news18-kannada Updated:October 5, 2020, 11:41 AM IST
ಡಿಕೆ ಶಿವಕುಮಾರ್- ರಮೇಶ್ ಜಾರಕಿಹೊಳಿ
ಬೆಂಗಳೂರು (ಅ. 5): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮೇಲೆ ಇಂದು ಬೆಳಗ್ಗೆ ಸಿಬಿಐ ದಾಳಿ ನಡೆದಿದೆ. ಇದು ರಾಜಕೀಯ ದುರುದ್ದೇಶದಿಂದ ಕೂಡಿದ ದಾಳಿ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಡಿಕೆಶಿ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿರುವ ರಮೇಶ್ ಜಾರಕಿಹೊಳಿ ಕೂಡ ಇದೇವೇಳೆ ಡಿಕೆ ಶಿವಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ. ಡಿಕೆ ಶಿವಕುಮಾರ್ ನನ್ನ ಹಳೆಯ ಗೆಳೆಯ. ಅವರು ಕಾನೂನು ಹೋರಾಟದಲ್ಲಿ ಗೆದ್ದು ಬರಲಿ ಎಂದು ಹಾರೈಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ವೈಯಕ್ತಿಕವಾಗಿ ಡಿಕೆ ಶಿವಕುಮಾರ್ ನನಗೆ ಹಳೆಯ ಮಿತ್ರ. ಅವರು ಕಾನೂನು ಹೋರಾಟದಲ್ಲಿ ಜಯಶೀಲರಾಗಿ ಬರಲಿ ಎಂದು ಹಾರೈಸುತ್ತೇನೆ. ಉದ್ಯೋಗದಲ್ಲಿ ಅವನು ಸರಿಯಾಗಿ ಇದ್ದರೆ ಹೆದರುವ ಅವಶ್ಯಕತೆ ಇಲ್ಲ. ಉಪ ಚುನಾವಣೆ ವೇಳೆ ರಾಜಕೀಯ ಉದ್ದೇಶದಿಂದ ಈ ದಾಳಿ ಎಂಬುದರ ಬಗ್ಗೆ ಈಗ ಚರ್ಚೆ ಬೇಡ. ಆತನಿಗೆ ಒಳ್ಳೆಯದಾಗಲಿ ಅಷ್ಟೇ ಎಂದು ಡಿಕೆಶಿಗೆ ರಮೇಶ್ ಜಾರಕಿಹೊಳಿ ಶುಭ ಹಾರೈಸಿದ್ದಾರೆ.
ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಸಂಬಂಧಿಸಿದ 14 ಕಡೆ ಸಿಬಿಐ ದಾಳಿ ನಡೆಸಿದೆ. ಸೋಲಾರ್ ಪ್ಲಾಂಟ್ಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ಸೋಲಾರ್ ಪ್ಲಾಂಟ್ಗಳಿಗೆ ಅನುಮತಿ ನೀಡಿದ್ದರು. ಅನುಮತಿ ನೀಡಲು ಕಿಕ್ ಬ್ಯಾಕ್ ಪಡೆದಿದ್ದಾರೆಂಬ ಆರೋಪ ಕೇಳಿಬಂದಿತ್ತು. ಬಳ್ಳಾರಿಯ ಹಗರಿಬೊಮ್ಮನಹಳ್ಳಿಯ ಗದ್ದಿನಕೇರಿಯಲ್ಲಿ 1950 ಎಕರೆಯಲ್ಲಿ ನಿರ್ಮಾಣವಾಗಿರುವ ದೇಶದ ಅತಿ ದೊಡ್ಡ ಪ್ಲಾಂಟ್ಗೆ ಅನುಮತಿ ನೀಡುವ ವೇಳೆ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಪ್ರಕರಣದ ಬೆನ್ನತ್ತಿರುವ ಸಿಬಿಐ ಅಧಿಕಾರಿಗಳು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: DK Shivakumar: ಡಿಕೆ ಶಿವಕುಮಾರ್ಗೆ ಸಂಬಂಧಿಸಿದ 14 ಕಡೆ ಸಿಬಿಐ ದಾಳಿ; ಬೆಂಗಳೂರಲ್ಲಿ ಡಿಕೆಶಿ ಬೆಂಬಲಿಗರ ಪ್ರತಿಭಟನೆ
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆಶಿ ಮನೆ ಮೇಲೆ ಮಾತ್ರವಲ್ಲದೆ ಅವರಿಗೆ ಸೇರಿರುವ ಒಟ್ಟು 14 ಕಡೆ ಸಿಬಿಐ ದಾಳಿ ನಡೆಸಲಾಗಿದೆ. ಡಿಕೆ ಶಿವಕುಮಾರ್ ಅವರಿಗೆ ಸಂಬಂಧಿಸಿದ ಕರ್ನಾಟಕದ 9 ಕಡೆ, ದೆಹಲಿಯ 4 ಕಡೆ ಹಾಗೂ ಮುಂಬೈನ 1 ಕಡೆ ಇಂದು ದಾಳಿ ನಡೆದಿದ್ದು, ದಾಖಲೆಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದಿಂದ ಹಣ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿಂದೆ ಐಟಿ ಮತ್ತು ಇಡಿ ಅಧಿಕಾರಿಗಳು ಕೂಡ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಡಿಕೆ ಶಿವಕುಮಾರ್ ಜೈಲು ಸೇರಿದ್ದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು.
ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಮನೆ ಮೇಲೆ ನಡೆದ ಸಿಬಿಐ ದಾಳಿಯನ್ನು ಖಂಡಿಸಿ ಕಾಂಗ್ರೆಸ್ ಬೆಂಗಳೂರು ನಗರ ಘಟಕದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಭವನದ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಡಿಕೆಶಿ ಮನೆ ಮೇಲೆ ಸಿಬಿಐ, ಐಡಿ, ಇಡಿ ದಾಳಿ ನಡೆಸಲಾಗಿದೆ. ಉಪಚುನಾವಣೆ ವೇಳೆ ಪ್ರಧಾನಿ ಮೋದಿ ದುಷ್ಟ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಡಿಕೆಶಿ ಮನೆ ಎದುರು ರಸ್ತೆಯಲ್ಲೇ ಕುಳಿತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
Published by:
Sushma Chakre
First published:
October 5, 2020, 11:41 AM IST