ಬೆಂಗಳೂರು(ಮಾ. 04): ಈಗ ಒನ್ ನೇಷನ್ ಒನ್ ಎಲೆಕ್ಷನ್ ಅಂತಿದ್ದಾರೆ. ಇದನ್ನ ಯಾರ ಒತ್ತಡದ ಮೇಲೆ ತಂದಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಮಾತನಾಡಿ, ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ಚರ್ಚೆಯಿದೆ. ಇದನ್ನ ಚರ್ಚೆಗೆ ಯಾರು ಅವಕಾಶ ಕೊಟ್ಟಿದ್ದು? ಕೇಂದ್ರ ಸರ್ಕಾರವೇನಾದ್ರೂ ಇದನ್ನ ಮಾಡಿ ಎಂದಿದ್ಯಾ? ಇವತ್ತು ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಇವುಗಳ ಬಗ್ಗೆ ಯಾಕೆ ಚರ್ಚೆ ಮಾಡಬಾರದಾ? ಎಂದು ಪ್ರಶ್ನಿಸಿದರು.
ದುಡ್ಡು ಕೊಟ್ಟು ಎಂಎಲ್ಎ ಖರೀದಿ ಮಾಡಿದ್ದಾರೆ. ಇವರಿಗೆ ಇನ್ಯಾವ ಮೌಲ್ಯವಿದೆ? ಇದರ ಬಗ್ಗೆ ಸಿಎಲ್ಪಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಒಂದು ರಾಷ್ಟ್ರ ಒಂದು ಚುನಾವಣೆ ಮೇಲಿನ ಚರ್ಚೆಯ ಪ್ರಸ್ತಾಪವನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಸ್ಪೀಕರ್ ನಡೆಗೆ ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯವರು ತಮ್ಮ ಪಕ್ಷದ ಪೊಲಿಟಿಕಲ್ ಅಜೆಂಡಾ ಹೇರಲು ಮುಂದಾಗಿದ್ದಾರೆ. ಎಲ್ಲಾ ದುಡ್ಡುಕೊಟ್ಟು ಖರೀದಿ ಮಾಡಿ ಏನು ಮೌಲ್ಯ ಉಳಿಸಿದ್ದಾರೆ? ಒನ್ ನೇಷನ್ ಒನ್ ಎಲಕ್ಷನ್ ಚರ್ಚೆಯನ್ನ ವಿರೋಧಿಸಲು ಸಿಎಲ್ಪಿ ಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು.
ಇದನ್ನೂ ಓದಿ: Budget Session - ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾಪಕ್ಕೆ ಕಾಂಗ್ರೆಸ್ ಆಕ್ಷೇಪ; ಸದನದಲ್ಲಿ ವಾಗ್ಯುದ್ಧ
ಸದನದಲ್ಲಿ ಲಿಮಿಟ್ ಆಗಿ ಮಾತಾಡಬೇಕು ಆಂತ ಕಾರ್ಯದರ್ಶಿ ಮೂಲಕ ಪತ್ರ ಕಳುಹಿಸಿದ್ದಾರೆ. ನಾವು ರಾಜಕಾರಣ ಮಾಡೋಕೆ ಬಂದಿರೋದು. ಚರ್ಚೆಗೆ ಎಷ್ಟು ವಿಷಯ ಇದೆ? ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ, ಇದರ ಬಗ್ಗೆ ಚರ್ಚೆ ಮಾಡುವುದು ಬೇಡವಾ? ಚರ್ಚೆಗೆ ಲಿಮಿಟ್ ಹಾಕೋಕೆ ಹೊರಟಿದ್ದಾರೆ. ಶಾಸಕರ ಚರ್ಚೆಗೆ ಲಿಮಿಟ್ ಹಾಕೋಕೆ ಇವರು ಯಾರು? ಎಂದು ಪ್ರಶ್ನೆ ಮಾಡಿದರು.
ಸಿಎಲ್ಪಿ ಸಭೆಯಲ್ಲಿ ತೀರ್ಮಾನಿಸಿದಂತೆ ಇಂದು ಅಧಿವೇಶನದ ಮೊದಲ ದಿನ ಕಾಂಗ್ರೆಸ್ ಸದಸ್ಯರು ಒನ್ ನೇಷನ್ ಒನ್ ಎಲೆಕ್ಷನ್ ಚರ್ಚೆಯನ್ನ ಬಲವಾಗಿ ವಿರೋಧಿಸಿದರು. ಇದು ಆಡಳಿತ ಪಕ್ಷ ಹಾಗೂ ಕಾಂಗ್ರೆಸ್ ಪ ಕ್ಷದ ಸದಸ್ಯರ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಯಿತು. ಸಿದ್ದರಾಮಯ್ಯ, ರಮೇಶ್ ಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಸದಸ್ಯರು ಸರ್ಕಾರದ ನಡೆಯನ್ನು ಆಕ್ಷೇಪಿಸಿದರು. ಸ್ಪೀಕರ್ ತಮ್ಮ ವಿಶೇಷಾಧಿಕಾರ ಬಳಸಿ ಒಂದು ರಾಷ್ಟ್ರ ಒಂದು ಚುನಾವಣೆಯ ಚರ್ಚೆಗೆ ಪ್ರಸ್ತಾಪ ಮಾಡಿದರು. ಸಿಎಂ ಯಡಿಯೂರಪ್ಪ ಅವರು ಈ ವಿಚಾರವನ್ನು ಸದನದಲ್ಲಿ ಓದಿದರು. ಧರಣಿ ನಡೆಸಿದ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಸಿಎಂ ಈ ವೇಳೆ ಟೀಕಿಸಿದರು.
ವರದಿ: ಸಂಜಯ್ ಎಂ ಹುಣಸನಹಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ