ಮಂಡ್ಯ: ರಾಜ್ಯದಲ್ಲಿ ಚುನಾವಣಾ ಕಣ (Karnataka Election) ರಂಗೇರ್ತಿದ್ದು, ಕಾಂಗ್ರೆಸ್ನಲ್ಲಿ (Congress) ಮತ್ತೆ ಕ್ಷೇತ್ರ ಬದಲಾವಣೆ ಗುಸುಗುಸು ಜೋರಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಮದ್ದೂರಿನಿಂದ (Mandya, Maddur) ಸ್ಪರ್ಧೆ ಮಾಡ್ತಾರಾ? ಎಂಬ ಪ್ರಶ್ನೆ ಶುರುವಾಗಿದೆ. ಗುರುಚರಣ್ ಮತ್ತು ಟೀಮ್ ಭೇಟಿ ಬಳಿಕ ಇಂಥದ್ದೊಂದು ಅನುಮಾನ ಮೂಡಿದೆ. ಮದ್ದೂರು ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿರೋ ಗುರುಚರಣ್, ಮದ್ದೂರಿನಿಂದ ಡಿಕೆ ಶಿವಕುಮಾರ್ ಅವರೇ ಕಣಕ್ಕಿಳಿಯಬೇಕು ಎಂದು ಆಹ್ವಾನಿಸಿದ್ದರಾಂತೆ.
ಮದ್ದೂರಿಂದ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಗೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಗುರುಚರಣ್, ಅಭಿವೃದ್ಧಿ ದೃಷ್ಟಿಯಿಂದ ಡಿಕೆ ಶಿವಕುಮಾರ್ ಅವರನ್ನು ಮದ್ದೂರಿನಲ್ಲಿ ಸ್ಪರ್ಧೆ ಮಾಡಲಿ ಎಂದು ಆಹ್ವಾನ ನೀಡಿದ್ದೇವೆ.
ಅವರು ಬಂದರೆ ನಮ್ಮ ಮದ್ದೂರು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಲಿದೆ. ಈ ಬಗ್ಗೆ ನಮ್ಮ ಜಿಲ್ಲಾ ಕಾಂಗ್ರೆಸ್ ನಾಯಕರ ಗಮನಕ್ಕೆ ತರದೆ ಅವರಿಗೆ ಆಹ್ವಾನ ನೀಡಿದ್ದೇನೆ. ಮುಂದೆ ಮತ್ತೊಮ್ಮೆ ನಮ್ಮ ಜಿಲ್ಲಾ ನಾಯಕರ ಸಮೇತ ಹೋಗಿ ಅವರನ್ನು ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಹ್ವಾನಿಸಲಿದ್ದೇವೆ. ಇದಕ್ಕೆ ಡಿಕೆ ಶಿವಕುಮಾರ್ ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: D K Shivakumar: ಸಿಎಂ ಕುರ್ಚಿ ಮೇಲೆ ಡಿಕೆ ಶಿವಕುಮಾರ್ ಕಣ್ಣು! ಸಭೆಯಲ್ಲಿ ಹೊರಬಂತು ಡಿಕೆ ಮನದಾಸೆ
'ಗೌಡ' ಟ್ರಂಪ್ಕಾರ್ಡ್ ಪ್ರಯೋಗಿಸಿದ ಡಿಕೆ ಶಿವಕುಮಾರ್
ಇನ್ನು, ದಳಪತಿಗಳ ಭದ್ರಕೋಟೆ ಹಾಸನದಲ್ಲಿ ಡಿಕೆ ಶಿವಕುಮಾರ್ ‘ಗೌಡ’ ಟ್ರಂಪ್ಕಾರ್ಡ್ ಬಳಸಿದ್ದಾರೆ. 'ದೇವೇಗೌಡರನ್ನು ಪ್ರಧಾನಿ ಮಾಡಿದ್ವಿ, ನಾವೂ ಸಹಕರಿಸಿದ್ದೀವಿ. ಕುಮಾರಸ್ವಾಮಿಯನ್ನ ಮುಖ್ಯಮಂತ್ರಿ ಮಾಡಿದ್ದೀರಿ, ಸಹಕರಿಸಿದ್ದೀವಿ. ನಿಮ್ಮ ಋಣ ತೀರಿಸಲು ನಮಗೆ ಅವಕಾಶ ಕೊಡಿ' ಅಂತ ಒಕ್ಕಲಿಗ ನಾಯಕರ ಹೆಸರು ಹೇಳಿ ಡಿಕೆ ಶಿವಕುಮಾರ್ ಮತ ಕೇಳಿದ್ದಾರೆ.
ಹಾಸನದ ಬಳಿಕ ಚಿಕ್ಕಮಗಳೂರಲ್ಲೂ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯಿತು, ಚಿಕ್ಕಮಗಳೂರಲ್ಲೂ ಡಿಕೆ ಶಿವಕುಮಾರ್ ಒಕ್ಕಲಿಗರ ಅಸ್ತ್ರ ಬಳಸಿದರೆ, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸಿ.ಟಿ.ರವಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು.
‘ಕಟೀಲ್ರದ್ದು ಬಚ್ಚಲುಬಾಯಿ’
ಅಪ್ಪ- ಮಕ್ಕಳು ಚಪ್ಪಲಿಯಿಂದ ಹೊಡೆದಾಡುತ್ತಾರೆ ಎಂದು ಕಟೀಲ್ ದೇವೇಗೌಡರ ವಿರುದ್ಧ ಮಾತನಾಡಿದ್ದಕ್ಕೆ ಡಿ.ಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ. ಕಟೀಲ್ ಬಾಯಿಗೆ ಬಂದಂತೆ ಮಾತನಾಡ್ತಾರೆ. ಇಂಥದವರ ಬಾಯನ್ನು ಹಳ್ಳಿಯಲ್ಲಿ ಬಚ್ಚಲಬಾಯಿ ಅಂತ ಕರೆಯುತ್ತಾರೆ. ಕಟೀಲ್ ಒಂದು ಪಕ್ಷದ ಅಧ್ಯಕ್ಷ. ಅವರ ಪಕ್ಷದಲ್ಲಿ ಹೊಡೆದಾಟ ನಡಿಯುತ್ತಿದೆ. ಯತ್ನಾಳ, ನಿರಾಣಿ, ವಿಶ್ವನಾಥ್, ಯೋಗೇಶ್ವರ್ ಬಹಿರಂಗವಾಗಿ ಹೇಳಿಕೆ ಕೊಡ್ತಾರೆ. ಅವ್ರ ಬಗ್ಗೆ ಹೇಳಿಕೆ ನೀಡಲಿ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಸಿ.ಟಿ ರವಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಜೆಡಿಎಸ್ಗೆ ಅಧಿಕಾರ ಮುಖ್ಯ, ತತ್ವ-ಸಿದ್ಧಾಂತ ಮುಖ್ಯ ಅಲ್ಲ. ಜೆಡಿಎಸ್ ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ಕೋಮುವಾದ ಸಿದ್ಧಾಂತದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಏಕೈಕ ಪಕ್ಷ ಕಾಂಗ್ರೆಸ್.
ಬಿಜೆಪಿ ಕೋಮುವಾದದದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಜನರ ಭಾವನೆಯನ್ನ ಕೆರಳಿಸಿ, ಜಾತಿ ಅಫೀಮು ನೀಡಿ, ಧರ್ಮಾಂಧರನ್ನಾಗಿಸುವ ಪಕ್ಷ ಬಿಜೆಪಿ. ಸಿ.ಟಿ.ರವಿ ಆರ್ಎಸ್ಎಸ್ನಲ್ಲಿ ಟ್ರೈನಿಂಗ್ ಆಗಿರುವ ಗಿರಾಕಿ. ಸಾವರ್ಕರ್, ಗೋವಾಲ್ಕರ್ ಸಂವಿಧಾನ ವಿರೋಧ ಮಾಡಿದವರು. ಅಲ್ಲಿ ತಯಾರಾಗಿರುವವರು ಸಿ.ಟಿ.ರವಿ, ಸಿ.ಟಿ.ರವಿಗೆ ಸಂವಿಧಾನ ಹೇಗೆ ಅರ್ಥವಾಗುತ್ತೆ. ಸಿ.ಟಿ.ರವಿ ಅಫೀಮು ಕುಡಿದವರ ರೀತಿ ಮಾತನಾಡುತ್ತಾರೆ. ಆತ ರಾಜಕಾರಣದಲ್ಲಿ ಇರಲು ಲಾಯಕ್ಕಲ್ಲ, ಸಂವಿಧಾನದಲ್ಲಿ ಗೌರವ ಇಲ್ಲದವರು ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ಟೀಕೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ