ಜೈಲಿಂದ ಬಂದಮೇಲೆ ಹೆಚ್ಚಾಯ್ತು ಡಿಕೆಶಿ ವರ್ಚಸ್ಸು; ಚುನಾವಣಾ ಅಖಾಡದಲ್ಲಿ ಸಿದ್ದರಾಮಯ್ಯ ಬದಲು ಟ್ರಬಲ್ ಶೂಟರ್ ಜಪ!

 ರಾಜ್ಯ ವಿಧಾನಸಭಾ ಉಪ ಚುನಾವಣಾ ಕಣದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಗೋಕಾಕ್ ಕ್ಷೇತ್ರವನ್ನು ಹೊರತುಪಡಿಸಿ ಉಳಿದ 14 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಡಿಕೆಶಿ ಜಪ ಮಾಡತೊಡಗಿದ್ದಾರೆ.

news18-kannada
Updated:November 19, 2019, 11:07 AM IST
ಜೈಲಿಂದ ಬಂದಮೇಲೆ ಹೆಚ್ಚಾಯ್ತು ಡಿಕೆಶಿ ವರ್ಚಸ್ಸು; ಚುನಾವಣಾ ಅಖಾಡದಲ್ಲಿ ಸಿದ್ದರಾಮಯ್ಯ ಬದಲು ಟ್ರಬಲ್ ಶೂಟರ್ ಜಪ!
ಡಿ.ಕೆ ಶಿವಕುಮಾರ್
  • Share this:
ಬೆಂಗಳೂರು (ನ. 19): ದಾಖಲೆರಹಿತ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. 1 ತಿಂಗಳ ಕಾಲ ಇಡಿ ಅಧಿಕಾರಿಗಳ ವಶದಲ್ಲಿದ್ದ ಡಿಕೆಶಿ ಮತ್ತೆ ಹಳೆಯ ಫಾರ್ಮ್​ಗೆ ಮರಳುತ್ತಿದ್ದಾರೆ. ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಇನ್ನು 15 ದಿನಗಳಷ್ಟೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದ ಅಖಾಡಕ್ಕೆ ಇಳಿಯಲು ಡಿ.ಕೆ. ಶಿವಕುಮಾರ್ ಸಿದ್ಧತೆ ನಡೆಸಿದ್ದಾರೆ.

ರಾಜ್ಯ ವಿಧಾನಸಭಾ ಉಪ ಚುನಾವಣಾ ಕಣದಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೆಸರು ಜೋರಾಗಿ ಕೇಳಿಬರುತ್ತಿದೆ. ಗೋಕಾಕ್ ಕ್ಷೇತ್ರವನ್ನು ಹೊರತುಪಡಿಸಿ ಉಳಿದ 14 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಡಿಕೆಶಿ ಜಪ ಮಾಡತೊಡಗಿದ್ದಾರೆ. ರಾಜ್ಯ ಉಪಸಮರದಲ್ಲಿ ಕನಕಪುರ ಬಂಡೆಯ ಜಪ ಜೋರಾಗಿದ್ದು, ಸಿದ್ದರಾಮಯ್ಯನವರಿಗಿಂತ ಹೆಚ್ಚಿನ ಬೇಡಿಕೆ ಡಿ.ಕೆ. ಶಿವಕುಮಾರ್​​ಗೆ ಸೃಷ್ಟಿಯಾಗಿದೆ.

ಈಗಾಗಲೇ ಜೆಡಿಎಸ್​ ಮತ್ತು ಬಿಜೆಪಿ ತನ್ನ ಸ್ಟಾರ್ ಪ್ರಚಾರಕರ ಹೆಸರನ್ನು ಘೋಷಣೆ ಮಾಡಿದೆ. ಕಾಂಗ್ರೆಸ್​ನ ಪ್ರಚಾರಕರ ಪಟ್ಟಿಯಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರಿಗೂ ಡಿಕೆಶಿಯಷ್ಟು ಬೇಡಿಕೆಯಿಲ್ಲ ಎಂಬುದು ಅಚ್ಚರಿಯ ವಿಚಾರ. ತಮ್ಮ ಪರ ಪ್ರಚಾರ ಮಾಡಲು ಬರಬೇಕೆಂದು ಕಾಂಗ್ರೆಸ್ ಅಭ್ಯರ್ಥಿಗಳು ಡಿ.ಕೆ. ಶಿವಕುಮಾರ್​ಗೆ ಫೋನ್ ಮಾಡಿ ಒತ್ತಾಯಿಸತೊಡಗಿದ್ದಾರೆ. 14 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಂದಲೂ ಕರೆಗಳು ಬರುತ್ತಿರುವುದರಿಂದ ಡಿ.ಕೆ. ಶಿವಕುಮಾರ್ ಯಾವೆಲ್ಲ ಕ್ಷೇತ್ರಗಳ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಹಾಸನದಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ; ಕೈ ಹಿಡಿಯಲು ಸಿದ್ಧರಾದ ಜೆಡಿಎಸ್​ ಶಾಸಕ ಇವರೇ...

ತಮ್ಮ ಆಪ್ತರ ಮೂಲಕ ಫೋನ್ ಮಾಡಿಸಿ ಒತ್ತಡ ಹೇರುತ್ತಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಬರಬೇಕೆಂದು ಡಿ.ಕೆ. ಶಿವಕುಮಾರ್ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲ ಅಭ್ಯರ್ಥಿಗಳು ಖುದ್ದು ಬಂದು ನೀವು ಬರಲೇಬೇಕೆಂದ ಹಠ ಹಿಡಿದಿದ್ದಾರೆ. ಅದರಲ್ಲೂ ಕೆ.ಆರ್ ಪೇಟೆ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಸದಾಶಿವನಗರ ಡಿಕೆಶಿ ಮನೆಗೆ ಬಂದು ಕಣ್ಣೀರು ಹಾಕಿದ್ದಾರೆ. ತಮಗೆ ಈ ಬಾರಿ ತನು-ಮನ-ಧನ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿ.ಕೆ. ಶಿವಕುಮಾರ್​ಗೆ 15 ಕ್ಷೇತ್ರಗಳಿಗೂ ಹೋಗಲು ಮನಸಿಲ್ಲ. ಅಲ್ಲದೆ, ಅವರ ಆರೋಗ್ಯವೂ ಸರಿಯಾಗಿಲ್ಲ. ಆಗಾಗ ಅನಾರೋಗ್ಯದಿಂದ ಅವರು ಆಸ್ಪತ್ರೆ ಸೇರುತ್ತಿದ್ದಾರೆ. ಹೀಗಾಗಿ, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದು ಕಷ್ಟ ಎಂದು ಅಭ್ಯರ್ಥಿಗಳಿಗೆ ತಿಳಿಸಿರುವ ಡಿಕೆಶಿ ಸಾಧ್ಯವಾದರೆ ಬರುವೆ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಈ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಬಹುತೇಕರು ಸಿದ್ದರಾಮಯ್ಯ ಬಣಕ್ಕೆ ಸೇರಿದವರು. ಆದರೂ, ಜೈಲಿಗೆ ಹೋಗುವ ಮೊದಲು ಸ್ಟಾರ್ ಆಗಿದ್ದ ಡಿಕೆಶಿ ಜೈಲಿನಿಂದ ಬಂದ ನಂತರ ಸೂಪರ್​ಸ್ಟಾರ್ ಆಗಿದ್ದಾರೆ. ಹೀಗಾಗಿ, ಅವರ ವರ್ಚಸ್ಸನ್ನು ಮತ್ತು ಅವರ ಬಗೆಗಿನ ಅನುಕಂಪವನ್ನು ಮತವಾಗಿ ಪರಿವರ್ತನೆ ಮಾಡಿಕೊಳ್ಳಲು ಎಲ್ಲ ಅಭ್ಯರ್ಥಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ.

ಶಾಸಕ ತನ್ವೀರ್ ಸೇಠ್ ಹಲ್ಲೆಯ ಹಿಂದಿತ್ತು ಈ ಕಾರಣ!; ಆರೋಪಿಯ ಗೆಳೆಯರು ಬಿಚ್ಚಿಟ್ಟ ಅಚ್ಚರಿಯ ಮಾಹಿತಿ ಇಲ್ಲಿದೆ...ಜೈಲಿಗೆ ಹೋಗಿ ಬಂದವರು ಎಂಬ ಅನುಕಂಪ ಇರುವುದರಿಂದ ಡಿಕೆಶಿ ಕ್ಷೇತ್ರಕ್ಕೆ ಕಾಲಿಟ್ಟು ಒಂದು ರೌಂಡ್ ಪ್ರಚಾರ ಮಾಡಿದರೆ ತಮ್ಮ ಪರವಾಗಿ ಹವಾ ಶುರುವಾಗುತ್ತದೆ ಅನ್ನೋದು ಅಭ್ಯರ್ಥಿಗಳ ಲೆಕ್ಕಾಚಾರ. ಆದರೆ, ಎಲ್ಲರಿಂದಲೂ ಆಹ್ವಾನ ಬರುತ್ತಿರುವುದರಿಂದ ಇರುವ ಯಾವ ಕ್ಷೇತ್ರಕ್ಕೆ ಹೋಗುವುದು ಎಂಬ ಗೊಂದಲದಲ್ಲಿ ಡಿಕೆಶಿ ಇದ್ದಾರೆ. ಅನಾರೋಗ್ಯದ ನಡುವೆ ಡಿಕೆಶಿ ಯಾವ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಾರೆ ಎಂಬ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

(ವರದಿ: ಚಿದಾನಂದ್ ಪಟೇಲ್)

 

First published: November 19, 2019, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading