news18-kannada Updated:February 18, 2020, 4:31 PM IST
ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಡಿಕೆ ಶಿವಕುಮಾರ್
ಬೆಂಗಳೂರು (ಫೆ.18): ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಮಂಜೂರಾಗಿದ್ದ ಕನಕಪುರ ವೈದ್ಯಕೀಯ ಕಾಲೇಜನ್ನು ಸ್ಥಳಾಂತರ ಮಾಡಿದ್ದ ಸರ್ಕಾರದ ಕ್ರಮದ ವಿಚಾರವಾಗಿ ಇಂದು ಶಾಸಕ ಡಿಕೆ ಶಿವಕುಮಾರ್ ಅವರು, ಮುಖ್ಯಮಂತ್ರಿ ಬಿಎಸ್ವೈ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ವಿಧಾನಸೌಧದಲ್ಲಿ ಇಂದು ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಡಿಕೆ ಶಿವಕುಮಾರ್, ಕ್ಷೇತ್ರಕ್ಕೆ ಈ ಹಿಂದೆ ನೀಡಲಾಗಿದ್ದ ಮೆಡಿಕಲ್ ಕಾಲೇಜನ್ನು ಪುನಃ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಮೈತ್ರಿ ಸರ್ಕಾರದಲ್ಲಿ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ಅನ್ನು ಕಳೆದ ಬಜೆಟ್ನಲ್ಲಿ ನೀವೇ ಘೋಷಿಸಿದ್ದು, ಅದಕ್ಕೆ ಒಪ್ಪಿಗೆ ನೀಡಿ ಅನುಮೋದನೆ ಮಾಡಿದ್ದೀರಾ. ಇದಾದ ಬಳಿಕ ಕಾಲೇಜು ಸ್ಥಳಾಂತರಗೊಂಡಿದೆ. ಈ ಹಿಂದೆ ನೀವು ಮಂಡಿಸಿದ ಬಜೆಟ್ನಲ್ಲಿ ಘೋಷಿಸಿದಂತೆ ನಮಗೆ ಮೆಡಿಕಲ್ ಕಾಲೇಜ್ ನೀಡಿ ಎಂದು ಕಳೆದ ವರ್ಷದ ಬಜೆಟ್ ಪುಸ್ತಕವನ್ನು ಮುಖ್ಯಮಂತ್ರಿಗಳ ಮುಂದೆ ಇರಿಸಿದರು.
ನಾನು ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜ್ ನೀಡುವುದು ಬೇಡ ಎಂದಿಲ್ಲ. ಆದರೆ, ಬಜೆಟ್ನಲ್ಲಿ ಘೋಷಿಸಿದಂತೆ ನಮ್ಮ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜ್ ನೀಡಿ ಎಂದು ಒತ್ತಾಯಿಸಿದರು.
ನಿಮ್ಮ ಆಡಳಿತದಲ್ಲಿ ದ್ವೇಷದ ರಾಜಕೀಯ ನಡೆಯುದಿಲ್ಲ ಎಂದು ನಂಬಿದ್ದೇನೆ. ಅಲ್ಲದೇ ರಾಜ್ಯದ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ ಎಂಬ ಭರವಸೆ ಕೂಡ ಇದೆ. ನೀವು ನೀಡಿದ ಭರವಸೆಗಳನ್ನು ಈಡೇರಿಸುತ್ತೀರಾ ಎಂಬ ಭರವಸೆ ಇದೆ ಎಂದು ಮನವಿ ಪತ್ರವನ್ನು ಸಲ್ಲಿಸಿದರು.

ಇನ್ನು ಡಿಕೆ ಶಿವಕುಮಾರ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಈಗ ಮತ್ತೆ ಕನಕಪುರಕ್ಕೆ ವೈದ್ಯಕೀಯ ಕಾಲೇಜ್ ಘೋಷಣೆ ಮಾಡುವುದು ಕಷ್ಟ ಎಂಬುದನ್ನು ಅರ್ಥೈಸಲು ಪ್ರಯತ್ನಿಸಿದರು ಎನ್ನಲಾಗಿದೆ.
ಇದನ್ನು ಓದಿ: ತಕ್ಷಣ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿ: ಇಲ್ಲದಿದ್ದರೆ ನನ್ನ ಹಾದಿಯಲ್ಲಿ ಹೋರಾಟ; ಸಿಎಂಗೆ ಡಿಕೆಶಿ ಎಚ್ಚರಿಕೆ
ಇನ್ನು ಈ ಭೇಟಿ ವೇಳೆ ಪರಿಷತ್ ಸದಸ್ಯರಾದ ರವಿ ಹಾಗೂ ಸಿಎಂ ಲಿಂಗಪ್ಪ, ಶಾಸಕ ರಂಗನಾಥ, ಮಾಜಿ ಸಚಿವ ಎಚ್ ಎಂ ರೇವಣ್ಣ ಕೂಡ ಹಾಜರಿದ್ದರು.
ಇನ್ನು ಈ ಹಿಂದೆ ಕನಕಪುರಕ್ಕೆ ಮೆಡಿಕಲ್ ಕಾಲೇಜ್ ನೀಡಬೇಕು ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿ ಡಿಕೆ ಶಿವಕುಮಾರ್ ಸಿಎಂ ಅವರಿಗೆ ಎಚ್ಚರಿಕೆ ಪತ್ರ ಬರೆದಿದ್ದರು.
First published:
February 18, 2020, 4:01 PM IST