ಇದು ಅಂತ್ಯವಲ್ಲ, ಆರಂಭ; ಎಲ್ಲದಕ್ಕೂ ಸತ್ಯ, ನ್ಯಾಯ, ಕಾಲ ಸೂಕ್ತ ಉತ್ತರ ಕೊಡುತ್ತೆ: ಡಿಕೆ ಶಿವಕುಮಾರ್​​

ಈ ಡಿಕೆ ಶಿವಕುಮಾರ್​ ಅಳುವ ಮಗ ಅಲ್ಲ. ನನ್ನ ಕಣ್ಣೀರು ಬಿದ್ದರೆ, ಅದು ನೋವಿನಿಂದ ಅಲ್ಲ. ನಿಮ್ಮ ಪ್ರೀತಿ, ಅಭಿಮಾನಕ್ಕಾಗಿ ಕಣ್ಣೀರು ಹಾಕಲು ಬದ್ಧ. ನಾನು ಒಂದು ಕುಟುಂಬದ ಆಸ್ತಿಯಲ್ಲ. ನಾನು ನಿಮ್ಮೆಲ್ಲರ ಆಸ್ತಿ ಎಂದರು

Seema.R | news18-kannada
Updated:October 26, 2019, 5:18 PM IST
  • Share this:
ಬೆಂಗಳೂರು (ಅ.26): 50 ದಿನಗಳ ಸೆರೆವಾಸದಿಂದ ಜಾಮೀನು ಪಡೆದು ಹೊರ ಬಂದಿರುವ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಇಂದು ರಾಜಧಾನಿಗೆ ಆಗಮಿಸಿದ್ದು, ಕಾರ್ಯಕರ್ತರು, ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. 

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿವರೆಗೂ ಜನ ಸಾಗರದ ನಡುವೆ, ಹೂವಿನ ಮೆರವಣಿಗೆಯಲ್ಲಿ ಡಿಕೆ ಶಿವಕುಮಾರ್​ ಆಗಮಿಸಿದರು. ಈ ನಡುವೆ ಸಾದಹಳ್ಳಿ ಗೇಟ್​ ಬಳಿ ಅಭಿಮಾನಿಗಳ ಅಭಿಮಾನಕ್ಕೆ ಮನಸೋತು ಮಾತನಾಡಿದ ಅವರು, ತಮ್ಮ ಅದೇ ಖಡಕ್​ ಮಾತಿನಿಂದ ಜನರಿಗೆ ಧನ್ಯವಾದ ತಿಳಿಸಿದರು.

ಹಗಲು ರಾತ್ರಿ ಪೂಜೆ, ಹೋರಾಟ ಮಾಡಿ ನನಗಾಗಿ ಬೇಡಿಕೊಂಡಿದ್ದೀರಾ, ಯಾವ ಜನ್ಮದ ಪ್ರೀತಿ ಅಭಿಮಾನದಿಂದ ನಾನು ಮುಳುಗಿ ಹೋಗಿದ್ದೇನೆ. ಒಬ್ಬ ಪ್ರಾಮಾಣಿಕ ಅಭಿಮಾನಿ ಮೇಲೆ  ನಿಮ್ಮ ಈ ಅಭಿಮಾನಕ್ಕೆ ಅಭಾರಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ನಾನು ಯಾರಿಗೂ ಮೋಸ ಮಾಡಿಲ್ಲ, ಲಂಚ ಹೊಡೆದಿಲ್ಲ. ಆದರೂ ಕೂಡ ನನ್ನ 40 ವರ್ಷದ ರಾಜಕಾರಣ ಅಂತ್ಯ  ಮಾಡಲು ಪ್ರಯತ್ನಿಸಿದಾಗ, ನಿಮ್ಮ ಜೊತೆ ನಾವಿದ್ದೇವೆ ಎಂದು ನೀವು ತೋರಿಸಿದ ಪ್ರೀತಿ, ಅಭಿಮಾನಕ್ಕೆ ಹೇಗೆ ಋಣ ತೀರಿಸಬೇಕು ಎಂದು ಗೊತ್ತಿಲ್ಲ. ಭಗವಂತನಲ್ಲಿ ನನ್ನದೊಂದೇ ಬೇಡಿಕೆ ನೀವು ತೋರಿಸಿದ ಈ ಪ್ರೀತಿ, ಅಭಿಮಾನವನ್ನು ತೀರಿಸುವ ಶಕ್ತಿ ಕೊಡು ಎಂದು ಎಂದರು.

ಇದು ಅಂತ್ಯವಲ್ಲ, ಆರಂಭ

ಇದು ಒಂದು ದಿನಕ್ಕೆ ಮುಗಿಯುವ ಅಧ್ಯಾಯವಲ್ಲ. ಇದು ಪ್ರಾರಂಭ. ಇದು ಅಂತ್ಯವಲ್ಲ. ಎಲ್ಲದಕ್ಕೂ ಸತ್ಯ, ನ್ಯಾಯ, ಕಾಲ ಸೂಕ್ತವಾದ ಸಂದರ್ಭದಲ್ಲಿ ಉತ್ತರ ಕೊಡುತ್ತದೆ ಎಂದು ನಾನು ಹೇಳುತ್ತೇನೆ ಎಂದರು.

ಅಳುವ ಮಗ ಈ ಡಿಕೆಶಿ ಅಲ್ಲಈ ಡಿಕೆ ಶಿವಕುಮಾರ್​ ಅಳುವ ಮಗ ಅಲ್ಲ. ನನ್ನ ಕಣ್ಣೀರು ಬಿದ್ದರೆ, ಅದು ನೋವಿನಿಂದ ಅಲ್ಲ. ನಿಮ್ಮ ಪ್ರೀತಿ, ಅಭಿಮಾನಕ್ಕಾಗಿ ಕಣ್ಣೀರು ಹಾಕಲು ಬದ್ಧ. ನಾನು ಒಂದು ಕುಟುಂಬದ ಆಸ್ತಿಯಲ್ಲ. ನಾನು ನಿಮ್ಮೆಲ್ಲರ ಆಸ್ತಿ ಎಂದರು.

First published:October 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ