ಬೆಂಗಳೂರು: ಈ ದೇಶದ ಸಂಸ್ಕ್ರತಿ (Indian Culture) ನಮ್ಮ ಬಹುದೊಡ್ಡ ಆಸ್ತಿ. ಇಂತಹ ಸಂಸ್ಕೃತಿಯಲ್ಲಿ ನಾವೆಲ್ಲಾ ಬೆಳೆಯುತ್ತಿದ್ದೇವೆ. ಯಾವ ಧರ್ಮ, ಯಾರೂ ಪೂಜೆ ಮಾಡಬೇಕೆಂಬುವುದು ಭಕ್ತನಿಗೂ, ದೇವರಿಗೂ ಬಿಟ್ಟ ವಿಚಾರ. ಭಾರತದಲ್ಲಿ ಎಲ್ಲಾ ಧರ್ಮದವರು ಗಣೇಶ ಆಚರಣೆ ಮಾಡ್ತಾರೆ. ವಿಘ್ನವನ್ನ ನಿವಾರಿಸುವ ವಿನಾಯಕನ ಪೂಜೆ ಮಾಡ್ತೀವಿ. ಒಂದು ಸಣ್ಣ ಕಡ್ಡಿ ಇಟ್ಟು, ಸಗಣಿ ಇಟ್ಟರೂ ಗಣೇಶನ ಪೂಜೆನೇ. ಇದು ನಮ್ಮ ಹಿರಿಯರು ಹೇಳಿಕೊಟ್ಟ ಸಂಸ್ಕೃತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ಅವರು ಹೇಳಿದರು.
ಈಗ ನಾವೆಲ್ಲಾ ಕೋವಿಡ್ ನಿಂದ ನರಳುತ್ತಿದ್ದೇವೆ.
ವಾರ್ಡ್ ನಲ್ಲಿ ಒಂದೋ, ಎರಡೋ ಗಣೇಶ ಕೂರಿಸುತ್ತಿದ್ದಾರೆ. ಮನೆಯಲ್ಲಿ ಎರಡು ಅಡಿ, ವಾರ್ಡಿನಲ್ಲಿ ನಾಲ್ಕು ಅಡಿ ಗಣೇಶ ಅಂತೆ. ಹಾಗಾದ್ರೆ ದೊಡ್ಡ ಗಣಪತಿಗಳು ಏನಾಗಬೇಕು? ಈಗಾಗಲೇ ದೊಡ್ಡ ಗಣೇಶ ವಿಗ್ರಹಗಳನ್ನು ಮಾಡಿ ಮಾರಾಟಕ್ಕೆ ಕಾದಿರುವವರ ಕತೆ ಏನಾಗಬೇಕು? ಸರ್ಕಾರ ಮೂರು ತಿಂಗಳು ಮೊದಲೇ ಇದನ್ನು ಹೇಳಬೇಕಿತ್ತು. ಎಷ್ಟು ಅಡಿ ಗಣೇಶ ಇಡಬೇಕು ಅಂತ ಹೇಳಲು
ಇವರ್ಯಾರಿ? ಜನರು ಎಷ್ಟು ದೊಡ್ಡ ಗಣೇಶ ಕೂರಿಸಬೇಕು ಅನ್ನೋದು ಜನರ ಸ್ವಂತ ವಿಚಾರ. ನಾನು ಮನೆಯೊಳಗಡೆ ಹತ್ತು ಅಡಿ, ಇಪ್ಪತ್ತು ಅಡಿ ಎತ್ತರದ ಗಣೇಶ ವಿಗ್ರಹ ತಗೊಂಡು ಹೋಗ್ತೀನಿ. ಇದರಿಂದ ನಿಮಗೇನು ಕಷ್ಟ ಎಂದು ಸರ್ಕಾರದ ಕ್ರಮವನ್ನು ಪ್ರಶ್ನೆ ಮಾಡಿದರು.
ನಿಮ್ಮ ಕೋವಿಡ್ ಗೈಡ್ ಲೈನ್ ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಮಗೇನೂ ಅಭ್ಯಂತರವಿಲ್ಲ. ಇಡೀ ಭಾರತದಲ್ಲಿ ಒಂದು ಕೋವಿಡ್ ರೂಲ್ಸ್ ಮಾಡಿದ್ದಾರೆ. ಗುಜರಾತ್, ಮಧ್ಯಪ್ರದೇಶ ಹಾಗೂ ಬಿಜೆಪಿ ಇರುವ ರಾಜ್ಯಗಳಲ್ಲೇ ಆಚರಣೆ ವಿಭಿನ್ನವಾಗಿವೆ. ಆಂಧ್ರ ಪ್ರದೇಶದಲ್ಲಿ ನಿಮ್ಮ ಬಿಜೆಪಿ ಕಾರ್ಯಕರ್ತರು ಅಲ್ಲಿನ ಗೈಡ್ ಲೈನ್ ವಿರುದ್ಧ ಪ್ರತಿಭಟನೆ ಮಾಡ್ತಾ ಇದ್ದಾರೆ. ಧರ್ಮ ಯಾವುದಾದ್ರೂ ತತ್ವ ಒಂದೇ. ನಾಮ ನೂರಾದ್ರೂ ದೈವ ಒಂದೇ. ಪೂಜೆ ಯಾವುದಾದ್ರೂ ಭಕ್ತಿ ಒಂದೇ. ನೀವು ನಿರ್ಬಂಧ ಮಾಡೋದು ಸರಿಯಿಲ್ಲ. ಗಣೇಶ ಮೂರ್ತಿಯನ್ನ ಯಾರ್ಯಾರೋ ಮಾಡೋಕ್ಕೆ ಆಗಲ್ಲ. ಕುಂಬಾರರು ಅವರದ್ದೇ ಆದಂಥ ಒಂದು ಕಸುಬು ಕಲಿತ್ತಿರುವ ಜನ. ಬೇರೆ ರಾಜ್ಯಗಳಲ್ಲಿ ಪರಿಹಾರ ಕೊಟ್ಟಿದ್ದಾರೆ, ನೀವೇನು ಕೊಟ್ಟಿದ್ದಿರಾ. ಹೀಗೆ ನಿರ್ಬಂಧ ಮಾಡಿದರೆ ಸಣ್ಣ ವ್ಯಾಪಾರಿಗಳಿಗೆ ಕಷ್ಟವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಯಾರಿಗೂ ಪರಿಹಾರ ಕೊಟ್ಟಿಲ್ಲ. ಇಡೀ ರಾಜ್ಯಕ್ಕೆ ಒಂದೇ ನೀತಿ ಇರಬೇಕು, ವಾರ್ಡ್ ಗೆ ಒಂದಲ್ಲ. ಹತ್ತು ದಿನ, ಅಥವಾ ಹದಿನೈದು ದಿನ ಆಚರಣೆಗೆ ಪರ್ಮಿಷನ್ ಕೊಡಬೇಕು. ಯಾವದ್ರೀ ಅದು ಜನಾಶೀರ್ವಾದ ಯಾತ್ರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ನಮ್ಮವರು ಪ್ರತಿಭಟನೆ ಮಾಡಿದರೆ ಅರೆಸ್ಟ್ ಮಾಡಿದ್ದೀರಾ. ಸಿಎಂ ಮತ್ತು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಅವಕಾಶ ಕೊಡಿ. ನಮ್ಮ ಧಾರ್ಮಿಕ ಭಾವನೆ ಕೆರಳಿಸೋಕೇ ಹೋಗಬೇಡಿ. ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಿರಾ ಅಲ್ವಾ ಎಂದು ಬಿಜೆಪಿಗೆ ಡಿಕೆಶಿ ಟಾಂಗ್ ನೀಡಿದರು.
ಕಲಬುರಗಿ ಪಾಲಿಕೆ ವಿಚಾರದಲ್ಲಿ ಜೆಡಿಎಸ್ ನಾಯಕರ ಜೊತೆ ಸಂಪರ್ಕ ವಿಚಾರವಾಗಿ ಮಾತನಾಡಿದ ಡಿಕೆಶಿ, ನಾನು ಎಲ್ಲರ ಬಳಿ ಮಾತನಾಡಬೇಕು. ಇದು ನನ್ನ ವೈಯಕ್ತಿಕ ವಿಚಾರ ಅಲ್ಲ. ಪಕ್ಷದ ವಿಚಾರ. ಸ್ಥಳೀಯ ನಾಯಕರಿಗೆ ಬಿಟ್ಟಿದ್ದೀವಿ. ನಿಧಾನವಾಗಿಯೇ ನಾವು ಮಾತನಾಡುತ್ತೇವೆ ಎಂದರು.
ಇದನ್ನು ಓದಿ: Anchor Anushree: ಬೆಂಗಳೂರಿಗೆ ಬಂದ ಅನುಶ್ರೀ; ಡ್ರಗ್ಸ್ ಸೇವನೆ ಆರೋಪದ ಬಗ್ಗೆ ಖ್ಯಾತ ನಿರೂಪಕಿ ಹೇಳಿದ್ದೇನು?
ಹಾಗೆ ಮೇಯರ್ ಚುನಾವಣೆಗೆ ದಿನಾಂಕ ನಿಗದಿಪಡಿಸದ ವಿಚಾರವಾಗಿಯೂ ಮಾತನಾಡಿ, ಬಳ್ಳಾರಿ, ರಾಮನಗರ, ಚನ್ನಪಟ್ಟಣ ಎಲೆಕ್ಷನ್ ಆಗಿ ಎಷ್ಟು ದಿನ ಆಯ್ತು. ಹತ್ತು ಕಡೆಯಲ್ಲಿ ಒಂದೇ ಕಡೆ ಗೆದ್ದಿದ್ದು. ಏನ್ ಕೊರೋನಾನ ಇಪ್ಪತ್ತು ಜನ ಕೂತ್ಕೊಂಡು ಮೀಟಿಂಗ್ ಮಾಡೋಕ್ಕೆ. ಮೈಸೂರಿನಲ್ಲಿ ಆಗಲಿಲ್ವಾ ಮೇಯರ್. ಬೇರೆ ಮೇಯರ್ ಗಳಿಗೆ ಯಾಕೆ ಅವಕಾಶ ಕೊಡ್ತಾಯಿಲ್ಲ. ಇದು ರಾಜಕಾರಣ ಎಂದು ಡಿಕೆಶಿ ಆರೋಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ