ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದು ನಿಜವಾ? ಕುತೂಹಲ ಮೂಡಿಸಿದೆ ಡಿಕೆಶಿ ಭೇಟಿ

ಸಿದ್ದರಾಮಯ್ಯ ಹಾಗೂ ಕೆಲ ಕಾಂಗ್ರೆಸ್ ನಾಯಕರ ಬಗ್ಗೆ ಅಸಮಾಧಾನಗೊಂಡಿರುವ ಸಿಎಂ ಇಬ್ರಾಹಿಂ ಅವರಿಗೆ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಆಫರ್ ಕೊಟ್ಟಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಇಬ್ರಾಹಿಂರನ್ನ ಭೇಟಿಯಾಗಿದ್ದಾರೆ.

ಸಿಎಂ ಇಬ್ರಾಹಿಂ ಮತ್ತು ಡಿಕೆ ಶಿವಕುಮಾರ್

ಸಿಎಂ ಇಬ್ರಾಹಿಂ ಮತ್ತು ಡಿಕೆ ಶಿವಕುಮಾರ್

  • Share this:
ಬೆಂಗಳೂರು(ಡಿ. 13): ಕಾಂಗ್ರೆಸ್ ಪಕ್ಷದಲ್ಲಿ ನೀರಿನಿಂದ ಹೊರಬಂದ ಮೀನಿನಂತೆ ಒದ್ದಾಡುತ್ತಿರುವ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಕೈಪಾಳಯ ತೊರೆಯುವ ಮನಸ್ಸಿನಲ್ಲಿದ್ದಾರೆ ಎಂಬ ಗುಸು ಗುಸು ಸುದ್ದಿ ಅವರ ಆಪ್ತ ವಲಯದಿಂದಲೇ ಕೇಳಿಬರುತ್ತಿದೆ. ಇದಕ್ಕೆ ಇಂಬುಕೊಡುವಂತೆ ಮೊನ್ನೆ ಹೆಚ್.ಡಿ. ಕುಮಾರಸ್ವಾಮಿ ಅವರು ಇಬ್ರಾಹಿಂ ನಿವಾಸಕ್ಕೆ ತೆರಳಿ ಭೇಟಿಯಾಗಿ ಬಂದಿದ್ದಾರೆ. ಈ ಬೆಳವಣಿಗೆ ನಂತರ ಇಬ್ರಾಹಿಂ ಅವರು ಜೆಡಿಎಸ್ ಸೇರುವ ಸಾಧ್ಯತೆ ಇದೆ ಎಂಬ ವದಂತಿಗಳು ಹಬ್ಬಿವೆ. ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಬ್ರಾಹಿಂ ಅವರನ್ನ ಇಂದು ಭೇಟಿಯಾದರು. ಮೂಲಗಳ ಪ್ರಕಾರ, ಇಬ್ರಾಹಿಂ ಅವರ ಅಸಮಾಧಾನ ಆಲಿಸಲು ಮತ್ತು ಕಾಂಗ್ರೆಸ್ ತೊರೆಯದಂತೆ ಮನವೊಲಿಸಲು ಡಿಕೆಶಿ ಪ್ರಯತ್ನಿಸಿದರೆನ್ನಲಾಗಿದೆ. ಆದರೆ, ಇಬ್ರಾಹಿಂ ಕಡೆಯಿಂದ ಯಾವುದೇ ನಿರ್ದಿಷ್ಟ ಮಾತುಗಳು ಬರಲಿಲ್ಲ.

ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ಸಿ ಎಂ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಅವರ ಮತ್ತು ಸಿದ್ದರಾಮಯ್ಯ ಮಧ್ಯೆ ಅಂತರ ಬೆಳೆದಿದೆ. ಸಿದ್ದರಾಮಯ್ಯ ಬಗ್ಗೆ ಇಬ್ರಾಹಿಂ ಸಾಕಷ್ಟು ಅಸಮಾಧಾನ ಹೊಂದಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಕೃಷಿ ಕ್ಷೇತ್ರದ ಸುಧಾರಣೆಗೆ ಯಾಕೆ ತಡೆ? ಜಾಗತೀಕರಣದ ಹೆಜ್ಜೆ ಇಟ್ಟವರಿಂದಲೇ ಅಡ್ಡಿಯಾಗುತ್ತಿರುವುದು ಆಶ್ಚರ್ಯ

ಬೆನ್ಸನ್ ಟೌನ್​ನಲ್ಲಿರುವ ನಿವಾಸಕ್ಕೆ ಬಂದು ಭೇಟಿಯಾದ ಕುಮಾರಸ್ವಾಮಿ ಅವರ ಬಳಿ ಸಿ.ಎಂ. ಇಬ್ರಾಹಿಂ ಅವರನ್ನು ತಮ್ಮ ಅಸಮಾಧಾನವನ್ನು ತೋಡಿಕೊಂಡರೆಂಬ ಸುದ್ದಿಗಳಿವೆ. ಸಿದ್ದರಾಮಯ್ಯ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರ ವರ್ತನೆ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಿದ್ದರಾಮಯ್ಯ ಈ ಹಿಂದಿನಂತಿಲ್ಲ, ಬದಲಾಗಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಇಬ್ರಾಹಿಂಗೆ ಆಫರ್ ಮಾಡಿದರೆಂಬ ಮಾಹಿತಿ ಇದೆ. ಆದರೆ, ಇಬ್ರಾಹಿಂ ಎಲ್ಲಿಯೂ ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.

ವರದಿ: ಕೃಷ್ಣ ಜಿ.ವಿ.
Published by:Vijayasarthy SN
First published: