ಮೈಸೂರಲ್ಲಿ ಸಿದ್ದು ಕೋಟೆ ಭೇದಿಸಿದ ‘ಕನಕಪುರ ಬಂಡೆ’; ಸಿದ್ದರಾಮಯ್ಯರಿಂದ ಬೆಳೆದ ನಾಯಕರಿಂದ ಡಿಕೆಶಿ ಗುಣಗಾನ

ಡಿಕೆಶಿ ಅವರಿಂದಲೇ ತಾವು ರಾಜಕೀಯವಾಗಿ ಉದ್ಧಾರವಾಗಿದ್ದು ಎಂದು ಮೈಸೂರಿನಲ್ಲಿ ಹಲವು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ. ಮೈಸೂರಿಗೆ ಬಂದ ಡಿಕೆಶಿ ಸ್ವಾಗತಕ್ಕಾಗಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಜೆಡಿಎಸ್ ಕಾರ್ಯಕರ್ತರೂ ಸೇರಿದ್ದು ಅಚ್ಚರಿ ಮೂಡಿಸಿತು.

news18-kannada
Updated:November 7, 2019, 3:53 PM IST
ಮೈಸೂರಲ್ಲಿ ಸಿದ್ದು ಕೋಟೆ ಭೇದಿಸಿದ ‘ಕನಕಪುರ ಬಂಡೆ’; ಸಿದ್ದರಾಮಯ್ಯರಿಂದ ಬೆಳೆದ ನಾಯಕರಿಂದ ಡಿಕೆಶಿ ಗುಣಗಾನ
ಮೈಸೂರಿನಲ್ಲಿ ಡಿಕೆಶಿಗೆ ಸ್ವಾಗತ
  • Share this:
ಮೈಸೂರು(ನ. 07): ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೊಸ ಇನ್ನಿಂಗ್ಸ್ ಪ್ರಾರಂಭವಾದಂತಿದೆ. ಅವರ ಜನಪ್ರಿಯತೆ ಹಿಂದಿಗಿಂತಲೂ ಹೆಚ್ಚಿದಂತಿದೆ. ಇದಕ್ಕೆ ಮೈಸೂರು ಇವತ್ತು ಸಾಕ್ಷಿಯಾಗಿದೆ. ರೈಲ್ವೆ ನಿಲ್ದಾಣದಲ್ಲಿ ಅವರಿಗೆ ಸಿಕ್ಕ ಭರ್ಜರಿ ಸ್ವಾಗತ; ಕಾಂಗ್ರೆಸ್ ಸಭೆಯಲ್ಲಿ ವಿವಿಧ ನಾಯಕರು ಅವರನ್ನು ಹೊಗಳಿದ ಪರಿ ಹೊಸದೊಬ್ಬ ಮುಂದಾಳುವಿನ ಉದಯಕ್ಕೆ ಕನ್ನಡಿ ಹಿಡಿದಂತಿತ್ತು. ಎಲ್ಲಕ್ಕಿಂತ ಹೆಚ್ಚು ಅಚ್ಚರಿ ಹುಟ್ಟಿಸಿದ್ದು, ಸಿದ್ದರಾಮಯ್ಯ ಅವರ ಆಪ್ತರಿಂದ ಡಿಕೆಶಿ ಬಗ್ಗೆ ವ್ಯಕ್ತವಾದ ಆರಾಧನೆ, ಗೌರವ. ಇದು ಹೊಸ ರಾಜಕೀಯ ಸಮೀಕರಣಕ್ಕೆ ಮುನ್ನುಡಿಯಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.

ಸಿದ್ದರಾಮಯ್ಯ ಅವರಿಂದಲೇ ರಾಜಕೀಯವಾಗಿ ಬೆಳೆದ ಅಥವಾ ವಿವಿಧ ಹಂತಗಳಲ್ಲಿ ಸಹಾಯ ಪಡೆದ ತನ್ವೀರ್ ಸೇಠ್, ಧೃವನಾರಾಯಣ್, ಅನಿಲ್ ಚಿಕ್ಕಮಾದು, ಪುಷ್ಪ ಅಮರನಾಥ್ ಮೊದಲಾದವರು ಡಿಕೆಶಿ ಅವರನ್ನು ಮನದುಂಬಿ ಹೊಗಳಿದರು.

ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಬಂದ 21 ಕೋಟಿ ರೂ. ಪರಿಹಾರ ಹಣ ತನ್ನ ಖಾಸಗಿ ಬ್ಯಾಂಕ್​ ಖಾತೆಗೆ ಹಾಕಿಕೊಂಡ ಅಧಿಕಾರಿ

ಡಿಕೆಶಿ ಅವರೇ ಮುಂದಿನ ಮುಖ್ಯಮಂತ್ರಿ ಎಂದು ತನ್ವೀರ್ ಸೇಠ್ ಹೇಳಿಯೇ ಬಿಟ್ಟರು. ಡಿಕೆಶಿ ಅಜಾತ ಶತ್ರು. ದುರ್ದೈವದಿಂದ ಅವರಿಗೆ ಕಷ್ಟ ಬಂದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್  ಪಕ್ಷವು ಅವರ ಜೊತೆ ಸದಾ ಇರುತ್ತದೆ. ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಡಿಕೆಶಿ ಮುಖ್ಯಮಂತ್ರಿಯಾಗಬೇಕು ಎಂದು ತನ್ವಿರ್ ಸೇಠ್ ಹೇಳಿದರು.

ಇನ್ನು, ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಅವರು ತಮ್ಮ ರಾಜಕೀಯ ಪ್ರವೇಶಕ್ಕೆ ಡಿಕೆ ಶಿವಕುಮಾರ್ ಕಾರಣ ಎಂದು ಹೇಳಿಕೊಂಡರು. ನನ್ನ ರಾಜಕೀಯ ಪ್ರವೇಶಕ್ಕೆ ಡಿಕೆಶಿ ಕಾರಣ. ರಾಜಕಾರಣದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿದ್ದರೆ ಇದರಲ್ಲಿ ಡಿಕೆಶಿ ಪಾತ್ರ ಇದೆ. ನನ್ನ ಚುನಾವಣೆಗಳಲ್ಲಿ ನ್ನ ಪರವಾಗಿ ಪ್ರಚಾರ ಮಾಡಿದ್ದರು. ಡಿಕೆಶಿ ಕನಕಪುರ ಬಂಡೆ ಅಲ್ಲ, ಕಾಂಗ್ರೆಸ್​ಗೂ ಬಂಡೆ ಆಗಿದ್ದಾರೆ ಎಂದು ಧೃವನಾರಾಯಣ ಹೊಗಳಿದರು.

ದಿವಂಗತ ಚಿಕ್ಕಮಾದು ಅವರ ಮಗ ಅನಿಲ್ ಚಿಕ್ಕಮಾದು ಅವರೂ ಡಿಕೆಶಿಗೆ ಫುಲ್ ಮಾರ್ಕ್ಸ್ ಕೊಟ್ಟರು. ತಮ್ಮ ತಂದೆ ಚಿಕ್ಕಮಾದು ಅವರು ಗೆಲ್ಲಲು ಡಿಕೆಶಿ ಕಾರಣ. ಎಡಗೈಯಲ್ಲಿ ಮಾಡಿದ್ದು ಬಲಗೈಗೆ ಗೊತ್ತಾಗಲ್ಲ ಎಂಬಂತೆ ಅವರು ಸಹಾಯ ಮಾಡುತ್ತಾರೆ. ಅವರು ಯಾವುದೇ ಖಾತೆ ಕೊಟ್ಟರೂ ನಿಭಾಯಿಸಬಲ್ಲರು ಎಂದು ಅನಿಲ್ ಚಿಕ್ಕಮಾದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಭವಿಷ್ಯ ಯಾವತ್ತು ನಿಜವಾಗಿಲ್ಲ, ಈ ಬಾರಿ ಕೂಡ: ಸಂಸದ ಶ್ರೀನಿವಾಸ್​ ಪ್ರಸಾದ್​​ನಾನು ವಿಧಾನಸಭೆ ಪ್ರವೇಶಿಸುವ ಮುನ್ನ ಪಂಚೆ ಶಲ್ಯ ಹಾಕಿ ಕುಳಿತಿದ್ದ ಡಿಕೆಶಿ ನನ್ನ ಕಣ್ಣಿಗೆ ದೇವರಂತೆ ಕಂಡರು. ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ನಾನು ವಿಧಾನಸಭೆ ಒಳಗೆ ಪ್ರವೇಶಿಸಿದೆ. ಅವರಿಗೆ ದೇವರು ಇನ್ನಷ್ಟು ಒಳ್ಳೆಯದು ಮಾಡಲಿ ಎಂದು ಅನಿಲ್ ಚಿಕ್ಕಮಾದು ಶುಭ ಹಾರೈಸಿದರು.

ಇನ್ನು, ಸಿದ್ದರಾಮಯ್ಯ ದೆಸೆಯಿಂದ ರಾಜಕೀಯವಾಗಿ ಬೆಳೆದ ಮೈಸೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರೂ ಕೂಡ ಡಿಕೆಶಿಯನ್ನು ಶ್ಲಾಘಿಸಿದರು. ತನ್ನಂಥ ನೂರಾರು ಮಹಿಳಾ ರಾಜಕಾರಣಿಗಳಿಗೆ ಡಿಕೆಶಿ ಪ್ರೋತ್ಸಾಹ ನೀಡಿದ್ಧಾರೆ. ಕುಂದಗೋಳದಲ್ಲಿ ಮಹಿಳಾ ಶಾಸಕರಿ ಬರಲು ಡಿಕೆಶಿ ಕಾರಣ. ಅವರು ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ. ಡಿಕೆಶಿ ಪ್ರವೇಶದಿಂದ ವಿರೋಧಿಗಳು ಗಡ ಗಡ ಅಂತಿದ್ದಾರೆ ಎಂದು ಪುಷ್ಪಾ ಅಮರನಾಥ್ ತಿಳಿಸಿದರು.

ಇನ್ನು, ಸಿದ್ದರಾಮಯ್ಯ ಅವರ ಮಗ ಶಾಸಕ ಯತೀಂದ್ರ ಅವರು ಕಾಂಗ್ರೆಸ್ ಪಕ್ಷವನ್ನು ಡಿಕೆಶಿ ಮುನ್ನಡೆಸಲಿ. ನಾವು ಅವರ ಜೊತೆಗೆ ಇರುತ್ತೇವೆ ಎಂದು ಕರೆ ನೀಡಿದರು.

ಇದನ್ನೂ ಓದಿ: ರಾಕ್ಷಸರಿಂದ ರಾಜ್ಯ ರಕ್ಷಿಸಲು ವಿಷಕಂಠರಾದೆವು; ರಾಜೀನಾಮೆಯ ಕಾರಣ ಬಿಚ್ಚಿಟ್ಟ ಅನರ್ಹ ಶಾಸಕ ಬಿ.ಸಿ. ಪಾಟೀಲ್

ಇದಕ್ಕೂ ಮುನ್ನ, ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ರೈಲು ನಿಲ್ದಾಣಕ್ಕೆ ಬಂದಿಳಿದ ಡಿಕೆ ಶಿವಕುಮಾರ್ ಅವರನ್ನು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರಮಾಡಿಕೊಂಡರು. ಡಿಕೆಶಿ ಅವರ ಮುಖವಾಡ ಹಾಕಿಕೊಂಡು ಕೈ ಕಾರ್ಯಕರ್ತರು ಹರ್ಷೋದ್ಘಾರ ವ್ಯಕ್ತಪಡಿಸಿದರು, ತಮ್ಮ ನಾಯಕನಿಗೆ ಜೈಕಾರ ಹಾಕಿ ತಮ್ಮ ಅಭಿಮಾನ ಮತ್ತು ಪ್ರೀತಿ ತೋರ್ಪಡಿಸಿದರು.

ಮಾಜಿ ಸಂಸದ ಧ್ರುವನಾರಾಯಣ, ಶಾಸಕರಾದ ತನ್ವೀರ್ ಸೇಠ್, ಚಿಕ್ಕಮಾದು, ಮಾಜಿ ಶಾಸಕ ಸೋಮಶೇಖರ್, ವಾಸು, ಪರಿಷತ್ ಸದಸ್ಯ ಧರ್ಮಸೇನ ಮೊದಲಾದ ಮುಖಂಡರು ಕಾರ್ಯಕರ್ತರ ಜೊತೆ ಸೇರಿ ಡಿಕೆಶಿಯನ್ನು ಸ್ವಾಗತಿಸಿದರು. ಜೆಡಿಎಸ್ ಪಕ್ಷದ ಕಾರ್ಯಕರ್ತರೂ ಕೂಡ ಸ್ವಾಗತಕ್ಕೆ ನಿಂತಿದ್ದು ವಿಶೇಷ. ಪಕ್ಷಾತೀತವಾಗಿ ಒಕ್ಕಲಿಗ ಮುಖಂಡರೂ ಕೂಡ ಅಲ್ಲಿಗೆ ಬಂದದ್ದು ಡಿಕೆಶಿಗೆ ಹೊಸ ಪವರ್ ತಂದುಕೊಟ್ಟಂತಿತ್ತು.

ರೈಲು ನಿಲ್ದಾಣದಲ್ಲಿ ಡಿಕೆ ಶಿವಕುಮಾರ್ ಭಾವ ಚಿತ್ರ ರಾರಾಜಿಸಿತು. ಸೇಬುಗಳ ಬೃಹತ್ ಹಾರ ಹಾಕಿ ಸ್ವಾಗತ ಕೋರಲಾಯಿತು. ಹಾರದಿಂದ ಒಂದು ಸೇಬು ಕಿತ್ತು ಡಿಕೆಶಿ ತಿಂದ ಬಳಿಕ ಕಾರ್ಯಕರ್ತರು ಉಳಿದ ಸೇಬುಗಳನ್ನ ಮುಗಿಬಿದ್ದು ತಿಂದರು.

ಇನ್ನು, ಕಾಂಗ್ರೆಸ್ ಸಭೆ ಆರಂಭಕ್ಕೂ ಮುನ್ನವೇ ಡಿಕೆಶಿ ಅವರು ತಮ್ಮನ್ನು ಸ್ವಾಗತಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು. ವಿವಿಧ ಪಕ್ಷಗಳಿಂದ, ವಿವಿಧ ಸಮುದಾಯಗಳಿಂದ ಜನರು ಬಂದಿದ್ದಾರೆ. ಬೇರೆ ಪಕ್ಷಗಳಿಂದಲೂ ಜನರು ಬಂದಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಾದ್ದರಿಂದ ಬೇರೆ ಪಕ್ಷದವರು ಇಲ್ಲಿ ಬರಲು ಆಗಿಲ್ಲ. ಅವರನ್ನು ರಾತ್​ರಿ 8ಗಂಟೆಗೆ ಅತಿಥಿ ಗೃಹದಲ್ಲಿ ಭೇಟಿಯಾಗುತ್ತೇನೆ ಎಂದು ತಿಳಿಸಿದರು.

(ವರದಿ: ಪುಟ್ಟಪ್ಪ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 7, 2019, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading