ಇಡಿ ಸಮನ್ಸ್ ಬಳಿಕ ಮನೆಯಲ್ಲಿ ಭಾವುಕರಾದ ಡಿಕೆಶಿ; ಕಣ್ಣೀರಿಟ್ಟರಾ ಕುಟುಂಬಸ್ಥರು?

ಇಡಿ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದ್ದು, ಇಡಿ ಹೊಸದಾಗಿ ಸಮನ್ಸ್ ಕೊಟ್ಟಿದ್ದು ಡಿಕೆ ಶಿವಕುಮಾರ್ ಅವರ ಎದೆ ಕುಂದಿಸಿದಂತಿದೆ.

news18-kannada
Updated:August 30, 2019, 4:11 PM IST
ಇಡಿ ಸಮನ್ಸ್ ಬಳಿಕ ಮನೆಯಲ್ಲಿ ಭಾವುಕರಾದ ಡಿಕೆಶಿ; ಕಣ್ಣೀರಿಟ್ಟರಾ ಕುಟುಂಬಸ್ಥರು?
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು(ಆ. 30): ಅಕ್ರಮ ನಗದು ಹಣ ಸೇರಿದಂತೆ ಕೆಲವಾರು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಇಡಿ ಸಮನ್ಸ್ ಕ್ರಮವನ್ನು ಪ್ರಶ್ನಿಸಿ ನಿನ್ನೆ ದೆಹಲಿ ಹೈಕೋರ್ಟ್​ನಲ್ಲಿ ಡಿಕೆಶಿ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತು. ಅದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯವು ನಿನ್ನೆ ರಾತ್ರಿ ಹೊಸ ಸಮನ್ಸ್ ಕಳುಹಿಸಿ ಶುಕ್ರವಾರ ಮಧ್ಯಾಹ್ನ ವಿಚಾರಣೆಗೆ ದೆಹಲಿಗೆ ಬರುವಂತೆ ಸೂಚಿಸಿತು. ಇವತ್ತು ಅವರು ಸಲ್ಲಿಸಿದ್ದ ನಿರೀಕ್ಷಣಾ ಮಧ್ಯಂತರ ಜಾಮೀನು ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತು. ಇಂದು ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಡಿಕೆ ಶಿವಕುಮಾರ್ ಭಾವುಕರಾಗಿದ್ದಂತೆ ಕಂಡರು.

ಡಿಕೆ ಶಿವಕುಮಾರ್ ಭಾವುಕರಾಗಿರುವುದು ನಿಜವೇ. ನಿನ್ನೆ ರಾತ್ರಿ ಇಡಿ ಸಮನ್ಸ್ ಬಂದ ಬಳಿಕ ಅವರು ಸಾಕಷ್ಟು ವಿಚಲಿತರಾಗಿದ್ದಾರಂತೆ. ಇವತ್ತು ಬೆಳಗ್ಗೆ ಮನೆಯಲ್ಲಿ ಡಿಕೆಶಿ ಅವರಲ್ಲಿ ಎಂದೂ ಕಾಣದ ತಳಮಳವಿತ್ತು ಎಂದು ಮೂಲಗಳು ಹೇಳುತ್ತಿವೆ. ತಮ್ಮ ಕುಟುಂಬ ಸದಸ್ಯರೊಂದಿಗೆ ಅವರು ಬಹಳ ಭಾವುಕರಾಗಿ ಮಾತನಾಡಿದರಂತೆ.

ಇದನ್ನೂ ಓದಿ: ಡಿಕೆಶಿಗೆ ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ; ಬಂಧನದಿಂದ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಏನಾಗುತ್ತೋ ಏನೋ… ಇನ್ನು ನನ್ನ ಕೈಯಲ್ಲಿ ಏನೂ ಇಲ್ಲ. ಮನೆ ದೇವರೇ ನನ್ನನ್ನು ಕಾಪಾಡಬೇಕು. ನನ್ನಿಂದ ನೀವೆಲ್ಲಾ ತೊಂದರೆ, ನೋವು ಅನುಭವಿಸುವಂತಾಯಿತು ಎಂದು ಪತ್ನಿ ಮತ್ತು ಪುತ್ರಿ ಬಳಿ ಡಿಕೆ ಶಿವಕುಮಾರ್ ನೋವಿನಿಂದ ಮಾತನಾಡಿದರಂತೆ.

ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತೆ. ಜೈಲಿಗೆ ಹೋಗಬೇಕು ಅಂತ ಇದ್ರೆ ಏನು ಮಾಡೋಕ್ಕಾಗುತ್ತೆ? ನೀವ್ಯಾರು ಹೆದರಬೇಡಿ. ಧೈರ್ಯದಿಂದ ಇರಿ. ಸುರೇಶ್ ನಿಮ್ಮ ಜೊತೆ ಇರುತ್ತಾನೆ. ವಕೀಲರು ಇರುತ್ತಾರೆ. ಮನೆ ಕಡೆ ಹುಷಾರಾಗಿ ನೋಡಿಕೊಳ್ಳಿ. ನೋಡೋಣ ನಮಗೆ ಒಳ್ಳೆಯದೂ ಆಗಬಹುದು. ಕೆಟ್ಟದ್ದೂ ಆಗಬಹುದು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಮ್ಮ ಕುಟುಂಬ ಸದಸ್ಯರಿಗೆ ತಿಳಿಸಿದರೆನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿಯವರಿಗೊಂದು ನ್ಯಾಯ, ನನಗೊಂದು ನ್ಯಾಯ; ಯಾವುದಕ್ಕೂ ಹೆದರಲ್ಲ, ಎಲ್ಲದಕ್ಕೂ ಸಿದ್ಧ; ಡಿಕೆಶಿ ಗುಡುಗು

ಡಿಕೆ ಶಿವಕುಮಾರ್ ಅವರ ಮಾತಿನಿಂದ ಅವರ ಪತ್ನಿ ಮತ್ತು ಪುತ್ರಿ ಇಬ್ಬರೂ ದುಃಖಿತಗೊಂಡು ಬಿಕ್ಕಿಬಿಕ್ಕಿ ಅತ್ತರಂತೆ. ಆಗ ಅವರಿಬ್ಬರಿಗೆ ಧೈರ್ಯ ತುಂಬಲು ಡಿಕೆಶಿ ಪ್ರಯತ್ನಿಸಿದರು. ಮನೆಯಿಂದ ಹೊರಡುವಾಗ ತಮ್ಮ ಪತ್ನಿಗೆ ಆತಂಕದಿಂದಲೇ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟರಂತೆ ಡಿಕೆಶಿ.ಇವತ್ತು ಸುದ್ದಿಗೋಷ್ಠಿ ನಡೆಸುವಾಗಲೂ ಡಿಕೆಶಿ ಅವರಲ್ಲಿ ಎಂದೂ ಇಲ್ಲದ ಆತಂಕ ಸ್ವಲ್ಪಮಟ್ಟಿಗೆ ಮಡುಗಟ್ಟಿದ್ದು ಎದ್ದುಗಾಣುತ್ತಿತ್ತು. ಅಲ್ಲದೇ, ನಿನ್ನೆಯಿಂದಲೂ ಯಾವೊಬ್ಬ ಕಾಂಗ್ರೆಸ್ ನಾಯಕ ಕೂಡ ಡಿಕೆಶಿ ಅವರ ಮನೆಯತ್ತ ಸುಳಿಯಲಿಲ್ಲ. ಒಂದಿಬ್ಬರು ಜೆಡಿಎಸ್ ಮುಖಂಡರು ಭೇಟಿ ಮಾಡಿದ್ದು ಬಿಟ್ಟರೆ ಉಳಿದಂತೆ ಡಿಕೆಶಿ ರಾಜಕೀಯ ಬೆಂಬಲದಲ್ಲಿ ಅಕ್ಷರಶಃ ಏಕಾಂಗಿಯಾಗಿ ಹೋಗಿದ್ದರು. ಅತ್ತ, ಪಿ. ಚಿದಂಬರಮ್ ಅವರಂತಹ ಘಟಾನುಘಟಿ ಮುಖಂಡರನ್ನೇ ಬಂಧಿಸಿರುವಾಗ ತನ್ನನ್ನು ಸುಮ್ಮನೆ ಬಿಡಲಾರರು ಎಂಬ ಭಾವನೆಯೂ ಡಿಕೆಶಿ ಅವರನ್ನು ಎದೆಗುಂದುವಂತೆ ಮಾಡಿರಬಹುದು.

(ವರದಿ: ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: August 30, 2019, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading