ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ದೆಹಲಿಯಲ್ಲೇ ಡಿಕೆಶಿ ಠಿಕಾಣಿ: ಇಂದು ಸೋನಿಯಾ ಗಾಂಧಿ ಭೇಟಿ ಸಾಧ್ಯತೆ

ಕೆ.ಸಿ. ವೇಣುಗೋಪಾಲ್ ಮತ್ತು ಅಹಮದ್ ಪಟೇಲ್ ಅವರನ್ನು 'ನೀವೇ ಸೋನಿಯಾ ಗಾಂಧಿ ಬಳಿ ಈ ವಿಚಾರ ಪ್ರಸ್ತಾಪಿಸಿ, ನನ್ನ ಬಗ್ಗೆ ಮೇಡಂಗೆ ಮನವರಿಕೆ ಮಾಡಿಕೊಡಿ ಎಂದು ಡಿ.ಕೆ.‌ ಶಿವಕುಮಾರ್ ಕೇಳಿಕೊಂಡಿದ್ದಾರೆ. ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಡಿ ಮಾಡಬೇಕು. ತಮ್ಮ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

  • Share this:
ನವದೆಹಲಿ(ಜ.27): ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಾದಿ ಪಡೆಯಲೇಬೇಕೆಂದು ಪಣತೊಟ್ಟಿರುವ ಮಾಜಿ ಸಚಿವ ಡಿ.ಕೆ.‌ ಶಿವಕುಮಾರ್ ಅದಕ್ಕಾಗಿ ಮಾಡುತ್ತಿರುವ ಪ್ರಯತ್ನಗಳಿಗೆ ಪಾರವೇ ಇಲ್ಲ. ರಾಜ್ಯದ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ್​​ ಖರ್ಗೆ ಸೇರಿದಂತೆ ಹಲವರನ್ನು ಡಿಕೆಶಿ ಗೌಪ್ಯವಾಗಿ ಭೇಟಿ ಮಾಡಿದರು. ಇಂಥವರನ್ನು ಬಹಿರಂಗವಾಗಿಯೇ ಸಹಾಯ ಕೇಳಿದ್ದರಿಂದ ಹಿಡಿದು ಎಐಸಿಸಿ ಪಡಸಾಲೆಯಲ್ಲಿ ಖದರ್ ಹೊಂದಿರುವ ದೆಹಲಿ ನಾಯಕರ ಮೂಲಕವೂ ಲಾಬಿ ಮಾಡಿದರು. ಅದು ಕೂಡ ಸಾಲದೆನಿಸಿದಾಗ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳಿಂದ ಒತ್ತಡ ತಂದರು. ಇಷ್ಟಾದರೂ ಡಿ.ಕೆ. ಶಿವಕುಮಾರ್ ಕನಸು ನನಸಾಗಿಲ್ಲ. ಹಾಗಂತ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಪಟ್ಟ ಪಡೆಯುವ ಪಟ್ಟನ್ನು ಸಡಿಲಿಸಿಲ್ಲ. ಬದಲಿಗೆ ಹೊಸ ಹೊಸ ವರಸೆ ಆರಂಭಿಸಿದ್ದಾರೆ.

ತಾವು ಅಂದುಕೊಂಡಂತೆ ನಡೆಯದ ಹಿನ್ನೆಲೆಯಲ್ಲಿ ಖುದ್ದಾಗಿ ದೆಹಲಿಗೆ ಆಗಮಿಸಿರುವ ಡಿ.ಕೆ. ಶಿವಕುಮಾರ್ ಈಗ ಮೂರು ದಿನಗಳಿಂದ ಇಲ್ಲಿಯೇ ಠಿಕಾಣಿ ಹೂಡಿ ಹೊಸ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರುಗಳಿರುವುದರಿಂದ ರಾಜ್ಯ ಕಾಂಗ್ರೆಸ್ ಸಾರಥ್ಯವನ್ನು ವಹಿಸಲು ಹೈಕಮಾಂಡ್ ಮೀನಾ-ಮೇಷ ಎಣಿಸುತ್ತಿದೆ ಎಂಬುದು ಡಿ.ಕೆ. ಶಿವಕುಮಾರ್ ಅವರ ದೃಢವಾದ ನಂಬಿಕೆ.

ಅದರಿಂದಾಗಿ ಈಗ ಹೈಕಮಾಂಡ್ ನಾಯಕರಿಗೆ 'ಜಾರಿ ನಿರ್ದೇಶನಾಲಯದಲ್ಲಿ ನನ್ನ ವಿರುದ್ಧ ದಾಖಲಾಗಿರುವುದು ರಾಜಕೀಯ ಪ್ರೇರಿತ ಪ್ರಕರಣವೇ ಹೊರತು ಅದರಲ್ಲಿ ಹುರುಳಿಲ್ಲ' ಎಂದು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಮೊದಲ ಹಂತದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಎಐಸಿಸಿ ಖಜಾಂಚಿ ಅಹಮದ್ ಪಟೇಲ್ ಅವರನ್ನು ಭೇಟಿ ಮಾಡಿ ವಿವರಿಸಿದ್ದಾರೆ. ಜೊತೆಗೆ 'ಪಕ್ಷಕ್ಕಾಗಿ ತಾನು ಮಾಡಿರುವ ಕೆಲಸವನ್ನು ಗುರುತಿಸಿ ಅವಕಾಶ ಕೊಡಿ' ಎಂಬ ಒತ್ತಡವನ್ನೂ ಹೇರುತ್ತಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ, ಎಂಬಿ ಪಾಟೀಲ್​​ ನಡುವೇ ತೀವ್ರ ಪೈಪೋಟಿ: ಅಧ್ಯಕ್ಷರ ನೇಮಕಕ್ಕೆ ವಿಳಂಬ ಯಾಕೆ ಗೊತ್ತೇ?

ಕೆ.ಸಿ. ವೇಣುಗೋಪಾಲ್ ಮತ್ತು ಅಹಮದ್ ಪಟೇಲ್ ಅವರನ್ನು 'ನೀವೇ ಸೋನಿಯಾ ಗಾಂಧಿ ಬಳಿ ಈ ವಿಚಾರ ಪ್ರಸ್ತಾಪಿಸಿ, ನನ್ನ ಬಗ್ಗೆ ಮೇಡಂಗೆ ಮನವರಿಕೆ ಮಾಡಿಕೊಡಿ ಎಂದು ಡಿ.ಕೆ.‌ ಶಿವಕುಮಾರ್ ಕೇಳಿಕೊಂಡಿದ್ದಾರೆ. ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಡಿ ಮಾಡಬೇಕು. ತಮ್ಮ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಅದೇ ಕಾರಣಕ್ಕೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಯೇ ಬೆಂಗಳೂರಿಗೆ ವಾಪಸ್ ಆಗಬೇಕೆಂದು ನಿಶ್ಚಯಿಸಿದ್ದಾರೆ. ಶನಿವಾರ ಸೋನಿಯಾ ಗಾಂಧಿಗೆ ವೇಣುಗೋಪಾಲ್ ಮೂಲಕ ಸಂದೇಶ ರವಾನೆಯಾಗಿದೆ.‌ ಭಾನುವಾರ ಸಾಮಾನ್ಯವಾಗಿ ಸೋನಿಯಾ ಗಾಂಧಿ ಯಾರನ್ನೂ ಭೇಟಿ ಮಾಡುವುದಿಲ್ಲ. ಅದರಿಂದ ಡಿ.ಕೆ. ಶಿವಕುಮಾರ್ ಅವರಿಗೂ ಭೇಟಿ ಮಾಡಲು ಸಾಧ್ಯವಾಗಿಲ್ಲ‌. ಸೋಮವಾರಕ್ಕಾಗಿ ಕಾಯುತ್ತಾ ದೆಹಲಿ ವಾಸ್ತವ್ಯವನ್ನು ಮುಂದುವರೆಸಿದ್ದಾರೆ.

ಇನ್ನೊಂದೆಡೆ ಭಾನುವಾರ ಹೈಕಮಾಂಡ್ ನಾಯಕರು ಸಿಗುವುದಿಲ್ಲ ಎನ್ನುವುದು ಖಾತರಿ ಆಗುತ್ತಿದ್ದಂತೆ ರಿಲ್ಯಾಕ್ಸ್ ಮೂಡಿಗೆ ಜಾರಿದ ಡಿ.ಕೆ. ಶಿವಕುಮಾರ್, ಬೆಳಿಗ್ಗೆ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನವನ್ನು ವೀಕ್ಷಿಸಿದರು. ಬಳಿಕ ತಾವು ಜಾರಿ ನಿರ್ದೇಶನಾಲಯದ ಸಮನ್ಸ್ ಅಡಿ ತನಿಖೆ ಎದುರಿಸುತ್ತಿದ್ದಾಗ ಇದ್ದ ತುಘಲಕ್ ಪೊಲೀಸ್ ಠಾಣೆ ಮತ್ತು ಜಾರಿ ನಿರ್ದೇಶನಾಲಯದ ಕಚೇರಿ ಇರುವ ಖಾನ್ ಮಾರ್ಕೆಟ್ ಪೊಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು, ಪೊಲೀಸ್ ಠಾಣೆಯಲ್ಲಿದ್ದಾಗ ಸಹಕಾರ ನೀಡಿದ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ಡಿ.ಕೆ. ಶಿವಕುಮಾರ್ ಸೋಮವಾರವಾದ್ರೂ ಸೊನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ ಅದು ಮುಂದಿನ ಬೆಳವಣಿಗೆಗಳಿಗೆ ಮುನ್ನುಡಿ ಬರೆಯಲಿದೆ.
First published: