ಬೆಂಗಳೂರು (ಡಿ.09): ಹಳ್ಳಿ ಹಕ್ಕಿ ಎಚ್ ವಿಶ್ವನಾಥ್ (H Vishwanth) ನಡೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ವಿಧಾನಸಭೆ ಚುನಾವಣೆ ಹತ್ತಿರವಿದ್ದು, ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ (BJP) ಸೇರಿದ್ದ ಹೆಚ್ ವಿಶ್ವನಾಥ್ ಮರಳಿ ಕಾಂಗ್ರೆಸ್ (Congress) ಗೂಡು ಸೇರುವುದು ಖಚಿತ ಎನ್ನುವ ಮಾತುಗಳು ಕೇಳಿ ಬರ್ತಿದೆ. ಇತ್ತೀಚಿಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿದ್ದ ಹೆಚ್ ವಿಶ್ವನಾಥ್, ಇವತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K Shivakumar) ಅವರನ್ನು ಭೇಟಿಯಾಗಿದ್ದಾರೆ.
ಮರಳಿ ಕೈ ಗೂಡು ಸೇರಲಿದ್ದಾರಾ ಎಚ್ ವಿಶ್ವನಾಥ್?
ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಎಚ್ ವಿಶ್ವನಾಥ್ ಭೇಟಿ ಮಾಡಿದ್ರು. ಇಬ್ಬರು ನಾಯಕರು ಕೆಲ ಹೊತ್ತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ಬಿಜೆಪಿ ಜೊತೆ ಮುನಿಸಿಕೊಂಡಿರುವ ಎಚ್.ವಿಶ್ವನಾಥ್ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ನಿರ್ಧಾರ
ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಮರಳಿ ಕಾಂಗ್ರೆಸ್ಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ. ಮೊನ್ನೆ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಅದಕ್ಕೂ ಮುನ್ನ ಸಿದ್ದರಾಮಯ್ಯರನ್ನು ಕಂಡು ಮಾತುಕತೆ ನಡೆಸಿದ್ದರು. ಸದ್ಯದಲ್ಲೇ ಸಿದ್ದರಾಮಯ್ಯ, ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ.
ಡಿಕೆ ಶಿವಕುಮಾರ್, ಎಚ್ ವಿಶ್ವನಾಥ್ ಚರ್ಚೆ
ಇಬ್ಬರೂ ನಾಯಕರ ಚರ್ಚೆ ಬಳಿಕ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು ವಿಶ್ವನಾಥ್ ಯುವ ಕಾಂಗ್ರೆಸ್ನಲ್ಲಿದ್ದಾಗಿನಿಂದಲೂ ಕೆಲಸ ಮಾಡಿದ್ದೇವೆ. ಖರ್ಗೆ ಜೊತೆಗೂ ಸಂಪುಟದಲ್ಲಿ ವಿಶ್ವನಾಥ್ ಅವರು ಕೆಲಸ ಮಾಡಿದ್ದಾರೆ. ಅವರೊಬ್ಬ ವಿಸಿನರಿ (Visionary) ಇರುವ ವ್ಯಕ್ತಿ. ಹೀಗಾಗಿ ಈ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ರಾಜಕೀಯವಾಗಿ ಯಾವುದೇ ವಿಚಾರವನ್ನು ನಾವು ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಬಾಂಬೆ ಫ್ರೆಂಡ್ಸ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ತಾರಾ?
ವಿಶ್ವನಾಥ್ ನಿಮ್ಮ ಬಾಂಬೆ ಫ್ರೆಂಡ್ಸ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ರಾಜಕೀಯ ನಿಂತ ನೀರಲ್ಲ, ನಾನು ಈ ಕುರ್ಚಿ ಬಿಟ್ಟರೆ (ಕೆಪಿಸಿಸಿ ಅಧ್ಯಕ್ಷ ಸ್ಥಾನ) ಪಕ್ಕದಲ್ಲಿರುವ (ಮಾಜಿ ಶಾಸಕ ನಂಜಯ್ಯನಮಠ) ಇವರೇ ಬಂದು ಕುಳಿತು ಕೊಳ್ತಾರೆ. ಈಗಾಗಲೇ ಶಿವರಾಂ ಹೆಬ್ಬಾರ್ ಕ್ಷೇತ್ರದಲ್ಲಿ ಪಾಟೀಲ್ ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ.
ರಾಜಕೀಯ ನಿಂತ ನೀರಲ್ಲ
ಹಿರೇಕೆರೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಬಣಕಾರ್ ಬರೀ ಎರಡ್ಮೂರು ಸಾವಿರ ಮತಗಳಲ್ಲಿ ಸೋತಿದ್ದರು. ಬಣಕಾರ್ ಈಗ ಪಕ್ಷ ಸೇರಿದ್ದಾರೆ. ರಾಜಕೀಯದಲ್ಲಿ ಬದಲಾವಣೆಗಳು ಸಹಜ ಎಂದ್ರು. ರಾಜಕೀಯ ನಿಂತ ನೀರಲ್ಲ, ನಮ್ಮ ಸಿದ್ದಾಂತ ನಂಬಿಕೊಂಡು, ಒಪ್ಪಿಕೊಂಡು ಬರುವಂತವರಿಗೆ ಸ್ವಾಗತವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: SriRamulu: ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ತಾರಾ? ರಾಮುಲು ಬಿಜೆಪಿ ಬಿಡ್ತಾರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ!
ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಹೆಣಗಾಡುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರು ನನ್ನ ಮೇಲಿನ ಅನುಕಂಪದಿಂದ ಹಾಗೆ ಹೇಳಿದ್ದಾರೆ. ದಿನಕ್ಕೆ ಇರೋದು 24 ಗಂಟೆ ಮಾತ್ರ. ಕಾಲ ಇನ್ನೊಂದಿಷ್ಟು ಹೆಚ್ಚಿದ್ದರೆ ಹೆಚ್ಚು ಕೆಲಸ ಮಾಡಬಹುದಿತ್ತು. ನಾನು ದಿನ ಮಲಗೋದು ರಾತ್ರಿ 2-3 ಗಂಟೆ ಆಗುತ್ತದೆ. ಹೀಗಾಗಿ ಆರೋಗ್ಯದ ಬಗ್ಗೆ ಗಮನ ಕೊಡಿ ಎಂದು ಪರಮೇಶ್ವರ್ ಹೇಳ್ತಾ ಇರ್ತಾರೆ ಎಂದು ಡಿಕೆಶಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ