ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ (2019 Loksabha Election) ತಮಗೆ ಟಿಕೆಟ್ ತಪ್ಪಿದ್ದು ಹೇಗೆ ಎಂಬುದರ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಮಾತನಾಡಿದ್ದಾರೆ. 2019ರ ಚುನಾವಣೆ ಸಮಯದಲ್ಲಿ ಸುಮಲತಾ ಅಂಬರೀಶ್ ಕಾಂಗ್ರೆಸ್ನಿಂದ (Congress) ಟಿಕೆಟ್ ಕೇಳಿದ್ದರು. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಹಲವರ ಜೊತೆ ಮಾತುಕತೆ ನಡೆಸಿದ್ದರು. ಅಂದು ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಮೈತ್ರಿ ಹಿನ್ನೆಲೆ ಕಾಂಗ್ರೆಸ್ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ (Congress-JDS Government) ಬಿಟ್ಟುಕೊಟ್ಟಿತ್ತು. ಮೈತ್ರಿ ಅಭ್ಯರ್ಥಿಯಾಗಿ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧೆ ಮಾಡಿದ್ದರು. ಇತ್ತ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಹಾಕದೇ ಸುಮಲತಾರಿಗೆ ಬೆಂಬಲ ನೀಡಿತ್ತು. ಕೊನೆಗೆ ಸುಮಲತಾ ಅಂಬರೀಶ್ ಗೆಲುವು ದಾಖಲಿಸಿದ್ದರು.
ತಮ್ಮನ್ನು ಬಿಜೆಪಿ ಅಸೋಸಿಯೇಟ್ ಎಂದು ಟೀಕೆ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸುವ ವೇಳೆ ಸುಮಲತಾ ಅಂಬರೀಶ್ 2019ರ ಚುನಾವಣೆಯ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.
ಡಿಕೆ ಶಿವಕುಮಾರ್ಗೆ ಟಾಂಗ್?
ಸಂಸದೆ ಸುಮಲತಾ ಬಿಜೆಪಿ ಅಸೋಸಿಯೇಟ್ ಎಂದಿದ್ದ ಡಿಕೆಶಿಗೆ ಸುಮಲತಾ ತಿರುಗೇಟು ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರ ಟಿಕೆಟ್ ಕೇಳಿದ್ದೆ. ನಾನು ಟಿಕೆಟ್ ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ನಿರಾಕರಿಸಿದ್ದರು. ಜೆಡಿಎಸ್ಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದೇವೆ ಅಂತ ಸ್ಪಷ್ಟವಾಗಿ ತಿಳಿಸಿದ್ದರು. ಹಾಗಿದ್ರೆ ಡಿ.ಕೆ. ಶಿವಕುಮಾರ್ ಜೆಡಿಎಸ್ ಅಸೋಸಿಯೇಟ್ ಹಾ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಮೂಲಕ ತಮಗೆ ಕಾಂಗ್ರೆಸ್ ಟಿಕೆಟ್ ತಪ್ಪಲು ಡಿಕೆ ಶಿವಕುಮಾರ್ ಕಾರಣ ಎಂಬ ವಿಚಾರವನ್ನು ಸುಮಲತಾ ಅಂಬರೀಶ್ ಬಹಿರಂಗ ಮಾಡಿದ್ದಾರೆ.
ಯಾರು ಅಧಿಕೃತ ಆಹ್ವಾನ ನೀಡಿಲ್ಲ
ನನ್ನನ್ನ ಯಾರು ಕೂಡ ಅಧಿಕೃತವಾಗಿ ಪಕ್ಷಕ್ಕೆ ಆಹ್ವಾನ ಮಾಡಿಲ್ಲ. ಶರತ್ ಬಚ್ಚೇಗೌಡ ಪಕ್ಷೇತರವಾಗಿ ಗೆದ್ದಿದ್ದಾರೆ. ಹೊಸಕೋಟೆ ಕ್ಷೇತ್ರದ ಶಾಸಕರಾಗಿ ಶರತ್ ಬಚ್ಚೇಗೌಡ ಆಯ್ಕೆಯಾಗಿದ್ದಾರೆ. ಅವರನ್ನ ಮನೆಗೆ ಹೋಗಿ ಪಕ್ಷಕ್ಕೆ ಆಹ್ವಾನ ಮಾಡಿದ್ದಾರೆ. ಆದ್ರೆ ಅಧಿಕೃತವಾಗಿ ನನ್ನನ್ನ ಯಾರು ಇಲ್ಲಿಯವರೆಗೂ ಬಂದು ಸಂಪರ್ಕಿಸಿಲ್ಲ ಎಂದು ಹೇಳಿದರು.
ಟಿಕೆಟ್ ನೀಡಲಿಲ್ಲ
ಒಂದು ವೇಳೆ ಅಧಿಕೃತವಾಗಿ ನನ್ನನ್ನ ಆಹ್ವಾನ ಮಾಡಿದ್ರೆ ಆಗ ಯೋಚಿಸುವೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷದಲ್ಲಿಯೂ ನಮ್ಮ ಸ್ನೇಹಿತರಿದ್ದಾರೆ. ಲೋಕಸಭಾ ಚುನಾವಣೆ ವೇಳೆ ನನ್ನ ಒಲವು ಇದ್ದದ್ದು ಕಾಂಗ್ರೆಸ್ ಪಕ್ಷದ ಮೇಲಿತ್ತು. ಆದ್ರೆ ಮಂಡ್ಯ ಬೇಡ ಬೆಂಗಳೂರು ಸೌಥ್ ಅಥವ ಬೆಂಗಳೂರು ನಾರ್ಥ್ ಗೆ ನಿಲ್ಲಿ ಎಂದು ಹೇಳಿದ್ದರು.
ಸಂದರ್ಭಕ್ಕೆ ತಕ್ಕಂತೆ ನಿರ್ಣಯ
ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಬಗ್ಗೆ ಮಾತನಾಡಿದ ಸಂಸದೆ, ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ, ಇದು ರಾಜರಾರಣ. ನಾನು ಅಂಬರೀಶ್ ಅವರಿಗಷ್ಟೇ ರಾಜಕೀಯ ಸೀಮಿತ ಎಂದು ಕೊಂಡಿದ್ದೆ. ಆದ್ರೆ ಅನಿವಾರ್ಯವಾಗಿ ರಾಜಕೀಯಕ್ಕೆ ಬರಲೇಬೇಕಾಯ್ತು. ಮುಂದಿನ ದಿನಗಳಲ್ಲಿ ಸಮಯ ಸಂದರ್ಭಕ್ಕೆ ತಕ್ಕಂತೆ ನಿರ್ಣಯಗಳನ್ನ ತೆಗೆದು ಕೊಳ್ಳುತ್ತೇವೆ ಎಂದು ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ.
ಇದನ್ನೂ ಓದಿ: Mandya Politics: ಸುಮಲತಾ ಅಂಬರೀಶ್ ಟೆಕ್ನಿಕ್ ಫಾಲೋ ಮಾಡ್ತಾರಂತೆ ಶಿವರಾಮೇಗೌಡ್ರು; ವರ್ಕೌಟ್ ಆಗುತ್ತಾ?
ಕೆಲ ದಿನಗಳ ಹಿಂದೆ ಸುಮಲತಾ ಅವರ ಜೊತೆ ಗುರುತಿಸಿಕೊಂಡಿದ್ದ ಇಡವಾಳು ಸಚ್ಚಿದಾನಂದ್ ಬಿಜೆಪಿ ಸೇರ್ಪಡೆಯಾಗಿದ್ದರು. ಅಮಿತ್ ಶಾ ಮಂಡ್ಯಕ್ಕೆ ಆಗಮಿಸಿದ್ದಾಗ ಬಿಜೆಪಿ ಫ್ಲೆಕ್ಸ್ಗಳಲ್ಲಿ ಸುಮಲತಾ ಅಂಬರೀಶ್ ಫೋಟೋ ಬಳಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ