ಬಿಜೆಪಿಯವರಿಗೊಂದು ನ್ಯಾಯ, ನನಗೊಂದು ನ್ಯಾಯ; ಯಾವುದಕ್ಕೂ ಹೆದರಲ್ಲ, ಎಲ್ಲದಕ್ಕೂ ಸಿದ್ಧ; ಡಿಕೆಶಿ ಗುಡುಗು

DK Shivakumar Press Meet: ನಾನು ಕಾಂಗ್ರೆಸ್​ ಪಕ್ಷದ ಕಾರ್ಯಕರ್ತನಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಡೆಸಿಕೊಂಡು ಬಂದಿದ್ದೇನೆ. ಗುಜರಾತ್, ಮಹಾರಾಷ್ಟ್ರ ಮತ್ತು ಕೆಲವು ಬಾರಿ ನಮ್ಮ ಶಾಸಕರನ್ನು ಕಾಪಾಡುವ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಭಾಯಿಸಿದ್ದೇನೆ. ಈ ಇಡಿ ದಾಳಿಯ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರವಿದೆ. ಅದನ್ನು ನಾನು ಕಾನೂನುಬದ್ಧವಾಗಿ ಎದುರಿಸುತ್ತೇನೆ ಎಂದು ಡಿಕೆಶಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Sushma Chakre | news18-kannada
Updated:August 31, 2019, 7:51 AM IST
ಬಿಜೆಪಿಯವರಿಗೊಂದು ನ್ಯಾಯ, ನನಗೊಂದು ನ್ಯಾಯ; ಯಾವುದಕ್ಕೂ ಹೆದರಲ್ಲ, ಎಲ್ಲದಕ್ಕೂ ಸಿದ್ಧ; ಡಿಕೆಶಿ ಗುಡುಗು
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು (ಆ. 30): ತನಿಖೆಗೆ ಹೆದರಿಕೊಂಡು ಓಡಿಹೋಗುವ ಮಗ ನಾನಲ್ಲ. ಸಾಮಾಜಿಕ, ರಾಜಕೀಯ, ಕಾನೂನು ರೀತಿಯಿಂದ ಹೋರಾಡಿ ಎಲ್ಲ ಷಡ್ಯಂತ್ರಗಳಿಗೆ ಉತ್ತರ ನೀಡೇ ನೀಡುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಗೆ ಹೋಗುವ ಮುನ್ನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಕೆಶಿ, ಆಪರೇಷನ್​ ಕಮಲದಲ್ಲಿ ಡೀಲ್​ಗಳು ನಡೆದವು. ಸದನದಲ್ಲೇ ಶ್ರೀನಿವಾಸಗೌಡರು ಬಿಜೆಪಿ ಎಂಎಲ್​ಎಗಳು ತನಗೆ 5 ಕೋಟಿ ಆಮಿಷವೊಡ್ಡಿದ್ದರು ಎಂದು ಹೇಳಿದ್ದರು. ಆ ವಿಚಾರದಲ್ಲಿ ಯಾಕೆ ಸಂಬಂಧಪಟ್ಟವರಿಗೆ ಇಡಿ ನೋಟಿಸ್, ಐಟಿ ನೋಟಿಸ್ ಹೋಗಿಲ್ಲ? ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಒಂದು ನ್ಯಾಯವಾ? ಎಂದು ಟೀಕಿಸಿದ್ದಾರೆ.

ನಾವೆಂದೂ ದ್ವೇಷದ ರಾಜಕಾರಣ ಮಾಡಲಿಲ್ಲ. ಆದರೆ, ಸದನದಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದ ಬಿಎಸ್​ ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಿದ್ದಂತೆ ದ್ವೇಷದ ರಾಜಕಾರಣ ಆರಂಭಿಸಿದ್ದಾರೆ. ನನಗೆ, ನಮ್ಮ ಪಕ್ಷದ ನಾಯಕರಿಗೆ ಮಾತ್ರ ಯಾಕೆ ನೋಟಿಸ್​ ನೀಡುತ್ತಿದ್ದಾರೆ? ಬಿಜೆಪಿಯಲ್ಲಿ ಯಾವ ನಾಯಕರೂ ಬೇನಾಮಿ ಆಸ್ತಿ ಮಾಡಿಲ್ಲವೇ? ಬಿಜೆಪಿ ಶಾಸಕರು ಲಂಚದ ಆಮಿಷವೊಡ್ಡಿದ್ದಾರೆ ಎಂದು ನಮ್ಮ ಶಾಸಕರು ಬಹಿರಂಗವಾಗಿ ಸದನದಲ್ಲೇ ಹೇಳಿದ್ದರೂ ಯಾಕೆ ಬಿಜೆಪಿ ಶಾಸಕರಿಗೆ ನೋಟಿಸ್ ನೀಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರಿಂದ ನಾನಿದನ್ನು ನಿರೀಕ್ಷಿಸಿರಲಿಲ್ಲ:

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಬಿಜೆಪಿ ನಾಯಕರು ಅಥವಾ ಬಿಎಸ್​ ಯಡಿಯೂರಪ್ಪ ನನ್ನ ಬಳಿ ಏನೇ ಸಹಾಯ ಕೇಳಿಕೊಂಡು ಬಂದರೂ ಇಲ್ಲ ಎನ್ನದೆ ಮಾಡಿಕೊಟ್ಟಿದ್ದೇನೆ. ನಮ್ಮ ಆಡಳಿತ ಪಕ್ಷ ಮತ್ತು ವಿರೋಧಪಕ್ಷದವರೆಂಬ ಭೇದ ತೋರದೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಮಾನತೆ ತೋರಿದ್ದೇನೆ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ನಾವೆಷ್ಟು ಅನುದಾನ ಬಿಡುಗಡೆ ಮಾಡಿದ್ದೇವೆ ಎಂಬುದಕ್ಕೆ ಬೇಕಿದ್ದರೆ ಬಜೆಟ್ ಕಾಪಿ ನೋಡಿಕೊಳ್ಳಲಿ. ಯಡಿಯೂರಪ್ಪನವರಿಂದ ಇಂತಹ ನಡೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಸಿಎಂ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಬೇಕೆಂದು ಆಸೆಯಿತ್ತು. ಹೆಚ್​.ಡಿ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಮೆಡಿಕಲ್ ಕಾಲೇಜಿಗೆ ಜಾಗ ಮಂಜೂರಾಗಿತ್ತು. ಅದಕ್ಕೆ ಆರ್ಡರ್​ ಸಹ ಹೊರಡಿಸಲಾಗಿದ್ದು, ಭೂಮಿ ಪೂಜೆಯೂ ಆಗಿತ್ತು. ಆದರೆ, ಮೈತ್ರಿ ಸರ್ಕಾರದ ಎಲ್ಲ ಆದೇಶಗಳಿಗೆ ಸಿಎಂ ಯಡಿಯೂರಪ್ಪ ತಡೆ ನೀಡಿದ್ದಾರೆ. ಈ ಮೂಲಕ ದ್ವೇಷದ ರಾಜಕಾರಣ ಮಾಡಿದ್ದಾರೆ. ಇದೇ ಶನಿವಾರದೊಳಗೆ ಆ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳದಿದ್ದರೆ ನಾವು ಉಗ್ರ ಹೋರಾಟ ಮಾಡಲಿದ್ದೇವೆ. ನಮ್ಮನ್ನು ಬಂಧಿಸಿದರೂ ಚಿಂತೆಯಿಲ್ಲ ಈ ವಿಷಯದಲ್ಲಿ ರಾಜಿಯಾಗುವ ಮಾತೇ ಇಲ್ಲ ಎಂದು ಡಿಕೆ ಶಿವಕುಮಾರ್ ಸವಾಲ್ ಹಾಕಿದ್ದಾರೆ.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ:ನಾನು ಕಾಂಗ್ರೆಸ್​ ಪಕ್ಷದ ಕಾರ್ಯಕರ್ತನಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಡೆಸಿಕೊಂಡು ಬಂದಿದ್ದೇನೆ. ಗುಜರಾತ್, ಮಹಾರಾಷ್ಟ್ರ ಮತ್ತು ಕೆಲವು ಬಾರಿ ನಮ್ಮ ಶಾಸಕರನ್ನು ಕಾಪಾಡುವ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಭಾಯಿಸಿದ್ದೇನೆ. ನಿರಂತರವಾಗಿ ನನ್ನ ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸಿದ್ದೇನೆ. ನನ್ನ, ನನ್ನ ಸ್ನೇಹಿತರು, ಕುಟುಂಬಸ್ಥರ ಮೇಲೆ ಐಟಿ ದಾಳಿ ನಡೆಸಿತ್ತು. ಆಗ ನಾನು ಶಾಸಕರೊಂದಿಗೆ ರೆಸಾರ್ಟ್​ನಲ್ಲಿದ್ದೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

DK Shivakumar: ಟ್ರಬಲ್​ ಶೂಟರ್​ಗೆ ಬಂಧನ ಭೀತಿ; ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಡಿಕೆಶಿ

ನಾನೇ ಸಂಪಾದಿಸಿದ ಹಣವಿದು:

ನಾನು ನ್ಯಾಯಾಲಯಕ್ಕೆ, ಶಾಸಕಾಂಗಕ್ಕೆ ಗೌರವ ನೀಡುತ್ತೇನೆ. ಆ ವಿಚಾರದಲ್ಲಿ ಎಂದೂ ಬೇಜವಾಬ್ದಾರಿತನದಿಂದ ವರ್ತಿಸಿದವನಲ್ಲ. ನನಗೆ ಅನೇಕ ನೋಟಿಸ್​ಗಳು ಬಂದಿವೆ. ನಾನೇ ಖುದ್ದಾಗಿ ಆಡಿಟರ್​ಗಳನ್ನು ಕರೆಸಿ ಉತ್ತರ ನೀಡಿದ್ದೇನೆ. ಇನ್ನೂ ಹೆಚ್ಚಿನ ಉತ್ತರ ನಿರೀಕ್ಷೆ ಮಾಡುತ್ತಿದ್ದಾರೆ. ನನ್ನ 85 ವರ್ಷದ ತಾಯಿಯ ಎಲ್ಲ ಆಸೆಗಳನ್ನೂ ನಾವು ಈಡೇರಿಸಿದ್ದೇವೆ. ಆಕೆಯೇನೂ ಬಡತನದಿಂದ ಬಂದವರಲ್ಲ. ನಮ್ಮ ಕುಟುಂಬ ಸಂಪಾದಿಸಿದ್ದ ಆಸ್ತಿಯನ್ನು ಬೇನಾಮಿ ಆಸ್ತಿ ಎಂದು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದೇನೆ. ಅಲ್ಲಿ ಕಾನೂನುಬದ್ಧ ಹೋರಾಟ ಮಾಡುತ್ತಿದ್ದೇನೆ. ನನ್ನ ತಾಯಿಗೆ ಬೇಕಾದ್ದನ್ನು ಮಾಡಿಕೊಟ್ಟಿದ್ದು ತಪ್ಪೇ? ಎಂದು ಡಿ.ಕೆ. ಶಿವಕುಮಾರ್ ಕೇಳಿದ್ದಾರೆ.

ನಾವೇ ಸಂಪಾದನೆ ಮಾಡಿದ ಹಣವನ್ನು ನಮ್ಮದೇ ಹಣವೆಂದು ಹೇಳಿದರೂ ಬೇನಾಮಿ ಹಣ ಎನ್ನಲಾಗುತ್ತಿದೆ. ಕನಕಪುರದ ಮನೆಯನ್ನೂ ಬೇನಾಮಿ ಆಸ್ತಿ ಎನ್ನಲಾಗುತ್ತಿದೆ. ಇದೀಗ ಜಾರಿ ನಿರ್ದೇಶನಾಲಯಕ್ಕೆ ಕೇಸ್ ವರ್ಗಾವಣೆಯಾಗಿದೆ. ಈ ವಿಚಾರಕ್ಕೆ ರಾಜಕಾರಣಿಗಳು, ಅಧಿಕಾರಿಗಳನ್ನು ಎಳೆದುತರಲು ಹೋಗುವುದಿಲ್ಲ. ಬೇರೆಯವರ ಹೆಸರು ಹೇಳಿ ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯ ನನಗಿಲ್ಲ. ಇದು ಐಟಿ ದಾಳಿ ವಿಚಾರ. ಇದನ್ನು ಇಡಿಗೆ ವಹಿಸುವ ಅಗತ್ಯವಿರಲ್ಲ. ಏನು ತೆರಿಗೆ ಕಟ್ಟಬೇಕೋ ಅದನ್ನು ಕಟ್ಟಲಿದ್ದೇವೆ ಎಂದು ಕೂಡ ಹೇಳಿದ್ದೆ ಎಂದಿದ್ದಾರೆ.

ಟ್ರಬಲ್​ ಶೂಟರ್​ ತಲೆಮೇಲೆ ತೂಗುಗತ್ತಿ; ಕಾಂಗ್ರೆಸ್​ ಪಕ್ಷದ ಕಷ್ಟಕಾಲಕ್ಕೆ ಬೆಂಬಲವಾಗಿದ್ದ ಡಿಕೆಶಿ ಈಗ ಏಕಾಂಗಿ?

ಇಡಿ ನೀಡಿದ ಸಮಯಕ್ಕೆ ಹೋಗಲಾಗದು:

ನಿನ್ನೆ ಇಡಿ ಅಧಿಕಾರಿಗಳು ನೀಡಿದ ಸಮನ್ಸ್​ ಅನ್ನು ಗೌರವದಿಂದಲೇ ಸ್ವೀಕರಿಸಿದ್ದೇನೆ. ಇಂದು ಮಧ್ಯಾಹ್ನ 1 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಆದರೆ, ನನಗೂ ವೈಯಕ್ತಿಕ ಕೆಲಸಗಳಿರುತ್ತವೆ. ಈ ಷಡ್ಯಂತ್ರಗಳಿಗೆ ಕಾನೂನು ರೀತಿಯಲ್ಲಿ ಮತ್ತು ರಾಜಕಾರಣದ ತಳಹದಲ್ಲಿಯೂ ಎದುರಿಸಬೇಕಾಗಿದೆ. ನಾನೇನೂ ತಪ್ಪು ಮಾಡಿಲ್ಲ, ಕೊಲೆ ಮಾಡಿಲ್ಲ, ಲಂಚ ತೆಗೆದುಕೊಂಡಿಲ್ಲ. ಪ್ರಾಮಾಣಿಕವಾಗಿ ವ್ಯವಹಾರ ಮಾಡಿದ್ದೇನೆ. ಈ ಷಡ್ಯಂತ್ರವನ್ನು ಎದುರಿಸಲು ಸಿದ್ಧನಿದ್ದೇನೆ. ಎಲ್ಲ ತನಿಖೆಗಳಿಗೂ ಕಾನೂನುಬದ್ಧವಾಗಿ ಹಾಜರಾಗಲು ಸಿದ್ಧನಿದ್ದೇನೆ. ಅವರು ಹೇಳಿದಂತೆ 1 ಗಂಟೆಗೆ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇಂದು ಸಂಜೆಯೊಳಗೆ ಹೋಗಿಯೇ ಹೋಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

ಇಡಿ ಸಮನ್ಸ್​ ಜಾರಿ ಹಿನ್ನೆಲೆ ಡಿ.ಕೆ. ಶಿವಕುಮಾರ್ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್​ ನೀಡಿದ್ದರು. ಡಿಕೆಶಿ ಅರ್ಜಿ ವಜಾ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಲಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಸುಪ್ರೀಂ ವಿಚಾರಣೆವರೆಗೂ ಬಂಧಿಸದಂತೆ ಡಿಕೆಶಿ ಪರ ವಕೀಲ ಬಿ.ವಿ. ಆಚಾರ್ಯ ಮನವಿ ಮಾಡಲಿದ್ದಾರೆ.

ಈಗಲೇ ರಾಜೀನಾಮೆ ನೀಡಲು ಸಿದ್ಧ; ನ್ಯೂಸ್​18 ಸಂದರ್ಶನದಲ್ಲಿ ಅಚ್ಚರಿಯ ಹೇಳಿಕೆ ನೀಡಿದ ಡಿಸಿಎಂ ಸವದಿ!

ದೆಹಲಿಯಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಸಿಕ್ಕ ಅಕ್ರಮ ಹಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್​ ರದ್ದುಗೊಳಿಸುವಂತೆ ಡಿಕೆಶಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನಿನ್ನೆ ಹೈಕೋರ್ಟ್​ ರದ್ದುಗೊಳಿಸಿತ್ತು. ನಿನ್ನೆ ರಾತ್ರಿ ಮತ್ತೆ ಡಿಕೆಶಿ ಮನೆಗೆ ತೆರಳಿರುವ ಇಡಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದ್ದರು.

ಇಡಿ ವಿಚಾರಣೆಗೆ ಹಾಜರಾದ್ರೆ ಏನು ಮಾಡಬೇಕು? ಬಚಾವಾಗುವುದು ಹೇಗೆ? ಎಂಬುದರ ಬಗ್ಗೆ ಡಿಕೆಶಿ ಚಿಂತನೆ ನಡೆಸಿದ್ದಾರೆ. ಅಧಿಕಾರಿಗಳ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕು? ದಾಳಿ ವೇಳೆ ಪತ್ತೆಯಾದ ಹಣ ಸೂಕ್ತ ದಾಖಲೆ ನೀಡಬೇಕು? ಸೂಕ್ತ ದಾಖಲಾತಿ ನೀಡದೆ ಹೋದರೆ ಮುಂದೇನು? ದಾಖಲಾತಿ ನೀಡಲು ಕಾಲಾವಕಾಶ ನೀಡಬಹುದು? ಎಂಬ ಯೋಚನೆ ಶುರುವಾಗಿದ್ದು, ಇಂದು ವಿಚಾರಣೆಗೆ  ಡಿಕೆಶಿ ಜೊತೆಗೆ ವಕೀಲರೂ ತೆರಳುವ ಸಾಧ್ಯತೆಯಿದೆ. ಅವಶ್ಯಕತೆ ಬಿದ್ದರೆ ಡಿಕೆಶಿಯನ್ನ ಇಡಿ ವಶಕ್ಕೆ ಪಡೆಯಬಹುದು. ಪ್ರಕರಣ ಸಂಬಂಧ ಸೂಕ್ತ ಸಾಕ್ಷಿ ಇದ್ದರೆ ಬಂಧನ ಸಾಧ್ಯತೆಯೂ ಇದೆ.

ಮತ್ತೊಮ್ಮೆ ಬಿಎಸ್​ವೈ, ಮೋದಿಯನ್ನು ಹೊಗಳಿದ ಜಿಟಿ ದೇವೇಗೌಡ

ಏನಿದು ಪ್ರಕರಣ?:

ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 28 ಕ್ಕೆ ಆದೇಶ ಪ್ರಕಟಿಸುವುದಾಗಿ ಹೈಕೋರ್ಟ್ ತಿಳಿಸಿತ್ತು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು.

First published: August 30, 2019, 12:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading