ಲಿ ಭಯೋತ್ಪಾದನೆ ದಮನ ಮಾಡಿದ್ದೇವೆ. ಭಯೋತ್ಪಾದನೆ ನಿಯಂತ್ರಿಸಲಾಗದ ಸರ್ಕಾರವನ್ನೇ ವಜಾ ಮಾಡಿದ್ದೇವೆ ಎಂದು ಡಿಕೆಶಿ ಹೇಳಿದ್ದಾರೆ.
ಮಂಗಳೂರು ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದೀವಿ. ಯುವಕನಿಗೆ ಪ್ರಜ್ಞೆ ಬರೋವರೆಗೆ ಏನೂ ಹೇಳಲು ಆಗಲ್ಲ ಅಂತ ಪೊಲೀಸ್ ಕಮೀಷನರ್ ಹೇಳಿದ್ರು. ಮಂಗಳೂರು ಪೊಲೀಸರು ಹಿನ್ನೆಲೆ ತಿಳ್ಕೊಬೇಕು ಅಂತ ಮೊದಲು ಹೇಳಿಕೆ ಕೊಟ್ರು. ಆದರೆ ಡಿಜಿಪಿ ಘಟನೆಗೆ ಭಯೋತ್ಪಾದನೆಯ ಲೇಪ ಕೊಟ್ರು. ಬಿಜೆಪಿಯ ಭ್ರಷ್ಟಾಚಾರ, ಮತಗಳ್ಳತನ, ಬೋಗಸ್ ವೋಟರ್ ಸೃಷ್ಟಿನ್ನು ಮುಚ್ಚುವ ಯತ್ನವಿದು ಎಂದು ಮತ್ತೆ ಡಿಕೆಶಿ ಆರೋಪಿಸಿದ್ದಾರೆ.
ಆರ್ ಅಶೋಕ್ಗೆ ಡಿಕೆಶಿ ಸವಾಲ್
ಬಿಜೆಪಿ ಭ್ರಷ್ಟಾಚಾರ ಮುಚ್ಚಿಕೊಳ್ಳಲಿಕ್ಕೆ ಕುಕ್ಕರ್ ಬ್ಲಾಸ್ಟ್ ಪ್ರಕರಣ ಮುಂದೆ ತಂದಿದ್ದಾರೆ. ಹೋಮ್ ಮಿನಿಸ್ಟರ್ ವಿಷಯವನ್ನು ರಾಜಕೀಕರಣ ಮಾಡುತ್ತಿದ್ದಾರೆ ಎಂದು ಕುಕ್ಕರ್ ಬ್ಲಾಸ್ಟ್ ಹೇಳಿಕೆಯನ್ನು ಡಿಕೆಶಿ ಸಮರ್ಥಿಸಿಕೊಂಡರು. ಕಂದಾಯ ಸಚಿವ ಆರ್. ಅಶೋಕ್ ನನಗೆ ಅಮಾಯಕನ ಅವಾರ್ಡ್ ಕೊಡುವುದಾಗಿ ಹೇಳಿದ್ದಾರೆ. ಅಮಾಯಕರ ಅವಾರ್ಡ್ ತೆಗೆದುಕೊಳ್ಳಲು ನಾನು ಸಿದ್ದನಿದ್ದೇನೆ. ಅಶೋಕ್ ಡೇಟ್, ಟೈಮ್ ಫಿಕ್ಸ್ ಮಾಡಲಿ ಎಂದು ಡಿಕೆಶಿ ಸವಾಲು ಹಾಕಿದರು
ಬಸ್ ಯಾತ್ರೆಗೆ ಯಾರದಾರೆನೂ ಕಂಡೀಷ್ ಇಲ್ಲ
ಬಸ್ ಯಾತ್ರೆಗೆ ಯಾರದೂ ಏನೂ ಕಂಡೀಷನ್ ಇಲ್ಲ ಅನ್ನೋ ಮೂಲಕ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. ಬಸ್ ನಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಯಾತ್ರೆ ಪ್ರಾರಂಭವಾಗುತ್ತೆ. ಕೃಷ್ಣಾ ನದಿ ವಿಚಾರವಾಗಿ ವಿಜಯಪುರದಲ್ಲಿ ಹೋರಾಟ ನಡೆಯುತ್ತೆ. ಮಹದಾಯಿ ವಿಚಾರದಲ್ಲಿ ಜನವರಿ ಎರಡರಂದು ಹುಬ್ಬಳ್ಳಿಯಲ್ಲಿ ಹೋರಾಟ ಸಮಾವೇಶ ಮಾಡುತ್ತೇವೆ. ಆಯಾ ಭಾಗದ ನಾಯಕರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ಅಂತಿಮಗೊಳಿಸ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ಸಿದ್ದರಾಮಯ್ಯ ಬಸ್ ಯಾತ್ರೆಗೆ ಕಂಡೀಷನ್ ಹಾಕಿದ್ದಾರೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ಕಂಡೀಷನ್ ಹಾಕಲ್ಲಾ, ಪಕ್ಷದ ತೀರ್ಮಾನವೇ ಅಂತಿಮ. ಪ್ರತಿ ವಿಚಾರದಲ್ಲೂ ಸಿದ್ದರಾಮಯ್ಯ, ಹರಿಪ್ರಸಾದ್ ಸೇರಿದಂತೆ ಕಾರ್ಯಾಧ್ಯಕ್ಷರ ಜೊತೆಗೆ ಚರ್ಚಿಸುತ್ತಿದ್ದೇನೆ. ಈ ಬಾರಿ ಗೆಲ್ಲುವವರಿಗೆ ಪಕ್ಷ ಟಿಕೆಟ್ ಕೊಡುತ್ತೆ. ಕಷ್ಟ ಕಾಲದಲ್ಲಿ ನಮ್ಮೊಂದಿಗೆ ಇದ್ದವರಿಗೆ ಟಿಕೆಟ್ ಕೊಡುತ್ತೇವೆ. ಸಿದ್ದರಾಮಯ್ಯ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುರ್ಜೇವಾಲ್ ಜೊತೆ ಇವತ್ತು ಆ ಎಲ್ಲಾ ವಿಷಯಗಳ ಚರ್ಚೆಯಾಗುತ್ತೆ ಎಂದರು.
ಪಾಕಿಸ್ತಾನದ ವಿದೇಶಾಂಗ ಸಚಿವ ಪ್ರಧಾನಿ ಮೋದಿ ಅವಹೇಳನ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಈಗಾಗಲೇ ರಾಹುಲ್ ಗಾಂಧಿ ಅವರು ಈ ಕುರಿತು ಹೇಳಿಕೆ ಕೊಟ್ಟಿದ್ದಾರೆ. ರಾಷ್ಟ್ರೀಯ ವಿಚಾರಗಳ ಕುರಿತು ರಾಷ್ಟ್ರೀಯ ನಾಯಕರು ಪ್ರತಿಕ್ರಿಯಿಸ್ತಾರೆ. ರಾಜ್ಯದ ವಿಷಯಗಳಿಗೆ ಮಾತ್ರ ನಾನು ಪ್ರತಿಕ್ರಿಯೆ ನೀಡ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ